26/11 Attack: ಮುಂಬೈ ದಾಳಿಗೆ 13 ವರ್ಷ: ಎಂದೂ ಮರೆಯಲಾಗದ ಭೀಕರ ದಾಳಿ!

By Suvarna News  |  First Published Nov 26, 2021, 6:00 AM IST

* ಭಾರತದ ಆರ್ಥಿಕ ರಾಜಧಾನಿ ಮುಂಬೈ ಮೇಲೆ ಪಾಕಿಸ್ತಾನದ ಲಷ್ಕರ್‌- ಎ- ತೊಯ್ಬಾ ಉಗ್ರರ ದಾಳಿ 

* 26/11 ಮುಂಬೈ ದಾಳಿಗೆ 13 ವರ್ಷ: ಎಂದೂ ಮರೆಯಲಾಗದ ಭೀಕರ ದಾಳಿ


ಮುಂಬೈ(ನ.26): ಭಾರತದ ಆರ್ಥಿಕ ರಾಜಧಾನಿ ಮುಂಬೈ (Mumbai) ಮೇಲೆ ಪಾಕಿಸ್ತಾನದ ಲಷ್ಕರ್‌- ಎ- ತೊಯ್ಬಾ (Pakistani Lashkar-e-Taiba terrorists) ಉಗ್ರರು ದಾಳಿ ನಡೆಸಿ ಇಂದಿಗೆ 13 ವರ್ಷ (26/11 Mumbai Terror Attack). ಸತತ ಮೂರು ದಿನಗಳ ಕಾಲ ಮುಂಬೈ ಮಹಾನಗರಿ ಉಗ್ರರ ಕಪಿಮುಷ್ಟಿಯಲ್ಲಿ ನಲುಗಿತ್ತು. ಲಷ್ಕರ್‌ ಉಗ್ರ ಸಂಘಟನೆಯ 10 ಉಗ್ರರು ಜನನಿಬಿಡ ಪ್ರದೇಶಗಳಲ್ಲಿ ಜನರ ಮಾರಣಹೋಮವನ್ನೇ ನಡೆಸಿದ್ದರು. ಭಾರತದ ವಾಣಿಜ್ಯ ರಾಜಧಾನಿಯಾದ ಮುಂಬೈಯ ಮೇಲೆ ಭೀಕರ ದಾಳಿ ನಡೆಸಿದ್ದರು. ಸಮುದ್ರ ಮಾರ್ಗದಿಂದ ಬಂದ ಈ ದುಷ್ಕರ್ಮಿಗಳು ತಾಜ್‌ ಮಹಲ್‌ ಹೊಟೇಲ್, ಒಬೇರಾಯ್‌ ಹೊಟೇಲ್‌, ಲಿಯೋಪೋಲ್ಡ್‌ ಕೆಫೆ, ನಾರಿಮನ್‌ ಹೌಸ್‌, ಛತ್ರಪತಿ ಶಿವಾಜಿ ರೈಲ್ವೆ ಟರ್ಮಿನಸ್‌ ಮೊದಲಾದ ಕಡೆ ಮನಬಂದಂತೆ ಬಂದೂಕು ಮತ್ತು ಬಾಂಬಿನ ಮೂಲಕ ದಾಳಿ ನಡೆಸಿದರು. ಈ ದಾಳಿ ನಾಲ್ಕು ದಿನಗಳ ಕಾಲ ನಡೆಯಿತು. ಇದರಲ್ಲಿ ಆರು ಜನ ಅಮೆರಿಕದ ನಾಗರಿಕರೂ, ಹಲವು ವಿದೇಶೀಯರೂ ಸೇರಿದಂತೆ 166 ಜನರು ಸಾವಿಗೀಡಾಗಿದ್ದರು. 300ಕ್ಕೂ ಅಧಿಕ ಜನರು ಗಾಯಾಳುಗಳಾಗಿದ್ದರು. ಭಾರತದ ಇತಿಹಾಸದಲ್ಲಿ ಕರಾಳ ಅಧ್ಯಾಯಕ್ಕೆ ಸಾಕ್ಷಿಯಾದ ಈ ದಾಳಿಯ ಹಿನ್ನೋಟ ಇಲ್ಲಿದೆ.

ದಾಳಿ ನಡೆದಿದ್ದು ಹೇಗೆ?

Tap to resize

Latest Videos

undefined

2008 ನ.21ರಂದು ಪಾಕಿಸ್ತಾನದ (Pakistan) 10 ಮಂದಿ ಉಗ್ರರು ಬೋಟ್‌ ಮೂಲಕ ಭಾರತದತ್ತ ಪ್ರಯಾಣಿಸಿದ್ದರು. ಗುರುತು ಮರೆಸಿಕೊಂಡು ಮುಂಬೈಯನ್ನು ಪ್ರವೇಶಿಸಿದ ಉಗ್ರರು ಮೂರು ದಿನಗಳ ಕಾಲ ಹೋಟೆಲ್‌, ರೈಲ್ವೆ ನಿಲ್ದಾಣ, ಆಸ್ಪತ್ರೆ, ಯಹೂದಿ ಸಮುದಾಯ ಕೇಂದ್ರ ಸೇರಿದಂತೆ 10ಕ್ಕೂ ಹೆಚ್ಚು ಕಡೆಗಳಲ್ಲಿ ಬಾಂಬ್‌ ಸ್ಫೋಟ (Bomb Blast) ಮತ್ತು ಗುಂಡಿನ ದಾಳಿ ನಡೆಸಿ 166 ಜನರ ಸಾವಿಗೆ ಕಾರಣರಾದರು. 300ಕ್ಕೂ ಹೆಚ್ಚು ಜನರು ಗಾಯಗೊಂಡರು. ದೇಶದ ವಾಣಿಜ್ಯೋದ್ಯಮದ ಹೆಮ್ಮೆಯಾಗಿ ತಲೆಯೆತ್ತಿ ನಿಂತಿದ್ದ ತಾಜ್‌, ಒಬೇರಾಯ್‌ ನಂತಹ ಹೋಟೆಲ್‌ಗಳು ಉಗ್ರರ ಗುಂಡಿನ ದಾಳಿ ಮತ್ತು ಬಾಂಬ್‌ ಬ್ಲಾಸ್ಟ್‌ಗೆ ಹೊತ್ತಿ ಉರಿದವು. ಜನರು ಉಗ್ರರ ಕಪಿಮುಷ್ಠಿಯಲ್ಲಿ ನರಳಿ ಅಕ್ಷರಶಃ ನರಕ ದರ್ಶನ ಕಂಡರು.

ಆರದ ಸಂ'ದೀಪ': ನಿಮ್ಮ ನೆನಪೆಂಬ ಹೆಮ್ಮೆಯೇ ನಮ್ಮ ಭವಿಷ್ಯಕ್ಕೆ ದಾರಿದೀಪ!

4 ವರ್ಷದ ನಂತರ ಕಸಬ್‌ ಗಲ್ಲಿಗೆ

ದಾಳಿ ವಿಚಾರ ತಿಳಿಯುತ್ತಲೇ ಜನರ ರಕ್ಷಣೆಗೆ ಆಗಮಿಸಿದ ಪೋಲಿಸ್‌ ಅಧಿಕಾರಿಗಳಾದ ಹೇಮಂತ್‌ ಕರ್ಕರೆ, ವಿಜಯ್‌ ಸಾಲಸ್ಕರ್‌, ಅಶೋಕ್‌ ಕಾಮ್ಟೆಮತ್ತು ತುಕಾರಾಮ್‌ ಓಂಬ್ಳೆ ಮತ್ತು ಯೋಧ ಸಂದೀಪ್‌ ಉನ್ನಿಕೃಷ್ಣನ್‌ ಉಗ್ರರಿಂದ ಹತರಾದರು. ಈ ಉಗ್ರಗಾಮಿ ಕೃತ್ಯವನ್ನು ಇಡೀ ವಿಶ್ವವೇ ಖಂಡಿಸಿತ್ತು. ಉಗ್ರ ಹಾರಿಸಿದ ಗುಂಡುಗಳು ಎದೆಯನ್ನು ಸೀಳಿದರೂ ಅಪ್ರತಿಮ ಶೌರ್ಯತೋರಿದ ತುಕಾರಾಮ್‌ ಕೊನೆಯುಸಿರೆಳೆಯುವ ಹಂತದಲ್ಲಿದ್ದರೂ ಕಸಬ್‌ನ ಮೇಲೆ ಗುಂಡು ಹಾರಿಸಿ, ಆತನನ್ನು ಸೆರೆಹಿಡಿಯುವಂತೆ ಮಾಡಿದರು. ಈ ಕಾರಣಕ್ಕಾಗಿ ಭಾರತ ಸರ್ಕಾರವು 2009ರಲ್ಲಿ ಓಂಬ್ಳೆಗೆ ಅಶೋಕ ಚಕ್ರ ಗೌರವ ನೀಡಿದೆ. ತಾಜ್‌ ಹೋಟೆಲ್‌, ರೈಲು ನಿಲ್ದಾಣಗಳು ಮತ್ತು ಪ್ರವಾಸಿ ತಾಣಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿ 58 ಜನರನ್ನು ಬಲಿ ಪಡೆದಿದ್ದ ಅಜ್ಮಲ್‌ ಕಸಬ್‌ನನ್ನು (Ajmal kasab) 2012 ನವೆಂಬರ್‌ 21ರಂದು ಪುಣೆಯ ಯೆರವಾಡ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು.

ಮಾಸ್ಟರ್‌ ಮೈಂಡ್‌ ಹಫೀಜ್‌ ಬಂಧಮುಕ್ತ!

ಮುಂಬೈ ದಾಳಿ ನಡೆಸಿದ್ದು ಪಾಕಿಸ್ತಾನದ ಉಗ್ರರೇ ಎಂಬುದಕ್ಕೆ ಬಲವಾದ ಸಾಕ್ಷ್ಯಗಳನ್ನು ಭಾರತ ನೀಡಿದ್ದರೂ ಅದನ್ನು ಒಪ್ಪಿಕೊಳ್ಳಲು ಪಾಕಿಸ್ತಾನ ಸಿದ್ಧವಿಲ್ಲ. ಭಾರತದ ಮೇಲಿನ ದಾಳಿಯ ಮಾಸ್ಟರ್‌ ಮೈಂಡ್‌ ಪಾಕ್‌ನ ಲಷ್ಕರ್‌ ಎ-ತೊಯ್ಬಾ ಕಮಾಂಡರ್‌ ಹಫೀಜ್‌ ಸಯೀದ್‌ (Lashkar-e-Taiba Commander Hafiz Saeed). ಆತನನ್ನು ಭಾರತಕ್ಕೆ ಹಸ್ತಾಂತರಿಸಲು ಮೀನಮೇಷ ಎಣಿಸುತ್ತಿರುವ ಪಾಕ್‌, ಅಂತಾರಾಷ್ಟೀಯ ಮಟ್ಟದಲ್ಲಿ ಒತ್ತಡ ಹೆಚ್ಚಾದಾಗಲೆಲ್ಲಾ ಆತನನ್ನು ಗೃಹಬಂಧನದಲ್ಲಿರುವ ಕಣ್ಣೊರೆಸುವ ತಂತ್ರ ಅನುಸರಿಸುತ್ತಿದೆ. ಅಮೆರಿಕ ಆತನನ್ನು ಅಂತಾರಾಷ್ಟ್ರೀಯ ಉಗ್ರ ಎಂದು ಘೋಷಿಸಿದ ಬಳಿಕ ಆತನನ್ನು ಕಳೆದ ಕೆಲವು ತಿಂಗಳಿನಿಂದ ಬಂಧನದಲ್ಲಿ ಇರಿಸಲಾಗಿತ್ತು. ಆದರೆ, ಬಂಧನ ಅವಧಿ ವಿಸ್ತರಿಸಲು ಲಾಹೋರ್‌ ಹೈಕೋರ್ಟ್‌ನ ನ್ಯಾಯಾಂಗ ಪರಿಶೀಲನಾ ಮಂಡಳಿ ನಿರಾಕರಿಸಿದ ಬೆನ್ನಲ್ಲೇ ಪಾಕ್‌ ಸರ್ಕಾರ (Pakistan Govt) ಹಫೀಜ್‌ನನ್ನು ಬಂಧನದಿಂದ ಬಿಡುಗಡೆ ಮಾಡಿದೆ. ದಾಳಿಯಲ್ಲಿ ಭಾಗಿಯಾದ ಉಳಿದ 7 ಜನ ಪಾಕಿಸ್ತಾನಿ ಶಂಕಿತರಿಗೂ ಇದುವರೆಗೆ ಯಾವುದೇ ಶಿಕ್ಷೆಯಾಗಿಲ್ಲ. ಭಾರತ ಈ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನದ ಮಾನ ಹರಾಜು ಹಾಕಿದರೂ ಪಾಕ್‌ ಮಾತ್ರ ಬುದ್ಧಿ ಕಲಿಯುತಿಲ್ಲ.

26/11 ಹುತಾತ್ಮರಿವರು: ನಮ್ಮ ಭವಿಷ್ಯಕ್ಕಾಗಿ ತಮ್ಮ ವರ್ತಮಾನ ತ್ಯಾಗ ಮಾಡಿದವರು!

ಪಾಕಿಸ್ತಾನದಲ್ಲಿ ದಾಳಿಯ ಸೂತ್ರದಾರರು

ಈ ದಾಳಿಯ ಸೂತ್ರದರರು ಇನ್ನೂ ಪಾಕಿಸ್ತಾನದಲ್ಲಿಯೇ ಇದ್ದಾರೆ. ಅವರನ್ನು ಹಸ್ತಾಂತರಿಸುವಂತೆ ಭಾರತವು ಹಲವು ಬಾರಿ ಸಾಕ್ಷ್ಯ ಸಮೇತ ದಾಖಲೆಗಳನ್ನು ಒದಗಿಸಿದರೂ ಪಾಕಿಸ್ತಾನವು ಅವುಗಳ ಕಾನೂನುಬದ್ಧತೆ ಪ್ರಶ್ನಿಸುತ್ತಾ ಕಾಲ ತಳ್ಳುತ್ತಲೇ ಬಂದಿದೆ. ಇದರಲ್ಲಿ ಭಾಗಿಯಾದ ಏಳು ಜನರ ವಿರುದ್ಧ ಅಲ್ಲಿಯ ಭಯೋತ್ಪಾದನೆ ವಿರೋಧಿ ನ್ಯಾಯಾಲಯದಲ್ಲಿ ಮೊಕದ್ದಮೆಯನ್ನು ಹೂಡಿ ವಿಚಾರಣೆಯ ನಾಟಕವನ್ನು ನಡೆಸುತ್ತಿದೆ. ಈ ದಾಳಿಯ ಸೂತ್ರದಾರರಲ್ಲಿ ಒಬ್ಬನಾದ ಡೇವಿಡ್‌ ಕೋಲ್‌ಮನ್‌ ಹ್ಯಾಡ್ಲಿ ಎಂಬಾತನ ಪತ್ತೆ ಇನ್ನೂ ಸಿಕ್ಕಿಲ್ಲ.

ಅಮೆರಿಕ ಖಂಡನೆ

ಮುಂಬೈ ಮೇಲಿನ ದಾಳಿಯನ್ನು ಬಲವಾಗಿ ಖಂಡಿಸಿರುವ ಅಮೆರಿಕವು ಈ ದಾಳಿಗೆ ಸಂಬಂಧಿಸಿದ ವ್ಯಕ್ತಿಗಳ ಕುರಿತು ಮಾಹಿತಿ ನೀಡುವವರಿಗೆ 50 ಲಕ್ಷ ಡಾಲರ್‌ ಬಹುಮಾನವನ್ನು ನೀಡುವುದಾಗಿ 2018ರಲ್ಲಿಯೇ ಪ್ರಕಟಿದೆ. ಅದನ್ನು ದಾಳಿಯ ಈ 13ನೇ ವರ್ಷಾಚರಣೆಯ ಸಂದರ್ಭದಲ್ಲಿಯೂ ಪುನರುಚ್ಚರಿಸಿದೆ. ಉಗ್ರಗಾಮಿಗಳ ವಿರುದ್ಧ ಇಡೀ ಜಗತ್ತೇ ಒಂದಾಗಬೇಕಾದ ಅಗತ್ಯವನ್ನೂ ಅದು ಮತ್ತೊಮ್ಮೆ ಒತ್ತಿ ಹೇಳಿದೆ. ಮುಂಬೈ ದಾಳಿ (Mumbai Attack) ನಮ್ಮ ಮೇಲೆ ಮಾಡಿರುವ ಗಾಯದ ನೋವವನ್ನು ಎಂದಿಗೂ ಮರೆಯುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದಾರೆ. ಭಯೋತ್ಪಾದನೆಯನ್ನು ಹೊಸ ನೀತಿ ಮತ್ತು ಹೊಸ ಪ್ರಕ್ರಿಯೆಯೊಂದಿಗೆ ಎದುರಿಸುವುದಾಗಿ ಅವರು ಹೇಳಿದ್ದಾರೆ. ಪ್ರಧಾನಿಯ ಮಾತಿನಲ್ಲಿ ದೇಶವು ವಿಶ್ವಾಸವನ್ನು ಇಡಬಹುದಾಗಿದೆ. ಪುಲ್ವಾಮಾದಲ್ಲಿ ನಡೆದ ಭಯೋತ್ಪಾದನೆಯ ದಾಳಿಗೆ ಅವರು ಉರಿಯಲ್ಲಿ ಹೇಗೆ ಸರ್ಜಿಕಲ್‌ ಸ್ಟೈಕ್‌ ನಡೆಸಿ ಪಾಠ ಕಲಿಸಿದರು ಎಂಬುದು ಎಲ್ಲರಿಗೂ ಗೊತ್ತಿದೆ.

ದಾಳಿ ನಡೆದ ಪ್ರಮುಖ ಸ್ಥಳಗಳು

* ಛತ್ರಪತಿ ಶಿವಾಜಿ ಟರ್ಮಿನಸ್‌

* ಒಬೆರಾಯ್‌ ಟ್ರೈಡೆಂಟ್‌ ಹೋಟೆಲ್‌

* ತಾಜ್‌ ಹೋಟೆಲ್‌

* ಲಿಯೋಪೋಲ್ಡ್‌ ಕೆಫೆ

* ಕಾಮಾ ಹಾಸ್ಪಿಟಲ್‌

* ನಾರಿಮನ್‌ ಹೌಸ್‌

* ಕೆಲ ಟ್ಯಾಕ್ಸಿಗಳಲ್ಲಿ ಸ್ಫೋಟ

* ದಾಳಿ ನಡೆಸಿದ ಉಗ್ರಗಾಮಿಗಳಲ್ಲಿ ಒಂಬತ್ತು ಜನರು ಹತರಾಗಿ ಅಜ್ಮಲ್‌ ಅಮಿರ್‌ ಕಸಬ್‌ ಎಂಬವನೊಬ್ಬ ಸೆರೆಸಿಕ್ಕಿದ್ದ. 

ಮುಂಬೈ ಈಗೆಷ್ಟು ಸುರಕ್ಷಿತ?

2008ರ ಭಯೋತ್ಪಾದಕರ ನಡೆಸಿದ ದಾಳಿಯ ನಂತರ ಮುಂಬೈ ತನ್ನ ಭದ್ರತಾ ವ್ಯವಸ್ಥೆಯನ್ನು ಬಲಪಡಿಸಿಕೊಂಡಿದೆ. ಭಾರತೀಯ ಸೇನೆ, ಕೋಸ್ಟಲ್‌ ಗಾರ್ಡ್‌ ಮತ್ತು ಮರೈನ್‌ ಪೊಲೀಸ್‌ ಸೇರಿ ಮೂರು ಹಂತದಲ್ಲಿ ಕರಾವಳಿ ಪ್ರದೇಶದಲ್ಲಿ ಹದ್ದಿನಕಣ್ಣಿಡಲಾಗಿದೆ. ಜೊತೆಗೆ ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಮಹಾರಾಷ್ಟ್ರ ಸರ್ಕಾರ ರಡಾರ್‌, ಹೈಪವರ್‌ ಅಂಡರ್‌ ವಾಟರ್‌ ಸೆನ್ಸಾರ್‌, ಡ್ರೈವರ್‌ ಡಿಟೆಕ್ಷನ್‌ ಸೋನಾ​ರ್‍ಸ್ ಇರುವ ಆರ್ಟ್‌ ಹಾರ್ಬರ್‌ ಡಿಫೆನ್ಸ್‌ ಸಿಸ್ಟಮ್‌ ಜಾರಿಗೊಳಿಸಿದೆ. ಜೊತೆಗೆ ಮುಂಬೈ ಪೊಲೀಸರು ನೂತನ ಡಿಜಿಟಲ್‌ ವ್ಯಾಪ್‌ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದಾರೆ. ಅಲ್ಲದೆ ನಗರದಾದ್ಯಂತ 5,200 ಹೈ ಟೆಕ್ನಾಲಜಿ ಆಧಾರಿತ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. 2016ರಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿದ ನಂತರ ಮುಂಬೈನಲ್ಲಿ ಅಪರಾಧ ಪ್ರಕರಣಗಳು ಕಡಿಮೆಯಾಗಿವೆ ಎಂದು ಹೇಳಲಾಗಿದೆ.
 

click me!