India @75: ರೈತ ಹೋರಾಟಕ್ಕೆ ಸಾಕ್ಷಿ ಬಾವುಟ ಗುಡ್ಡೆ, 2 ವಾರ ಇಲ್ಲಿ ಹಾರಾಡಿತ್ತು ಸ್ವತಂತ್ರ ಧ್ವಜ!
ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ ನಡೆದದ್ದು 1857ರಲ್ಲಿ. ಆದರೆ ಅಮರ ಸುಳ್ಯ ಹೋರಾಟ ಪ್ರತಿಪಾದಿಸುವಂತೆ 1837ರಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಮೊದಲ ಸ್ವಾತಂತ್ರ್ಯ ಸಂಗ್ರಾಮ ನಡೆದಿದೆ.
ಮಂಗಳೂರು (ಜೂ. 03): ಬ್ರಿಟಿಷ್ ದಾಖಲೆಗಳ ಪ್ರಕಾರ ‘ಲೈಟ್‌ಹೌಸ್ ಹಿಲ್’ ಎಂದು ಗುರುತಿಸಲ್ಪಡುವ ಮಂಗಳೂರಿನ ಎತ್ತರದ ಪ್ರದೇಶ ಸ್ಥಳೀಯರ ಆಡುಮಾತಲ್ಲಿ ಇಂದಿಗೂ ಬಾವುಟಗುಡ್ಡೆಯೇ. ಸ್ವಾತಂತ್ರ್ಯ ಹೋರಾಟದ ಕಾಲಘಟ್ಟದಲ್ಲಿ ಬ್ರಿಟಿಷರನ್ನು ಬಗ್ಗುಬಡಿದು, ಎರಡು ವಾರಗಳ ಕಾಲ ರಾಜಲಾಂಛನದ ಸ್ವತಂತ್ರ ಬಾವುಟವನ್ನು ಹಾರಿಸಿದ ಐತಿಹ್ಯ ಇರುವ ಜಾಗವಿದು.
ಅರಬ್ಬಿ ಸಮುದ್ರದಲ್ಲಿ ಬಂದರು ಕಡೆಗೆ ಆಗಮಿಸುವ ಹಡಗು, ಬೋಟು, ನಾವೆಗಳಿಗೆ ಮಂಗಳೂರು ಪಟ್ಟಣದ ದಂಡೆ ಇದ್ದಂತೆ ಈ ಬಾವುಟ ಗುಡ್ಡೆ. ಇಲ್ಲಿಂದಲೇ ಬಂದರಿನ ಪಕ್ಷಿನೋಟಕ್ಕೆ ಅನುಕೂಲವಾಗಲು ಬೆಟ್ಟದ ಮೇಲೆ ದೀಪಸ್ತಂಭ ನಿರ್ಮಿಸಲಾಗಿದೆ.
India@75:ಜಾಡೋನಾಂಗ್ ಎಂಬ ಈಶಾನ್ಯ ಭಾಗದ ಮೊದಲ ಸ್ವಾತಂತ್ರ್ಯ ಹೋರಾಟಗಾರ
ಮೊದಲ ಸ್ವಾತಂತ್ರ್ಯ ಸಂಗ್ರಾಮ ಇಲ್ಲೇ!:
ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ ನಡೆದದ್ದು 1857ರಲ್ಲಿ. ಆದರೆ ಅಮರ ಸುಳ್ಯ ಹೋರಾಟ ಪ್ರತಿಪಾದಿಸುವಂತೆ 1837ರಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಮೊದಲ ಸ್ವಾತಂತ್ರ್ಯ ಸಂಗ್ರಾಮ ನಡೆದಿದೆ. ಮೈಸೂರಿನ ಹೈದರಾಲಿ ಮತ್ತು ಟಿಪ್ಪು ಸುಲ್ತಾನ್ ಮಂಗಳೂರನ್ನು ವಶಕ್ಕೆ ತೆಗೆದುಕೊಂಡಿದ್ದರು. 1799ರಲ್ಲಿ ನಡೆದ 4ನೇ ಆಂಗ್ಲೋ- ಮೈಸೂರು ಯುದ್ಧದ ರಣಾಂಗಣದಲ್ಲಿ ಟಿಪ್ಪು ಮಡಿದ ಬಳಿಕ ಮಂಗಳೂರು ಸಂಪೂರ್ಣ ಬ್ರಿಟಿಷರ ಕೈವಶವಾಯಿತು.
ಆಗ ಅಮರ ಸುಳ್ಯ ಎಂದೇ ಹೆಸರಾದ ದಂಗೆಯ ಮೂಲ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಆರಂಭವಾಯಿತು. ಬರ, ರೋಗಬಾಧೆಗಳಿಂದ ರೈತರು ಆರ್ಥಿಕ ನಷ್ಟಕ್ಕೆ ಗುರಿಯಾಗಿದ್ದರು. ಇದನ್ನು ಲೆಕ್ಕಿಸದ ಬ್ರಿಟಿಷ್ ಅಧಿಕಾರಿ ವರ್ಗ ನಿರ್ದಾಕ್ಷಿಣ್ಯವಾಗಿ ಕಂದಾಯ ವಸೂಲಾತಿಗೆ ಇಳಿದಿತ್ತು. ಇದರ ವಿರುದ್ಧ ಮೊಳಗಿದ ಹೋರಾಟದ ಧ್ವನಿಯೇ ಅಮರ ಸುಳ್ಯ ರೈತ ದಂಗೆ.
ಬ್ರಿಟಿಷರಿಗೆ ಕರ ನಿರಾಕರಣೆ ಮೂಲಕ ಸುಳ್ಯದಲ್ಲಿ ಕೆದಂಬಾಡಿ ರಾಮಯ್ಯ ಗೌಡರ ನೇತೃತ್ವದಲ್ಲಿ 1837 ಮಾಚ್‌ರ್ 30ರಂದು ಸೇರಿದ ರೈತರ ದಂಡು ಬೆಳ್ಳಾರೆಗೆ ಸಾಗಿ, ಅಲ್ಲಿ ಬ್ರಿಟಿಷ್ ಕಂಪನಿಯ ಖಜಾನೆಯನ್ನು ಸ್ವಾಧೀನಪಡಿಸಿತ್ತು. ಅಲ್ಲಿಂದ ಶಸ್ತ್ರಸಜ್ಜಿತರಾಗಿಯೇ ಹೊರಟ ರೈತಾಪಿಗಳ ಸೈನ್ಯ ಕಾಸರಗೋಡು, ಕುಂಬ್ಳೆ, ಮಂಜೇಶ್ವರ ವಶಪಡಿಸಿ ಮಂಗಳೂರಿಗೆ ಕಾಲಿಟ್ಟಿತು.
ಬಿಕರ್ನಕಟ್ಟೆಯಲ್ಲಿ ಕೊಂದರು: ಅಂದು ಸುಮಾರು 12 ಸಾವಿರಕ್ಕೂ ಅಧಿಕ ರೈತರು ಲೈಟ್‌ಹೌಸ್ ಹಿಲ್‌ನ್ನು ಆಕ್ರಮಿಸಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಧ್ವಜವನ್ನು ಕೆಳಗಿಳಿಸಿ ಹಾಲೇರಿ ರಾಜಲಾಂಛನದ ಧ್ವಜವನ್ನು ಅರಳಿಸಿದರು. ಸುಮಾರು 2 ವಾರಗಳ ಕಾಲ ರೈತ ಹೋರಾಟಗಾರರ ಸ್ವಾಧೀನದಲ್ಲಿ ಇಡೀ ದಕ್ಷಿಣ ಕನ್ನಡ ಜಿಲ್ಲೆ ಇತ್ತು. ಬಳಿಕ ಬ್ರಿಟಿಷರು ಮುಂಬೈನಿಂದ ಮದ್ದುಗುಂಡು, ಸೈನ್ಯ ತರಿಸಿ ಇಲ್ಲಿ ಕಾಳಗ ನಡೆಸಿ ರೈತರನ್ನು ಸೋಲಿಸಿ, ಸಮೀಪದ ಬಿಕರ್ನಕಟ್ಟೆಯಲ್ಲಿ ಭೀಕರವಾಗಿ ಕೊಂದು ಶವವನ್ನು ಮರಕ್ಕೆ ನೇತು ಹಾಕಿದರು.
ಪ್ರಸಕ್ತ ಬಾವುಟ ಗುಡ್ಡೆ ಪ್ರದೇಶ ಉದ್ಯಾನವನವಾಗಿ ಮಾರ್ಪಟ್ಟಿದ್ದು, ಕವಿ ರವೀಂದ್ರನಾಥ ಠಾಗೋರ್ ಭೇಟಿಯ ನೆನಪಿಗೆ ಠಾಗೋರ್ ಪಾರ್ಕ್ ಎಂದು ಕರೆಯಲ್ಪಡುತ್ತಿದೆ. ಇದು ಮಂಗಳೂರು ನಗರದ ಹೃದಯಭಾಗದಲ್ಲೇ ಇರುವುದರಿಂದ ಇಲ್ಲಿಗೆ ತಲುಪುವುದು ಕಷ್ಟವೇನಿಲ್ಲ.
- ಆತ್ಮಭೂಷಣ್, ಮಂಗಳೂರು