Vehicle Scrapping Centre: ದೇಶದ ಮೊದಲ ಸುಸಜ್ಜಿತ ವಾಹನ ಗುಜರಿ ಘಟಕಕ್ಕೆ ಚಾಲನೆ!

By Kannadaprabha NewsFirst Published Nov 26, 2021, 5:00 AM IST
Highlights

* ಮಾರುತಿ- ಟೊಯೋಟ್ಸಾ ಸಹಭಾಗಿತ್ವದಲ್ಲಿ ನೋಯ್ಡಾದಲ್ಲಿ ಆರಂಭ

* ದೇಶದ ಮೊದಲ ಸುಸಜ್ಜಿತ ವಾಹನ ಗುಜರಿ ಘಟಕಕ್ಕೆ ಚಾಲನೆ 

* ಅತ್ಯಾಧುನಿಕ ವಿಧಾನದಲ್ಲಿ ಜೀವಿತಾವಧಿ ಮುಗಿದ ವಾಹನ ವಿಸರ್ಜನೆ

ನವದೆಹಲಿ(ನ.26): ಭಾರತದ ಮೊಟ್ಟಮೊದಲ ಸಮಗ್ರ ಮತ್ತು ಸುಸಜ್ಜಿತ ವಾಹನ ಗುಜರಿ (Vehicle Scrapping Centre) ಮತ್ತು ಮರುಬಳಕೆ ಘಟಕಕ್ಕೆ ಉತ್ತರ ಪ್ರದೇಶ ನೋಯ್ಡಾದಲ್ಲಿ ಗುರುವಾರ ಚಾಲನೆ ನೀಡಲಾಯಿತು. ಮಾರುತಿ ಸುಜುಕಿ ಮತ್ತು ಟೊಯೋಟ್ಸಾ ಸಹಯೋಗದಲ್ಲಿ ನಿರ್ಮಾಣವಾದ ಮೊಟ್ಟಮೊದಲ ಸರ್ಕಾರಿ ಅನುಮೋದಿತ ಗುಜರಿ ಘಟಕವನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ (Union Minister for Road Transport and Highways Nitin Gadkari) ಉದ್ಘಾಟಿಸಿದರು.

ನೂತನ ಕ್ರಮದಿಂದ, ವಿಶ್ವಾಸಾರ್ಹ, ಪಾರದರ್ಶಕ, ಪರಿಸರ ಸ್ನೇಹಿ ಮಾರ್ಗಗಳ ಮೂಲಕ ಗುಜರಿ ವಾಹನಗಳ ಬಿಡಿಭಾಗಗಳನ್ನು ಕಿತ್ತು ಮರುಬಳಕೆಗೆ ಬಳಸಿಕೊಳ್ಳಲಾಗುತ್ತದೆ. 10,993 ಚದರ ಮೀಟರ್‌ ವಿಸ್ತಾರವಿರುವ ಮಾರುತಿ ಸುಝುಕಿ ಟೊಯೋಟ್ಸಾ ಘಟಕವು (Maruti Suzuki Toyotsu India Private Limited) ವಾರ್ಷಿಕ 24,000 ಗುಜರಿ ವಾಹನಗಳನ್ನು ಸ್ಕ್ರಾಪ್‌ ಮಾಡಿ ಮರುಬಳಕೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಸುಮಾರು 44 ಕೋಟಿ ರು. ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗಿದೆ. ಇಲ್ಲಿ ಗುಜರಿ ವಾಹನಗಳ ಬಿಡಿಭಾಗಗಳನ್ನು ಅತ್ಯಂತ ವೈಜ್ಞಾನಿಕವಾಗಿ ಕಿತ್ತು, ಮರುಬಳಕೆಗೆ ಬಳಸಿಕೊಳ್ಳಲು ಅತ್ಯಾಧುನಿಕ ಮತ್ತು ತಂತ್ರಜ್ಞಾನ ಆಧಾರಿತ ಯಂತ್ರಗಳನ್ನು ಬಳಸಿಕೊಳ್ಳಲಾಗುತ್ತದೆ. ಗುಜರಿ ವಾಹನಗಳಿಂದ ಶೂನ್ಯ ಪ್ರಮಾಣ ದ್ರವ ಮತ್ತು ಅನಿಲ ಹೊರಹೋಗದಂಥ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿದೆ.

ಗುಜರಿ ಘಟಕ ಹೇಗೆ ಕಾರ‍್ಯ ನಿರ್ವಹಿಸುತ್ತದೆ?

1. ಜೀವಿತಾವಧಿ ಮುಗಿತ ವಾಹನಗಳನ್ನು 18004193530 ಸಹಾಯವಾಣಿ ಸಂಖ್ಯೆ ಮೂಲಕ ಡೀಲ​ರ್‍ಸ್ ಅಥವಾ ವ್ಯಕ್ತಿಗಳಿಂದ ನೇರವಾಗಿ ಖರೀದಿ.

2. ಮಾರುತಿ ಸುಜುಕಿ ಕ್ಯಾಂಪಸ್‌ಗೆ ವಾಹನದ ರವಾನೆ

3. ವಾಹನದ ದಾಖಲೆಗಳ ಪರಿಶೀಲನೆ

4. ಆಯಿಲ್‌, ಏರ್‌ಬ್ಯಾಗ್‌, ಬ್ಯಾಟರಿಗಳಿಂದ ಅನಿಲ ಸೋರಿಕೆಯಾಗದಂತೆ, ಮಾಲಿನ್ಯವಾಗದಂತೆ ಕ್ರಮ

5. ಅಂತಾರಾಷ್ಟ್ರೀಯ ಅತ್ಯುತ್ತಮ ವಿಧಾನದ ಮೂಲಕ ವಾಹನದ ಬಿಡಿಭಾಗಗಳ ವಿಸರ್ಜನೆ

6. ಕಳಚಿದ ಬಿಡಿ ಭಾಗಗಳ ವರ್ಗೀಕರಣ

7. ಜೀವಿತಾವಧಿ ಮುಗಿದ ಭಾಗಗಳನ್ನು ಸುಲಭವಾಗಿ ಶೇಖರಿಸಿಡುವಂತೆ ಮತ್ತು ರವಾನಿಸುವಂತೆ ಒಟ್ಟು ಮಾಡುವುದು.

8. ಸ್ಟೀಲ್‌ ಮೂಟೆಯನ್ನು ಸ್ಟೀಲ್‌ ಮಿಲ್‌ಗಳಿಗೆ ಮಾರಾಟ.

ಗುಜರಿ ನೀತಿ ಅಡಿ ಇನ್ನಷ್ಟು ವಿನಾಯಿತಿ ನೀಡುವ ಬಗ್ಗೆ ಪರಿಶೀಲನೆ

 

ಕೇಂದ್ರ ಸರ್ಕಾರದ ಮಾನ್ಯತೆ ಪಡೆದಿರುವ ಮೊದಲ ಗುಜರಿ ಘಟಕ ಮಾರುತಿ ಸುಜುಕಿ ಟೊಯೊಟ್ಸು ಉದ್ಘಾಟನಾ ಸಮಾರಂಭದಲ್ಲಿ ಅವರು ಈ ವಿಷಯ ತಿಳಿಸಿದರು. ‘ಹೊಸ ಗುಜರಿ ನೀತಿಯ ಅಡಿಯಲ್ಲಿ ಹೆಚ್ಚಿನ ತೆರಿಗೆ ವಿನಾಯಿತಿ ನೀಡುವುದು ಹೇಗೆ ಎಂಬ ಬಗ್ಗೆ ನಾನು ಹಣಕಾಸು ಸಚಿವಾಲಯದ ಜೊತೆ ಮಾತುಕತೆ ನಡೆಸಲಿದ್ದೇನೆ’ ಎಂದು ಗಡ್ಕರಿ ಹೇಳಿದರು.

ಹಳೆಯ ವಾಹನವನ್ನು ಗುಜರಿಗೆ ಹಾಕಿದ ನಂತರ ಖರೀದಿಸುವ ಹೊಸ ವಾಹನಕ್ಕೆ ರಸ್ತೆ ತೆರಿಗೆಯ ಮೇಲೆ ರಾಜ್ಯ ಸರ್ಕಾರಗಳು ಶೇಕಡ 25ರವರೆಗೆ ವಿನಾಯಿತಿ ನೀಡಲಿವೆ ಎಂದು ಗಡ್ಕರಿ ತಿಳಿಸಿದರು. ಹೆಚ್ಚಿನ ವಿನಾಯಿತಿ ನೀಡುವ ಬಗ್ಗೆ ಅಂತಿಮ ತೀರ್ಮಾನವನ್ನು ಹಣಕಾಸು ಸಚಿವಾಲಯ ಹಾಗೂ ಜಿಎಸ್‌ಟಿ ಮಂಡಳಿ ಕೈಗೊಳ್ಳಲಿವೆ ಎಂದರು

click me!