ಪೂರನ್‌ ಏಕಾಂಗಿ ಹೋರಾಟ; ಇಂಗ್ಲೆಂಡ್‌ಗೆ ಸುಲಭ ಗುರಿ

By Web DeskFirst Published Jun 14, 2019, 6:36 PM IST
Highlights

ಇಂಗ್ಲೆಂಡ್ ಬೌಲರ್‌ಗಳ ಮಾರಕ ದಾಳಿಗೆ ತತ್ತರಿಸಿದ ವೆಸ್ಟ್ ಇಂಡೀಸ್ ತಂಡ ಕೇವಲ 212 ರನ್‌ಗಳಿಗೆ ಸರ್ವಪತನ ಕಂಡಿದೆ. ಈ ಪಂದ್ಯದ ಕುರಿತ ವರದಿ ಇಲ್ಲಿದೆ ನೋಡಿ...

ಸೌಥಾಂಪ್ಟನ್‌[ಜೂ.14]: ನಿಕೋಲಸ್ ಪೂರನ್[63] ಸಮಯೋಚಿತ ಅರ್ಧಶತಕದ ಹೊರತಾಗಿಯೂ, ಇಂಗ್ಲೆಂಡ್ ಸಂಘಟಿತ ಬೌಲಿಂಗ್ ಪ್ರದರ್ಶನಕ್ಕೆ ತತ್ತರಿಸಿದ ವೆಸ್ಟ್ ಇಂಡೀಸ್ ಕೇವಲ 212 ರನ್ ಗಳಿಗೆ ಸರ್ವಪತನ ಕಂಡಿದ್ದು, ಆತಿಥೇಯರಿಗೆ ಸುಲಭ ಗುರಿ ನೀಡಿದೆ.

ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬ್ಯಾಟ್ ಮಾಡಲು ವೆಸ್ಟ್ ಇಂಡೀಸ್ ತಂಡವನ್ನು ಆಹ್ವಾನಿಸಿತು. ಬ್ಯಾಟಿಂಗ್ ಆರಂಭಿಸಿದ ಕೆರಿಬಿಯನ್ ಪಡೆ ಮತ್ತೊಮ್ಮೆ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಮೂರನೇ ಓವರ್’ನಲ್ಲೇ ಎವಿನ್ ಲೆವಿಸ್ ಪೆವಿಲಿಯನ್ ಸೇರಿದರು. ಇದಾದ ಬಳಿಕ ಗೇಲ್ ಸಿಕ್ಕ ಜೀವದಾನ ಬಳಸಿಕೊಂಡು ಎರಡನೇ ವಿಕೆಟ್’ಗೆ 50 ರನ್ ಗಳ ಜತೆಯಾಟ ನಿಭಾಯಿಸಿದರು. ಗೇಲ್ 41 ಎಸೆತಗಳಲ್ಲಿ 5 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 36 ರನ್ ಬಾರಿಸಿ ಫ್ಲಂಕೆಟ್ ಬೌಲಿಂಗ್ ನಲ್ಲಿ ವಿಕೆಟ್ ಒಪ್ಪಿಸಿದರು. ಶಾಯ್ ಹೋಪ್ ಕೇವಲ 11 ರನ್ ಬಾರಿಸಿ ಮಾರ್ಕ್ ವುಡ್’ಗೆ ವಿಕೆಟ್ ಒಪ್ಪಿಸಿದರು. 

ಆಸರೆಯಾದ ಪೂರನ್-ಹೆಟ್ಮೇಯರ್: ಒಂದು ಹಂತದಲ್ಲಿ 55 ರನ್ ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ವಿಂಡೀಸ್ ತಂಡಕ್ಕೆ ಪೂರನ್ ಹಾಗೂ ಹೆಟ್ಮೇಯರ್ ಜೋಡಿ ನಾಲ್ಕನೇ ವಿಕೆಟ್ ಗೆ 89 ರನ್ ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾಯಿತು. ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ಹೆಟ್ಮೇಯರ್ 48 ಎಸೆತಗಲ್ಲಿ 39 ರನ್ ಬಾರಿಸಿ ಜೋ ರೂಟ್ ಬೌಲಿಂಗ್’ನಲ್ಲಿ ಅವರಿಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಇನ್ನು ಇದರ ಬೆನ್ನಲ್ಲೇ ನಾಯಕ ಜೇಸನ್ ಹೋಲ್ಡರ್[9] ಕೂಡಾ ರೂಟ್’ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಒಂದು ಕಡೆ ವಿಕೆಟ್ ಬೀಳುತ್ತಿದ್ದರೂ ನೆಲಕಚ್ಚಿ ಆಡಿದ ಪೂರನ್ 78 ಎಸೆತಗಳಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 63 ರನ್ ಬಾರಿಸಿ ಆರ್ಚರ್ ಗೆ ವಿಕೆಟ್ ಒಪ್ಪಿಸಿದರು.

ನಾಟಕೀಯ ಕುಸಿತ: ಪೂರನ್ ವಿಕೆಟ್ ಬೀಳುತ್ತಿದ್ದಂತೆ ನಾಟಕೀಯ ಕುಸಿತ ಕಂಡ ವೆಸ್ಟ್ ಇಂಡೀಸ್ ಕೇವಲ 10 ರನ್ ಅಂತರದಲ್ಲಿ 4 ವಿಕೆಟ್ ಕಳೆದುಕೊಂಡಿತು.

ಇಂಗ್ಲೆಂಡ್ ಪರ ಜೋಫ್ರಾ ಆರ್ಚರ್ ಹಾಗೂ ಮಾರ್ಕ್ ವುಡ್ ತಲಾ ಮೂರು ವಿಕೆಟ್ ಪಡೆದರೆ, ಜೋ ರೂಟ್ 2 ಹಾಗೂ ಕ್ರಿಸ್ ವೋಕ್ಸ್ ಮತ್ತು ಲಿಯಾಮ್ ಫ್ಲಂಕೆಟ್ ತಲಾ ಒಂದೊಂದು ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್:

ವೆಸ್ಟ್ ಇಂಡೀಸ್: 212/10
ನಿಕೋಲಸ್ ಪೂರನ್: 63
ಮಾರ್ಕ್ ವುಡ್: 18/3
[* ವೆಸ್ಟ್ ಇಂಡೀಸ್ ಬ್ಯಾಟಿಂಗ್ ಮುಕ್ತಾಯದ ವೇಳೆಗೆ]
 

click me!