India@75: 1857ರಲ್ಲಿ ಮೈನವಿರೇಳಿಸುವ ಹಲಗಲಿ ಬೇಡರ ಹೋರಾಟ

By Kannadaprabha News  |  First Published Jun 11, 2022, 12:45 PM IST

- ಬ್ರಿಟಿಷರನ್ನು ಕಂಗೆಡಿಸಿದ ಹಲಗಲಿ ಬಂಡಾಯ

- 1857ರಲ್ಲಿ ಮೈನವಿರೇಳಿಸುವ ಬೇಡರ ಹೋರಾಟ

- ಆಯುಧಗಳನ್ನೆಲ್ಲ ತಂದೊಪ್ಪಿಸಿ ಎಂಬ ಬ್ರಿಟಿಷರ ಆದೇಶ ಧಿಕ್ಕರಿಸಿ ಬಂಡಾಯ


ಬಾಗಲಕೋಟೆ (ಜೂ. 11): ಈ ಭಾಗದಲ್ಲಿ ಸ್ವಾತಂತ್ರ್ಯಕ್ಕಾಗಿ ನಡೆದ ಜನಸಾಮಾನ್ಯರ ಮೊಟ್ಟಮೊದಲ ಹೋರಾಟವಾಗಿರುವ ಬಾಗಲಕೋಟೆ ಜಿಲ್ಲೆಯ ಹಲಗಲಿ ಬೇಡರ ಬಂಡಾಯ ನಿಜಕ್ಕೂ ರೋಚಕ. 1857 ರಲ್ಲಿ ನಡೆದ ಬ್ರಿಟಿಷರ ವಿರುದ್ಧದ ಈ ಹೋರಾಟಕ್ಕೆ ದನಿಯಾದದ್ದು ಜಿಲ್ಲೆಯ ಮುಧೋಳ ತಾಲೂಕಿನ ಹಲಗಲಿಯ ಸ್ವಾಭಿಮಾನಿ ಬೇಡರು. ಬ್ರಿಟಿಷರು ಅಂದು ಹೊರಡಿಸಿದ ಆದೇಶವೊಂದು ಇಡೀ ಸ್ವಾತಂತ್ರ್ಯ ಹೋರಾಟದ ಆರಂಭಿಕ ಕಿಚ್ಚು ಹಚ್ಚುವ ಜೊತೆಗೆ ಬ್ರಿಟಿಷರನ್ನು ಬೆಚ್ಚಿಬೀಳಿಸಿದ್ದ ಸ್ವಾಭಿಮಾನಿ ಬೇಡರ ಹೋರಾಟ ಹಾಗೂ ಆ ಬಳಿಕ ನಡೆದ ದುರಂತ ಇಂದಿನವರೆಗೂ ಬಹುತೇಕರಿಗೆ ಅಪರಿಚಿತ.

ಬೇಡರಿಂದ ಆಯುಧಗಳನ್ನೆಲ್ಲ ಕಿತ್ತುಕೊಳ್ಳುವ ಆದೇಶವೊಂದನ್ನು ಬ್ರಿಟಿಷರು ಹೊರಡಿಸಿದರು. ಇದನ್ನು ಹಲಗಲಿಯ ಬೇಡರು ಧಿಕ್ಕರಿಸಿದರು. ಇದೇ ಮುಂದೆ ಹಲಗಲಿ ಬಂಡಾಯದ ಹೋರಾಟಕ್ಕೆ ಮೂಲವಾಯಿತು. ಹಲಗಲಿ ಬಂಡಾಯ ಕುರಿತು ಬ್ರಿಟಿಷ್‌ ಅ​ಧಿಕಾರಿ ಡಾ.ಜಾನ್‌ ಪ್ಲೀಟ್‌ ಸಂಗ್ರಹಿಸಿರುವ ಎರಡು ಲಾವಣಿಗಳು ಮತ್ತು ಅಲ್ಲಲ್ಲಿ ಸಿಗುವ ಐತಿಹಾಸಿಕ ಘಟನೆಗಳು, ಸಂಶೋಧಕರ ಮಾತುಗಳನ್ನು ಆಧಾರವಾಗಿಟ್ಟುಕೊಂಡು ನಾವು ಮಾಹಿತಿ ಪಡೆಯಬಹುದಾಗಿದೆ.

Tap to resize

Latest Videos

undefined

India@75:ವಿಜಯಪುರ ಕೋಟ್ನಾಳದಲ್ಲಿ ಕಟ್ಟಲಾಗಿತ್ತು ಬ್ರಿಟಿಷರ ವಿರುದ್ಧ ಸೈನ್ಯ

ಹೇಗೆ ನಡೆಯಿತು ಬಂಡಾಯ?: 1857ರಲ್ಲಿ ಬ್ರಿಟಿಷರು, ಯಾರೂ ಯಾವುದೇ ರೀತಿಯ ಆಯುಧಗಳನ್ನು ತಮ್ಮೊಂದಿಗೆ ಇಟ್ಟುಕೊಳ್ಳುವಂತಿಲ್ಲ, ಅವುಗಳನ್ನೆಲ್ಲ ನಮಗೆ ಒಪ್ಪಿಸಬೇಕು ಎಂದಾಗ ಇದನ್ನು ವಿರೋಧಿಸಿ ದನಿ ಎತ್ತಿದ್ದೇ ಹಲಗಲಿ ಬೇಡರು. ಹಲಗಲಿ ಬೇಡರಿಗೆ ಪ್ರಾಣಿಗಳ ಬೇಟೆಗಾಗಿ ಆಯುಧಗಳ ಅವಶ್ಯಕತೆಯಿತ್ತು. ಅಲ್ಲದೆ, ಆ ವೇಳೆಗಾಗಲೇ ಈ ಭಾಗದಲ್ಲಿ ಹೊತ್ತಿದ್ದ ಸ್ವಾತಂತ್ರ್ಯ ಹೋರಾಟದ ಪ್ರೇರಣೆಯೂ ಅವರಿಗಿತ್ತು. ನಮ್ಮಲ್ಲಿರುವ ಆಯುಧಗಳನ್ನು ಒಪ್ಪಿಸಲು ಸಾಧ್ಯವಿಲ್ಲ ಎಂದು ಅವರು ಬ್ರಿಟಿಷರ ವಿರುದ್ಧ ಸಡ್ಡು ಹೊಡೆದರು.

ಹೀಗೆ ಬ್ರಟಿಷರ ವಿರುದ್ಧ ಬಂಡೆದ್ದವರ ಮುಂಚೂಣಿಯಲ್ಲಿದ್ದವರೇ ಜಡಗಪ್ಪ, ಬಾಲಪ್ಪ, ಹಣಮಪ್ಪ, ರಾಮಪ್ಪ, ಹನುಮವ್ವ, ಲಗುಮವ್ವ ಮತ್ತು ರಾಮವ್ವ. ಇವರೆಲ್ಲರೊಂದಿಗೆ ನಿಂಬಾಳ್ಕರ್‌ ಎಂಬ ಮರಾಠ ಸೈನಿಕನೂ ಇದ್ದುಕೊಂಡು ಹೋರಾಟಕ್ಕೆ ಮಾರ್ಗದರ್ಶನ ನೀಡುತ್ತಿದ್ದ ಮತ್ತು ಜತೆಗೆ ಆತನೂ ಹೋರಾಟದಲ್ಲಿ ಪಾಲ್ಗೊಂಡಿದ್ದ ಎನ್ನಲಾಗಿದೆ.

ಇವರೆಲ್ಲರ ಪ್ರಾರಂಭಿಕ ಹೋರಾಟಕ್ಕೆ ಹೆದರಿದ ಬ್ರಿಟಿಷರು ಕುಂದರಗಿಯ ಪ್ರಭಾವಿ ಜನನಾಯಕ ಕೃಷ್ಣನಾಯಕ, ಕಾರಭಾರಿಗಳಾದ ಕೃಷ್ಣರಾವ್‌, ರಾಮರಾಯ ಭುಜಂಗ, ಬೇಡರ ನಾಯಕ ವೀರ ಹನುಮನಾಯಕ ಎಂಬುವವರನ್ನು ಹಲಗಲಿ ಬೇಡರೊಂದಿಗೆ ಸಂಧಾನಕ್ಕೆ ಕಳುಹಿಸುತ್ತಾರೆ. ಆದರೆ, ಹಲಗಲಿ ಬೇಡರು, ಬೇಕಾದ್ದು ಬರಲಿ, ಎದುರಿಸುತ್ತೇವೆ. ಹತಾರೆ (ಆಯುಧ) ಮಾತ್ರ ಕೊಡುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳುತ್ತಾರೆ. ಅಲ್ಲಿಗೆ ಸಂಧಾನ ಮುರಿದುಬೀಳುತ್ತದೆ.

India@75:ರೈತ ಹೋರಾಟಕ್ಕೆ ಸಾಕ್ಷಿ ಬಾವುಟ ಗುಡ್ಡೆ, 2 ವಾರ ಇಲ್ಲಿ ಹಾರಾಡಿತ್ತು ಸ್ವತಂತ್ರ ಧ್ವಜ!

ಕೌರ್ಯ ಮೆರೆದ ಬ್ರಿಟಿಷರು: ಕೊನೆಗೆ ಹಲಗಲಿಯ ಬೇಡರನ್ನು ಹಣಿಯಲು ಬ್ರಿಟಿಷರು ಮುಂದಾಗುತ್ತಾರೆ. ಬೆಳಗಾವಿ ವಿಭಾಗದ ಮ್ಯಾಜಿಸ್ಪ್ರೇಟ್‌ ಜೆ.ಬಿ.ಸೆಚನಕರ್‌ ಕಲಾದಗಿಯಿಂದ ದಂಡು ಕಟ್ಟಿಕೊಂಡು ಬಂದು ಹಲಗಲಿ ಮೇಲೆ ಆಕ್ರಮಣ ಮಾಡುತ್ತಾನೆ. ಆದರೆ, ಹಲಗಲಿ ವೀರರ ಹೋರಾಟದಿಂದಾಗಿ ಅವನಿಗೆ ಸೋಲಾಗುತ್ತದೆ. ಮುಂದಿನ ದಿನಗಳಲ್ಲಿ ಲೆವೆಟ್ಟ, ಕಾರ್‌ ವಿಲಿಯಂ, ಅಲೆಗ್ಸಾಂಡರ್‌ ಕೇರ್‌, ವಿಲಿಯಂ ಹೆನ್ರಿ, ಹ್ಯಾವಲಾಕ್‌ ಎಂಬುವವರೆಲ್ಲಾ ಹಲಗಲಿ ಮೇಲೆ ದಾಳಿ ಮಾಡಿ ಸೋಲುತ್ತಾರೆ.

ಕೊನೆಗೆ ದಕ್ಷಿಣ ಮರಾಠಾ ವಿಭಾಗದ ಕಮಾಂಡರ್‌ ಕೆ.ಮಾಲ್ಕಂ ಎಂಬಾತ ಬೃಹತ್‌ ಸೈನ್ಯದೊಂದಿಗೆ 1857ರ ನವೆಂಬರ್‌ 29ರಂದು ಹಲಗಲಿ ಮೇಲೆ ದಾಳಿ ಮಾಡುತ್ತಾನೆ. ಆಗ ಹಲಗಲಿ ಅಕ್ಷರಶಃ ರಣರಂಗವಾಗುತ್ತದೆ. ಹೋರಾಟದ ಮೊದಮೊದಲು ಬ್ರಿಟಿಷರ ಸೈನ್ಯ ತತ್ತರಿಸುವಂತೆ ಹಲಗಲಿ ವೀರರು ಹೋರಾಡುತ್ತಾರೆ. ಆದರೆ, ಈ ವೀರರು ಸಿದ್ಧಪಡಿಸಿದ್ದ ಮದ್ದುಗುಂಡುಗಳನ್ನು ಯಾರೋ ಕುತಂತ್ರಿಗಳು ನಿಷ್ಕಿ್ರಯಗೊಳಿಸಿದ್ದರಿಂದ ಕ್ರಮೇಣ ವೀರರ ಬಲ ಕುಗ್ಗಲಾರಂಭಿಸುತ್ತದೆ. ಆಗ ಅಲ್ಲಿ ನಡೆದಿದ್ದೇ ಬ್ರಿಟಿಷರ ಕ್ರೌರ್ಯ. ಮನುಷ್ವತ್ವವನ್ನು ಮರೆತು ಸಿಕ್ಕಸಿಕ್ಕವರನ್ನು ಕೊಚ್ಚಿಹಾಕುತ್ತಾರೆ. ಮನೆಗಳನ್ನು ಲೂಟಿ ಮಾಡುತ್ತಾರೆ, ಊರಿಗೆ ಬೆಂಕಿ ಇಡುತ್ತಾರೆ, ಮಕ್ಕಳ ತಲೆ ಕಡಿಯುತ್ತಾರೆ, ಮಹಿಳೆಯರ ಮೇಲೆ ಅತ್ಯಾಚಾರವೆಸಗುತ್ತಾರೆ ಎಂಬುದೆಲ್ಲ ಈಗ ಇತಿಹಾಸ.

ಜಡಗಪ್ಪ, ಬಾಲಪ್ಪರಿಗೆ ನೇಣು: ಮೋಸದಿಂದ ಹಲಗಲಿವೀರರನ್ನು ಸೋಲಿಸಿ ಬಂಡಾಯವನ್ನು ಅಂತ್ಯಗೊಳಿಸಿದ ಬ್ರಿಟಿಷ್‌ ಅಧಿ​ಕಾರಿ ಮಾಲ್ಕಂ ಬಂಡಾಯದಲ್ಲಿ ಪಾಲ್ಗೊಂಡ 290 ಮಂದಿಯನ್ನು ಬಂ​ಧಿಸಿ ಕಲಾದಗಿಗೆ ಕರೆತರುತ್ತಾನೆ. ಇವರಲ್ಲಿ 19 ಜನರಿಗೆ ಮರಣದಂಡನೆ ವಿ​ಧಿಸಲಾಗುತ್ತದೆ. ಇವರಲ್ಲಿ ಬಂಡಾಯದ ರೂವಾರಿಗಳಾಗಿದ್ದ ಜಡಗಪ್ಪ, ಬಾಲಪ್ಪ ಇನ್ನಿತರ 13 ಜನರನ್ನು 1857ರ ಡಿಸೆಂಬರ್‌ 11ರಂದು ಮುಧೋಳದ ಜನನಿಬಿಡ ರಸ್ತೆಯಲ್ಲಿ ನೇಣಿಗೇರಿಸಲಾಗುತ್ತದೆ. ಇನ್ನುಳಿದವರನ್ನು ಮೂರು ದಿನಗಳ ನಂತರ ಹಲಗಲಿಯಲ್ಲಿ ನೇಣಿಗೇರಿಸಲಾಗುತ್ತದೆ.

India@75:18 ರ ಹರೆಯದ ಖುದಿರಾಮ್ ಬೋಸ್, ನಗುತ್ತಲೇ ಗಲ್ಲಿಗೇರಿದ ಕಿರಿಯ ಸ್ವಾತಂತ್ರ್ಯ ಸೇನಾನಿ!

ಪ್ರಸ್ತುತ ಮುಧೋಳದ ಬಸ್‌ ನಿಲ್ದಾಣದ ಬಳಿ ಹಲಗಲಿ ಬಂಡಾಯದ ನೆನಪಿಗಾಗಿ ಹಾಗೂ ವೀರ ಯೋಧರಾದ ಜಡಗಣ್ಣ ಮತ್ತು ಬಾಲಣ್ಣನ ಹೆಸರಿನಲ್ಲಿನ ಸ್ಮಾರಕ ನಿರ್ಮಿಸಲಾಗಿದೆ.

ಹಲಗಲಿಗೆ ಹೋಗೋದು ಹೇಗೆ?: ಬಾಗಲಕೋಟೆಯಿಂದ 80 ಕಿ.ಮೀ. ದೂರದಲ್ಲಿದೆ ಹಲಗಲಿ. ಮುಧೋಳಕ್ಕೆ ಹೋಗಿ ಅಲ್ಲಿಂದ ಮಂಟೂರ ಮಾರ್ಗವಾಗಿ ಹಲಗಲಿಗೆ ಹೋಗಲು ರಸ್ತೆ ಮಾರ್ಗವಿದೆ.

- ಈಶ್ವರ ಶೆಟ್ಟರ

click me!