ಅಗ್ನಿವೀರ ಯೋಜನೆ ಆರಂಭವಾದ ಒಂದು ವರ್ಷದಲ್ಲಿ 19 ಅಗ್ನಿವೀರರು ಆತ್ಮಹತ್ಯೆ, ಹೃದಯಾಘಾತದಂಥ ವಿವಿಧ ಕಾರಣಗಳಿಂದ ಸಾವನ್ನಪ್ಪಿದ್ದಾರೆ ಎಂಬ ವಿಷಯ ಬೆಳಕಿಗೆ ಬಂದಿದೆ.
ನವದೆಹಲಿ: ಮೃತ ಅಗ್ನಿವೀರ ಅಜಯ್ ಸಿಂಗ್‌ಗೆ ಪರಿಹಾರ ನೀಡುವ ವಿಷಯ ಸಂಬಂಧ ಕೇಂದ್ರ ಸರ್ಕಾರ ಮತ್ತು ವಿಪಕ್ಷ ಕಾಂಗ್ರೆಸ್ ನಡುವೆ ಜಟಾಪಟಿ ನಡೆಯುತ್ತಿರುವ ಹೊತ್ತಿನಲ್ಲೇ, ಅಗ್ನಿವೀರ ಯೋಜನೆ ಆರಂಭವಾದ ಒಂದು ವರ್ಷದಲ್ಲಿ 19 ಅಗ್ನಿವೀರರು ಆತ್ಮಹತ್ಯೆ, ಹೃದಯಾಘಾತದಂಥ ವಿವಿಧ ಕಾರಣಗಳಿಂದ ಸಾವನ್ನಪ್ಪಿದ್ದಾರೆ ಎಂಬ ವಿಷಯ ಬೆಳಕಿಗೆ ಬಂದಿದೆ.
ಈ ಪೈಕಿ 18 ಜನರು ಭೂಸೇನೆಯ ಅಗ್ನಿವೀರರಾಗಿದ್ದರೆ, ಭಾರತೀಯ ವಾಯುಪಡೆಯ ಅಗ್ನಿವೀರ ಶ್ರೀಕುಮಾರ್ ಚೌಧರಿ (22) ಆಗ್ರಾದಲ್ಲಿ ವಾಯುಪಡೆ ಕೇಂದ್ರದ ವ್ಯಾಪ್ತಿಯಲ್ಲಿ ಮಂಗಳವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಾವಿಗೆ ಕಾರಣ ತಿಳಿದುಬಂದಿಲ್ಲ. ಸೇನೆಯಲ್ಲಿ ಅಲ್ಪಾವಧಿಗೆ ಸೇವೆಗೆ ಅವಕಾಶ ನೀಡುವ ಅಗ್ನಿವೀರ್ ಯೋಜನೆಯಡಿ ಮೊದಲ ತಂಡ 2023ರ ಆಗಸ್ಟ್‌ನಲ್ಲಿ ಅಧಿಕೃತವಾಗಿ ಸೇನೆಗೆ ಸೇರ್ಪಡೆಯಾಗಿತ್ತು. ಅದಾದ ಒಂದು ವರ್ಷದಲ್ಲೇ 19 ಯುವಕರು ಸಾವನ್ನಪ್ಪಿದ್ದಾರೆ. ವಿಶೇಷವೆಂದರೆ ಭೂಸೇನೆಯಲ್ಲಿ ಸಂಭವಿಸಿದ ಮೊದಲ ಅಗ್ನಿವೀರನ ಸಾವು ಕೂಡಾ ಅತ್ಮಹತ್ಯೆ ರೂಪದಲ್ಲೇ ಇತ್ತು.
undefined
ಅಗ್ನಿವೀರ್ ಬಗ್ಗೆ ರಾಜನಾಥ್ ಸಿಂಗ್ ಸುಳ್ಳು ಹೇಳುತ್ತಿದ್ದಾರೆ ಎಂಬ ರಾಹುಲ್ ಗಾಂಧಿ ಆರೋಪಕ್ಕೆ ಸೇನೆ ತಿರುಗೇಟು
ವಿವಾದಗಳು:
2023ರ ಆ.11ರಂದು ಜಮ್ಮು ಮೂಲದ ಅಮೃತ್‌ಪಾಲ್ ಸಿಂಗ್ ಎಂಬ ಅಗ್ನಿವೀರ ಸಾವನ್ನಪ್ಪಿದಾಗ ಆತನಿಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಸೇನೆ ಅಂತ್ಯಸಂಸ್ಕಾರ ನಡೆಸಿಲ್ಲ ಎಂದು ಕುಟುಂಬ ದೂರಿತ್ತು. ಆದರೆ ಆತ್ಮಹತ್ಯೆ ಪ್ರಕರಣದಲ್ಲಿ ಇಂಥ ಗೌರವ ನೀಡುವುದಿಲ್ಲ ಎಂದು ಸೇನೆ ಸ್ಪಷ್ಟಪಡಿಸಿತ್ತು. ಇದಾದ ಬಳಿಕ 2023ರ ಅ.22ರಂದು ಸಿಯಾಚಿನ್‌ನಲ್ಲಿ ಗಾವಟೆ ಅಕ್ಷಯ್ ಲಕ್ಷ್ಮಣ್ ಎಂಬ ಅಗ್ನಿವೀರ ಸತ್ತಾಗಲೂ, ಇದು ಯೋಧರಿಗೆ ಅವಮಾನ ಮಾಡುವ ಯೋಜನೆ. ಇಲ್ಲಿ ಲಕ್ಷ್ಮಣ್ ಕುಟುಂಬಕ್ಕೆ ಯಾವುದೇ ನೆರವು ಸಿಗುವುದಿಲ್ಲ ಎಂದು ರಾಹುಲ್ ಗಾಂಧಿ ಕಿಡಿಕಾರಿದ್ದರು.
ಅಗ್ನಿವೀರರು ಯೂಸ್ ಅಂಡ್ ಥ್ರೋ ಕಾರ್ಮಿಕರು: ಒಬ್ಬ ಯೋಧನಿಗೆ ಪಿಂಚಣಿ, ಇನ್ನೊಬ್ಬನಿಗೆ ಇಲ್ಲ: ರಾಹುಲ್
ಅದಾದ ಬಳಿಕ ಇದೀಗ ಅಗ್ನಿವೀರ್ ಅಜಯ್ ಸಿಂಗ್‌ಗೆ ಯಾವುದೇ ಪರಿಹಾರ ನೀಡಿಲ್ಲ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಆದರೆ ಸರ್ಕಾರ ಮತ್ತು ಸೇನೆ ಈ ಆರೋಪ ನಿರಾಕರಿಸಿವೆ. ಅಗ್ನಿವೀರರು ಕರ್ತವ್ಯದ ವೇಳೆ ಮೃತಪಟ್ಟರೆ ಅವರಿಗೆ 1.65 ಕೋಟಿ ಪರಿಹಾರ ನೀಡಲಾಗುತ್ತದೆ. ಈ ಪೈಕಿ 98.39 ಲಕ್ಷ ರು.ಗಳನ್ನು ಈಗಾಗಲೇ ಕುಟುಂಬಕ್ಕೆ ನೀಡಲಾಗಿದೆ. ಉಳಿದ ಹಣ ಕೆಲವೊಂದಿಷ್ಟು ಕಾನೂನು ಪ್ರಕ್ರಿಯೆ ಪೂರ್ಣಗೊಂಡ ಬಳಿಕ ನೀಡಲಾಗುವುದು ಎಂದು ರಕ್ಷಣಾ ಇಲಾಖೆ ಹೇಳಿದೆ.