National Family Health Survey: ಭಾರತದಲ್ಲಿ ಪುರುಷರಿಗಿಂತ ಸ್ತ್ರೀಯರೇ ಜಾಸ್ತಿ, ಇತಿಹಾಸದಲ್ಲೇ ಪ್ರಥಮ!

By Kannadaprabha NewsFirst Published Nov 26, 2021, 5:30 AM IST
Highlights

* ಭಾರತದಲ್ಲಿ ಪುರುಷರಿಗಿಂತ ಮಹಿಳೆಯರ ಪ್ರಮಾಣ ಹೆಚ್ಚು

* ದೇಶದ ಇತಿಹಾಸದಲ್ಲೇ ಪ್ರಥಮ

ನವದೆಹಲಿ(ನ.26): ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಇದೇ ಮೊದಲ ಬಾರಿಗೆ ಭಾರತದಲ್ಲಿ ಪುರುಷರಿಗಿಂತ ಮಹಿಳೆಯರ (Women) ಪ್ರಮಾಣ ಹೆಚ್ಚಿದೆ. ರಾಷ್ಟ್ರೀಯ ಕುಟುಂಬ ಮತ್ತು ಆರೋಗ್ಯ ಸಮೀಕ್ಷೆ (National Family Health Survey) ಅನ್ವಯ, ಜನನ ವೇಳೆಯಲ್ಲಿನ ಮಕ್ಕಳ ಲಿಂಗಾನುಪಾತ ಪರಿಶೀಲಿಸಿದರೆ ಕಳೆದ 2 ವರ್ಷದ ಅವಧಿಯಲ್ಲಿ ಭಾರತದಲ್ಲಿ ಪ್ರತಿ 1000 ಗಂಡು ಮಕ್ಕಳಿಗೆ 1020 ಹೆಣ್ಣು ಮಕ್ಕಳ ಜನನವಾಗಿದೆ. 1876ರಲ್ಲಿ ದೇಶದಲ್ಲಿ ಲಿಂಗಾನುಪಾತ ಸಮೀಕ್ಷೆ ಆರಂಭವಾದ ನಂತರ ಪುರುಷರಿಗಿಂತ (Male) ಮಹಿಳೆಯರ ಪ್ರಮಾಣ ಹೆಚ್ಚಳವಾಗಿದ್ದು ಇದೇ ಮೊದಲು.

1990ರಲ್ಲಿ ದೇಶದಲ್ಲಿ ಪ್ರತಿ 1000 ಗಂಡುಮಕ್ಕಳಿಗೆ 927 ಹೆಣ್ಣುಮಕ್ಕಳ ಜನನವಾಗುತ್ತಿತ್ತು. ನಂತರ 2015-16ರಲ್ಲಿ 1000-991ಕ್ಕೆ ತಲುಪಿತ್ತು. ಇದೀಗ 2019-20ರಲ್ಲಿ 1000-1020ಕ್ಕೆ ಮಟ್ಟಿದೆ ಎಂದು ವರದಿ ಹೇಳಿದೆ.

Latest Videos

ಮಾದರಿ ಸಮೀಕ್ಷೆ:

ಇದು ಮಾದರಿ ಸಮೀಕ್ಷೆಯಾಗಿದ್ದು, ಇದನ್ನು ಇಡೀ ದೇಶಕ್ಕೆ ಹೋಲಿಸಲು ಸಾಧ್ಯವಿಲ್ಲ. ಮುಂದಿನ ಸಾಮಾನ್ಯ ಜನಗಣತಿಯಲ್ಲಿನ ಅಂಕಿ ಅಂಶಗಳು ಮಾತ್ರವೇ ದೇಶದಲ್ಲಿ ಒಟ್ಟಾರೆ ಪುರುಷರ ಮತ್ತು ಮಹಿಳೆಯರ ಸಂಖ್ಯೆಯನ್ನು ಬಹಿರಂಗಪಡಿಸಬಹುದಾದರೂ, ಈ ಬೆಳವಣಿಗೆ ಅತ್ಯಂತ ಮಹತ್ವದ್ದು ಎಂದು ಮಹಿಳಾ ಪರ ಸಂಘಟನೆಗಳು ಹರ್ಷ ವ್ಯಕ್ತಪಡಿಸಿವೆ.

ಹೆಣ್ಣು ಭ್ರೂಣ ಹತ್ಯೆ ತಡೆ, ಹೆಣ್ಣು ಮಕ್ಕಳ ರಕ್ಷಣೆಗೆ ಕೈಗೊಂಡ ಕ್ರಮಗಳು, ಪೋಷಕರಲ್ಲಿ ಅರಿವು ಮೂಡಿಸುವ ಕ್ರಮಗಳು, ಹೆಣ್ಣು ಮಕ್ಕಳನ್ನು ಹೆತ್ತವರಿಗೆ ಸರ್ಕಾರಗಳು ಘೋಷಿಸಿದ ಕ್ರಮಗಳು ಈ ಧನಾತ್ಮಕ ಬೆಲವಣಿಗೆ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗಿದೆ.

ದೇಶದ ಜನಸಂಖ್ಯೆ ಬೆಳವಣಿಗೆ ದರ ಭಾರಿ ಕುಸಿತ

 

ಜನಸಂಖ್ಯಾ ಸ್ಫೋಟ ತಡೆಗೆ ಸರ್ಕಾರಗಳು ಕೈಗೊಂಡ ಕ್ರಮಗಳು ಸಾಕಷ್ಟು ಫಲ ನೀಡಿದ್ದು, ದೇಶದ ಒಟ್ಟು ಫಲವತ್ತತೆ ದರ (Total Fertility Rate)) 2ಕ್ಕೆ ಕುಸಿದಿರುವ ಸಂಗತಿ ಕೇಂದ್ರ ಸರ್ಕಾರ ನಡೆಸಿರುವ ಸಮೀಕ್ಷೆಯಿಂದ ಪತ್ತೆಯಾಗಿದೆ. ಇದರರ್ಥ, ಭಾರತ ತನ್ನ ಜನಸಂಖ್ಯೆಯ (Population) ಗರಿಷ್ಠ ಮಟ್ಟವನ್ನು ಈಗಾಗಲೇ ಮುಟ್ಟಿದ್ದು, ಹಲವು ದಶಕಗಳಿಂದ ಗುಮ್ಮನ ರೀತಿ ಕಾಡುತ್ತಿದ್ದ ಜನಸಂಖ್ಯಾ ಸ್ಫೋಟದ ಭೀತಿಯಿಂದ ಬಹುತೇಕ ಪಾರಾಗಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಒಬ್ಬ ಮಹಿಳೆ ತನ್ನ ಜೀವಿತಾವಧಿಯಲ್ಲಿ ಸರಾಸರಿ ಹೆರುವ ಮಕ್ಕಳ ಸಂಖ್ಯೆಯನ್ನು ಒಟ್ಟು ಫಲವತ್ತತೆ ದರ ಎಂದು ಕರೆಯಲಾಗುತ್ತದೆ. ದೇಶದ ಫಲವತ್ತತೆ ದರ 2.1ರಷ್ಟುಇರಬೇಕು ಎಂದು ಕೇಂದ್ರ ಸರ್ಕಾರ ಬಹಳ ಹಿಂದೆ ಗುರಿ ನಿಗದಿಪಡಿಸಿತ್ತು. ದಕ್ಷಿಣದ ರಾಜ್ಯಗಳು ಇದನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಿದ್ದರಿಂದ ಅಲ್ಲೆಲ್ಲಾ ಫಲವತ್ತತೆ ದರ 2ಕ್ಕಿಂತ ಕೆಳಗಿದೆ. ಉತ್ತರ ಭಾರತದ ರಾಜ್ಯಗಳು ಈ ಗುರಿಯನ್ನು ಪಾಲಿಸಿರಲಿಲ್ಲ. ಆದರೆ ಈಗ ದೇಶದ ಸರಾಸರಿ ಫಲವತ್ತತೆ ದರ 2ಕ್ಕೆ ಕುಸಿದಿದೆ. ಅಂದರೆ ಕೇಂದ್ರ ಸರ್ಕಾರ ನಿಗದಿಪಡಿಸಿದ್ದ ಗುರಿಗಿಂತ ಕೆಳಕ್ಕೆ ಇಳಿದಿದೆ. ಕರ್ನಾಟಕದಲ್ಲಿ ಇದು 1.7ರಷ್ಟಿದೆ.

ರಾಷ್ಟ್ರೀಯ ಕುಟುಂಬ ಕಲ್ಯಾಣ ಸಮೀಕ್ಷೆ-ಭಾಗ 5ರಲ್ಲಿ ಈ ಅಂಶ ಇದೆ. ಕೇಂದ್ರ ಆರೋಗ್ಯ ಸಚಿವಾಲಯ ಈ ಕುರಿತಾದ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದೆ. ಈ ಅಂಕಿ-ಅಂಶಗಳನ್ನು ಗಮನಿಸಿದರೆ ದೇಶದ ಜನಸಂಖ್ಯೆ ಸ್ಥಿರೀಕರಣವಾಗುತ್ತಿರುವುದು ಕಾಣಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2016ರಲ್ಲಿ ನಡೆದ ನಾಲ್ಕನೇ ಸುತ್ತಿನ ಸಮೀಕ್ಷೆ ವೇಳೆ ದೇಶದ ಒಟ್ಟು ಫಲವತ್ತತೆ ದರ 2.2ರಷ್ಟಿತ್ತು. 2019ರಿಂದ 2021ರವರೆಗೆ ನಡೆದ ಸಮೀಕ್ಷೆಯಲ್ಲಿ ಇದು 2ಕ್ಕೆ ಇಳಿದಿದೆ. 2.1 ದರವನ್ನು ಜನಸಂಖ್ಯಾ ಬದಲಿ ದರ ಎಂದು ಪರಿಗಣಿಸಲಾಗುತ್ತದೆ. ಹೇಗೆಂದರೆ, ತಾಯಿ ಹಾಗೂ ಆಕೆಯ ಸಂಗಾತಿಯ ಮರಣಾ ನಂತರವೂ ಅಷ್ಟೇ ಜನಸಂಖ್ಯೆ ಮುಂದುವರಿಯುತ್ತದೆ. ಏರಿಕೆ, ಇಳಿಕೆಯಾಗುವುದಿಲ್ಲ. ಆದರೆ ಈಗ ಸರಾಸರಿಗಿಂತ ಟಿಎಫ್‌ಆರ್‌ ಇಳಿದಿದೆ.

click me!