ಆಫ್ಘನ್,ಆಫ್ರಿಕಾ ಬಿಟ್ಟು ಉಳಿದ 8 ತಂಡಗಳಿಗೂ ಇದೆ ಸೆಮೀಸ್ ಚಾನ್ಸ್!

By Web Desk  |  First Published Jun 24, 2019, 6:31 PM IST

ವಿಶ್ವಕಪ್ ಸೆಮಿಫೈನಲ್ ಪ್ರವೇಶಕ್ಕೆ ಯಾವ ತಂಡ ಎಷ್ಟು ಗೆಲುವು ಸಾಧಿಸಬೇಕು? ಇನ್ನುಳಿದ ಪಂದ್ಯದ ಸೋಲು ಗೆಲುವು ಯಾವ ತಂಡಕ್ಕೆ ವರವಾಗಲಿದೆ. ಆಫ್ಘಾನಿಸ್ತಾನ ಹಾಗೂ ಸೌತ್ ಆಫ್ರಿಕಾ ತಂಡ ಹೊರತು ಪಡಿಸಿದರೆ, ಉಳಿದ 8 ತಂಡಗಳಿಗೂ ಸೆಮಿಫೈನಲ್ ಪ್ರವೇಶಿಸಲು ಇದೆ ಅವಕಾಶ. ಇಲ್ಲಿದೆ ಸಂಪೂರ್ಣ ವಿವರ.


ಲಂಡನ್(ಜೂ.24): ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಕ್ಕೆ ಪ್ರತಿ ತಂಡದ ಹೋರಾಟ ತೀವ್ರಗೊಂಡಿದೆ. ಸೆಮೀಸ್ ರೇಸ್‌ನಿಂದ ಆಫ್ಘಾನಿಸ್ತಾನ ಹಾಗೂ ಸೌತ್ ಆಫ್ರಿಕಾ ತಂಡ ಈಗಾಗಲೇ ಹೊರಬಿದ್ದಿದೆ. ಇನ್ನುಳಿದ 8 ತಂಡಗಳು ಹೋರಾಟ ನಡೆಸುತ್ತಿದೆ. ಅಂಕಪಟ್ಟಿಯ ಟಾಪ್ 4 ತಂಡಗಳು ಇದೇ ಪ್ರದರ್ಶನ ಮುಂದುವರಿಸಿದರೆ ಸುಲಭವಾಗಿ ಸೆಮಿಫೈನಲ್ ಅರ್ಹತೆ ಗಿಟ್ಟಿಸಿಕೊಳ್ಳಲಿವೆ. ಆದರೆ 5,6,7 ಮತ್ತು 8ನೇ ಸ್ಥಾನದಲ್ಲಿರುವ ತಂಡಗಳು ಅದ್ಭುತ ಪ್ರದರ್ಶನದ ಜೊತೆಗೆ ಲಕ್ ಕೂಡ ಕೈಹಿಡಿದರೆ ಸೆಮಿಫೈನಲ್ ಪ್ರವೇಶಿಸಲಿವೆ.

ಇದನ್ನೂ ಓದಿ: ವಿಶ್ವಕಪ್ 2019: RCB ಬೌಲರ್‌ಗೆ ಜಾಕ್‌ಪಾಟ್ : ಟೀಂ ಇಂಡಿಯಾದಿಂದ ಬುಲಾವ್

Tap to resize

Latest Videos

undefined

ಟೀಂ ಇಂಡಿಯಾ:
ವಿಶ್ವಕಪ್ ಟೂರ್ನಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡುತ್ತಿರುವ ಟೀಂ ಇಂಡಿಯಾ 4 ಗೆಲುವಿನೊಂದಿಗೆ 3ನೇ ಸ್ಥಾನದಲ್ಲಿದೆ. ಸೆಮಿಫೈನಲ್ ಪ್ರವೇಶಕ್ಕೆ ಇನ್ನುಳಿದ 4 ಪಂದ್ಯದಲ್ಲಿ ಟೀಂ ಇಂಡಿಯಾಗೆ ಕನಿಷ್ಠ 2 ಗೆಲುವು ಬೇಕಿದೆ.  ವೆಸ್ಟ್ ಇಂಡೀಸ್, ಇಂಗ್ಲೆಂಡ್, ಶ್ರೀಲಂಕಾ ಹಾಗೂ ಬಾಂಗ್ಲಾದೇಶ ವಿರುದ್ಧ ಭಾರತ ಇನ್ನುಳಿದ ಪಂದ್ಯ ಆಡಲಿದೆ. 

ನ್ಯೂಜಿಲೆಂಡ್:
ವಿಶ್ವಕಪ್ ಟೂರ್ನಿಯಲ್ಲಿ ಸೋಲಿಲ್ಲದ ಸರದಾರನಾಗಿ ಮುನ್ನಗ್ಗುತ್ತಿರುವ ನ್ಯೂಜಿಲೆಂಡ್ ಸದ್ಯ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಈಗಾಗಲೇ 11 ಅಂಕ ಸಂಪಾದಿಸಿರುವ ಕಿವೀಸ್ ಸೆಮಿಫೈನಲ್ ಸ್ಥಾನ ಬಹುತೇಕ ಖಚಿತಪಡಿಸಿದೆ. ಇನ್ನುಳಿದ 3 ಪಂದ್ಯದಲ್ಲಿ 1 ಗೆಲುವು ಸಾಧಿಸಿದರೆ ನ್ಯೂಜಿಲೆಂಡ್ ಸೆಮಿಫೈನಲ್ ಸ್ಥಾನ ಭದ್ರವಾಗಲಿದೆ.

ಇದನ್ನೂ ಓದಿ: ಹ್ಯಾಟ್ರಿಕ್ ವಿಕೆಟ್ ರಹಸ್ಯ ಬಿಚ್ಚಿಟ್ಟ ಮೊಹಮ್ಮದ್ ಶಮಿ..!

ಆಸ್ಟ್ರೇಲಿಯಾ:
ವಿಶ್ವಕಪ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಆಸ್ಟ್ರೇಲಿಯಾ ಆಡಿದ 6 ಪಂದ್ಯದಲ್ಲಿ 5 ಗೆಲುವು ಸಾಧಿಸಿದೆ. ಟೀಂ ಇಂಡಿಯಾ ವಿರುದ್ಧದ ಸೋಲು ಹೊರತು ಪಡಿಸಿದರೆ ಇನ್ನುಳಿದ ಎಲ್ಲಾ ಪಂದ್ಯದಲ್ಲಿ ಆಸೀಸ್ ಗೆಲುವು ಸಾಧಿಸಿದೆ. ಆಸ್ಟ್ರೇಲಿಯಾ ಸೆಮಿಫೈನಲ್ ಅರ್ಹತೆಗೆ ಇನ್ನುಳಿದ 3 ಪಂದ್ಯದಲ್ಲಿ ಕನಿಷ್ಠ  1 ಗೆಲುವು ಬೇಕಿದೆ. ಆದರೆ 3 ಪಂದ್ಯದಲ್ಲಿ ಆಸೀಸ್ ಸೋಲು ಕಂಡರೆ ಸೆಮೀಸ್‌ಗೇರಲು ಶ್ರೀಲಂಕಾ ಕನಿಷ್ಠ 2 ಪಂದ್ಯ ಸೋಲಬೇಕು ಹಾಗೂ ಬಾಂಗ್ಲಾದೇಶ, ಪಾಕಿಸ್ತಾನ ತಲಾ ಒಂದೊಂದು ಪಂದ್ಯ ಸೋತರೆ ಆಸ್ಟ್ರೇಲಿಯಾ ಸೆಮಿಫೈನಲ್ ಪ್ರವೇಶ ಪಡೆಯಲಿದೆ.

ಇಂಗ್ಲೆಂಡ್:
ಆತಿಥೇಯ ಇಂಗ್ಲೆಂಡ್ ತಂಡ 2 ಸೋಲು ಕಾಣೋ ಮೂಲಕ ಸೆಮಿಫೈನಲ್ ಪ್ರವೇಶ ಹಾದಿಯನ್ನು ಕಠಿಣಗೊಳಿಸಿದೆ. ಇನ್ನುಳಿದ 3 ಪಂದ್ಯದಲ್ಲಿ 2 ಗೆಲುವು ಸಾಧಿಸಿದರೆ ಇಂಗ್ಲೆಂಡ್ ಸೆಮಿಫೈನಲ್ ಪ್ರವೇಶಿಸಲಿದೆ. ಆದರೆ 3 ಪಂದ್ಯ ಸೋತರೆ ಸೆಮಿಫೈನಲ್ ಹೋರಾಟ ಬಹುತೇಕ ಅಂತ್ಯವಾಗಲಿದೆ. ಇದರ ನಡುವೆಯೂ ಕೊನೆಯ ಅವಕಾಶವೊಂದು ಸಿಗಲಿದೆ.

  • ಶ್ರೀಲಂಕಾ ಇನ್ನುಳಿದ ಎಲ್ಲಾ ಪಂದ್ಯ ಸೋಲಬೇಕು
  • ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ಕನಿಷ್ಠ 2 ಪಂದ್ಯದಲ್ಲಿ ಸೋಲು ಕಾಣಬೇಕು
  • ವೆಸ್ಟ್ ಇಂಡೀಸ್ ಕನಿಷ್ಠ 1 ಪಂದ್ಯದಲ್ಲಿ ಸೋಬೇಕು
  • ಹೀಗಾದಲ್ಲಿ ಇಂಗ್ಲೆಂಡ್ ಇನ್ನುಳಿದ ಎಲ್ಲಾ ಪಂದ್ಯ ಸೋತರೂ ಸೆಮಿಫೈನಲ್ ಪ್ರವೇಶಿಸಲಿದೆ.

ಶ್ರೀಲಂಕಾ:
ಇಂಗ್ಲೆಂಡ್ ವಿರುದ್ದದ  ಗೆಲುವಿನೊಂದಿಗೆ ಶ್ರೀಲಂಕಾ ಸೆಮಿಫೈನಲ್ ರೇಸ್‌ನಲ್ಲಿ ಕಾಣಿಸಿಕೊಂಡಿದೆ. ಶ್ರೀಲಂಕಾ ಇನ್ನುಳಿದ 3 ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಸೆಮಿಫೈನಲ್ ಪ್ರವೇಶಿಸಲಿದೆ. ಆದರೆ 2 ಪಂದ್ಯದಲ್ಲಿ ಗೆಲುವು ಸಾಧಿಸಿದರೆ, ಇಂಗ್ಲೆಂಡ್ ತಂಡ ಮುಂದಿನ ಎಲ್ಲಾ ಪಂದ್ಯದಲ್ಲಿ ಸೋಲು ಕಾಣಬೇಕು. ಪಾಕಿಸ್ತಾನ  ಹಾಗೂ ಬಾಂಗ್ಲಾದೇಶ ತಲಾ ಒಂದೊಂದು ಪಂದ್ಯ ಸೋಲಬೇಕು.

ಇದನ್ನೂ ಓದಿ: ಧೋನಿ ಮೇಲೆ ಕಿಡಿಕಾರಿದ ಸಚಿನ್ ತೆಂಡುಲ್ಕರ್..!

ಬಾಂಗ್ಲಾದೇಶ:
ಈ ವಿಶ್ವಕಪ್ ಟೂರ್ನಿಯಲ್ಲಿ ಬಲಿಷ್ಠ ತಂಡಗಳಿಗೆ ಸೋಲುಣಿಸುತ್ತಿರುವ ಬಾಂಗ್ಲಾದೇಶ ಇನ್ನುಳಿದ 3 ಪಂದ್ಯ ಗೆದ್ದರೆ ಸೆಮಿಫೈನಲ್ ಪ್ರವೇಶಿಸಲು ಸಣ್ಣ ಅವಕಾಶ ಪಡೆಯಲಿದೆ. 3 ಪಂದ್ಯ ಗೆದ್ದು ಇತರ ತಂಡದ ಫಲಿತಾಂಶ ಪೂರಕವಾಗಿದ್ದರೆ ಸೆಮಿಫೈನಲ್ ಪ್ರವೇಶಿಸುವ ಅವಕಾಶವಿದೆ. ಬಾಂಗ್ಲಾ ಇನ್ನುಳಿದ 3 ಪಂದ್ಯದಲ್ಲಿ ಗೆದ್ದರೆ, ಅತ್ತ ಶ್ರೀಲಂಕಾ ಕನಿಷ್ಠ 1 ಪಂದ್ಯದಲ್ಲಿ ಸೋಲು ಕಾಣಬೇಕು. ಇನ್ನು ಇಂಗ್ಲೆಂಡ್ 1 ಕ್ಕಿಂತ ಹೆಚ್ಚು ಗೆಲುವು ಸಾಧಿಸಿಬಾರದು. ಹೀಗಾದಲ್ಲಿ ಬಾಂಗ್ಲಾ ಸೆಮಿಫೈನಲ್ ಪ್ರವೇಶಿಸಲಿದೆ.

ವೆಸ್ಟ್ ಇಂಡೀಸ್:
ಕೇವಲ 3 ಅಂಕಗಳೊಂದಿಗೆ 8ನೇ ಸ್ಥಾನದಲ್ಲಿರುವ ವೆಸ್ಟ್ ಇಂಡೀಸ್ ತಂಡಕ್ಕೆ ಗೆಲುವಿನ ಜೊತೆಗೆ ಅದೃಷ್ಠ ಕೈಹಿಡಿದರೆ ಸೆಮೀಸ್ ಅವಕಾಶವಿದೆ. ವೆಸ್ಟ್ ಇಂಡೀಸ್ ಇನ್ನುಳಿದ ಎಲ್ಲಾ ಪಂದ್ಯದಲ್ಲಿ ಗೆಲುವು ಸಾಧಿಸಬೇಕು. ಇದರ ಜೊತೆಗೆ ಇಂಗ್ಲೆಂಡ್  ಎಲ್ಲಾ ಪಂದ್ಯದಲ್ಲಿ ಸೋಲು ಕಾಣಬೇಕು. ಇಷ್ಟೇ ಅಲ್ಲ, ಶ್ರೀಲಂಕಾ ಹಾಗೂ ಬಾಂಗ್ಲಾದೇಶ ಒಂದಕ್ಕಿಂತ ಹೆಚ್ಚು ಗೆಲುವು ಸಾಧಿಸಬಾರದು. ಇನ್ನು ಪಾಕಿಸ್ತಾನ ಕನಿಷ್ಠ ಒಂದು ಪಂದ್ಯ ಸೋಲಬೇಕು.

ಪಾಕಿಸ್ತಾನ:
ಸೌತ್ ಆಫ್ರಿಕಾ ವಿರುದ್ಧದ ಗೆಲುವು ಪಾಕಿಸ್ತಾನ ತಂಡದಲ್ಲಿ ಹೊಸ ಉತ್ಸಾಹ ಮೂಡಿಸಿದೆ. ಇನ್ನುಳಿದ ಎಲ್ಲಾ ಪಂದ್ಯ ಗೆದ್ದರೆ ಪಾಕಿಸ್ತಾನ 11 ಅಂಕ ಸಂಪಾದಿಸಲಿದೆ. ಇನ್ನು ಇಂಗ್ಲೆಂಡ್ ಒಂದಕ್ಕಿಂತ ಹೆಚ್ಚು ಪಂದ್ಯ ಗೆಲ್ಲಬಾರದು. ಶ್ರೀಲಂಕಾ, ಬಾಂಗ್ಲಾದೇಶ ಕನಿಷ್ಠ ಒಂದು ಪಂದ್ಯದಲ್ಲಿ ಸೋಲಬೇಕು. ಹೀಗಾದಲ್ಲಿ ಪಾಕಿಸ್ತಾನಕ್ಕೂ ಸೆಮಿಫೈನಲ್ ಪ್ರವೇಶಿಸೋ ಅವಕಾಶವಿದೆ.
 

click me!