
ವರ್ಷಗಳ ಕಾಲ ರಹಸ್ಯವಾಗಿಯೇ ಉಳಿದಿದ್ದ 2,000 ವರ್ಷಗಳಷ್ಟು ಹಳೆಯದಾದ ರೋಮನ್ ಯುಗದ ಅಮೂಲ್ಯ ನಿಧಿ ಕೊನೆಗೂ ಅಧಿಕಾರಿಗಳ ಕೈಗೆ ಸಿಕ್ಕಿದೆ. ಉತ್ತರ ಜರ್ಮನಿಯಲ್ಲಿ ಪತ್ತೆಯಾಗಿರುವ ಈ ನಿಧಿ, ಪುರಾತತ್ವ ಲೋಕದಲ್ಲಿ ಭಾರೀ ಸಂಚಲನ ಮೂಡಿಸಿದೆ.
ಈ ಅಪರೂಪದ ಸಂಗ್ರಹದಲ್ಲಿ 450 ಬೆಳ್ಳಿ ನಾಣ್ಯಗಳು, ಒಂದು ಬೆಳ್ಳಿ ಗಟ್ಟಿ, ಒಂದು ಚಿನ್ನದ ಉಂಗುರ, ಒಂದು ಚಿನ್ನದ ನಾಣ್ಯ ಸೇರಿವೆ. ಇವೆಲ್ಲವೂ ಪ್ರಾರಂಭಿಕ ರೋಮನ್ ಸಾಮ್ರಾಜ್ಯ ಕಾಲಕ್ಕೆ ಸೇರಿವೆ ಎಂದು ಪುರಾತತ್ವಜ್ಞರು ಹೇಳಿದ್ದಾರೆ.
ಅಚ್ಚರಿಯ ಸಂಗತಿ ಏನೆಂದರೆ, ಈ ನಿಧಿಯನ್ನು 2017ರಲ್ಲೇ ಪತ್ತೆಹಚ್ಚಲಾಗಿತ್ತು. ಆದರೆ ಅದನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ 2025ರ ಏಪ್ರಿಲ್‌ನಲ್ಲಿ ಮಾತ್ರ ಅಧಿಕೃತವಾಗಿ ವರದಿ ಮಾಡಲಾಗಿದೆ. ವರ್ಷಗಳ ಕಾಲ ಈ ಅಮೂಲ್ಯ ಸಂಪತ್ತಿನ ವಿಷಯ ಹಾಗೇ ಉಳಿದಿತ್ತು.
ನಿಧಿಯ ಮಾಹಿತಿ ಲಭ್ಯವಾದ ಬಳಿಕ, ಲೋವರ್ ಸ್ಯಾಕ್ಸೋನಿ ರಾಜ್ಯ ಸ್ಮಾರಕ ಸಂರಕ್ಷಣಾ ಇಲಾಖೆ (NLD) ಯ ಪುರಾತತ್ವಜ್ಞರು ಸ್ಥಳಕ್ಕೆ ಭೇಟಿ ನೀಡಿ ಉತ್ಖನನ ನಡೆಸಿದರು. ತನಿಖೆಯ ವೇಳೆ ಹೆಚ್ಚುವರಿ ನಾಣ್ಯಗಳೂ ಪತ್ತೆಯಾಗಿದ್ದು, ಉತ್ಖನನ ಪೂರ್ಣಗೊಂಡ ನಂತರ ನಿಧಿಯನ್ನು ಸಂಪೂರ್ಣವಾಗಿ ಹೊರತೆಗೆಯಲಾಗಿದೆ.
2017ರಲ್ಲಿ ನಡೆದ ಅನುಚಿತ ಉತ್ಖನನದ ಕಾರಣದಿಂದ, ಕೆಲವು ಮಾಹಿತಿಗಳು ಕಳೆದುಹೋಗಿರಬಹುದೆಂಬ ಅನುಮಾನವಿದ್ದರೂ, 2,000 ವರ್ಷಗಳ ಹಿಂದೆ ಈ ನಿಧಿಯನ್ನು ಏಕೆ ಮತ್ತು ಹೇಗೆ ಹೂತುಹಾಕಲಾಗಿತ್ತು ಎಂಬ ಕುರಿತು ಮಹತ್ವದ ಸುಳಿವುಗಳನ್ನು ಸಂಗ್ರಹಿಸಲು ಪುರಾತತ್ವಜ್ಞರು ಯಶಸ್ವಿಯಾಗಿದ್ದಾರೆ.
NLD ಸಂಸ್ಥೆ ಈ ನಿಧಿಯನ್ನು ಲೋವರ್ ಸ್ಯಾಕ್ಸೋನಿಯಲ್ಲಿ ಪತ್ತೆಯಾದ ರೋಮನ್ ನಾಣ್ಯಗಳ ಅತಿದೊಡ್ಡ ಸಂಗ್ರಹಗಳಲ್ಲಿ ಒಂದಾಗಿದೆ ಎಂದು ಹೇಳಿದೆ. ಈ ನಾಣ್ಯಗಳು ಆ ಕಾಲಘಟ್ಟದಲ್ಲಿ ರೋಮನ್ ಮತ್ತು ಜರ್ಮನಿಕ್ ಜನಾಂಗಗಳ ನಡುವಿನ ಸಹಬಾಳ್ವೆ, ಸಂಘರ್ಷ ಮತ್ತು ವಿರೋಧದ ಇತಿಹಾಸವನ್ನು ಪ್ರತಿಬಿಂಬಿಸುತ್ತವೆ ಎಂದು ತಜ್ಞರು ತಿಳಿಸಿದ್ದಾರೆ. ಶತಮಾನಗಳ ಕಾಲ ಮಣ್ಣಿನೊಳಗಿದ್ದ ಈ ನಿಧಿ, ಇದೀಗ ರೋಮನ್ ಸಾಮ್ರಾಜ್ಯದ ಆರ್ಥಿಕತೆ, ಸಂಸ್ಕೃತಿ ಮತ್ತು ರಾಜಕೀಯ ಸ್ಥಿತಿಗತಿಗಳ ಬಗ್ಗೆ ಹೊಸ ಬೆಳಕು ಚೆಲ್ಲುತ್ತಿದೆ.
ಭಾರತದಲ್ಲೂ ಕಂಡುಬಂದಿತ್ತು ಇಂತಹ ಅಪರೂಪದ ನಿಧಿ
ಜರ್ಮನಿಯ ಈ ಘಟನೆ ಭಾರತದ ಇತಿಹಾಸ ಪ್ರಿಯರಿಗೆ ಕೂಡ ಲಕ್ಕುಂಡಿಯ ಅಪರೂಪದ ಚಿನ್ನದ ನಿಧಿಯನ್ನು ನೆನಪಿಸುತ್ತದೆ. ಕರ್ನಾಟಕದ ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ಪುರಾತನ ಚಿನ್ನದ ನಿಧಿ ಕೂಡ ದೇಶಾದ್ಯಂತ ಭಾರೀ ಸಂಚಲನ ಮೂಡಿಸಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ