ಏಕದಿನ ವಿಶ್ವಕಪ್‌ಗೆ ಅದ್ಧೂರಿ ತೆರೆ: 2019ರ ವಿಶ್ವಕಪ್ ಪ್ರಮುಖಾಂಶಗಳಿವು

By Web Desk  |  First Published Jul 16, 2019, 12:01 PM IST

2019ರ ಏಕದಿನ ವಿಶ್ವಕಪ್ ವಿಶ್ವಕಪ್ ಟೂರ್ನಿ ಹತ್ತು ಹಲವು ಕಾರಣಗಳಿಗೆ ಸುದ್ದಿಯಾಗಿದೆ. ರೋಚಕ ಫೈನಲ್ ಹೊರತಾಗಿಯೂ ಕಂಡುಬಂದ ಕೆಲ ವಿಶೇಷತೆಗಳನ್ನು ಸುವರ್ಣನ್ಯೂಸ್.ಕಾಂ ಓದುಗರ ಮುಂದಿಡುತ್ತಿದೆ.  


ಲಂಡನ್‌[ಜು.16]: 2019ರ ಐಸಿಸಿ ಏಕದಿನ ವಿಶ್ವಕಪ್‌ ಪಂದ್ಯಾವಳಿಗೆ ಅದ್ಧೂರಿ ತೆರೆ ಬಿದ್ದಿದೆ. ಮೇ 30ರಂದು ಆರಂಭಗೊಂಡಿದ್ದ 12ನೇ ಆವೃತ್ತಿಯ ವಿಶ್ವಕಪ್‌, ಭಾನುವಾರ ಇಂಗ್ಲೆಂಡ್‌ ಹಾಗೂ ನ್ಯೂಜಿಲೆಂಡ್‌ ನಡುವಿನ ಫೈನಲ್‌ ಪಂದ್ಯದೊಂದಿಗೆ ಮುಕ್ತಾಯಗೊಂಡಿತು. 

ದಾಖಲೆಯ 5ನೇ ಬಾರಿಗೆ ಏಕದಿನ ವಿಶ್ವಕಪ್‌ಗೆ ಆತಿಥ್ಯ ವಹಿಸಿದ ಇಂಗ್ಲೆಂಡ್‌, ಯಶಸ್ವಿಯಾಗಿ ಟೂರ್ನಿಯನ್ನು ನಡೆಸಿಕೊಟ್ಟಿತು. ಈ ವಿಶ್ವಕಪ್‌ ಹಲವು ನಿರೀಕ್ಷೆಗಳನ್ನು ಹುಟ್ಟಿಸಿತ್ತು. ಕೆಲ ಬೆಳವಣಿಗೆಗಳು ನಿರೀಕ್ಷೆಯಂತೆ ನಡೆದರೂ, ಹಲವು ಅನಿರೀಕ್ಷಿತ ಫಲಿತಾಂಶಗಳು, ದಾಖಲೆಗಳು, ಘಟನೆಗಳು ನಡೆದವು.

Tap to resize

Latest Videos

ಕ್ರಿಕೆಟ್‌ ಸ್ಫೂರ್ತಿ ಕಾಪಾಡಲು ಐಸಿಸಿ ಫೇಲ್‌?

ದಾಖಲಾಗಲಿಲ್ಲ 500 ರನ್‌!: ಈ ಬಾರಿ ವಿಶ್ವಕಪ್‌ನಲ್ಲಿ ಏಕದಿನ ಕ್ರಿಕೆಟ್‌ ಮೊದಲ ಬಾರಿಗೆ 500 ರನ್‌ಗೆ ಸಾಕ್ಷಿಯಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿ ಅಭಿಮಾನಿಗಳಿಗೆ ಮಾರಾಟ ಮಾಡುವ ಪಂದ್ಯದ ಸ್ಕೋರ್‌ ಶೀಟ್‌ನಲ್ಲಿ 500 ರನ್‌ ಸಾಲು ಸೇರ್ಪಡೆಗೊಳಿಸಿತ್ತು. ಆದರೆ ಯಾವ ತಂಡವೂ 400 ರನ್‌ ಸಹ ದಾಖಲಿಸಲಿಲ್ಲ. ಆಫ್ಘಾನಿಸ್ತಾನ ವಿರುದ್ಧ ಇಂಗ್ಲೆಂಡ್‌ 6 ವಿಕೆಟ್‌ಗೆ 397 ರನ್‌ ಗಳಿಸಿದ್ದೇ ಈ ಟೂರ್ನಿಯ ಗರಿಷ್ಠ ಮೊತ್ತ.

ವೆಸ್ಟ್‌ಇಂಡೀಸ್‌ ವಿರುದ್ಧ ಪಾಕಿಸ್ತಾನ 105 ರನ್‌ಗೆ ಆಲೌಟ್‌ ಆಗಿದ್ದು ಈ ವಿಶ್ವಕಪ್‌ನಲ್ಲಿ ತಂಡವೊಂದು ದಾಖಲಿಸಿದ ಕನಿಷ್ಠ ಮೊತ್ತ ಎನಿಸಿಕೊಂಡಿತು.

ರೋಹಿತ್‌ 5 ಶತಕ!: ಈ ವಿಶ್ವಕಪ್‌ ಹಲವು ವಿಶೇಷ ದಾಖಲೆಗಳಿಗೆ ಸಾಕ್ಷಿಯಾಯಿತು. ಈ ಪೈಕಿ ಭಾರತದ ರೋಹಿತ್‌ ಶರ್ಮಾ ಬರೆದ ದಾಖಲೆ ಎಲ್ಲಕ್ಕಿಂತ ವಿಶೇಷ ಎನಿಸಿಕೊಂಡಿತು. ವಿಶ್ವಕಪ್‌ ಆವೃತ್ತಿಯೊಂದರಲ್ಲಿ 5 ಶತಕ ಬಾರಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್‌ ಎನ್ನುವ ಹಿರಿಮೆಗೆ ರೋಹಿತ್‌ ಪಾತ್ರರಾದರು.

ಬಲಿಷ್ಠ ICC ವಿಶ್ವಕಪ್ ತಂಡ ಪ್ರಕಟ: ಇಬ್ಬರು ಭಾರತೀಯರಿಗೆ ಸ್ಥಾನ..!

ಮಾರ್ಗನ್‌ ಸಿಕ್ಸರ್‌ ದಾಖಲೆ: ಇಂಗ್ಲೆಂಡ್‌ ನಾಯಕ ಇಯಾನ್‌ ಮಾರ್ಗನ್‌, ಆಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಬರೋಬ್ಬರಿ 17 ಸಿಕ್ಸರ್‌ ಸಿಡಿಸಿ ಏಕದಿನ ಇನ್ನಿಂಗ್ಸ್‌ವೊಂದರಲ್ಲಿ ಗರಿಷ್ಠ ಸಿಕ್ಸರ್‌ ಸಿಡಿಸಿದ ವಿಶ್ವ ದಾಖಲೆ ಬರೆದರು. ರೋಹಿತ್‌, ಎಬಿ ಡಿವಿಲಿಯ​ರ್ಸ್ ಹೆಸರಲ್ಲಿದ್ದ ದಾಖಲೆಯನ್ನು ಮಾರ್ಗನ್‌ ಮುರಿದರು.

ಶಕೀಬ್‌ ಆಲ್ರೌಂಡ್‌ ಶೋ: ಈ ವಿಶ್ವಕಪ್‌ನಲ್ಲಿ ಹಲವು ಬ್ಯಾಟ್ಸ್‌ಮನ್‌ಗಳು ಅಬ್ಬರಿಸಿದರು. ಎಲ್ಲಾ ತಂಡಗಳ ಅಗ್ರ ಬೌಲರ್‌ಗಳಿಂದಲೂ ಭರ್ಜರಿ ಪ್ರದರ್ಶನ ಮೂಡಿಬಂತು. ಆದರೆ ಆಲ್ರೌಂಡ್‌ ಪ್ರದರ್ಶನದ ಮೂಲಕ ಎಲ್ಲರು ಹುಬ್ಬೇರಿಸುವಂತೆ ಮಾಡಿದ್ದು ಬಾಂಗ್ಲಾದೇಶದ ಶಕೀಬ್‌ ಅಲ್‌ ಹಸನ್‌. 8 ಇನ್ನಿಂಗ್ಸ್‌ಗಳಿಂದ 86.57ರ ಸರಾಸರಿಯೊಂದಿಗೆ 606 ರನ್‌ ಗಳಿಸಿದ ಶಕೀಬ್‌, 11 ವಿಕೆಟ್‌ ಸಹ ಕಬಳಿಸಿದರು.

ಗೆಲುವನ್ನೇ ಕಾಣದ ಆಫ್ಘನ್‌: ಆಫ್ಘಾನಿಸ್ತಾನ ವಿಶ್ವಕಪ್‌ನಲ್ಲಿ ಆಕರ್ಷಕ ಪ್ರದರ್ಶನ ನೀಡಿದರೂ, ಒಂದೇ ಒಂದು ಗೆಲುವನ್ನೂ ಕಾಣದೆ ನಿರ್ಗಮಿಸಿತು. ರೌಂಡ್‌ ರಾಬಿನ್‌ ಹಂತದಲ್ಲಿ ಆಡಿದ ಎಲ್ಲಾ 9 ಪಂದ್ಯಗಳಲ್ಲಿ ಸೋತ ಆಫ್ಘಾನಿಸ್ತಾನ, ಅಂಕ ಖಾತೆಯನ್ನೇ ತೆರೆಯಲಿಲ್ಲ. 2015ರ ವಿಶ್ವಕಪ್‌ನಲ್ಲಿ 1 ಗೆಲುವು ಕಂಡಿದ್ದ ಆಫ್ಘನ್‌, ಈ ಬಾರಿ ಕೆಲ ಅಚ್ಚರಿಯ ಫಲಿತಾಂಶಗಳನ್ನು ನೀಡುವ ವಿಶ್ವಾಸದಲ್ಲಿತ್ತು. ಆದರೆ ತಂಡಕ್ಕೆ ಗೆಲುವು ಒಲಿಯಲಿಲ್ಲ.

ನಿರಾಸೆ ಮೂಡಿಸಿದ ದ.ಆಫ್ರಿಕಾ, ವಿಂಡೀಸ್‌: ದಕ್ಷಿಣ ಆಫ್ರಿಕಾ ಹಾಗೂ ವೆಸ್ಟ್‌ಇಂಡೀಸ್‌ ತಂಡಗಳು ನಿರಾಸೆ ಮೂಡಿಸಿದವು. ಆಫ್ರಿಕಾ ಆರಂಭದಲ್ಲೇ ಹ್ಯಾಟ್ರಿಕ್‌ ಸೋಲು ಕಂಡು, ಎಲ್ಲರಿಗಿಂತ ಮೊದಲೇ ಸೆಮಿಫೈನಲ್‌ ರೇಸ್‌ನಿಂದ ಹೊರಬಿತ್ತು. ಭರ್ಜರಿ ಆರಂಭದ ಬಳಿಕ ವಿಂಡೀಸ್‌ ಮಂಕಾಯಿತು. ತಾರಾ ಆಟಗಾರ ಕ್ರಿಸ್‌ ಗೇಲ್‌ ದೊಡ್ಡ ಇನ್ನಿಂಗ್ಸ್‌ ಆಡದೆ ಇದ್ದಿದ್ದು ಅಭಿಮಾನಿಗಳಲ್ಲಿ ಭಾರಿ ಬೇಸರ ಮೂಡಿಸಿತು.

ಗಾಯಾಳುಗಳ ವಿಶ್ವಕಪ್‌: ಈ ವಿಶ್ವಕಪ್‌ ಅತಿಹೆಚ್ಚು ಆಟಗಾರರು ಗಾಯಗೊಂಡು ಹೊರಬಿದ್ದಿದ್ದಕ್ಕೆ ಸಾಕ್ಷಿಯಾಯಿತು. ಭಾರತದ ಶಿಖರ್‌ ಧವನ್‌, ವಿಜಯ್‌ ಶಂಕರ್‌ ಗಾಯಗೊಂಡು ಆಚೆ ಬಿದ್ದರು. ಡೇಲ್‌ ಸ್ಟೇನ್‌, ಮೊಹಮದ್‌ ಶಹಜಾದ್‌, ಸ್ಯಾಮ್‌ ಬಿಲ್ಲಿಂಗ್ಸ್‌, ನುವಾನ್‌ ಪ್ರದೀಪ್‌, ಜಾಯಿ ರಿಚರ್ಡ್‌ಸನ್‌ ಗಾಯದ ಸಮಸ್ಯೆಯಿಂದ ಟೂರ್ನಿಯಲ್ಲಿ ಮುಂದುವರಿಯಲು ಸಾಧ್ಯವಾಗಲಿಲ್ಲ.

ವಿವಾದಗಳಿಂದ ದೂರ ಉಳಿಯಲಿಲ್ಲ ಟೂರ್ನಿ!

ವಿಶ್ವಕಪ್‌ ಹಲವು ವಿವಾದಗಳಿಗೂ ಕಾರಣವಾಯಿತು. ಕೆಟ್ಟ ಅಂಪೈರಿಂಗ್‌, ಚೆಂಡು ಬಡಿದರೂ ಬೀಳದ ಬೇಲ್ಸ್‌, ಎಂ.ಎಸ್‌.ಧೋನಿಯ ಗ್ಲೌಸ್ ವಿವಾದ, ಕ್ರೀಡಾಂಗಣಗಳ ಮೇಲೆ ರಾಜಕೀಯ ಪ್ರೇರಿತ ಸಂದೇಶಗಳನ್ನು ಪ್ರದರ್ಶಿಸುವ ವಿಮಾನ ಹಾರಾಟ ಹೀಗೆ ಹಲವು ವಿವಾದಗಳಿಗೆ ಟೂರ್ನಿ ಸಾಕ್ಷಿಯಾಯಿತು.
 

click me!