ಗ್ಯಾರೇಜ್ ಸೇರಬೇಕಿದ್ದ ಶೇಷೇಗೌಡ ಈಗ ರಾಷ್ಟ್ರೀಯ ಹಾಕಿಪಟು..!

By Kannadaprabha News  |  First Published May 11, 2022, 9:12 AM IST

* ಭಾರತ ರಾಷ್ಟ್ರೀಯ ಹಾಕಿ ತಂಡದಲ್ಲಿ ಸ್ಥಾನ ಪಡೆದ ಕನ್ನಡಿಗ ಶೇಷೇಗೌಡ

* ಮೇ 23ರಿಂದ ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆಯಲಿರುವ ಏಷ್ಯಾಕಪ್‌ಗೆ ಆಯ್ಕೆ

* 28 ವರ್ಷದ ಶೇಷೇಗೌಡ, ಇದೇ ಮೊದಲ ಬಾರಿಗೆ ಭಾರತ ಹಿರಿಯರ ತಂಡದಲ್ಲಿ ಸ್ಥಾನ


ವರದಿ: ಸ್ಪಂದನ್‌ ಕಣಿಯಾರ್‌, ಕನ್ನಡಪ್ರಭ

ಬೆಂಗಳೂರು(ಮೇ.11): ಯಾರ್ಯಾರ ಹಣೆಬರಹ ಏನೇನಿರುತ್ತೋ ಗೊತ್ತಿಲ್ಲ. ಓದಿನಲ್ಲಿ ಬಹಳ ಹಿಂದಿದ್ದಾನೆ ಎನ್ನುವ ಕಾರಣಕ್ಕೆ ಗ್ಯಾರೇಜ್‌ ಕೆಲಸಕ್ಕೆ ಹಾಕಬೇಕು ಎಂದು ಅಂದುಕೊಂಡ ಪೋಷಕರ ಮಗ ಈಗ ಭಾರತ ಹಾಕಿ ತಂಡದಲ್ಲಿ (Indian Hockey Team) ಸ್ಥಾನ ಪಡೆದಿದ್ದಾನೆ. 4ನೇ ತರಗತಿ ಓದುವಾಗ ದೈಹಿಕ ಶಿಕ್ಷಕಿ ಆಟದ ಸಮಯದಲ್ಲಿ ಹಾಕಿಯನ್ನು ಪರಿಚಯಿಸಿದ್ದು ಈಗ ಈತನಿಗೆ ಬದುಕು ಕಟ್ಟಿಕೊಟ್ಟಿದೆ. ಇದೇ ಮೊದಲ ಬಾರಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿರುವ ಈ ಆಟಗಾರನ ಹೆಸರು ಶೇಷೇಗೌಡ.

Tap to resize

Latest Videos

ಊರು ಹಾಸನ. ಸಾಮಾನ್ಯ ಕುಟುಂಬದಿಂದ ಬಂದ ಪ್ರತಿಭೆ. ತಂದೆ ಈಗಲೂ ಗಾರೆ ಕೆಲಸ ಮಾಡುತ್ತಾರೆ. ತಾಯಿಗೆ ಹಾಸ್ಟೆಲ್‌ನಲ್ಲಿ ಅಡುಗೆ ಮಾಡುವ ಉದ್ಯೋಗ. ಆದರೆ ಭಾರತವನ್ನು ಪ್ರತಿನಿಧಿಸಬೇಕು ಎನ್ನುವ ಕನಸಿಗೆ ನೀರೆರೆದವರು ಅನೇಕರು. 28 ವರ್ಷದ ಶೇಷೇಗೌಡ (Sheshegowda), ಇದೇ ಮೊದಲ ಬಾರಿಗೆ ಭಾರತ ಹಿರಿಯರ ತಂಡದಲ್ಲಿ ಸ್ಥಾನ ಪಡೆದಿದ್ದು ಮೇ 23ರಿಂದ ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆಯಲಿರುವ ಏಷ್ಯಾಕಪ್‌ಗೆ ಆಯ್ಕೆಯಾಗಿದ್ದಾರೆ. ಸದ್ಯ ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ (ಸಾಯ್‌) ನಡೆಯುತ್ತಿರುವ ಭಾರತ ತಂಡದ ಅಭ್ಯಾಸ ಶಿಬಿರದಲ್ಲಿದ್ದಾರೆ.

ಕೂಡಿಗೆಯ ‘ಕೊಡುಗೆ’:

7ನೇ ತರಗತಿ ಮುಗಿಸಿದ ಬಳಿಕ ಕೊಡಗಿನ ಕುಶಾಲನಗರ ಬಳಿ ಇರುವ ಕೂಡಿಗೆ ಕ್ರೀಡಾ ಹಾಸ್ಟೆಲ್‌ಗೆ ಆಯ್ಕೆಯಾಗಿದ್ದು ಶೇಷೇಗೌಡ ಜೀವನದ ‘ಟರ್ನಿಂಗ್‌ ಪಾಯಿಂಟ್‌’. ಅಲ್ಲಿ ಹಾಕಿಯ ಆರಂಭಿಕ ಪಾಠಗಳನ್ನು ಕಲಿತ ಅವರು, ಎಸ್‌ಎಸ್‌ಎಲ್‌ಸಿ ಮುಗಿದ ಬಳಿಕ 2010ರಲ್ಲಿ ಬಂದಿದ್ದು ಬೆಂಗಳೂರಿಗೆ. ಕಂಠೀರವ ಕ್ರೀಡಾಂಗಣದಲ್ಲಿರುವ ಕ್ರೀಡಾ ಹಾಸ್ಟೆಲ್‌ನಲ್ಲಿದ್ದುಕೊಂಡು ಪಿಯುಸಿ, ಬಿ.ಎ. ಮುಗಿಸುವ ವೇಳೆಗೆ ವೃತ್ತಿಪರ ಹಾಕಿ ಆಟಗಾರನಾಗಿ ರೂಪುಗೊಂಡಿದ್ದರು.

ರೈಲ್ವೇಸ್‌ನಲ್ಲಿ ಟಿಟಿಇ!:

2016ರಲ್ಲಿ ಭಾರತೀಯ ರೈಲ್ವೇಸ್‌ಗೆ ನೇಮಕಗೊಂಡ ಶೇಷೇಗೌಡ, ರಾಷ್ಟ್ರೀಯ ಟೂರ್ನಿಗಳಲ್ಲಿ ಆ ತಂಡವನ್ನೇ ಪ್ರತಿನಿಧಿಸುತ್ತಾರೆ. ಅಂಡರ್‌-15 ಸೇರಿ ಕೆಲ ಕಿರಿಯರ ವಿಭಾಗಗಳಲ್ಲಿ ಕರ್ನಾಟಕ ಪರ ಆಡಿದ್ದಾರೆ. ಹೈದರಾಬಾದ್‌ನಲ್ಲಿ ಟ್ರೈನ್‌ ಟಿಕೆಟ್‌ ಎಕ್ಸಾಮಿನರ್‌ (ಟಿಟಿಇ) ಆಗಿ ಕೆಲಸ ಮಾಡುತ್ತಾ, ಹಾಕಿಯಲ್ಲೂ ಒಂದೊಂದೇ ಮೆಟ್ಟಿಲೇರುತ್ತಾ, ಭಾರತ ತಂಡ ತಲುಪಿ ತಮ್ಮ ಕನಸು ನನಸಾಗಿಸಿಕೊಂಡಿದ್ದಾರೆ. ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಎಂ.ಎಸ್‌.ಧೋನಿ ಸಹ ರೈಲ್ವೇಯಲ್ಲಿ ಟಿಟಿಇ ಆಗಿದ್ದರು ಎನ್ನುವುದು ವಿಶೇಷ.

Khelo India University Games: ಹಾಕಿಯಲ್ಲಿ ಬೆಂಗಳೂರು ಸಿಟಿ ವಿವಿ ಚಾಂಪಿಯನ್

6 ತಿಂಗಳ ಹಿಂದಷ್ಟೇ ಹಿರಿಯರ ಶಿಬಿರಕ್ಕೆ

ದೇಸಿ ಟೂರ್ನಿಗಳಲ್ಲಿ ರೈಲ್ವೇಸ್‌ ಪರ ಉತ್ತಮ ಆಟವಾಡಿ, ತಂಡ ಹಲವು ಟ್ರೋಫಿಗಳನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶೇಷೇಗೌಡ, ಭಾರತ ಹಿರಿಯರ ತಂಡ ಶಿಬಿರಕ್ಕೆ ಆಯ್ಕೆಯಾಗಿದ್ದು ಕೇವಲ 6 ತಿಂಗಳ ಹಿಂದಷ್ಟೇ. ತಮ್ಮ ಆಕರ್ಷಕ ಆಟ, ಫಿಟ್ನೆಸ್‌ ಮೂಲಕ ಕೋಚ್‌ಗಳು, ಆಯ್ಕೆಗಾರರ ಗಮನ ಸೆಳೆದ ಅವರು ಏಷ್ಯಾಕಪ್‌ಗೆ ಆಯ್ಕೆಯಾಗುವಲ್ಲಿ ಯಶಸ್ವಿಯಾಗಿದ್ದಾರೆ.

ಯೋ-ಯೋ ಫಿಟ್ನೆಸ್‌ ಟೆಸ್ಟ್‌ನಲ್ಲಿ 23.1 ಅಂಕ!

ಫಿಟ್ನೆಸ್‌ ಅಳೆಯಲು ನಡೆಸುವ ಯೋ-ಯೋ ಟೆಸ್ಟ್‌ನಲ್ಲಿ ಶೇಷೇಗೌಡ ಅತ್ಯುತ್ತಮ ಸ್ಕೋರ್‌ ಗಳಿಸಿದ್ದಾರೆ. ಈ ಪರೀಕ್ಷೆಯಲ್ಲಿರುವ ಗರಿಷ್ಠ ಮಿತಿ 23.8. ಶೇಷೇಗೌಡ ಗಳಿಸಿರುವ ಸ್ಕೋರ್‌ 23.1. ಇಂಟರ್ನೆಟ್‌ನಲ್ಲಿರುವ ಮಾಹಿತಿ ಪ್ರಕಾರ, ಕ್ರಿಕೆಟಿಗ ವಿರಾಟ್‌ ಕೊಹ್ಲಿಯ ಯೋ-ಯೋ ಟೆಸ್ಟ್‌ ಸ್ಕೋರ್‌ 19.

ತಂಗಿ ಹಾಕಿ ಕೋಚ್‌!

ಶೇಷೇಗೌಡ ಅವರ ತಂಗಿ ಸಹ ಹಾಕಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಹಾಕಿಪಟುವಾಗಿ ವೃತ್ತಿಬದುಕು ಕಂಡುಕೊಳ್ಳಲಾಗದ ಅವರು ಎದೆಗುಂದಲಿಲ್ಲ. ಸಾಯ್‌ ಪ್ರಮಾಣ ಪತ್ರ ಪಡೆದು ಮಡಿಕೇರಿಯ ಸಾಯ್‌ ಕ್ರೀಡಾ ಹಾಸ್ಟೆಲ್‌ನಲ್ಲಿ ಹಾಕಿ ಕೋಚ್‌ ಆಗಿ ಅನೇಕರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.

ವಿಧಿಯೇ ನನ್ನನ್ನು ಹಾಕಿಗೆ ಕರೆತಂದಿದೆ!

‘ಹಾಕಿ ಆಟಗಾರನಾಗಬೇಕು ಎಂದು ಬಾಲ್ಯದಲ್ಲಿ ಕನಸು ಕಂಡಿರಲಿಲ್ಲ. ಆದರೆ ಹಾಕಿಯನ್ನು ಆಯ್ಕೆ ಮಾಡಿಕೊಂಡ ಮೇಲೆ ಏಕೆ ಈ ಕ್ರೀಡೆಗೆ ಬಂದೆ ಎಂದು ಯಾವತ್ತೂ ಪಶ್ಚಾತಾಪ ಪಟ್ಟಿಲ್ಲ. ಬಹುಶಃ ನಾನು ಹಾಕಿ ಪಟುವಾಗಬೇಕು ಎನ್ನುವುದು ವಿಧಿ ಲಿಖಿತ’. ಇದು ಹಾಕಿಯೊಂದಿಗಿನ ತಮ್ಮ ನಂಟಿನ ಬಗ್ಗೆ ಶೇಷೇಗೌಡ ‘ಕನ್ನಡಪ್ರಭ’ಕ್ಕೆ ವಿವರಿಸಿದ ಬಗೆ.

ರೈಲ್ವೇಸ್‌ ಪರ ಆಡುವುದಕ್ಕೂ, ಭಾರತದ ಕ್ಯಾಂಪ್‌ನಲ್ಲಿರುವುದಕ್ಕೂ ಏನು ವ್ಯತ್ಯಾಸ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ‘ರೈಲ್ವೇಸ್‌ನಲ್ಲಿದ್ದಾಗ ನನ್ನ ಆಟ ಹೇಗಿತ್ತೋ ಈಗಲೂ ಹಾಗೇ ಇದೆ. ಆದರೆ ತಾಂತ್ರಿಕ ಸುಧಾರಣೆ ಕಂಡಿದ್ದೇನೆ. ಎಲ್ಲಕ್ಕಿಂತ ಹೆಚ್ಚಾಗಿ ನನ್ನ ಆತ್ಮವಿಶ್ವಾಸ ಹಲವು ಪಟ್ಟು ಹೆಚ್ಚಾಗಿದೆ. ಕೋಚ್‌ಗಳು, ಹಿರಿಯ ಆಟಗಾರರು ಉತ್ತಮ ಮಾರ್ಗದರ್ಶನ ನೀಡುತ್ತಿದ್ದಾರೆ’ ಎಂದರು.

ಡಯೆಟ್‌ ಬಗ್ಗೆ ಕೇಳಿದಾಗ, ‘ರೈಲ್ವೇಸ್‌ನಲ್ಲಿ ದಿನಕ್ಕೆ ಊಟದ ಖರ್ಚಿಗೆ 400-500 ರು. ನೀಡುತ್ತಾರೆ. ಅದರಲ್ಲಿ ಮೆಸ್‌ ವ್ಯವಸ್ಥೆ ಮಾಡಿಕೊಳ್ಳುತ್ತೇವೆ. ಭಾರತ ತಂಡದ ಕ್ಯಾಂಪ್‌ನಲ್ಲಿ ಅತ್ಯುತ್ತಮ ವ್ಯವಸ್ಥೆ ಇದೆ. ಎಲೈಟ್‌ ಅಥ್ಲೀಟ್‌ಗೆ ಬೇಕಿರುವ ಪೌಷ್ಟಿಕಾಂಶ ಒದಗಿಸಲಾಗುತ್ತಿದೆ’ ಎಂದರು.

ತಡವಾಗಿ ಆಯ್ಕೆ

ಶೇಷೇಗೌಡಗೆ ಈಗ 28 ವರ್ಷ. ಸಾಮಾನ್ಯವಾಗಿ 20ರಿಂದ 22-23ರ ವಯಸ್ಸಿನಲ್ಲಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದರೆ ದೀರ್ಘ ಕಾಲ ಉಳಿಯಬಹುದು. ಈ ಬಗ್ಗೆ ಪ್ರತಿಕ್ರಿಯಿಸಿದ ಶೇಷೇಗೌಡ, ‘ನನ್ನ ಆಟ ಚೆನ್ನಾಗಿದೆ, ಭಾರತ ತಂಡಕ್ಕೆ ಆಯ್ಕೆಯಾಗಬೇಕು ಎಂದು ಅನೇಕ ಹಿರಿಯ ಆಟಗಾರರು, ಕೋಚ್‌ಗಳು ಬಹಳ ವರ್ಷದಿಂದ ಅಭಿಪ್ರಾಯಿಸುತ್ತಿದ್ದರು. ಆದರೆ ಅವಕಾಶ ಒದಗಿ ಬರಲಿಲ್ಲ. ಈಗ, ಆತನಿಗೆ 28 ವರ್ಷ ವಯಸ್ಸು. ಹೆಚ್ಚೆಂದರೂ 6-7 ವರ್ಷ ಆಡಬಹುದು. ಅವರ ಬದಲಿಗೆ ಕಿರಿಯರಿಗೆ ಅವಕಾಶ ಕೊಟ್ಟರೆ ಉತ್ತಮ ಎಂದು ಚರ್ಚೆ ಆಗಿದ್ದಾಗಿ ತಿಳಿದುಬಂತು. ಆದರೂ ಕೋಚ್‌ಗಳು, ಹಾಕಿ ಇಂಡಿಯಾ ನನ್ನ ಮೇಲೆ ನಂಬಿಕೆಯಿಟ್ಟು ತಂಡದಲ್ಲಿ ಸ್ಥಾನ ನೀಡಿದ್ದು ಬಹಳ ಖುಷಿ ನೀಡಿದೆ’ ಎಂದರು.

click me!