
ಮುಂಬೈ (ಆ.18): ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ರಾಷ್ಟ್ರೀಯ ಗೀತೆ 'ವಂದೇ ಮಾತರಂ'ನ ಅಧಿಕೃತ ಆವೃತ್ತಿಯ ಬದಲಿಗೆ ದಿವಂಗತ ಗಾಯಕಿ ಲತಾ ಮಂಗೇಷ್ಕರ್ ಅವರು ಹಾಡಿದ್ದ ಖಾಸಗಿ ಆಲ್ಬಮ್‌ನ ಆವೃತ್ತಿಯನ್ನು ಪ್ರಸಾರ ಮಾಡಿದ ಘಟನೆ ಮಹಾರಾಷ್ಟ್ರದ ಠಾಣೆಯಲ್ಲಿ ನಡೆದಿದೆ. ಈ ಎಡವಟ್ಟಿಗೆ ವೇದಿಕೆಯಲ್ಲೇ ಅಸಮಾಧಾನ ವ್ಯಕ್ತಪಡಿಸಿರುವ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ, ಅಧಿಕೃತ ಗೀತೆಯನ್ನು ಮಾತ್ರವೇ ಪ್ರಸಾರ ಮಾಡುವಂತೆ ಆಯೋಜಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಆಟೋ ರಕ್ಷಾ ಮತ್ತು ಕ್ಯಾಬ್ ಚಾಲಕರಿಗಾಗಿ ಆಯೋಜಿಸಲಾಗಿದ್ದ ಮರಾಠಿ ಭಾಷಾ ತರಬೇತಿ ಶಿಬಿರದ ಸಮಾರೋಪ ಹಾಗೂ ಪ್ರಮಾಣಪತ್ರ ವಿತರಣಾ ಸಮಾರಂಭದಲ್ಲಿ ಈ ಘಟನೆ ನಡೆದಿದ್ದು, ಇದರ ವಿಡಿಯೋ ಪ್ರಸ್ತುತ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.
ಕಾರ್ಯಕ್ರಮದ ಸಮಾರೋಪದ ವೇಳೆ ಮಾತನಾಡಿದ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ, ಸಂಸತ್ತು ಅನುಮೋದಿಸಿರುವ 'ವಂದೇ ಮಾತರಂ' ರಾಷ್ಟ್ರೀಯ ಗೀತೆಯ ಅಧಿಕೃತ ಶೈಲಿ ಹಾಗೂ ಆವೃತ್ತಿಯನ್ನು ಮಾತ್ರವೇ ಪ್ರತಿಯೊಂದು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಬಳಸುವುದು ಕಡ್ಡಾಯ. ಇಂದಿನ ಕಾರ್ಯಕ್ರಮದಲ್ಲಿ ಪ್ರಸಾರವಾದ ಆವೃತ್ತಿಯು ಅನುಮೋದಿತ ಶೈಲಿಯಲ್ಲಿರಲಿಲ್ಲ ಎಂದು ಸಭೆಯಲ್ಲೇ ಬಹಿರಂಗವಾಗಿ ಆಯೋಜಕರ ಗಮನಕ್ಕೆ ತಂದರು.
ಅಲ್ಲದೆ, ರಾಷ್ಟ್ರೀಯ ಗೀತೆಯ ಪವಿತ್ರತೆಯನ್ನು ಪ್ರತಿಯೊಬ್ಬರೂ ಕಾಪಾಡಿಕೊಳ್ಳಬೇಕು ಎಂದು ಬಲವಾಗಿ ಪ್ರತಿಪಾದಿಸಿದ ಶಿಂಧೆ, ಭವಿಷ್ಯದಲ್ಲಿ ಇಂತಹ ತಪ್ಪುಗಳು ಮರುಕಳಿಸದಂತೆ ಆಯೋಜಕರು ಸದಾ ಜಾಗರೂಕರಾಗಿರಬೇಕು ಎಂದು ಕಿವಿಮಾತು ಹೇಳಿದರು.
ಠಾಣೆ ಕಾರ್ಯಕ್ರಮದಲ್ಲಿ ನಡೆದ ಈ ಎಡವಟ್ಟು, ಮಹಾರಾಷ್ಟ್ರ ಹಾಗೂ ದೇಶಾದ್ಯಂತ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ನಡುವೆ 'ವಂದೇ ಮಾತರಂ' ವಿಚಾರವಾಗಿ ರಾಜಕೀಯ ಆರೋಪ-ಪ್ರತ್ಯಾರೋಪಗಳು ತೀವ್ರಗೊಂಡಿರುವ ಸಮಯದಲ್ಲೇ ಸಂಭವಿಸಿದೆ.
ಸೋನಿಯಾ ಗಾಂಧಿ ವಿಡಿಯೋ ವಿವಾದ: ಸ್ವಾತಂತ್ರ್ಯ ದಿನಾಚರಣೆಯಂದು ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ 'ವಂದೇ ಮಾತರಂ' ಗೀತೆ ಪ್ರಸಾರವಾಗುತ್ತಿದ್ದಾಗ ಸೋನಿಯಾ ಗಾಂಧಿ ಸಂಪೂರ್ಣ ಗೀತೆಯನ್ನು ಹಾಡದಂತೆ ಸನ್ನೆ ಮಾಡಿ ತಡೆದಿದ್ದಾರೆ ಎಂದು ಆರೋಪಿಸಿ ವಿಡಿಯೋವೊಂದನ್ನು ವಿರೋಧ ಪಕ್ಷಗಳು ವೈರಲ್ ಮಾಡಿದ್ದವು.
ಖರ್ಗೆ ಮೇಲಿನ ಬಿಜೆಪಿ ಆರೋಪ: ದಕ್ಷಿಣ ಗೋವಾದಲ್ಲಿ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಷ್ಟ್ರೀಯ ಗೀತೆಯ ಅಪೂರ್ಣ ಆವೃತ್ತಿಯನ್ನು ಹಾಡುವ ಮೂಲಕ ದೇಶದ ರಾಷ್ಟ್ರೀಯ ಗೀತೆಗೆ ಅಪಮಾನ ಮಾಡಿದ್ದಾರೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿತ್ತು.
ಬಿಜೆಪಿಯ ಈ ಆರೋಪಗಳಿಗೆ ತೀವ್ರವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರೂ, ಸರ್ದಾರ್ ವಲ್ಲಭಭಾಯಿ ಪಟೇಲ್ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರು ಯಾವ 'ವಂದೇ ಮಾತರಂ' ಗೀತೆಯನ್ನು ಹಾಡಿದ್ದರೊ, ಅದನ್ನೇ ನಾನೂ ಹಾಡಿದ್ದೇನೆ. ಅದೊಂದು ಅಪರಾಧ ಅಂತಿದ್ದರೆ ಗಾಂಧೀಜಿ, ನೆಹರೂ ಮತ್ತು ಪಟೇಲರ ಮೇಲೆಯೇ ಮೊದಲು ಪ್ರಕರಣ ದಾಖಲಿಸಿ ಎಂದು ಸವಾಲು ಎಸೆದಿದ್ದಾರೆ.
"ಸ್ವಾತಂತ್ರ್ಯ ಪೂರ್ವದಲ್ಲೇ ಕಾಂಗ್ರೆಸ್ ಪಕ್ಷವು ರಾಷ್ಟ್ರೀಯ ಗೀತೆ ಮತ್ತು ರಾಷ್ಟ್ರಗೀತೆಯ ಕುರಿತು ಕ್ರಾಂತಿಕಾರಿ ನಿರ್ಣಯಗಳನ್ನು ತೆಗೆದುಕೊಂಡಿತ್ತು ಎಂಬ ಇತಿಹಾಸ ಬಿಜೆಪಿ ನಾಯಕರಿಗೆ ತಿಳಿದಿಲ್ಲ. ದಶಕಗಳಿಂದ ಕಾಂಗ್ರೆಸ್‌ನಲ್ಲಿ ಹಾಡಿಕೊಂಡು ಬರಲಾಗುತ್ತಿರುವ ಅದೇ ಸಾಂಪ್ರದಾಯಿಕ ಹಾಗೂ ಅಧಿಕೃತ ಆವೃತ್ತಿಯನ್ನೇ ನಾನು ಅನುಸರಿಸಿದ್ದೇನೆ" ಎಂದು ಖರ್ಗೆ ಸ್ಪಷ್ಟಪಡಿಸಿದ್ದಾರೆ.
VIDEO | Thane, Maharashtra: As a Hindi song sung by Lata Mangeshkar with reference to 'Vande Mataram' instead of the official version of the national song was played at a government event attended by Maharashtra Deputy Chief Minister Eknath Shinde, he asks organisers to be… pic.twitter.com/nuqFdFUzLT
— Press Trust of India (@PTI_News) August 18, 2026
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ