ಬಲಿಷ್ಠ ICC ವಿಶ್ವಕಪ್ ತಂಡ ಪ್ರಕಟ: ಇಬ್ಬರು ಭಾರತೀಯರಿಗೆ ಸ್ಥಾನ..!

By Web DeskFirst Published Jul 15, 2019, 7:08 PM IST
Highlights

ವಿಶ್ವಕಪ್ ಟೂರ್ನಿಯಲ್ಲಿ ಗಮನಾರ್ಹ ಪ್ರದರ್ಶನ ತೋರಿದ ಆಟಗಾರರ ತಂಡವನ್ನು ಪ್ರಕಟಿಸಲಾಗಿದ್ದು, ಭಾರತದ ಇಬ್ಬರು ಕ್ರಿಕೆಟಿಗರು ಸ್ಥಾನ ಪಡೆದಿದ್ದಾರೆ. ಐಸಿಸಿ ವಿಶ್ವಕಪ್ ತಂಡ ಹೀಗಿದೆ ನೋಡಿ...

ಬೆಂಗಳೂರು[ಜು..15]: ನ್ಯೂಜಿಲೆಂಡ್ ಎದುರು ಸೂಪರ್ ಓವರ್ ನಲ್ಲಿ ಇಂಗ್ಲೆಂಡ್ ತಂಡ ರೋಚಕ ಜಯ ಸಾಧಿಸುವುದರೊಂದಿಗೆ 2019ರ ಏಕದಿನ ವಿಶ್ವಕಪ್ ಟೂರ್ನಿ ಅಧಿಕೃತವಾಗಿ ಮುಕ್ತಾಯವಾಗಿದೆ. ಸರಿ ಸುಮಾರು ಒಂದೂವರೆ ತಿಂಗಳುಗಳ ಕಾಲ ನಡೆದ ಕ್ರಿಕೆಟ್ ಮಹಾಸಂಗ್ರಾಮದಲ್ಲಿ ಹಲವಾರು ಸ್ಮರಣೀಯ ಹಾಗೂ ರೋಚಕ ಪಂದ್ಯಗಳಿಗೆ ಅಭಿಮಾನಿಗಳು ಸಾಕ್ಷಿಯಾಗಿದ್ದಾರೆ.

12ನೇ ಆವೃತ್ತಿಯ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಹಲವು ಕ್ರಿಕೆಟಿಗರು ಸ್ಥಿರ ಪ್ರದರ್ಶನ ತೋರುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಸಂದರ್ಭದಲ್ಲಿ ಐಸಿಸಿ, 2019ರ ಐಸಿಸಿ ಏಕದಿನ ವಿಶ್ವಕಪ್ ತಂಡವನ್ನು ಪ್ರಕಟಿಸಲಾಗಿದ್ದು, ಕೇನ್ ವಿಲಿಯಮ್ಸನ್ ಗೆ ನಾಯಕತ್ವ ಪಟ್ಟ ಕಟ್ಟಲಾಗಿದೆ. ಐಸಿಸಿ ವಿಶ್ವಕಪ್ ತಂಡದಲ್ಲಿ ಭಾರತದ ಇಬ್ಬರು ಆಟಗಾರರು ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

1. ರೋಹಿತ್ ಶರ್ಮಾ: 5 ಶತಕಗಳ ಸರದಾರ

ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಎರಡನೇ ಸ್ಥಾನದಲ್ಲಿರುವ ರೋಹಿತ್ ಶರ್ಮಾ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ  5 ಶತಕ ಸಿಡಿಸಿ ವಿಶ್ವದಾಖಲೆ ನಿರ್ಮಿಸಿದ್ದರು. ಅಲ್ಲದೇ 648 ರನ್ ಬಾರಿಸುವುದರೊಂದಿಗೆ ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸಿದ ಆಟಗಾರ ಎನ್ನುವ ಕೀರ್ತಿಗೆ ಭಾಜನರಾಗಿದ್ದಾರೆ.

2. ಜೇಸನ್ ರಾಯ್: ಸ್ಫೋಟಕ ಆರಂಭಿಕ

ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ಚಾಂಪಿಯನ್ ಆಗಲು ಆರಂಭಿಕರ ಪಾತ್ರ ಮರೆಯುವಂತಿಲ್ಲ. ಭಾರತ, ನ್ಯೂಜಿಲೆಂಡ್ ವಿರುದ್ಧ ಗೆಲ್ಲಲೇಬೇಕಾದ ಪಂದ್ಯದಲ್ಲಿ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಜಾನಿ ಬೇರ್’ಸ್ಟೋ ಜತೆ ಜೇಸನ್ ರಾಯ್ ಶತಕದ ಜತೆಯಾಟವಾಡಿದ್ದರು. ಆಡಿದ 7 ಇನ್ನಿಂಗ್ಸ್’ಗಳಲ್ಲಿ 443 ರನ್ ಬಾರಿಸಿರುವ ಜೇಸನ್ ರಾಯ್, ರೋಹಿತ್ ಜತೆ ಆರಂಭಿಕನಾಗಿ ಸ್ಥಾನ ಪಡೆದಿದ್ದಾರೆ.

3. ಕೇನ್ ವಿಲಿಯಮ್ಸನ್[ನಾಯಕ]

2019ರ ವಿಶ್ವಕಪ್ ಸಾರ್ವಕಾಲಿಕ ತಂಡದಲ್ಲಿ ನ್ಯೂಜಿಲೆಂಡ್’ನ ಕೇನ್ ವಿಲಿಯಮ್ಸನ್’ಗೆ ನಾಯಕತ್ವ ಪಟ್ಟ ಕಟ್ಟಲಾಗಿದೆ. ನಾಯಕನಾಗಿ ತಂಡವನ್ನು ಫೈನಲ್’ಗೆ ಏರಿಸಿದ್ದು ಮಾತ್ರವಲ್ಲದೆ, ಬ್ಯಾಟಿಂಗ್’ನಲ್ಲೂ 82.57ರ ಸರಾಸರಿಯಲ್ಲಿ 578 ರನ್ ಬಾರಿಸುವ ಮೂಲಕ ತಂಡಕ್ಕೆ ನೆರವಾಗಿದ್ದರು. 

4. ಜೋ ರೂಟ್: 

ಇಂಗ್ಲೆಂಡ್ ತಂಡದ ರನ್ ಮಶೀನ್ ಜೋ ರೂಟ್ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆಡಿದ 11 ಇನ್ನಿಂಗ್ಸ್ ಗಳಲ್ಲಿ 556 ರನ್ ಬಾರಿಸುವ ಮೂಲಕ ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ 5ನೇ ಸ್ಥಾನ ಪಡೆದಿದ್ದಾರೆ. ವಿಶ್ವಕಪ್ ತಂಡದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

5. ಶಕೀಬ್ ಅಲ್ ಹಸನ್: 

ತಮ್ಮ ಸ್ಥಿರ ಬ್ಯಾಟಿಂಗ್ ಹಾಗೂ ಉಪಯುಕ್ತ ಬೌಲಿಂಗ್ ನೆರವಿನಿಂದ ವಿಶ್ವಕಪ್ ಟೂರ್ನಿಯಲ್ಲಿ ಮಿಂಚಿನ ಪ್ರದರ್ಶನ ತೋರಿದ ಬಾಂಗ್ಲಾದೇಶದ ಆಲ್ರೌಂಡರ್ ಸಹಜವಾಗಿಯೇ ವಿಶ್ವಕಪ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ವಿಶ್ವಕಪ್ ಟೂರ್ನಿಯಲ್ಲಿ 600ಕ್ಕೂ ಅಧಿಕ ರನ್ ಹಾಗೂ 10ಕ್ಕೂ ಹೆಚ್ಚು ವಿಕೆಟ್ ಪಡೆದ ಮೊದಲ ಆಲ್ರೌಂಡರ್ ಎನ್ನುವ ದಾಖಲೆ ಶಕೀಬ್ ಪಾಲಾಗಿದೆ.

6. ಬೆನ್ ಸ್ಟೋಕ್ಸ್: 

ಇಂಗ್ಲೆಂಡ್ ತಂಡದ ಸ್ಟಾರ್ ಆಲ್ರೌಂಡರ್, ಫೈನಲ್ ಮ್ಯಾಚ್’ನ ಪಂದ್ಯಶ್ರೇಷ್ಠ ಪ್ರಶಸ್ತಿ ವಿಜೇತ ಬೆನ್ ಸ್ಟೋಕ್ಸ್ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್’ನಲ್ಲಿ ಗಮನಾರ್ಹ ಪ್ರದರ್ಶನ ತೋರಿದ ಬೆನ್ ಸ್ಟೋಕ್ಸ್ ಆರನೇ ಕ್ರಮಾಂಕದಲ್ಲಿ ಸ್ಥಾನ ಪಡೆದಿದ್ದಾರೆ.

7. ಅಲೆಕ್ಸ್ ಕ್ಯಾರಿ:  ವಿಕೆಟ್ ಕೀಪರ್

ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ಉಪಯುಕ್ತ ಇನಿಂಗ್ಸ್ ಕಟ್ಟಿದ ಅಲೆಕ್ಸ್ ಕ್ಯಾರಿ ವಿಶ್ವಕಪ್ ತಂಡದಲ್ಲಿ ವಿಕೆಟ್ ಕೀಪರ್ ರೂಪದಲ್ಲಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಕ್ಯಾರಿ 375 ರನ್ ಬಾರಿಸುವ ಮೂಲಕ ಆಸ್ಟ್ರೇಲಿಯಾ ತಂಡಕ್ಕೆ ನೆರವಾಗಿದ್ದರು.

8. ಮಿಚೆಲ್ ಸ್ಟಾರ್ಕ್:

ಕಳೆದ ವಿಶ್ವಕಪ್ ಆವೃತ್ತಿಯ ಸರಣಿಶ್ರೇಷ್ಠ ವಿಜೇತ ಮಿಚೆಲ್ ಸ್ಟಾರ್ಕ್ ಈ ಬಾರಿಯೂ ಬೌಲಿಂಗ್’ನಲ್ಲಿ ಕಮಾಲ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಆಡಿದ 10 ಪಂದ್ಯಗಳಲ್ಲಿ 27 ವಿಕೆಟ್ ಕಬಳಿಸುವ ಮೂಲಕ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್ ಆಗಿ ಹೊರಹೊಮ್ಮಿದರು. ಇದರ ಜತೆಗೆ ಗ್ಲೇನ್ ಮೆಗ್ರಾತ್[26] ಹೆಸರಿನಲ್ಲಿದ್ದ ದಾಖಲೆಯೂ ಇದೀಗ ಸ್ಟಾರ್ಕ್ ಪಾಲಾಗಿದೆ.

9. ಜೋಫ್ರಾ ಆರ್ಚರ್:

ಬಾರ್ಬಡೋಸ್ ಮೂಲದ ಜೋಫ್ರಾ ಆರ್ಚರ್ ತಮ್ಮ ಲೈನ್ ಅಂಡ್ ಲೆಂಥ್ ಬೌಲಿಂಗ್ ಮೂಲಕ ಎದುರಾಳಿ ಬ್ಯಾಟ್ಸ್’ಮನ್’ಗೆ ಶಾಕ್ ನೀಡುವಲ್ಲಿ ಇಂಗ್ಲೆಂಡ್ ವೇಗಿ ಯಶಸ್ವಿಯಾಗಿದ್ದಾರೆ. ಇಂಗ್ಲೆಂಡ್ ಪರ ಗರಿಷ್ಠ 20 ವಿಕೆಟ್ ಪಡೆದ ಆರ್ಚರ್ ವಿಶ್ವಕಪ್ ತಂಡದಲ್ಲೂ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

10. ಲೂಕಿ ಫರ್ಗ್ಯೂಸನ್:

ನ್ಯೂಜಿಲೆಂಡ್ ತಂಡದ ಪ್ರಮುಖ ವೇಗಿ ಲೂಕಿ ಫರ್ಗ್ಯೂಸನ್ ಮಿಂಚಿನ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದಾರೆ. ಬಲಿಷ್ಠ ಬ್ಯಾಟ್ಸ್’ಮನ್’ಗಳಾದ ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್, ಫಾಫ್ ಡುಪ್ಲೆಸಿಸ್ ಅವರಂತ ಬ್ಯಾಟ್ಸ್’ಮನ್’ಗಳನ್ನು ಬಲಿಪಡೆಯುವಲ್ಲಿ ಫರ್ಗ್ಯೂಸನ್ ಯಶಸ್ವಿಯಾಗಿದ್ದಾರೆ. ಒಟ್ಟಾರೆ 21 ವಿಕೆಟ್ ಕಬಳಿಸುವ ಮೂಲಕ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಪಡೆದವರ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ.

11. ಜಸ್ಪ್ರೀತ್ ಬುಮ್ರಾ:

ಟೀಂ ಇಂಡಿಯಾದ ಮಾರಕ ವೇಗಿ, ಡೆತ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬುಮ್ರಾ ತಮ್ಮ ಕರಾರುವಕ್ಕಾದ ಯಾರ್ಕರ್ ಮೂಲಕ ಎದುರಾಳಿ ಬ್ಯಾಟ್ಸ್’ಮನ್’ಗಳ ನಿದ್ದೆಗೆಡಿಸಿದ್ದರು. ಟೂರ್ನಿಯಲ್ಲಿ 18 ವಿಕೆಟ್ ಪಡೆಯುವುದರೊಂದಿಗೆ ವಿಶ್ವಕಪ್ ತಂಡದಲ್ಲೂ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

12ನೇ ಆಟಗಾರನಾಗಿ ಬೌಲ್ಟ್:

ನ್ಯೂಜಿಲೆಂಡ್ ಎಡಗೈ ವೇಗಿ 11 ಆಟಗಾರರನ್ನೊಳಗೊಂಡ ತಂಡದಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದರೂ, ತಮ್ಮ ಕರಾರುವಕ್ ಸ್ವಿಂಗ್ ಹಾಗೂ ಯಾರ್ಕರ್ ಮೂಲಕ ಗಮನ ಸೆಳೆದ ಹಿನ್ನಲೆಯಲ್ಲಿ 12ನೇ ಆಟಗಾರನಾಗಿ ಸ್ಥಾನ ಪಡೆದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಹ್ಯಾಟ್ರಿಕ್ ವಿಕೆಟ್ ಕಬಳಿಸಿ ಮಿಂಚಿದ್ದ ಬೌಲ್ಟ್, ವಿಶ್ವಕಪ್ ಟೂರ್ನಿಯಲ್ಲಿ 17 ವಿಕೆಟ್ ಪಡೆದಿದ್ದರು. 

click me!