
ಪ್ರಾಚೀನ ಹಿಂದೂ ಶಿವ ದೇವಾಲಯದ ಮೇಲಿನ ಹಕ್ಕಿಗಾಗಿ ಎರಡು ನೆರಹೊರೆಯ ದೇಶಗಳಾದ ಕಾಂಬೋಡಿಯಾ ಹಾಗೂ ಥೈಲ್ಯಾಂಡ್ ನಡುವಣ ಯುದ್ಧ ಭುಗಿಲೆದ್ದಿದ್ದು, 11ನೇ ಶತಮಾನದೆನ್ನಲಾದ ಶಿವ ದೇವಾಲಯವನ್ನು ಬುಲ್ಡೋಜರ್ ಮೂಲಕ ಧ್ವಂಸಗೊಳಿಸಲಾಗಿದೆ. ವಿವಾದಿತ ಪ್ರದೇಶದಲ್ಲಿ ಥೈಲ್ಯಾಂಡ್ ಮಿಲಿಟರಿ ಕಾರ್ಯಾಚರಣೆ ನಡೆಸಿ ಪರಸತ್ ಟಾ ಖ್ವಯಿ ಅಥವಾ ಟಾ ಕ್ರಾಬೇ ಎಂದು ಕರೆಯಲ್ಪಡುತ್ತಿದ್ದ ಬಹಳ ಪ್ರಾಚೀನ ಹಿಂದೂ ದೇಗುಲಕ್ಕೆ ಈ ಮಿಲಿಟರಿ ಕಾರ್ಯಾಚರಣೆಯಿಂದ ತೀವ್ರ ಹಾನಿಯಾಗಿದೆ.
ಅಂಕೋರ್(Angkor period) ಅವಧಿಯಲ್ಲಿ ನಿರ್ಮಿಸಲಾದ ಈ ದೇವಾಲಯದ ಸ್ಥಳಕ್ಕಾಗಿ ಕಂಬೋಡಿಯಾ ಥೈಲ್ಯಾಂಡ್ ನಡುವೆ ಬಹಳ ದೀರ್ಘಕಾಲದಿಂದಲೂ ಹೊಡೆದಾಟಗಳು ನಡೆಯುತ್ತಲೇ ಇದ್ದು, ಕೆಲ ತಿಂಗಳ ಹಿಂದೆ ಈ ಗಲಾಟೆ ಮತ್ತಷ್ಟು ವಿಕೋಪಕ್ಕೆ ಹೋಗಿ ನಂತರ ಶಮನವಾಗಿತ್ತು. ಆದರೆ ಈಗ ಎರಡು ಏಷ್ಯಾನ್ ರಾಷ್ಟ್ರಗಳ ನಡುವಣ ಸಮರ ಮತ್ತೆ ವಿಕೋಪಕ್ಕೆ ತಿರುಗಿದೆ.
ಈ ಪ್ರದೇಶದಲ್ಲಿ ಥೈಲ್ಯಾಂಡ್‌ನ ಸೇನಾ ಕಾರ್ಯಾಚರಣೆಯ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಅದರಲ್ಲಿ ಕಾಣುವಂತೆ ಈ ಹಿಂದೂ ದೇಗುಲ ಇರುವ ಪ್ರದೇಶವನ್ನು ಸೇನೆ ಸುತ್ತುವರೆದಿದ್ದು, ಅಲ್ಲಿನ ಪುರಾತನ ಪ್ರತಿಮೆಗಳು ಸೇರಿದಂತೆ ಇಡೀ ಪ್ರದೇಶವನ್ನು ಧ್ವಂಸ ಮಾಡಿದೆ. ವೈರಲ್ ಆದ ವೀಡಿಯೋದಲ್ಲಿ ಬುಲ್ಡೋಜರ್‌ವೊಂದು ಎತ್ತರದ ಹಿಂದೂ ದೇವರ ಪ್ರತಿಮೆಯನ್ನು ನೆಲಕ್ಕೆ ಕೆಡವಿ ಬೀಳಿಸುವುದನ್ನು ವೀಡಿಯೋದಲ್ಲಿ ಕಾಣಬಹುದು. ಇದೊಂದು ಪಾರಂಪರಿಕ ತಾಣ ಎನಿಸಿರುವುದರಿಂದ ಕಾಂಬೋಡಿಯಾ ಥೈಲ್ಯಾಂಡ್ ಸೇನಾ ಕಾರ್ಯಾಚರಣೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಕಾಂಬೋಡಿಯಾದ ಅಧಿಕಾರಿಗಳು ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ಥೈಲ್ಯಾಂಡ್‌ನ ಈ ಕ್ರಮವು ಅಲ್ಲಿದ್ದ ಸಾಂಸ್ಕೃತಿಕ ಪರಂಪರೆಗೆ ಗಮನಾರ್ಹ ಹೊಡೆತ ನೀಡಿದೆ ಎಂದು ಹೇಳಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಅಂತರರಾಷ್ಟ್ರೀಯ ಮೇಲ್ವಿಚಾರಣೆ ನಡೆಸಬೇಕು ಎಂದು ಕಾಂಬೋಡಿಯಾ ಒತ್ತಾಯಿಸಿದೆ. ಈ ಘರ್ಷಣೆಯ ಸಮಯದಲ್ಲಿ ದೇವಾಲಯಕ್ಕೆ ಗಣನೀಯ ಹಾನಿ ಆಗಿದೆ ಎಂದು ಕಾಂಬೋಡಿಯಾದ ಸಂಸ್ಕೃತಿ ಮತ್ತು ಲಲಿತಕಲೆಗಳ ಸಚಿವಾಲಯ ಹೇಳಿದ್ದು, ಈ ದಾಳಿಯನ್ನು ಅನೈತಿಕ ಕ್ರಮ ಎಂದು ಕರೆದಿದೆ.
ಇದನ್ನೂ ಓದಿ: ರಷ್ಯಾದಲ್ಲಿ ಕಾರ್ಮಿಕರ ಕೊರತೆ: ಬೀದಿ ಗುಡಿಸುವ ಕೆಲಸಕ್ಕೆ ನೇಮಕಗೊಂಡ ಭಾರತೀಯರ ವೇತನ ಎಷ್ಟು ಗೊತ್ತಾ?
ಎರಡು ಸೇನಾಪಡೆಗಳ ನಡುವಿನ ಕದನ ವಿರಾಮ ಮುರಿದುಬಿದ್ದ ನಂತರ ಡಿಸೆಂಬರ್ ಆರಂಭದಲ್ಲಿಯೇ ಇಲ್ಲಿ ವ್ಯಾಪಕ ಘರ್ಷಣೆ ನಡೆದಿದೆ. ವಿಶೇಷವಾಗಿ ದೇವಾಲಯ ಆವರಣಗಳು ಹಾಗೂ ಗಡಿಯಲ್ಲಿ ಎರಡೂ ಕಡೆಯವರು ನಿಯಂತ್ರಿಸಲು ಪ್ರಯತ್ನಿಸುತ್ತಿರುವ ಬೆಟ್ಟಗಳ ಸುತ್ತಲೂ ಫಿರಂಗಿ ದಾಳಿ, ರಾಕೆಟ್ ಗುಂಡಿನ ದಾಳಿ ಮತ್ತು ವೈಮಾನಿಕ ದಾಳಿಗಳು ನಡೆದಿವೆ.
ಇದನ್ನೂ ಓದಿ: ಸದ್ಯ ಕೊಲೆ ಮಾಡಿಲ್ಲ..! ಓಡಿಹೋದ ಮಗಳ ಪ್ರತಿಕೃತಿಯ ಶವಯಾತ್ರೆ ಮಾಡಿ ಅಂತ್ಯಸಂಸ್ಕಾರ ಮಾಡಿದ ಕುಟುಂಬ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ