ಕ್ರಿಕೆಟ್‌ ಸ್ಫೂರ್ತಿ ಕಾಪಾಡಲು ಐಸಿಸಿ ಫೇಲ್‌?

By Web DeskFirst Published 16, Jul 2019, 11:03 AM IST
Highlights

ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದ ವೇಳೆಯ ಐಸಿಸಿಯ ಹುಳುಕು ನಿಯಮಗಳು ಬೆಳಕಿಗೆ ಬಂದಿವೆ. ಅದರಲ್ಲೂ ಬೌಂಡರಿ ಬಾರಿಸಿದ ಲೆಕ್ಕಾಚಾರದಲ್ಲಿ ಫಲಿತಾಂಶ ನಿರ್ಧರಿಸಿದ್ದರ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಐಸಿಸಿ ಕ್ರೀಡಾಸ್ಫೂರ್ತಿ ಮರೆತಿದೆಯಾ ಎನ್ನುವ ಅನುಮಾನವೂ ದಟ್ಟವಾಗತೊಡಗಿದೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ... 

ಬೆಂಗಳೂರು(ಜು.16): ಕ್ರಿಕೆಟ್‌ ಲೋಕ ಹಿಂದೆಂದೂ ಕಂಡಿರದ ರೀತಿಯಲ್ಲಿ ಐಸಿಸಿ ಏಕದಿನ ವಿಶ್ವಕಪ್‌ನ ಫೈನಲ್‌ ಪಂದ್ಯ ನಡೆಯಿತು. ಪಂದ್ಯ ಯಾವುದೇ ಥ್ರಿಲ್ಲರ್‌ ಸಿನಿಮಾಕ್ಕಿಂತ ಏನೂ ಕಡಿಮೆಯಿರಲಿಲ್ಲ. ಪಂದ್ಯ, ಸೂಪರ್‌ ಓವರ್‌ ಎರಡೂ ಟೈ ಆದಾಗ ಐಸಿಸಿ ನಿಯಮದ ಪ್ರಕಾರ ಹೆಚ್ಚು ಬೌಂಡರಿ ಬಾರಿಸಿದ ತಂಡವನ್ನು ವಿಜಯಿ ಎಂದು ನಿರ್ಧರಿಸಲಾಯಿತು. ಐಸಿಸಿ ನಿಯಮಗಳಲ್ಲಿ ಇರುವ ಲೋಪದೋಷಗಳು ಬಹಿರಂಗವಾಗಲು ವಿಶ್ವಕಪ್‌ ಫೈನಲ್‌ ವೇದಿಕೆಯೇ ಬೇಕಾಯಿತು.

ಮಳೆ ನಿಯಮವೇನು?

ಈ ವಿಶ್ವಕಪ್‌ನ ನಾಕೌಟ್‌ ಪಂದ್ಯಗಳಿಗೆ ಮೀಸಲು ದಿನ ಆಯೋಜಿಸಲಾಗಿತ್ತು. ಫೈನಲ್‌ ನಿಗದಿಯಾಗಿದ್ದ ದಿನ ಮಳೆ ಬಂದು ಆಟ ಸ್ಥಗಿತಗೊಂಡಿದ್ದರೆ, ಮೀಸಲು ದಿನದಂದು ಮುಂದುವರಿಯುತ್ತಿತ್ತು. ಮೀಸಲು ದಿನವೂ ಮಳೆಗೆ ಬಲಿಯಾಗಿದ್ದರೆ ಟ್ರೋಫಿಯನ್ನು ಎರಡೂ ತಂಡಗಳಿಗೆ ಹಂಚಲಾಗುತ್ತಿತ್ತು. ಹೀಗಿರುವಾಗ ಪಂದ್ಯ 2 ಬಾರಿ ಟೈ ಆದರೆ ಟ್ರೋಫಿ ಹಂಚುವ ನಿಯಮವನ್ನೇಕೆ ಪಾಲಿಸಲಿಲ್ಲ ಎನ್ನುವ ಪ್ರಶ್ನೆ ಉದ್ಭವವಾಗಿದೆ.

ಬೌಲರ್‌ಗಳ ಶ್ರಮಕ್ಕಿಲ್ಲ ಬೆಲೆ?

ಕ್ರಿಕೆಟ್‌ ಬ್ಯಾಟ್ಸ್‌ಮನ್‌ ಆಟ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಸೂಪರ್‌ ಓವರ್‌ ಕೂಡ ಟೈ ಆದಾಗ ಪಂದ್ಯದಲ್ಲಿ ಯಾವ ತಂಡ ಎಷ್ಟು ಬೌಂಡರಿ ಬಾರಿಸಿದೆ ಎನ್ನುವುದನ್ನು ಪರಿಗಣಿಸಲಾಗುತ್ತದೆಯೇ ಹೊರತು, ಯಾವ ತಂಡ ಎಷ್ಟು ವಿಕೆಟ್‌ ಕಬಳಿಸಿದೆ ಎನ್ನುವುದು ಲೆಕ್ಕಕ್ಕೇ ಬರುವುದಿಲ್ಲ. ಪಂದ್ಯದಲ್ಲಿ ನ್ಯೂಜಿಲೆಂಡ್‌ ಕಳೆದುಕೊಂಡಿದ್ದಿದ್ದು 8 ವಿಕೆಟ್‌. ಆದರೆ ಇಂಗ್ಲೆಂಡ್‌ ಆಲೌಟ್‌ ಆಗಿತ್ತು.

ಜೀವನದುದ್ದಕ್ಕೂ ವಿಲಿಯಮ್ಸನ್ ಬಳಿ ಕ್ಷಮೆ ಯಾಚಿಸುತ್ತೇನೆಂದ ಸ್ಟೋಕ್ಸ್!

ಇದಷ್ಟೇ ಅಲ್ಲ, ನ್ಯೂಜಿಲೆಂಡ್‌ ಸೆಮಿಫೈನಲ್‌ ಪ್ರವೇಶಿಸಲು ನಿರ್ಣಾಯಕವಾದ ನೆಟ್‌ ರನ್‌ರೇಟ್‌ ಲೆಕ್ಕಾಚಾರದಲ್ಲೂ ವಿಕೆಟ್‌ ಪತನವನ್ನು ಪರಿಗಣಿಸಲಾಗುವುದಿಲ್ಲ. ತಂಡ ಎಷ್ಟು ಓವರ್‌ಗಳಲ್ಲಿ ಎಷ್ಟು ರನ್‌ ಗಳಿಸಿದೆ, ಎಷ್ಟುಓವರ್‌ಗಳಲ್ಲಿ ಎಷ್ಟು ರನ್‌ ಬಿಟ್ಟುಕೊಟ್ಟಿದೆ ಎನ್ನುವುದಷ್ಟೇ ಪರಿಗಣನೆಗೆ ಬರುತ್ತದೆ. ಕ್ರಿಕೆಟ್‌ನಲ್ಲಿ ಬೌಲರ್‌ಗಳಿಗೆ ಬೆಲೆ ಕಡಿಮೆಯಾಗುತ್ತಿದೆ ಎನ್ನುವ ಆಪಾದನೆ ಇದೆ. ಐಸಿಸಿ ನಿಯಮ ಆ ಆಪಾದನೆಗೆ ಮತ್ತಷ್ಟು ಪುಷ್ಠಿ ನೀಡುತ್ತಿದೆ.

ಎಚ್ಚೆತ್ತುಕೊಳ್ಳದ ಐಸಿಸಿ ಸಿಇಒ!

ಏಕದಿನ ವಿಶ್ವಕಪ್‌ನಲ್ಲಿ ಸೂಪರ್‌ ಓವರ್‌ ಸಹ ಟೈ ಆದರೆ ಬೌಂಡರಿ ಲೆಕ್ಕಾಚಾರದಲ್ಲಿ ವಿಜೇತ ತಂಡವನ್ನು ನಿರ್ಧರಿಸಬೇಕು ಎನ್ನುವ ನಿಯಮವನ್ನು ಐಸಿಸಿ ಜಾರಿ ತಂದಾಗ, ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಡೇವ್‌ ರಿಚರ್ಡ್‌ಸನ್‌ ಐಸಿಸಿ ಸಿಇಒ ಆಗಿದ್ದರು. ಸ್ವತಃ ರಿಚರ್ಡ್‌ಸನ್‌ ಐಸಿಸಿಯ ಹಾಸ್ಯಸ್ಪದ ನಿಯಮಕ್ಕೆ ಬಲಿಯಾಗಿದ್ದರು. 1992ರ ವಿಶ್ವಕಪ್‌ನ ಸೆಮಿಫೈನಲ್‌ ಪಂದ್ಯದಲ್ಲಿ ರಿಚರ್ಡ್‌ಸನ್‌ ಹಾಗೂ ಬ್ರಿಯಾನ್‌ ಮೆಕ್‌ಮಿಲನ್‌ ಉತ್ತಮ ಬ್ಯಾಟಿಂಗ್‌ ನಡೆಸುತ್ತಿದ್ದರು. 18 ಎಸೆತಗಳಲ್ಲಿ 25 ರನ್‌ ಗಳಿಸಿದ್ದ ಇವರಿಬ್ಬರು ತಮ್ಮ ತಂಡವನ್ನು ಗೆಲ್ಲಿಸಲು 13 ಎಸೆತಗಳಲ್ಲಿ 22 ರನ್‌ ಗಳಿಸಬೇಕಿತ್ತು. ಮಳೆ ಬಿದ್ದ ಕಾರಣ, ಅಂಪೈರ್‌ಗಳು ಎರಡೂ ತಂಡಗಳಿಗೆ ಮೈದಾನ ತೊರೆಯಬಹುದು ಎನ್ನುವ ಆಯ್ಕೆ ನೀಡಿದರು. ಇಂಗ್ಲೆಂಡ್‌ ತಂಡ ಫೀಲ್ಡಿಂಗ್‌ ಮಾಡಲು ಆಗುತ್ತಿಲ್ಲ ಎನ್ನುವ ಕಾರಣ ನೀಡಿ ಹೊರನಡೆಯಿತು. ಆದರೆ ದ.ಆಫ್ರಿಕಾ ಬ್ಯಾಟ್ಸ್‌ಮನ್‌ಗಳು ಆಟ ಮುಂದುವರಿಸಲು ಸಿದ್ಧರಿದ್ದರು. ಮಳೆ ನಿಯಮದನ್ವಯ ದ.ಆಫ್ರಿಕಾಕ್ಕೆ 1 ಎಸೆತದಲ್ಲಿ 21 ರನ್‌ ಗುರಿ ನೀಡಲಾಯಿತು. ಇಂಗ್ಲೆಂಡ್‌ 19 ರನ್‌ಗಳಿಂದ ಗೆದ್ದು ಫೈನಲ್‌ಗೇರಿತು. ಮಳೆ ನಿಯಮ ವಿವಾದಕ್ಕೆ ಕಾರಣವಾದ ಬಳಿಕ ಡಕ್ವತ್‌ರ್‍ ಲೂಯಿಸ್‌ ನಿಯಮವನ್ನು ಜಾರಿಗೆ ತರಲಾಯಿತು.

ಬಲಿಷ್ಠ ICC ವಿಶ್ವಕಪ್ ತಂಡ ಪ್ರಕಟ: ಇಬ್ಬರು ಭಾರತೀಯರಿಗೆ ಸ್ಥಾನ..!

ರದ್ದಾಗಿದ್ದ ಬೌಲ್‌ ಔಟ್‌

ಸೂಪರ್‌ ಓವರ್‌ಗೂ ಮೊದಲು ಟಿ20 ಪಂದ್ಯ ರದ್ದಾದರೆ ವಿಜೇತ ತಂಡವನ್ನು ಬೌಲ್‌ ಔಟ್‌ ಮೂಲಕ ನಿರ್ಧರಿಸಲಾಗುತ್ತಿತ್ತು. 2007ರ ಟಿ20 ವಿಶ್ವಕಪ್‌ನಲ್ಲಿ ಭಾರತ-ಪಾಕಿಸ್ತಾನ ಪಂದ್ಯ ಟೈ ಆದಾಗಲೂ ಇದೇ ಮಾದರಿ ಅನುಸರಿಸಲಾಗಿತ್ತು. ಆದರೆ ಭಾರಿ ಟೀಕೆ ವ್ಯಕ್ತವಾದ ಬಳಿಕ ಆ ನಿಯಮವನ್ನು ರದ್ದುಗೊಳಿಸಿ, ಸೂಪರ್‌ ಓವರ್‌ ಜಾರಿಗೆ ತರಲಾಗಿತ್ತು.

ಕ್ರಿಕೆಟ್‌ ಸಮಿತಿಯಲ್ಲಿದ್ದರು ಅನಿಲ್‌ ಕುಂಬ್ಳೆ, ದ್ರಾವಿಡ್‌!

ವಿಶ್ವಕಪ್‌ ಪಂದ್ಯದ ಸೂಪರ್‌ ಓವರ್‌ ಟೈ ಆದರೆ ಬೌಂಡರಿ ಆಧಾರದಲ್ಲಿ ವಿಜೇತ ತಂಡವನ್ನು ನಿರ್ಧರಿಸಬೇಕು ಎನ್ನುವ ನಿಯಮವನ್ನು ಪ್ರಸ್ತಾಪಿಸಿದ್ದು ಐಸಿಸಿ ಕ್ರಿಕೆಟ್‌ ಸಮಿತಿ. ಈ ಸಮಿತಿಯಲ್ಲಿ ದಿಗ್ಗಜ ಕ್ರಿಕೆಟಿಗರಾದ ಅನಿಲ್‌ ಕುಂಬ್ಳೆ, ರಾಹುಲ್‌ ದ್ರಾವಿಡ್‌, ಶಾನ್‌ ಪೊಲ್ಲಾಕ್‌, ರಂಜನ್‌ ಮದುಗಲೆ, ಮಹೇಲಾ ಜಯವರ್ಧನೆ, ರಿಚರ್ಡ್‌ ಇಲ್ಲಿಂಗ್‌ವರ್ಥ್ ಸೇರಿದಂತೆ ಇನ್ನೂ ಅನೇಕರಿದ್ದರು.

ಕ್ರಿಕೆಟ್‌ ಒಂದು ಸರಳ ಕ್ರೀಡೆ. ಇಲ್ಲಿ ವಿಕೆಟ್ಸ್‌ ಇಲ್ಲವೇ ರನ್‌ಗಳ ಆಧಾರದಲ್ಲಿ ಫಲಿತಾಂಶಗಳು ನಿರ್ಧಾರವಾಗಲಿವೆ. ಎರಡೂ ತಂಡಗಳು ಸಮನಾದ ರನ್‌ ಕಲೆಹಾಕಿದಾಗ, ಎಷ್ಟು ವಿಕೆಟ್‌ಗಳು ಕಳೆದುಕೊಂಡಿವೆ ಎನ್ನುವುದನ್ನು ಪರಿಗಣಿಸಬೇಕೇ ಹೊರತು, ಯಾವ ತಂಡ ಹೆಚ್ಚು ಎಲ್‌ಬಿಡಬ್ಲ್ಯು ಇಲ್ಲವೇ ರನೌಟ್‌ ಆಗಿದೆ ಎನ್ನುವುದನ್ನು ಪರಿಗಣಿಸುವುದರಲ್ಲಿ ಅರ್ಥವಿಲ್ಲ. ನಿಯಮಗಳು ಪ್ರೇಕ್ಷಕನಿಗೆ ಅರ್ಥವಾಗುವಂತೆ, ಪ್ರೇಕ್ಷಕನಿಗೆ ವಿಜೇತರು ಯಾರು ಎನ್ನುವುದನ್ನು ತಿಳಿದುಕೊಳ್ಳುವಂತೆ ಇರಬೇಕು.
 

Last Updated 16, Jul 2019, 11:03 AM IST