* ಇಂದಿನಿಂದ ಮಹಿಳಾ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಅಭಿಯಾನ ಆರಂಭ
* ಮೊದಲ ಪಂದ್ಯದಲ್ಲೇ ಭಾರತಕ್ಕೆ ಬಲಿಷ್ಠ ಇಂಗ್ಲೆಂಡ್ ಎದುರಾಳಿ
* ರಾಣಿ ರಾಂಪಾಲ್ ಅನುಪಸ್ಥಿತಿಯಲ್ಲಿ ಭಾರತ ತಂಡವನ್ನು ಮುನ್ನಡೆಸಲಿರುವ ಸವಿತಾ ಪೂನಿಯಾ
ಆಮ್ಸ್‌ಟೆಲ್ವೀನ್(ಜು.03): ಎಫ್‌ಐಎಚ್ ಮಹಿಳಾ ಹಾಕಿ ವಿಶ್ವಕಪ್‌ನಲ್ಲಿ ಭಾರತ ತಂಡ ಭಾನುವಾರ ಅಭಿಯಾನ ಆರಂಭಿಸಲಿದ್ದು, ಮೊದಲ ಪಂದ್ಯದಲ್ಲಿ ಬಲಿಷ್ಠ ಇಂಗ್ಲೆಂಡ್ ವಿರುದ್ಧ ಸೆಣಸಾಡಲಿದೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧವೇ ಸೋತು ಕಂಚಿನ ಪದಕ ತಪ್ಪಿಸಿಕೊಂಡಿದ್ದ ಭಾರತ ಈ ಪಂದ್ಯದಲ್ಲಿ ಸೇಡು ತೀರಿಸಿಕೊಳ್ಳಲು ಎದುರು ನೋಡುತ್ತಿದೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತ ಮಹಿಳಾ ಹಾಕಿ ತಂಡವು ಸೆಮಿಫೈನಲ್ ಪ್ರವೇಶಿಸಿತ್ತಾದರೂ, ಪದಕ ಗೆಲ್ಲಲು ವಿಫಲವಾಗಿತ್ತು.
ಇತ್ತೀಚೆಗಷ್ಟೇ ಕೊನೆಗೊಂಡ ಪ್ರೊ ಲೀಗ್‌ನಲ್ಲಿ (FIH Pro League Hockey) 3ನೇ ಸ್ಥಾನ ಪಡೆದುಕೊಂಡ ಹುಮ್ಮಸ್ಸಿನಲ್ಲಿರುವ ಭಾರತ ವಿಶ್ವಕಪ್‌ನಲ್ಲೂ ಶುಭಾರಂಭ ಮಾಡುವ ಕಾತರದಲ್ಲಿದೆ. ತಂಡ ವಿಶ್ವಕಪ್‌ನ 1974ರ ಚೊಚ್ಚಲ ಆವೃತ್ತಿಯಲ್ಲಿ 4ನೇ ಸ್ಥಾನ ಪಡೆದಿದ್ದು ಈವರೆಗಿನ ಶ್ರೇಷ್ಠ ಪ್ರದರ್ಶನ ಎನಿಸಿಕೊಂಡಿದ್ದು, ಈ ಬಾರಿ ಚೊಚ್ಚಲ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ.
undefined
ನೆದರ್ಲೆಂಡ್ಸ್ ಹಾಗೂ ಸ್ಪೇನ್‌ನಲ್ಲಿ ಜುಲೈ 1ರಿಂದ ಎಫ್‌ಐಎಚ್ ಮಹಿಳಾ ಹಾಕಿ ವಿಶ್ವಕಪ್ (FIH Womens Hockey World Cup) ಟೂರ್ನಿ ಆರಂಭವಾಗಿದ್ದು ಜುಲೈ 17ರ ವರೆಗೆ ನಡೆಯಲಿದೆ. ಮಹಿಳಾ ಹಾಕಿ (Indian Women's Hockey Team) ವಿಶ್ವಕಪ್ ಟೂರ್ನಿಯಲ್ಲಿ ಸವಿತಾ ಪೂನಿಯಾ (Savita Punia) ಭಾರತ ತಂಡವನ್ನು ಮುನ್ನಡೆಸಲಿದ್ದು, ದೀಪ್ ಗ್ರೇಸ್ ಎಕ್ಕಾ ಉಪನಾಯಕಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಇನ್ನುಳಿದಂತೆ ಮೋನಿಕಾ, ನೇಹಾ, ಜ್ಯೋತಿ, ಸಲೀಮಾ ಟೆಟೆ, ನವ್‌ಜೋತ್ ಕೂಡಾ ತಂಡಕ್ಕೆ ಆಯ್ಕೆಯಾಗಿದ್ದಾರೆ. ರಾಣಿ ಹೊರತುಪಡಿಸಿ ಕಳೆದ ವರ್ಷ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡ ಎಲ್ಲಾ ಆಟಗಾರ್ತಿಯರು ವಿಶ್ವಕಪ್ ತಂಡದಲ್ಲೂ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಭಾರತ ಲೀಗ್‌ನಲ್ಲಿ ‘ಬಿ’ ಗುಂಪಿನಲ್ಲಿ ಇಂಗ್ಲೆಂಡ್, ನ್ಯೂಜಿಲೆಂಡ್, ಚೀನಾ ಜೊತೆ ಸ್ಥಾನ ಪಡೆದಿವೆ.
ಮಹಿಳಾ ಹಾಕಿ ವಿಶ್ವಕಪ್: ಭಾರತಕ್ಕೆ ಸವಿತಾ ಪೂನಿಯಾ ನಾಯಕಿ
ಎಫ್‌ಐಎಚ್ ಮಹಿಳಾ ಹಾಕಿ ವಿಶ್ವಕಪ್ ಟೂರ್ನಿಯ ಎಲ್ಲಾ ಪಂದ್ಯಗಳು ಭಾರತದಲ್ಲಿ ಸ್ಟಾರ್ ಸ್ಪೋರ್ಟ್ಸ್ ವಾಹಿನಿಯಲ್ಲಿ ನೇರ ಪ್ರಸಾರವಾಗಲಿವೆ. ಭಾರತ ತಂಡವು ಇಂದು ಇಂಗ್ಲೆಂಡ್ ಎದುರು ಮೊದಲ ಪಂದ್ಯವನ್ನಾಡಿದರೇ, ಎರಡನೇ ಪಂದ್ಯವು ಜುಲೈ 05ರಂದು ಚೀನಾ ಎದುರು ಕಾದಾಡಲಿದೆ. ಇನ್ನು ಜುಲೈ 07ರಂದು ನ್ಯೂಜಿಲೆಂಡ್ ಎದುರು ಸೆಣಸಾಡಲಿದೆ. ರಾಣಿ ರಾಂಪಾಲ್ ಅನುಪಸ್ಥಿತಿಯಲ್ಲಿ ಸವಿತಾ ಪೂನಿಯಾ ಪಡೆ ಯಾವ ರೀತಿ ಪ್ರದರ್ಶನ ತೋರಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.
ಪಂದ್ಯ ಆರಂಭ: ರಾತ್ರಿ 8ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಫಿಫಾ ಫುಟ್ಬಾಲ್ ವಿಶ್ವಕಪ್: 24,000 ಟಿಕೆಟ್ ಖರೀದಿ ಮಾಡಿದ ಭಾರತೀಯರು
ಪಣಜಿ: ಫಿಫಾ ಫುಟ್ಬಾಲ್ ವಿಶ್ವಕಪ್‌ನಲ್ಲಿ ಭಾರತ ತಂಡ ಆಡದಿದ್ದರೂ ಭಾರತೀಯರ ಆಸಕ್ತಿ ಕಡಿಮೆಯಾಗಿಲ್ಲ. ಈ ವರ್ಷ ಕತಾರ್‌ನಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿಯ ಪಂದ್ಯಗಳನ್ನು ವೀಕ್ಷಿಸಲು ಭಾರತೀಯ ಅಭಿಮಾನಿಗಳು ಅಂದಾಜು 24,000 ಟಿಕೆಟ್‌ಗಳನ್ನು ಖರೀದಿಸಿದ್ದಾರೆ. ಅತಿಹೆಚ್ಚು ಟಿಕೆಟ್ ಖರೀದಿ ಮಾಡಿದ ಅಗ್ರ-10 ದೇಶಗಳಲ್ಲಿ ಭಾರತವು ಸ್ಥಾನ ಪಡೆದಿದ್ದು, 7ನೇ ಸ್ಥಾನದಲ್ಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
‘ಒಟ್ಟಾರೆ ಭಾರತೀಯರು 23,573 ಟಿಕೆಟ್‌ಗಳನ್ನು ಖರೀದಿ ಮಾಡಿದ್ದಾರೆ. ಮೊದಲ 2 ಹಂತಗಳಲ್ಲಿ 18 ಲಕ್ಷ ಟಿಕೆಟ್‌ಗಳನ್ನು ಮಾರಾಟ ಮಾಡಲಾಗಿದೆ’ ಎಂದು ಫಿಫಾ ತಿಳಿಸಿದೆ. 2018ರಲ್ಲಿ ರಷ್ಯಾದಲ್ಲಿ ನಡೆದ ವಿಶ್ವಕಪ್ ವೇಳೆ 17,962 ಟಿಕೆಟ್‌ಗಳನ್ನು ಖರೀದಿಸಿದ್ದರು. 2022ರ ಫಿಫಾ ವಿಶ್ವಕಪ್ ಟೂರ್ನಿಯು ನವೆಂಬರ್ 21ರಿಂದ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಸೆನೆಗಲ್ ಹಾಗೂ ನೆದರ್‌ಲೆಂಡ್ಸ್ ತಂಡಗಳು ಸೆಣಸಾಡಲಿವೆ.