ವಿಶ್ವಕಪ್ 2019: ಅಪರೂಪದ ವಿಶ್ವದಾಖಲೆ ಬರೆದ ಸಾಧಕರಿವರು..!

By Web DeskFirst Published 16, Jul 2019, 3:14 PM IST
Highlights

2019ರ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಹತ್ತು ಹಲವು ಅಪರೂಪದ ದಾಖಲೆಗಳು ಬ್ರೇಕ್ ಆಗಿದ್ದು, ಮತ್ತೆ ಹಲವಾರು ವಿಶ್ವದಾಖಲೆಗಳು ನಿರ್ಮಾಣವಾಗಿದೆ. ಈ ಸಂದರ್ಭದಲ್ಲಿ ಅಂತಹ ಅಪರೂಪದ ದಾಖಲೆಗಳ ಮೇಲೆ ಸುವರ್ಣನ್ಯೂಸ್.ಕಾಂ ಬೆಳಕು ಚೆಲ್ಲುತ್ತಿದೆ. 

ವಿಶ್ವಕಪ್ ಟೂರ್ನಿಯ ಸಂಪೂರ್ಣ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ...

ಬೆಂಗಳೂರು: ಬರೋಬ್ಬರಿ 45 ಲೀಗ್ ಮ್ಯಾಚ್, ಎರಡು ಸೆಮಿಫೈನಲ್ ಹಾಗೂ ಕ್ರಿಕೆಟ್ ಕಾಶಿ ಲಾರ್ಡ್ಸ್ನಲ್ಲಿ ನಡೆದ ಒಂದು ರೋಚಕ ಫೈನಲ್ನಲ್ಲಿ ಕ್ರಿಕೆಟ್ ಜನಕರಾದ ಇಂಗ್ಲೆಂಡ್ ಕಡೆಗೂ ವಿಶ್ವಕಪ್ ಜಯಿಸಿ ಸಂಭ್ರಮಿಸಿದೆ. 

ಜುಲೈ 14ರಂದು ನಡೆದ ರೋಚಕ ಕಾದಾಟದಲ್ಲಿ ಎರಡು ಇನಿಂಗ್ಸ್ಗಳು ಟೈ ಆದ ಹಿನ್ನಲೆಯಲ್ಲಿ ಗರಿಷ್ಠ ಬೌಂಡರಿ ಬಾರಿಸಿದ ತಂಡವನ್ನು ವಿಜೇತ ತಂಡವೆಂದು ನಿರ್ಧರಿಸಲಾಯಿತು. ಈ ಟೂರ್ನಿಯುದ್ಧಕ್ಕೂ ಹಲವು ರೋಚಕ ಹಾಗೂ ಅಪರೂಪದ ದಾಖಲೆಗಳು ಬ್ರೇಕ್ ಆದರೆ, ಇನ್ನೂ ಹತ್ತು ಹಲವು ಹೊಸ ವಿಶ್ವದಾಖಲೆಗಳು ನಿರ್ಮಾಣವಾದವು. ಈ ಸಂದರ್ಭದಲ್ಲಿ ಸುವರ್ಣನ್ಯೂಸ್. ಕಾಂ ಈ ದಾಖಲೆಗಳನ್ನು ನಿಮ್ಮ ಮುಂದಿಡುತ್ತಿದೆ.

1. ಟೀಂ ಇಂಡಿಯಾ ಆರಂಭಿಕರ ಎರಡು ಶತಕದ ಜತೆಯಾಟ

ಪ್ರಸಕ್ತ ವಿಶ್ವಕಪ್ ಟೂರ್ನಿಯ ಕಡೆಯ ಎರಡು ಲೀಗ್ ಪಂದ್ಯಗಳಲ್ಲಿ ರೋಹಿತ್ ಶರ್ಮಾ-ಕೆ.ಎಲ್ ರಾಹುಲ್ ಜೋಡಿ ಭಾರತ ಪರ 2 ಶತಕದ ಜತೆಯಾಟವಾಡುವ ಮೂಲಕ ಮೊದಲ ವಿಕೆಟ್ ಗೆ ಗರಿಷ್ಠ ರನ್ ಜತೆಯಾಟವಾಡಿದ ದಾಖಲೆ ಬರೆದಿದ್ದಾರೆ. ಈ ಮೂಲಕ ರೋಹಿತ್-ಧವನ್ ಹೆಸರಿನಲ್ಲಿದ್ದ ದಾಖಲೆ ಬ್ರೇಕ್ ಆಗಿದೆ.


 

2. ಜೋಫ್ರಾ ಆರ್ಚರ್: ಇಂಗ್ಲೆಂಡ್ ಪರ ಗರಿಷ್ಠ ವಿಕೆಟ್ ಸರದಾರ

ಬಾರ್ಬೋಡಸ್ ಮೂಲದ ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ 20 ವಿಕೆಟ್ ಕಬಳಿಸುವುದರೊಂದಿಗೆ, ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ಪರ ಗರಿಷ್ಠ ವಿಕೆಟ್ ಪಡೆದ ವೇಗಿ ಎನ್ನುವ ದಾಖಲೆ ಬರೆದಿದ್ದಾರೆ.

3. ಏಕದಿನ ಕ್ರಿಕೆಟ್ ನಲ್ಲಿ ಬಾಂಗ್ಲಾ ಗರಿಷ್ಠ ರನ್

ವಿಶ್ವಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶ 333/8 ರನ್ ಬಾರಿಸುವುದರೊಂದಿಗೆ ಏಕದಿನ ಕ್ರಿಕೆಟ್ ನಲ್ಲಿ ಗರಿಷ್ಠ ರನ್ ಬಾರಿಸಿದ ಸಾಧನೆ ಮಾಡಿದೆ.

4. ರೋಹಿತ್ ಶರ್ಮಾ 5 ಶತಕಗಳ ಸರದಾರ

ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ 5 ಶತಕ ಬಾರಿಸುವ ಮೂಲಕ ಏಕದಿನ ವಿಶ್ವಕಪ್ ಆವೃತ್ತಿಯೊಂದರಲ್ಲಿ ಗರಿಷ್ಠ ಶತಕ ಸಿಡಿಸಿದ ಆಟಗಾರ ಎನ್ನುವ ವಿಶ್ವದಾಖಲೆ ಬರೆದಿದ್ದಾರೆ. ಈ ಮೂಲಕ 2015ರಲ್ಲಿ ಸಂಗಕ್ಕರ(04) ಹೆಸರಿನಲ್ಲಿದ್ದ ದಾಖಲೆ ಅಳಿಸಿ ಹಾಕಿದ್ದಾರೆ.

5. ಕೇನ್ ವಿಲಿಯಮ್ಸನ್: ಗರಿಷ್ಠ ರನ್ ಬಾರಿಸಿದ ನಾಯಕ

ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ 578 ರನ್ ಬಾರಿಸುವುದರೊಂದಿಗೆ ವಿಶ್ವಕಪ್ ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸಿದ ನಾಯಕ ಎನ್ನುವ ವಿಶ್ವದಾಖಲೆ ಬರೆದಿದ್ದಾರೆ. ಈ ಮೂಲಕ 2007ರಲ್ಲಿ ಲಂಕಾ ನಾಯಕರಾಗಿದ್ದ ಮಹೇಲಾ ಜಯವರ್ಧನೆ ದಾಖಲೆ(548) ಅಳಿಸಿ ಹಾಕಿದ್ದಾರೆ.


6. ಇಂಗ್ಲೆಂಡ್ ವಿಶ್ವಕಪ್ ಟೂರ್ನಿಯಲ್ಲಿ ಗರಿಷ್ಠ ಸ್ಕೋರ್

ಆಫ್ಘಾನಿಸ್ತಾನ ವಿರುದ್ಧ ಇಂಗ್ಲೆಂಡ್ 397/6 ರನ್ ಬಾರಿಸುವುದರೊಂದಿಗೆ ವಿಶ್ವಕಪ್ ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸಿದ ಸಾಧನೆ ಮಾಡಿದೆ. ಇದರ ಜತೆಗೆ 2019ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ದಾಖಲಾದ ಗರಿಷ್ಠ ಮೊತ್ತ ಕೂಡಾ ಹೌದು.

7. ವಿಶ್ವಕಪ್ ಟೂರ್ನಿಯಲ್ಲಿ ಗರಿಷ್ಠ ಸಿಕ್ಸರ್ ಸರದಾರ: ಇಯಾನ್ ಮಾರ್ಗನ್

ವಿಶ್ವಕಪ್ ಟೂರ್ನಿಯ ಇನ್ನಿಂಗ್ಸ್ ವೊಂದರಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ಸಾಧನೆ ಇದೀಗ ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್ ಪಾಲಾಗಿದೆ. ಆಫ್ಘಾನಿಸ್ತಾನ ವಿರುದ್ಧ 17 ಸಿಕ್ಸರ್ ಬಾರಿಸುವುದರ ಮೂಲಕ, ಕ್ರಿಸ್ ಗೇಲ್ ದಾಖಲೆ ಅಳಿಸಿಹಾಕಿದ್ದಾರೆ. ಗೇಲ್ 2015ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ 16 ಸಿಕ್ಸರ್ ಬಾರಿಸಿದ್ದರು.

8 ಸ್ಟಾರ್ಕ್ ಪಾಲಾದ ಮೆಗ್ರಾತ್ ದಾಖಲೆ..!

ವಿಶ್ವಕಪ್ ಟೂರ್ನಿಯೊಂದರಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್ ಎನ್ನುವ ದಾಖಲೆ ಇದೀಗ ಆಸೀಸ್ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ ಪಾಲಾಗಿದೆ. 2019ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಸ್ಟಾರ್ಕ್ 27 ವಿಕೆಟ್ ಕಬಳಿಸುವ ಮೂಲಕ ತಮ್ಮದೇ ದೇಶದವರಾದ ಗ್ಲೇನ್ ಮೆಗ್ರಾತ್ ದಾಖಲೆ ಅಳಿಸಿಹಾಕಿದ್ದಾರೆ.  

9 ಚೊಚ್ಚಲ ವಿಶ್ವಕಪ್ ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸಿದವರು

ಪ್ರತಿಯೊಬ್ಬ ಕ್ರಿಕೆಟಿಗ ಕೂಡಾ ತಾವಾಡಿದ ಚೊಚ್ವಲ ವಿಶ್ವಕಪ್ ಟೂರ್ನಿಯನ್ನು ಸ್ಮರಣೀಯವಾಗಿಸಿಕೊಳ್ಳಲು ಬಯಸುತ್ತಾನೆ. ಈ ನಿಟ್ಟಿನಲ್ಲಿ ಇಂಗ್ಲೆಂಡ್ ಆರಂಭಿಕ ಬ್ಯಾಟ್ಸ್’ಮನ್ ಜಾನಿ ಬೇರ್ ಸ್ಟೋ 532 ರನ್ ಬಾರಿಸುವ ಮೂಲಕ ಚೊಚ್ಚಲ ವಿಶ್ವಕಪ್ ಟೂರ್ನಿಯಲ್ಲೇ 500+ ರನ್ ಬಾರಿಸಿದ ಮೊದಲ ಬ್ಯಾಟ್ಸ್ ಮನ್ ಎನ್ನುವ ವಿಶ್ವದಾಖಲೆ ಬರೆದಿದ್ದಾರೆ. 

10. ದಕ್ಷಿಣ ಆಫ್ರಿಕಾ ಪರ ವಿಶ್ವಕಪ್ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಸಾಧಕರು

ದಕ್ಷಿಣ ಆಫ್ರಿಕಾ ಪರ ಒಟ್ಟಾರೆ ವಿಶ್ವಕಪ್ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್ ಎನ್ನುವ ಶ್ರೇಯಕ್ಕೆ ಲೆಗ್ ಸ್ಪಿನ್ನರ್ ಇಮ್ರಾನ್ ತಾಹಿರ್ ಪಾತ್ರರಾಗಿದ್ದಾರೆ. ತಾಹಿರ್ ಒಟ್ಟು 40 ವಿಕೆಟ್ ಕಬಳಿಸುವ ಮೂಲಕ ಅಲನ್ ಡೊನಾಲ್ಡ್[38] ಹೆಸರಿನಲ್ಲಿದ್ದ ದಾಖಲೆ ಇದೀಗ ತಾಹಿರ್ ಪಾಲಾಗಿದೆ. 

11. ವಿಶ್ವಕಪ್ ಟೂರ್ನಿಯೊಂದರಲ್ಲಿ ಗರಿಷ್ಠ ಕ್ಯಾಚ್ ಪಡೆದವರು

ವಿಶ್ವಕಪ್ ಕ್ರಿಕೆಟ್ ನಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಮಾತ್ರವಲ್ಲದೇ ಫೀಲ್ಡಿಂಗ್ ಕೂಡಾ ಪ್ರಮುಖ ಪಾತ್ರವಹಿಸುತ್ತದೆ. ವಿಶ್ವಕಪ್ ಟೂರ್ನಿಯೊಂದರಲ್ಲಿ ಗರಿಷ್ಠ ಕ್ಯಾಚ್ ಹಿಡಿದ ಕ್ಷೇತ್ರ ರಕ್ಷಕ ಎನ್ನುವ ದಾಖಲೆಗೆ ಇಂಗ್ಲೆಂಡ್ ನ ಜೋ ರೂಟ್ ಪಾತ್ರರಾಗಿದ್ದಾರೆ.  2019ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ 13 ಕ್ಯಾಚ್ ಹಿಡಿಯುವ ಮೂಲಕ ರೂಟ್, 2003ರಲ್ಲಿ ರಿಕಿ ಪಾಂಟಿಂಗ್[11] ಹೆಸರಿನಲ್ಲಿದ್ದ ದಾಖಲೆ ಅಳಿಸಿ ಹಾಕಿದ್ದಾರೆ. 

ಅಂಕಿ-ಅಂಶ ಮಾಹಿತಿ ಕೃಪೆ: ICC

Stats courtesy: ICC

Last Updated 18, Jul 2019, 3:54 PM IST