ಇಂಗ್ಲೆಂಡ್ ವಿಶ್ವಕಪ್ ಗೆಲುವಿಗೆ ಕಾರಣವಾದ ಆ 5 ಅಂಶಗಳಿವು..!

Published : Jul 15, 2019, 11:14 AM IST
ಇಂಗ್ಲೆಂಡ್ ವಿಶ್ವಕಪ್ ಗೆಲುವಿಗೆ ಕಾರಣವಾದ ಆ 5 ಅಂಶಗಳಿವು..!

ಸಾರಾಂಶ

ಬಹುನಿರೀಕ್ಷಿತ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ಚಾಂಪಿಯನ್ ಆಗುವುದರೊಂದಿಗೆ ವರ್ಣರಂಜಿತ ಕ್ರಿಕೆಟ್ ಮಹಾಸಂಗ್ರಾಮಕ್ಕೆ ತೆರೆಬಿದ್ದಿದೆ. ಈ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಗೆಲ್ಲಲು ಕಾರಣವಾದ 5 ಅಂಶಗಳನ್ನು ಸುವರ್ಣನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ. 

ವಿಶ್ವಕಪ್ ಟೂರ್ನಿಯ ಕ್ಷಣಕ್ಷಣದ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ...

ಬೆಂಗಳೂರು[ಜು.15]: ವಿಶ್ವಕಪ್ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ರೋಚಕ ಫೈನಲ್ ಪಂದ್ಯಕ್ಕೆ ಇಂಗ್ಲೆಂಡ್-ನ್ಯೂಜಿಲೆಂಡ್ ನಡುವಿನ ಪಂದ್ಯ ಸಾಕ್ಷಿಯಾಯಿತು. ಲಾರ್ಡ್ಸ್ ಮೈದಾನದಲ್ಲಿ ನಡೆದ ಪಂದ್ಯದ ಸೂಪರ್ ಓವರ್’ನಲ್ಲಿ ಕಿವೀಸ್ ವಿರುದ್ಧ ಆತಿಥೇಯ ಇಂಗ್ಲೆಂಡ್ ಗೆದ್ದು ಚೊಚ್ಚಲ ಬಾರಿಗೆ ವಿಶ್ವಕಪ್ ಸಾಮ್ರಾಟನಾಗಿ ಮೆರೆದಾಡಿತು.

ವಿಶ್ವಕಪ್ ಇತಿಹಾಸದಲ್ಲೇ ರೋಚಕ ಪಂದ್ಯ; ಸೂಪರ್ ಓವರ್‌ನಲ್ಲಿ ಇಂಗ್ಲೆಂಡ್ ಚಾಂಪಿಯನ್!

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ನ್ಯೂಜಿಲೆಂಡ್ 8 ವಿಕೆಟ್ ಕಳೆದುಕೊಂಡು 241 ರನ್ ಬಾರಿಸಿತ್ತು. ಗುರಿ ಬೆನ್ನತ್ತಿದ ಇಂಗ್ಲೆಂಡ್ ಕೂಡಾ 241 ರನ್ ಬಾರಿಸಿ ಆಲೌಟ್ ಆಯಿತು. ಪಂದ್ಯ ಟೈ ಆದ ಕಾರಣ, ಫಲಿತಾಂಶಕ್ಕಾಗಿ ಸೂಪರ್ ಓವರ್ ಮೊರೆ ಹೋಗಲಾಯಿತು. ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಒಂದು ಓವರ್’ಗೆ 15 ರನ್ ಬಾರಿಸಿತ್ತು. ಇನ್ನು 16 ರನ್ ಗಳ ಗುರಿ ಪಡೆದ ನ್ಯೂಜಿಲೆಂಡ್ ಕೂಡಾ 15 ರನ್ ಬಾರಿಸಿತು. ಹೀಗಾಗಿ ಸೂಪರ್ ಓವರ್ ಕೂಡಾ ಟೈ ಆದ ಕಾರಣ, ಮೊದಲ ಇನ್ನಿಂಗ್ಸ್’ನಲ್ಲಿ ಗರಿಷ್ಠ ಬೌಂಡರಿ[26] ಬಾರಿಸಿದ್ದ ಇಂಗ್ಲೆಂಡ್ ತಂಡವನ್ನು ಚಾಂಪಿಯನ್ ಎಂದು ಘೋಷಿಸಲಾಯಿತು. ನ್ಯೂಜಿಲೆಂಡ್ ಕೇವಲ 17 ಬೌಂಡರಿಗಳನ್ನಷ್ಟೇ ಬಾರಿಸಿದ್ದರಿಂದ ವಿಶ್ವಕಪ್ ಗೆಲ್ಲುವ ಅವಕಾಶ ಕೈಚೆಲ್ಲಿತು.

ಈ ಸಂದರ್ಭದಲ್ಲಿ ಆತಿಥೇಯ ಇಂಗ್ಲೆಂಡ್ ತಂಡ ಪ್ರಶಸ್ತಿ ಗೆಲ್ಲಲು ಕಾರಣವಾದ ಆ 5 ಅಂಶಗಳನ್ನು ಸುವರ್ಣನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ. 

* ಕೊನೆ 2 ಓವರಲ್ಲಿ ಇಂಗ್ಲೆಂಡ್‌ ಗೆಲುವಿಗೆ 24 ರನ್‌ ಬೇಕಿತ್ತು. 49ನೇ ಓವರ್‌ನ 4ನೇ ಎಸೆತದಲ್ಲಿ ಸ್ಟೋಕ್ಸ್‌ ಬಾರಿಸಿದ ಚೆಂಡನ್ನು ಬೌಂಡರಿ ಬಳಿ ಬೌಲ್ಟ್‌ ಕ್ಯಾಚ್‌ ಹಿಡಿದರಾದರೂ, ಗೆರೆ ತುಳಿದ ಕಾರಣ ಇಂಗ್ಲೆಂಡ್‌ಗೆ 6 ರನ್‌ ಸಿಕ್ಕಿತು. ಸ್ಟೋಕ್ಸ್‌ ಕ್ರೀಸ್‌ನಲ್ಲಿ ಉಳಿದರು.

* ಕೊನೆ ಓವರ್‌ನಲ್ಲಿ ಇಂಗ್ಲೆಂಡ್‌ ಗೆಲುವಿಗೆ 15 ರನ್‌ ಬೇಕಿತ್ತು. ಓವರ್‌ನ 3ನೇ ಎಸೆತದಲ್ಲಿ ಸ್ಟೋಕ್ಸ್‌ ಸಿಕ್ಸರ್‌ ಸಿಡಿಸಿದರು. ಇದು ಇಂಗ್ಲೆಂಡ್‌ ಮೇಲಿನ ಒತ್ತಡವನ್ನು ಕಡಿಮೆ ಮಾಡಿತು.

* ಕೊನೆ ಓವರ್‌ನ 4ನೇ ಎಸೆತದಲ್ಲಿ ಸ್ಟೋಕ್ಸ್‌ 2 ರನ್‌ ಓಡುವ ಯತ್ನ ನಡೆಸಿದರು. ಗಪ್ಟಿಲ್‌ ಸ್ಟಂಫ್ಸ್‌ನತ್ತ ಎಸೆದ ಚೆಂಡು, ಸ್ಟೋಕ್ಸ್‌ ಬ್ಯಾಟ್‌ಗೆ ಬಡಿದು ಬೌಂಡರಿ ಸೇರಿತು. ಓವರ್‌ ಥ್ರೋನಿಂದ ಹೆಚ್ಚುವರಿ 4 ರನ್‌ ದೊರೆಯಿತು.

* ಕೊನೆ ಎಸೆತದಲ್ಲಿ ಇಂಗ್ಲೆಂಡ್‌ಗೆ 2 ರನ್‌ ಬೇಕಿತ್ತು. ಸ್ಟೋಕ್ಸ್‌ ಔಟಾಗದೆ 1 ರನ್‌ ಪಡೆದಿದ್ದರಿಂದಲೇ ಪಂದ್ಯ ಸೂಪರ್‌ ಓವರ್‌ ತಲುಪಿತು.

* ಸೂಪರ್ ಓವರ್’ನ ಕೊನೆಯ ಎಸೆತದಲ್ಲಿ ಮಾರ್ಟಿನ್ ಗಪ್ಟಿಲ್ ರನೌಟ್ ಆದರು. ಡೀಪ್ ಮಿಡ್ ವಿಕೆಟ್’ನಲ್ಲಿದ್ದ ರಾಯ್ ಎಸೆದ ಚೆಂಡನ್ನು ಹಿಡಿದ ವಿಕೆಟ್ ಕೀಪರ್ ಜೋಸ್ ಬಟ್ಲರ್ ಸ್ಟಂಪ್ಸ್ ಉರುಳಿಸಿದರು. ಇದರೊಂದಿಗೆ ಇಂಗ್ಲೆಂಡ್ ಚೊಚ್ಚಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತು.
 

PREV
click me!

Recommended Stories

ವಿಶ್ವಕಪ್ ಫೈನಲ್ ವಿವಾದಾತ್ಮಕ ತೀರ್ಪು; ಮೌನ ಮುರಿದ ಅಂಪೈರ್ ಧರ್ಮಸೇನಾ!
ವಿಶ್ವಕಪ್ ಫೈನಲ್ ಗೆಲುವು ನ್ಯಾಯವಲ್ಲ; ಇಂಗ್ಲೆಂಡ್ ನಾಯಕ ವಿಷಾದ!