2000 Red Fort Attack Case: ಲಷ್ಕರ್‌ ಭಯೋತ್ಪಾದಕನಿಗೆ ಗಲ್ಲು ಶಿಕ್ಷೆ ಖಚಿತಪಡಿಸಿದ ಸುಪ್ರೀಂ ಕೋರ್ಟ್‌!

By Santosh NaikFirst Published Nov 3, 2022, 1:45 PM IST
Highlights

2000 ಇಸವಿಯ ಡಿಸೆಂಬರ್‌ 22 ರಂದು ಕೆಂಪುಕೋಟೆಯ ಮೇಲೆ ನಡೆದಿದ್ದ ದಾಳಿಯಲ್ಲಿ ಇಬ್ಬರು ಸೇನಾ ಸಿಬ್ಬಂದಿ ಸೇರಿದಂತೆ ಮೂರು ಮಂದಿ ಸಾವು ಕಂಡಿದ್ದರು. ಇದರ ವಿಚಾರಣೆ ನಡೆಸಿದ್ದ ಕೋರ್ಟ್‌ ಲಷ್ಕರ್‌-ಇ-ತಯ್ಬಾದ ಭಯೋತ್ಪಾದಕ ಮೊಹಮದ್‌ ಆರಿಫ್‌ ಅಲಿಯಾಸ್‌ ಅಶ್ಫಾಕ್‌ಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು.
 

ನವದೆಹಲಿ (ನ.3): 22 ವರ್ಷಗಳ ಹಿಂದೆ ಕೆಂಪುಕೋಟೆಯ ಮೇಲೆ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಪರಾಧಿ ಮೊಹಮದ್‌ ಆರಿಫ್‌ಗೆ ನೀಡಿದ್ದ ಗಲ್ಲು ಶಿಕ್ಷೆಯ ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಗುರುವಾರ ವಜಾ ಮಾಡಿದೆ. ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಭಯೋತ್ಪಾದಕ ಮೊಹಮ್ಮದ್ ಆರಿಫ್ ಅಲಿಯಾಸ್ ಅಶ್ಫಾಕ್‌ಗೆ ಸುಪ್ರೀಂ ಕೋರ್ಟ್‌ ಪ್ರಕರಣದಲ್ಲಿ ಗಲ್ಲು ಶಿಕ್ಷೆ ವಿಧಿಸಿತ್ತು. ಆದರೆ, ಇದನ್ನು ಪ್ರಶ್ನಿಸಿ ಅಶ್ಫಾಕ್‌ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ಮುಖ್ಯ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ಮತ್ತು ನ್ಯಾಯಮೂರ್ತಿ ಬೇಲಾ ಎಂ ತ್ರಿವೇದಿ ಅವರನ್ನೊಳಗೊಂಡ ಪೀಠವು, “ವಿದ್ಯುನ್ಮಾನ ದಾಖಲೆಗಳನ್ನು ಪರಿಗಣನೆಗೆ ಇಡಬೇಕು ಎಂಬ ಮನವಿಯನ್ನು ನಾವು ಸ್ವೀಕರಿಸಿದ್ದೇವೆ. ಆತನ ಅಪರಾಧ ಸಾಬೀತಾಗಿದೆ. ಈ ನ್ಯಾಯಾಲಯವು ತೆಗೆದುಕೊಂಡ ದೃಷ್ಟಿಕೋನವನ್ನು ನಾವು ದೃಢೀಕರಿಸುತ್ತೇವೆ ಮತ್ತು ಮರುಪರಿಶೀಲನಾ ಅರ್ಜಿಯನ್ನು ತಿರಸ್ಕರಿಸುತ್ತೇವೆ' ಎಂದು ಹೇಳಿದೆ 2000ದ ಡಿಸೆಂಬರ್ 22 ರಂದು ಕೆಂಪು ಕೋಟೆಯ ಮೇಲೆ ನಡೆದ ದಾಳಿಯಲ್ಲಿ ಇಬ್ಬರು ಸೇನಾ ಸಿಬ್ಬಂದಿ ಸೇರಿದಂತೆ ಮೂವರು ಸಾವು ಕಂಡಿದ್ದರು.

ಪ್ರಕರಣದ ಸಂಪೂರ್ಣ ವಿಚಾರಣೆ ನಡೆಸಿದ್ದ ಸೆಷನ್ಸ್‌ ಕೋರ್ಟ್‌ 2005ರಲ್ಲಿ ಆರಿಫ್‌ಗೆ ಮರಣದಂಡನೆ ಶಿಕ್ಷೆ ನೀಡಿತ್ತು. ಆದರೆ, ಸೆಷನ್ಸ್‌ ಕೋರ್ಟ್‌ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್‌ ಹಾಗೂ ಸುಪ್ರೀಂ ಕೋರ್ಟ್‌ಗೆ  ಮೊಹಮದ್‌ ಆರಿಫ್‌ ಅರ್ಜಿ ಸಲ್ಲಿಸಿದ್ದರು. ದೆಹಲಿ ಹೈಕೋರ್ಟ್‌ ಈ ಅರ್ಜಿಯನ್ನು ವಜಾ ಮಾಡಿದ್ದರೆ, ಇದರ ಅಮೂಲಾಗ್ರ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌ 2011ರ ಆಗಸ್ಟ್‌ 10 ರಂದು ಆರಿಫ್‌ಗೆ ನೀಡಿದ್ದ ಮರಣದಂಡನೆ ಶಿಕ್ಷೆಯನ್ನು ಎತ್ತಿ ಹಿಡಿದಿತ್ತು. ಅಲ್ಲದೆ, ಅವರ ಅರ್ಜಿಯನ್ನೂ ವಜಾ ಮಾಡಿತ್ತು. ಆದರೆ, 2014ರಲ್ಲಿ ಸುಪ್ರೀಂ ಕೋರ್ಟ್‌ ಈತನ ಗಲ್ಲು ಶಿಕ್ಷೆಗೆ ತಡೆ ನೀಡಿತ್ತು.

Hate Speech: ಧರ್ಮದ ಹೆಸರಿನಲ್ಲಿ ಎಂಥಾ ಸ್ಥಿತಿಗೆ ತಲುಪಿದ್ದೇವೆ..! ದ್ವೇಷ ಭಾಷಣಕ್ಕೆ ಸುಪ್ರೀಂ ಕೋರ್ಟ್‌ ಬೇಸರ!

ಪಾಕಿಸ್ತಾನದ ಅಬೋಟಾಬಾದ್‌ ಮೂಲದವನಾದ ಮೊಹಮದ್‌ ಆರಿಫ್‌, 17ನೇ ಶತಮಾನದಲ್ಲಿ ನಿರ್ಮಾಣ ಮಾಡಲಾಗಿದ್ದ ಸ್ಮಾರಕಕ್ಕೆ ನುಗ್ಗಿದ್ದು ಮಾತ್ರವಲ್ಲದೆ, ರಜಪೂತಾನಾ ರೈಫಲ್ಸ್‌ನ 7ನೇ ಬೆಟಾಲಿಯನ್‌ನ ಸಿಬ್ಬಂದಿಗಳ ಮೇಲೆ ದಾಳಿ ನಡೆಸಿದ ಆರು ಭಯೋತ್ಪಾದಕರ ಪೈಕಿ ಒಬ್ಬನಾಗಿದ್ದ. ಈತನನ್ನು ಘಟನೆ ನಡೆದ ಮೂರು ದಿನಗಳ ನಂತರ ಬಂಧನ ಮಾಡಲಾಗಿತ್ತು. 2005ರಲ್ಲಿ ಸೆಷನ್ಸ್‌ ಕೋರ್ಟ್‌ ಸಂಪೂರ್ಣ ವಿಚಾರಣೆ ನಡೆಸಿ ಮರಣದಂಡನೆ ಶಿಕ್ಷೆ ವಿಧಿಸಿತ್ತು. 2007ರಲ್ಲಿ ದೆಹಲಿ ಹೈಕೋರ್ಟ್‌ ಮರಣದಂಡನೆ ಶಿಕ್ಷೆಯನ್ನು ಎತ್ತಿ ಹಿಡಿತ್ತು. 2014ರಲ್ಲಿ ಸುಪ್ರೀಂ ಕೋರ್ಟ್‌ ಗಲ್ಲು ಶಿಕ್ಷೆಗೆ ತಡೆ ನೀಡಿದ ಬಳಿಕ, 2016ರಲ್ಲಿ ಮರುಪರಿಶೀಲನಾ ಅರ್ಜಿಯನ್ನು ವಿಚಾರಣೆ ಮಾಡುವುದಾಗಿ ತಿಳಿಸಿತ್ತು. 2014 ರಲ್ಲಿ ಇದ್ದಂತೆ ಅರ್ಜಿಯ ವಿಚಾರಣೆಗೆ ನ್ಯಾಯಾಲಯ ಒಪ್ಪಿಗೆ ನೀಡಿತು, ಮರಣದಂಡನೆ ಅಪರಾಧಿಗಳ ಮರುಪರಿಶೀಲನಾ ಅರ್ಜಿಗಳನ್ನು ಮುಕ್ತ ನ್ಯಾಯಾಲಯಗಳಲ್ಲಿ ವಿಚಾರಣೆ ಮಾಡಬೇಕು ಎಂದು ನ್ಯಾಯಾಲಯ ಈಗಾಗಲೇ ಹೇಳಿದೆ.

ಇದು 'ಪಬ್ಲಿಸಿಟಿ ಇಂಟ್ರಸ್ಟ್‌ ಲಿಟಿಗೇಷನ್‌', ತಾಜ್‌ಮಹಲ್‌ ಕುರಿತಾದ ಅರ್ಜಿಯನ್ನು ವಜಾ ಮಾಡಿದ ಸುಪ್ರೀಂ ಕೋರ್ಟ್‌!

ಘಟನೆ  ನಡೆದ ಮೂರು ದಿನಗಳ ಬಳಿಕ ಪಾಕಿಸ್ತಾನದ ಪ್ರಜೆ ಆಗಿದ್ದ ಮೊಹಮದ್‌ ಆರಿಫ್‌ ಹಾಗೂ ಆತನ ಪತ್ನಿಯನ್ನು ದೆಹಲಿಯ ಜಾಮಿಯಾ ನಗರದಲ್ಲಿ ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ಈವರೆಗೂ 7 ಜನರಿಗೆ ಶಿಕ್ಷೆಯಾಗಿದೆ. ಮೊಹಮದ್‌ ಆರಿಫ್‌ ಪತ್ನಿಗೆ ಏಳು ವರ್ಷಗಳ ಶಿಕ್ಷೆ ವಿಧಿಸಲಾಗಿತ್ತು. ಮತ್ತೆ ಇಬ್ಬರು ವ್ಯಕ್ತಿಗಳಿಗೆ ಇದೇ ಶಿಕ್ಷೆಯನ್ನು ವಿಧಸಲಾಗಿದ್ದರೆ, ಮೂವರು ವ್ಯಕ್ತಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.

click me!