ಜಾರ್ಖಂಡ್‌ ಪರೀಕ್ಷಾ ರದ್ದತಿ ಬೆನ್ನಲ್ಲೇ 2000 ನೌಕರರಿಗೆ ಸಂಕಷ್ಟ; ಸಚಿವಾಲಯದ ಎದುರು ತೀವ್ರ ಪ್ರತಿಭಟನೆ

Published : Aug 19, 2026, 05:41 AM IST
JPSC-JSSC Aspirants Celebrate After Jharkhand Government Accept

ಸಾರಾಂಶ

ಜಾರ್ಖಂಡ್ ಸಿಬ್ಬಂದಿ ನೇಮಕಾತಿ ಆಯೋಗದ (ಜೆಎಸ್‌ಎಸ್‌ಸಿ-ಸಿಜಿಎಲ್) ಪರೀಕ್ಷೆಯಲ್ಲಿನ ಅಕ್ರಮದ ಆರೋಪದಿಂದಾಗಿ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ. ಸರ್ಕಾರದ ಈ ನಿರ್ಧಾರದಿಂದಾಗಿ, ಈಗಾಗಲೇ ಉದ್ಯೋಗದಲ್ಲಿದ್ದ ಸುಮಾರು 2,000 ಅಭ್ಯರ್ಥಿಗಳು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದು, ಸಚಿವಾಲಯದ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.

ರಾಂಚಿ: ಜಾರ್ಖಂಡ್ ಸಿಬ್ಬಂದಿ ನೇಮಕಾತಿ ಆಯೋಗದ (ಜೆಎಸ್‌ಎಸ್‌ಸಿ-ಸಿಜಿಎಲ್) ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಪರೀಕ್ಷೆಯನ್ನು ರದ್ದುಗೊಳಿಸಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಹೊರಡಿಸಿರುವ ಆದೇಶವು ರಾಜ್ಯದಲ್ಲಿ ಮತ್ತೊಂದು ಭಾರಿ ಪ್ರತಿಭಟನೆಗೆ ಕಾರಣವಾಗಿದೆ. ಸರ್ಕಾರದ ಈ ನಿರ್ಧಾರದಿಂದಾಗಿ ಪರೀಕ್ಷೆ ತೇರ್ಗಡೆಯಾಗಿ ಈಗಾಗಲೇ ಉದ್ಯೋಗದಲ್ಲಿರುವ ಸುಮಾರು 2,000 ಅಭ್ಯರ್ಥಿಗಳು ಕೆಲಸ ಕಳೆದುಕೊಳ್ಳುವ ಭೀತಿಗೆ ಸಿಲುಕಿದ್ದಾರೆ.

ವಿದ್ಯಾರ್ಥಿ ಹೋರಾಟಕ್ಕೆ ಮಣಿದ ಸರ್ಕಾರ, ಸೋಮವಾರ ರಾತ್ರಿ ಜೆಎಸ್‌ಎಸ್‌ಸಿ-ಸಿಜಿಎಲ್ ಪರೀಕ್ಷೆ ಸೇರಿದಂತೆ 2014ರಿಂದ ಹೊರಗುತ್ತಿಗೆ ಸಂಸ್ಥೆ ಟಿಡಿಪಿಎಲ್ ನಡೆಸಿದ ಎಲ್ಲ ನೇಮಕಾತಿ ಪರೀಕ್ಷೆಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿತ್ತು.

ಈ ಬೆನ್ನಲ್ಲೇ, ‘ನಮ್ಮ ತಪ್ಪೇನಿದೆ? ತನಿಖೆ ನಡೆಸದೆ ನಮ್ಮನ್ನು ಕೆಲಸದಿಂದ ವಜಾಗೊಳಿಸಬೇಡಿ. ನಾವು ಕೋರ್ಟ್‌ ಆದೇಶದಂತೆಯೇ ನೇಮಕಗೊಂಡಿದ್ದೇವೆ. ನಮ್ಮಲ್ಲಿ ಅಗತ್ಯ ದಾಖಲೆಗಳಿವೆ. ಅಕ್ರಮ ನಡೆದಿರುವ ಬಗ್ಗೆ ತನಿಖೆ ನಡೆಸಿ, ಆದರೆ ಪ್ರಾಮಾಣಿಕವಾಗಿ ಆಯ್ಕೆಯಾದ ನಮಗೆ ಅನ್ಯಾಯ ಮಾಡಬೇಡಿ’ ಎಂದು 2,000ಕ್ಕೂ ಅಧಿಕ ಉದ್ಯೋಗಿಗಳು ಜಾರ್ಖಂಡ್ ಸಚಿವಾಲಯದ ಹೊರಗಡೆ ಧರಣಿ ಆರಂಭಿಸಿದ್ದಾರೆ.

ನೌಕರರ ಅಳಲು:

ಹಲವು ಅಭ್ಯರ್ಥಿಗಳು ಈಗಾಗಲೇ ವಯೋಮಿತಿ ಮೀರಿದ್ದು, ಮತ್ತೆ ಪರೀಕ್ಷೆ ಬರೆಯಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ. ಕೆಲವರು ಕೆಂದ್ರ ಸರ್ಕಾರದ ಉನ್ನತ ಹುದ್ದೆಗಳಿಗೆ ರಾಜೀನಾಮೆ ನೀಡಿ ಈ ಕೆಲಸಕ್ಕೆ ಸೇರ್ಪಡೆಗೊಂಡಿದ್ದರು. ಆದೇಶ ಕೈಬಿಡದಿದ್ದರೆ ಉಪವಾಸ ಸತ್ಯಾಗ್ರಹ ಹಾಗೂ ಕಾನೂನು ಹೋರಾಟದ ಎಚ್ಚರಿಕೆ ನೀಡಿದ್ದಾರೆ.

ಉದ್ಯೋಗ ನಷ್ಟದ ಭೀತಿಯಲ್ಲಿರುವ ಒಬ್ಬೊಬ್ಬರದ್ದು ಒಂದೊಂದು ಕಥೆ. ‘ನಾನು ಮೊದಲು ಶಿಕ್ಷಕನಾಗಿದ್ದೆ. ಸಿಜಿಎಲ್‌ ನೇಮಕಾತಿ ಫಲಿತಾಂಶ ಪ್ರಕಟವಾದಾಗ, ಆ ಹುದ್ದೆಯನ್ನು ಸೇರುವ ಬಗ್ಗೆ ನನಗೆ ಕೆಲವು ಆತಂಕಗಳಿದ್ದವು. ಆದರೆ ನೇಮಕಾತಿಯನ್ನು ರದ್ದುಗೊಳಿಸದಂತೆ ಜ.5ರಂದು ಸುಪ್ರೀಂ ತೀರ್ಪು ನೀಡಿದಾಗ, ನಾನು ನನ್ನ ಬೋಧಕ ಹುದ್ದೆಗೆ ರಾಜೀನಾಮೆ ನೀಡಿದೆ. ಈಗ ನೇಮಕಾತಿ ಪರೀಕ್ಷೆಗಳಿಗೆ ನಿಗದಿಪಡಿಸಿದ ವಯೋಮಿತಿಯನ್ನೂ ಮೀರಿದ್ದೇನೆ. ಈಗ ನನ್ನ ಕೈಯಲ್ಲಿ ಏನೂ ಇಲ್ಲದಂತಾಗಿದೆ. ಅತ್ತಲೂ ಇಲ್ಲ, ಇತ್ತಲೂ ಇಲ್ಲ ಎಂಬ ಸ್ಥಿತಿಯಲ್ಲಿದ್ದೇನೆ’ ಎಂದು ರಘುವೇಂದ್ರ ಎಂಬುವವರು ಅಳಲು ತೋಡಿಕೊಂಡಿದ್ದಾರೆ.

ವಿಚಕ್ಷಣ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಸಂದೀಪ್‌ ಯಾದವ್‌ರದ್ದು ಮತ್ತೊಂದು ಕಥೆ. ‘ಯೋಜನಾ ಭವನಕ್ಕೆ ದಿನವೂ ಕೆಲಸಕ್ಕೆ ಹೋಗುತ್ತಿದ್ದೆ. ಆದರೆ ಮಂಗಳವಾರ ಕಚೇರಿಗೆ ಹೋದಾಗ ಗಾರ್ಡ್‌ ನನ್ನ ಐಡಿ ಕಾರ್ಡ್‌ ಕೇಳಿದ. ಅನಂತರ ನನಗೆ ಕಚೇರಿಯ ಒಳಗೆ ಹೋಗಲು ಅವಕಾಶವನ್ನೇ ನೀಡಲಿಲ್ಲ. ಕಳೆದ ವರ್ಷವಷ್ಟೇ ಪರೀಕ್ಷೆಯಲ್ಲಿ ಪಾಸಾಗಿ ಕೆಲಸಕ್ಕೆ ಸೇರಿದ್ದೆ. ಯಾರ ಕೃಪೆಯಿಂದಲೂ ನಾನು ಕೆಲಸಕ್ಕೆ ಸೇರಿದವನಲ್ಲ’ ಎಂದು ಬೇಸರ ಹೊರಹಾಕಿದ್ದಾರೆ.

ಕೇವಲ 2 ತಿಂಗಳ ಹಿಂದಷ್ಟೇ ವಿವಾಹವಾಗಿರುವ ಸಂದೀಪ್‌ಗೆ, ಉದ್ಯೋಗ ನಷ್ಟವು ತನ್ನ ವೈವಾಹಿಕ ಜೀವನದ ಮೇಲೂ ಪರಿಣಾಮ ಬೀರಬಹುದು ಎಂಬ ಆತಂಕ ಎದುರಾಗಿದೆ. ‘ನನ್ನ ಬಳಿ ಉದ್ಯೋಗವಿದ್ದ ಕಾರಣ ನೀನು ನನ್ನನ್ನು ಮದುವೆಯಾದೆ. ಈಗ ನನ್ನ ಬಳಿ ಉದ್ಯೋಗವಿಲ್ಲ. ನಿನಗೆ ಇಷ್ಟವಿಲ್ಲದಿದ್ದರೆ ಈ ಮದುವೆಯನ್ನೇ ಮುರಿದುಕೊಳ್ಳಬಹುದು ಎಂದು ನನ್ನ ಪತ್ನಿಗೆ ತಿಳಿಸಿದ್ದೇನೆ’ ಎಂದು ಕಣ್ಣೀರು ಸುರಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

NTA ಸುಧಾರಣೆಗೆ ಕ್ರಮ: 600 ತಜ್ಞರಿಗೆ ಕೊಕ್‌, 4 ಸ್ತರದ ಪ್ರಶ್ನೆಪತ್ರಿಕೆ ಪರಿಶೀಲನೆ ಜಾರಿ
India Latest News Live: ಜಾರ್ಖಂಡ್‌ ಪರೀಕ್ಷಾ ರದ್ದತಿ ಬೆನ್ನಲ್ಲೇ 2000 ನೌಕರರಿಗೆ ಸಂಕಷ್ಟ; ಸಚಿವಾಲಯದ ಎದುರು ತೀವ್ರ ಪ್ರತಿಭಟನೆ