ನ್ಯೂಜಿಲೆಂಡ್‌ ಮೇಲೆ ಬೆಟ್‌ ಕಟ್ಟಿದ್ದವರ ಹಣ ವಾಪಸ್‌!

By Web DeskFirst Published 16, Jul 2019, 11:20 AM IST
Highlights

ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಜಗತ್ತಿನಾದ್ಯಂತ ಲಕ್ಷಾಂತರ ಮಂದಿ ಬೆಟ್ ಕಟ್ಟಿರುತ್ತಾರೆ. ಆದರೆ ಇಂಗ್ಲೆಂಡ್ ನಾಟಕೀಯ ಗೆಲುವು ಕಂಡ ಬೆನ್ನಲ್ಲೇ ಕ್ರೀಡಾ ಸ್ಫೂರ್ತಿ ಮೆರೆದ ಬೆಟ್ಟಿಂಗ್ ಕಂಪನಿಯೊಂದು ಹಣವನ್ನು ವಾಪಾಸ್ ಮಾಡಿದೆ. ಏನಿದು ಸ್ಟೋರಿ, ನೀವೇ ನೋಡಿ... 

ಆಕ್ಲೆಂಡ್‌(ಜು.16): ವಿಶ್ವಕಪ್‌ ಫೈನಲ್‌ನಲ್ಲಿ ನ್ಯೂಜಿಲೆಂಡ್‌ ಸೋಲಲಿಲ್ಲ. ಐಸಿಸಿ ನಿಯಮದಿಂದಾಗಿ ಇಂಗ್ಲೆಂಡ್‌ ವಿಶ್ವಕಪ್‌ ಗೆದ್ದಿತು ಎನ್ನುವುದು ಕ್ರಿಕೆಟ್‌ ಅಭಿಮಾನಿಗಳ ನಂಬಿಕೆಯಾಗಿದೆ. ಇದೇ ನಂಬಿಕೆಯಿಂದ ಆಸ್ಪ್ರೇಲಿಯಾದ ಆನ್‌ಲೈನ್‌ ಬೆಟ್ಟಿಂಗ್‌ ಸಂಸ್ಥೆ ‘ಸ್ಪೋರ್ಟ್ಸ್ ಬೆಟ್‌’, ನ್ಯೂಜಿಲೆಂಡ್‌ ಪಂದ್ಯ ಗೆಲ್ಲಲಿದೆ ಎಂದು ಬೆಟ್‌ ಕಟ್ಟಿದ್ದವರ ಹಣವನ್ನು ಹಿಂದಿರುಗಿಸಿದೆ.

ಕ್ರಿಕೆಟ್‌ ಸ್ಫೂರ್ತಿ ಕಾಪಾಡಲು ಐಸಿಸಿ ಫೇಲ್‌?

ಕಿವೀಸ್‌ ಪರ ಹಣ ಹೂಡಿದ್ದ ಒಟ್ಟು 11,458 ಮಂದಿಗೆ ಒಟ್ಟು 2 ಕೋಟಿ ರುಪಾಯಿಗೂ ಹೆಚ್ಚು (4.26 ಲಕ್ಷ ಆಸ್ಪ್ರೇಲಿಯನ್‌ ಡಾಲರ್‌) ಮೊತ್ತವನ್ನು ಹಿಂದಿರುಗಿಸಿದ್ದಾಗಿ ಸಂಸ್ಥೆ ಹೇಳಿಕೊಂಡಿದೆ. ಸಂಸ್ಥೆಯ ವಕ್ತಾರ ರಿಚ್‌ ಹಮ್ಮರ್‌ಸ್ಟನ್‌, ನ್ಯೂಜಿಲೆಂಡ್‌ ಅಭಿಮಾನಿಗಳಿಂದ ಹಣ ಪಡೆಯುವುದು ಸರಿಯಲ್ಲ. ತಂಡ ತಾಂತ್ರಿಕವಾಗಿ ಸೋಲನ್ನೇ ಕಾಣಲಿಲ್ಲ ಎಂದಿದ್ದಾರೆ. ‘ವಿಶ್ವಕಪ್‌ ವಿಜೇತ ತಂಡವನ್ನು ಆ ರೀತಿ ನಿರ್ಧರಿಸಿದ್ದು ನಾಚಿಕೆಗೇಡು. ಐಸಿಸಿಯ ಅಸಮರ್ಥತೆಯಿಂದಾಗಿ ಪಂಟರ್‌ಗಳು ಹಣ ಕಳೆದುಕೊಳ್ಳುವುದು ಸರಿಯಲ್ಲ’ ಎಂದದು ಹಮ್ಮರ್‌ಸ್ಟನ್‌ ಹೇಳಿದ್ದಾರೆ.

ಸಂಸ್ಥೆ ತನ್ನ ಅಧಿಕೃತ ಟ್ವೀಟರ್‌ ಖಾತೆಯಲ್ಲಿ ಹಣ ಹಿಂದಿರುಗಿಸಿರುವ ವಿಷಯವನ್ನು ಸ್ಪಷ್ಟಪಡಿಸಿದೆ. ಸ್ಪೋರ್ಟ್ಸ್ ಬೆಟ್‌ ಸಂಸ್ಥೆಯ ಕ್ರೀಡಾಸ್ಫೂರ್ತಿಗೆ ಸಾಮಾಜಿಕ ತಾಣಗಳಲ್ಲಿ ಕ್ರಿಕೆಟ್‌ ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

Last Updated 16, Jul 2019, 11:20 AM IST