India@75: ಕಾನೂನು ಭಂಗ ಚಳವಳಿಯ ತೀವ್ರತೆ ಸಾರುವ ಹಾವೇರಿ ವೀರಸೌಧ

By Kannadaprabha News  |  First Published Jun 10, 2022, 1:34 PM IST

- ಕಾನೂನು ಭಂಗ ಚಳವಳಿಯ ತೀವ್ರತೆ ಸಾರುವ ವೀರಸೌಧ

-ಹಾವೇರಿಯ ತೋಟದಯಲ್ಲಾಪುರದಲ್ಲಿದೆ ತ್ಯಾಗ ಬಲಿದಾನಗಳ ಸಂಕೇತ

-ಬ್ರಿಟಿಷರ ಗುಂಡೇಟಿಗೆ ಹುತಾತ್ಮರಾಗಿದ್ದ ಮಹದೇವಪ್ಪ, ತಿರುಕಪ್ಪ, ವೀರಯ್ಯ


ಸ್ವಾತಂತ್ರ್ಯ ಹೋರಾಟದ ಚರಿತ್ರೆಯಲ್ಲಿ ಜಿಲ್ಲೆಯ ಹೆಸರನ್ನು ಅಜರಾಮರವಾಗಿಸಿದವರು ಮೈಲಾರ ಮಹದೇವಪ್ಪ. ಬ್ರಿಟಿಷರ ವಿರುದ್ಧ ಅಸಹಕಾರ ಚಳವಳಿಯಲ್ಲಿ ಮುಂಚೂಣಿಯಲ್ಲಿ ಹೋರಾಟ ನಡೆಸುವಾಗಲೇ ಬ್ರಿಟಿಷರ ಗುಂಡೇಟಿಗೆ ಬಲಿಯಾಗಿ ತಮ್ಮ ಇಬ್ಬರು ಸಹಚರರೊಂದಿಗೆ ಮೈಲಾರ ಮಹದೇವಪ್ಪ ಹುತಾತ್ಮರಾದವರು. ಈ ಬಲಿದಾನವನ್ನು ಸಾರುವ ಸ್ಮಾರಕವೇ ಹಾವೇರಿ ನಗರದ ಹೊರವಲಯದಲ್ಲಿರುವ ತೋಟದಯಲ್ಲಾಪುರದಲ್ಲಿರುವ ವೀರಸೌಧ.

ದಾಸ್ಯದಿಂದ ಬಿಡುಗಡೆಯಾಗಲು ಕ್ರಾಂತಿಕಾರಿ ಹೆಜ್ಜೆಗಳನ್ನಿಟ್ಟಿದ್ದ ಮೈಲಾರ ಮಹದೇವಪ್ಪ, ತಿರುಕಪ್ಪ ಮಡಿವಾಳರ ಹಾಗೂ ವೀರಯ್ಯ ಹಿರೇಮಠ ತಾಲೂಕಿನ ಹೊಸರಿತ್ತಿಯಲ್ಲಿ ಬ್ರಿಟಿಷರ ಗುಂಡಿಗೆ ಬಲಿಯಾದರು. ಈ ಮೂವರ ಸಮಾಧಿ ನಗರದ ಹೊರವಲಯ ತೋಟದ ಯಲ್ಲಾಪುರದಲ್ಲಿದ್ದು, ಅಲ್ಲಿ ವೀರಸೌಧವನ್ನು ನಿರ್ಮಿಸಲಾಗಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಕೆಚ್ಚೆದೆಯಿಂದ ನಡೆಸಿದ ಹೋರಾಟದ ರಕ್ತ ಚರಿತ್ರೆಯನ್ನು ಈ ವೀರಸೌಧ ಹೇಳುತ್ತದೆ.

Tap to resize

Latest Videos

undefined

India@75:ಸ್ವಾತಂತ್ರ ಹೋರಾಟದ ಸ್ಪೂರ್ತಿಯ ತಾಣ ಮೈಸೂರಿನ ಸುಬ್ಬರಾಯನ ಕೆರೆ

ಬಾಪೂಜಿಯವರ ನೆಚ್ಚಿನ ಶಿಷ್ಯ:

ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರ ಗ್ರಾಮದಲ್ಲಿ 1911ರಲ್ಲಿ ಜನಿಸಿದ ಮೈಲಾರ ಮಹಾದೇವಪ್ಪ ಅವರನ್ನು ಮಹಾತ್ಮ ಗಾಂಧೀಜಿಯವರ ಸ್ವಾತಂತ್ರ್ಯ ಹೋರಾಟದ ಹೆಜ್ಜೆ ಆಕರ್ಷಿಸಿತು. ಪತ್ನಿ ಸಿದ್ದಮ್ಮರೊಡಗೂಡಿ ಸಬರಮತಿ ಆಶ್ರಮ ಸೇರಿದ ಅವರು ಬಾಪೂಜಿಯವರ ನೆಚ್ಚಿನ ಶಿಷ್ಯರಾದರು. 1930ರಲ್ಲಿ ನಡೆದ ಗಾಂಧೀಜಿಯವರ ದಂಡಿ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದ ನೂರಾರು ಹೋರಾಟಗಾರರಲ್ಲಿ ಮಹಾದೇವಪ್ಪ ಅವರು ಕರ್ನಾಟಕದ ಏಕೈಕ ಪ್ರತಿನಿಧಿಯಾಗಿದ್ದರು. ಜತೆಗೆ ಅತ್ಯಂತ ಕಿರಿಯ ಹೋರಾಟಗಾರರಾಗಿದ್ದರು. ಆ ಸಂದರ್ಭದಲ್ಲೇ ರಾಜ್ಯದ ಅಂಕೋಲಾದಲ್ಲಿ ನಡೆದ ಉಪ್ಪಿನ ಸತ್ಯಾಗ್ರಹ ಇಲ್ಲಿಯ ಜನರನ್ನು ಆವರಿಸಿಬಿಟ್ಟಿತ್ತು. ಕಾನೂನು ಭಂಗ ಚಳವಳಿ ಎಲ್ಲೆಡೆ ವ್ಯಾಪಿಸಿತ್ತು. ಆಗ ಬಂಧನಕ್ಕೊಳಗಾದ ಗಾಂಧೀಜಿಯವರೊಡನೆ ಮೈಲಾರ ಮಹಾದೇವರೂ ಜೈಲು ಸೇರಿದರು.

India@75: ವಿಜಯಪುರದ ಕೋಟ್ನಾಳದಲ್ಲಿ ಕಟ್ಟಲಾಗಿತ್ತು ಬ್ರಿಟಿಷರ ವಿರುದ್ಧ ಸೈನ್ಯ

1932ರಲ್ಲಿ ಕಾನೂನು ಭಂಗ ಚಳವಳಿ ಮತ್ತಷ್ಟುತೀವ್ರಗೊಂಡಿತು. ಅದು ಕರ್ನಾಟಕದಲ್ಲೂ ಗಂಭೀರ ಸ್ವರೂಪ ಪಡೆಯಿತು. ಇತ್ತ ಮೈಲಾರ ಮಹಾದೇವರು ತಮ್ಮ ಸಂಗಡಿಗರೊಂದಿಗೆ ಚಳವಳಿ ರೂಪಿಸಿದರು. ಸೇಂದಿ ಗಿಡ ಕಡಿಯುವ, ಹೆಂಡದಂಗಡಿ ನಾಶ ಮಾಡುವ ಕ್ರಮಕ್ಕೆ ಮುಂದಾದರು. ಪರಿಣಾಮವಾಗಿ ಮಹಾದೇವರನ್ನು ಅವರ ಸಂಗಡಿಗರೊಂದಿಗೆ ಬ್ರಿಟಿಷರು ದಸ್ತಗಿರಿ ಮಾಡಿದರು.

ಕ್ರಾಂತಿಕಾರಿ ಮೈಲಾರ ಮಹದೇವಪ್ಪ:

1942ರ ಆಗಸ್ಟ್‌ನಲ್ಲಿ ಹೋರಾಟ ಮತ್ತಷ್ಟುತೀವ್ರ ಸ್ವರೂಪ ಪಡೆಯಿತು. ಮಾಡು ಇಲ್ಲವೇ ಮಡಿ ಎಲ್ಲೆಲ್ಲೂ ಅನುರುಣಿಸತೊಡಗಿತು. ರೈಲ್ವೆ ಸ್ಟೇಶನ್‌ ಸುಡುವ, ಚಾವಡಿ ಧ್ವಂಸಗೊಳಿಸುವ, ಸೇತುವೆ ನಾಶಪಡಿಸುವ, ಟಪಾಲ್‌ ಬಸ್‌ ಲೂಟಿ ಮಾಡುವ ಮೂಲಕ ಹೋರಾಟ ಉಗ್ರ ರೂಪ ತಾಳಿತು.

ಮೈಲಾರ ಮಹದೇವಪ್ಪ ಅವರು ತಿರುಕಪ್ಪ ಮಡಿವಾಳರ, ವೀರಯ್ಯ ಹಿರೇಮಠ ಜತೆಗೂಡಿ ಹೊಸರಿತ್ತಿಯ ಕಂದಾಯ ಕಚೇರಿ ಲೂಟಿ ಮಾಡಲು ಮುಂದಾದರು. 1943ರ ಏಪ್ರಿಲ್‌ 1ರಂದು ಈ ಮೂವರನ್ನೂ ಬ್ರಿಟಿಷರು ಮೋಸದಿಂದ ಗುಂಡಿಟ್ಟು ಕೊಂದರು. ಅವರ ಸಮಾಧಿಯಿರುವ ಜಾಗದಲ್ಲಿ ವೀರಸೌಧ ನಿರ್ಮಿಸಲಾಗಿದೆ. ಇಲ್ಲಿ ಈಗ ಸ್ವಾತಂತ್ರ್ಯ ಹೋರಾಟಗಾರರ ಮ್ಯೂಸಿಯಂ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ.

- ನಾರಾಯಣ ಹೆಗಡೆ

click me!