Women's Hockey World Cup: ಕಿವೀಸ್ ಮಣಿಸಿ ಕ್ವಾರ್ಟರ್‌ಗೇರುತ್ತಾ ಭಾರತ..?

By Naveen KodaseFirst Published Jul 7, 2022, 10:14 AM IST
Highlights

* ಮಹಿಳಾ ಹಾಕಿ ವಿಶ್ವಕಪ್ ಟೂರ್ನಿಯಲ್ಲಿಂದು ಭಾರತಕ್ಕೆ ನ್ಯೂಜಿಲೆಂಡ್ ಸವಾಲು
* ಕಿವೀಸ್ ಮಣಿಸಿ ಕ್ವಾರ್ಟರ್ ಫೈನಲ್‌ಗೇರುವ ನಿರೀಕ್ಷೆಯಲ್ಲಿದೆ ಭಾರತ
* ಸವಿತಾ ಪೂನಿಯಾ ಪಡೆಗಿಂದು ಅಗ್ನಿಪರೀಕ್ಷೆ

ಆ್ಯಮ್‌ಸ್ಟಲ್ವೀನ್‌(ಜು.07): 2022ರ ಮಹಿಳಾ ಹಾಕಿ ವಿಶ್ವಕಪ್‌ನಲ್ಲಿ (Women's Hockey World Cup) ಇನ್ನೂ ಗೆಲುವಿನ ಖಾತೆ ತೆರೆಯದ ಭಾರತ, ಗುರುವಾರ ನಡೆಯಲಿರುವ ‘ಬಿ’ ಗುಂಪಿನ ಅಂತಿಮ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ ಸೆಣಸಲಿದ್ದು, ಗೆಲುವಿನೊಂದಿಗೆ ನೇರವಾಗಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸುವ ನಿರೀಕ್ಷೆಯಲ್ಲಿದೆ. ಮೊದಲ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ ಡ್ರಾ ಸಾಧಿಸಿದ್ದ ಭಾರತ, 2ನೇ ಪಂದ್ಯದಲ್ಲಿ ಚೀನಾ ವಿರುದ್ಧವೂ ಡ್ರಾಗೆ ತೃಪ್ತಿಪಟ್ಟಿತ್ತು. 2 ಅಂಕಗಳೊಂದಿಗೆ ಗುಂಪಿನಲ್ಲಿ 3ನೇ ಸ್ಥಾನದಲ್ಲಿರುವ ಭಾರತ ಈ ಪಂದ್ಯದಲ್ಲಿ ಜಯಿಸಿ ಇಂಗ್ಲೆಂಡ್‌ ವಿರುದ್ಧ ಚೀನಾ ಡ್ರಾ ಇಲ್ಲವೇ ಸೋತರೆ ಭಾರತ ನೇರವಾಗಿ ಕ್ವಾರ್ಟರ್‌ಗೇರುವ ಸಾಧ್ಯತೆ ಇದೆ.

ಇಂಗ್ಲೆಂಡ್‌ ವಿರುದ್ಧ 3-1ರಲ್ಲಿ ಗೆದ್ದ ನ್ಯೂಜಿಲೆಂಡ್‌ ಗುಂಪಿನಲ್ಲಿ ಮೊದಲ ಸ್ಥಾನದಲ್ಲಿದೆ. ಭಾರತ ವಿರುದ್ಧ ಡ್ರಾ ಸಾಧಿಸಿದರೂ ನೇರ ಅಂತಿಮ 8ರ ಸುತ್ತಿಗೇರಲಿದೆ. ಗುಂಪಿನಲ್ಲಿ 2 ಮತ್ತು 3ನೇ ಸ್ಥಾನ ಪಡೆಯುವ ತಂಡಗಳು ಕ್ರಾಸ್‌ ಓವರ್‌ ಪಂದ್ಯಗಳನ್ನು ಆಡಬೇಕಿದ್ದು, ಅದರಲ್ಲಿ ಗೆದ್ದರೆ ಕ್ವಾರ್ಟರ್‌ ಫೈನಲ್‌ನಲ್ಲಿ ಸ್ಥಾನ ಸಿಗಲಿದೆ. ಭಾರತ 2 ಪಂದ್ಯಗಳಲ್ಲಿ 12 ಪೆನಾಲ್ಟಿ ಕಾರ್ನರ್‌ಗಳನ್ನು ಪಡೆದರೂ ಕೇವಲ 2ರಲ್ಲಿ ಗೋಲು ಗಳಿಸಿ ನಿರಾಸೆ ಮೂಡಿಸಿದೆ. ತಂಡ ಸುಧಾರಿತ ಪ್ರದರ್ಶನ ತೋರಬೇಕಿದೆ.

ಭಾರತ ಮಹಿಳಾ ಹಾಕಿ ತಂಡದ (Indian Women's Hockey Team) ಡಿಫೆನ್ಸ್ ವಿಭಾಗವು ಸಾಕಷ್ಟು ಬಲಿಷ್ಠವಾಗಿದ್ದು, ಇಂಗ್ಲೆಂಡ್ ಎದುರಿನ ಮೊದಲ ಪಂದ್ಯದಲ್ಲಿ ಎದುರಾಳಿ ತಂಡವು ಪೆನಾಲ್ಟಿ ಕಾರ್ನರ್‌ ಮೂಲಕ ಒಂದೇ ಒಂದು ಗೋಲು ಬಾರಿಸಲು ಅವಕಾಶ ನೀಡಿರಲಿಲ್ಲ. ಆದರೆ ವಂದನಾ ಕಠಾರಿಯಾ ಹೊರತುಪಡಿಸಿ ಭಾರತ ಮಹಿಳಾ ಹಾಕಿ ತಂಡದ ಫಾರ್ವರ್ಡ್‌ ಲೈನ್ ಹಾಗೂ ಮಿಡ್‌ ಫೀಲ್ಡ್ ಕೊಂಚ ಮಂದವಾಗಿದೆ. ಭಾರತ ಪರ ವಂದನಾ ಕಠಾರಿಯಾ ಮಾತ್ರ 2 ಗೋಲು ಬಾರಿಸಿದ್ದು, ಉಳಿದ್ಯಾವ ಆಟಗಾರ್ತಿಯರು ಈ ಬಾರಿಯ ಮಹಿಳಾ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಪರ ಗೋಲು ದಾಖಲಿಸಲು ಯಶಸ್ವಿಯಾಗಿಲ್ಲ. 

ಮಹಿಳಾ ಹಾಕಿ ವಿಶ್ವಕಪ್: ಭಾರತ-ಚೀನಾ ನಡುವಿನ ಪಂದ್ಯ ಡ್ರಾನಲ್ಲಿ ಅಂತ್ಯ

ಪ್ರತಿಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ 4 ತಂಡಗಳು ನೇರವಾಗಿ ಕ್ವಾರ್ಟರ್‌ ಫೈನಲ್ ಪ್ರವೇಶಿಸಲಿದ್ದು, ಗುಂಪಿನಲ್ಲಿ ಎರಡು ಹಾಗೂ ಮೂರನೇ ಸ್ಥಾನ ಪಡೆಯುವ ತಂಡಗಳು ಕ್ರಾಸ್‌ ಓವರ್‌ ಪಂದ್ಯಗಳನ್ನಾಡಲಿವೆ. ಕ್ರಾಸ್ ಓವರ್‌ ಎಂದರೆ, 'ಎ' ಗುಂಪಿನಲ್ಲಿ ಎರಡನೇ ಸ್ಥಾನ ಪಡೆದ ತಂಡವು 'ಡಿ' ಗುಂಪಿನಲ್ಲಿ ಮೂರನೇ ಸ್ಥಾನ ಪಡೆದ ತಂಡದೊಂದಿಗೆ ಕಾದಾಡಲಿದ್ದು, ಇಲ್ಲಿ ಗೆಲುವು ಸಾಧಿಸಿದ ತಂಡವು ಕ್ವಾರ್ಟರ್ ಫೈನಲ್ ಪ್ರವೇಶಿಸಿಲಿವೆ. ಇದೇ ರೀತಿ ಕ್ರಾಸ್ ಓವರ್ ಪಂದ್ಯದ ಮೂಲಕ 4 ತಂಡಗಳು ಕ್ವಾರ್ಟರ್‌ ಫೈನಲ್ ಪ್ರವೇಶಿಸಲಿವೆ.

ಪಂದ್ಯ: ರಾತ್ರಿ 11ಕ್ಕೆ

ಬರ್ಮಿಂಗ್‌ಹ್ಯಾಮ್ ಕಾಮನ್ವೆಲ್ತ್‌ ಗೇಮ್ಸ್‌: ನೀರಜ್‌ ಭಾರತದ ಧ್ವಜಧಾರಿ?

ನವದೆಹಲಿ: ಟೋಕಿಯೋ ಒಲಿಂಪಿಕ್ಸ್‌ (Tokyo Olympics) ಚಾಂಪಿಯನ್‌ ನೀರಜ್‌ ಚೋಪ್ರಾ ಜುಲೈ 28ರಂದು ಆರಂಭವಾಗಲಿರುವ ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್‌ ಗೇಮ್ಸ್‌ನ ಉದ್ಘಾಟನಾ ಸಮಾರಂಭದಲ್ಲಿ ಭಾರತ ತಂಡದ ಧ್ವಜಧಾರಕರಾಗುವ ಸಾಧ್ಯತೆ ಇದೆ ಎಂದು ಗೊತ್ತಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಭಾರತೀಯ ಒಲಿಂಪಿಕ್ಸ್‌ ಸಂಸ್ಥೆ(ಐಒಎ) ಕಾರ‍್ಯದರ್ಶಿ ರಾಜೀವ್‌ ಮೆಹ್ತಾ, ‘ಭಾರತದ ಧ್ವಜಧಾರಿಯಾಗಿ ನೀರಜ್‌ ಆಯ್ಕೆಯಾಗಬಹುದು. ಸಮಾರಂಭಕ್ಕೆ ಅವರ ಲಭ್ಯತೆಯನ್ನು ಖಚಿತಪಡಿಸಿ ಈ ಬಗ್ಗೆ ನಿರ್ಧರಿಸುತ್ತೇವೆ’ ಎಂದಿದ್ದಾರೆ. ಚೋಪ್ರಾ 2018ರ ಜಕಾರ್ತ ಏಷ್ಯನ್‌ ಗೇಮ್ಸ್‌ ಉದ್ಘಾಟನಾ ಸಮಾರಂಭಕ್ಕೆ ಭಾರತ ತಂಡಕ್ಕೆ ಧ್ವಜಧಾರಿಯಾಗಿದ್ದರು.

click me!