Khelo India University Games: ಹಾಕಿಯಲ್ಲಿ ಬೆಂಗಳೂರು ಸಿಟಿ ವಿವಿ ಚಾಂಪಿಯನ್

By Kannadaprabha NewsFirst Published May 2, 2022, 9:11 AM IST
Highlights

* ಖೇಲೋ ಇಂಡಿಯಾ ವಿವಿ ಗೇಮ್ಸ್‌ನಲ್ಲಿ ಮುಂದುವರೆದ ರಾಜ್ಯದ ಆಟಗಾರರ ಪ್ರಾಬಲ್ಯ

* ಹಾಕಿ ಟೂರ್ನಿಯಲ್ಲಿ ಮತ್ತೊಮ್ಮೆ ಚಾಂಪಿಯನ್ ಪಟ್ಟ ಅಲಂಕರಿಸಿದ ಬೆಂಗಳೂರು ಸಿಟಿ ವಿವಿ

* ಅಥ್ಲೆಟಿಕ್ಸ್‌ನಲ್ಲಿ ನಿರೀಕ್ಷೆಯಂತೆಯೇ ಚಿನ್ನದ ಪದಕ ಗೆದ್ದ ರಾಜ್ಯದ ಪ್ರಿಯಾ ಮೋಹನ್

ಬೆಂಗಳೂರು(ಮೇ.02) ಅಂಡರ್‌-20 ವಿಶ್ವ ಅಥ್ಲೆಟಿಕ್ಸ್‌ನ ಪದಕ ವಿಜೇತ ಕರ್ನಾಟಕದ ಪ್ರಿಯಾ ಮೋಹನ್‌ (Priya Mohan) ನಿರೀಕ್ಷೆಯಂತೆಯೇ 2ನೇ ಆವೃತ್ತಿ ಖೇಲೋ ಇಂಡಿಯಾ ವಿವಿ ಗೇಮ್ಸ್‌ನಲ್ಲಿ (Khelo India University Games) ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. ಕಳೆದ ಆವೃತ್ತಿಯ ಹಾಕಿಯಲ್ಲಿ ಚಾಂಪಿಯನ್‌ ಪಟ್ಟ ಅಲಂಕರಿಸಿದ್ದ ಬೆಂಗಳೂರು ಸಿಟಿ ವಿವಿ 2ನೇ ಬಾರಿ ಚಿನ್ನದ ಪದಕ ಗೆದ್ದು ಸಂಭ್ರಮಿಸಿದೆ. ಇನ್ನು ಒಟ್ಟು 54 ವಿಶ್ವವಿದ್ಯಾನಿಲಯಗಳು ಕೂಟದಲ್ಲಿ ಚಿನ್ನದ ಪದಕ ಗೆದ್ದಿದ್ದು, 113 ವಿಶ್ವವಿದ್ಯಾನಿಲಯಗಳು ಪದಕಗಳ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿವೆ. ಜೈನ್‌ ವಿವಿ 28 ಪದಕದೊಂದಿಗೆ ಅಗ್ರಸ್ಥಾನದಲ್ಲೇ ಮುಂದುವರಿದಿದೆ.

ಪ್ರಿಯಾಗೆ ಚಿನ್ನ

ಆತಿಥೇಯ ಜೈನ್‌ ಕಾಲೇಜಿನ ಓಟಗಾರ್ತಿ ಪ್ರಿಯಾ ಮೋಹನ್‌ ವನಿತೆಯರ 400 ಮೀ. ಓಟದಲ್ಲಿ ಚಿನ್ನ ಗೆದ್ದು ರಾಜ್ಯಕ್ಕೆ ಕೀರ್ತಿ ತಂದರು. ಅವರು 54.43 ಸೆಕೆಂಡುಗಳಲ್ಲಿ ಗುರಿ ತಲುಪಿದರೆ, ರಾಂಚಿ ವಿವಿಯ ಬಾರ್ಲಾ ಬೆಳ್ಳಿ ಗೆದ್ದರು. ಮಂಗಳೂರು ವಿವಿಯ ಲಿಖಿತ 55.45 ಸೆಕೆಂಡುಗಳಲ್ಲಿ ಗುರಿ ತಲುಪಿ ಕಂಚು ತಮ್ಮದಾಗಿಸಿಕೊಂಡರು. ಇನ್ನು, ಪುರುಷರ 400 ಮೀ. ಸ್ಪರ್ಧೆಯಲ್ಲಿ ಮಂಗಳೂರು ವಿವಿಯ ನಿಹಾಲ್‌ ಹಾಗೂ ಮಹಾಂತೇಶ್‌ ಹೇಲವಿ ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದರು. 20 ಕಿ.ಮೀ. ರೇಸ್‌ ವಾಕ್‌ ಸ್ಪರ್ಧೆಯಲ್ಲಿ ಮಂಗಳೂರು ವಿವಿಯನ್ನು ಪ್ರತಿನಿಧಿಸಿದ್ದ ಪರಮೀತ್‌ ಬಿಸ್ಟ್‌ 1 ಗಂಟೆ, 29 ನಿ. 33.0 ಸೆಕೆಂಡುಗಳಲ್ಲಿ ಗುರಿ ತಲುಪಿ ಕಂಚಿನ ಪದಕ ಗೆದ್ದರು.

ಬೆಂಗಳೂರಿಗೆ ಹಾಕಿ ಚಾಂಪಿಯನ್‌ ಪಟ್ಟ:

ಹರೀಶ್‌ ಮುತಗಾರ್‌ ಅವರು ಗಳಿಸಿದ ಎರಡು ಗೋಲುಗಳ ನೆರವಿನಿಂದ ಅಮೃತಸರದ ಗುರುನಾನಕ್‌ ದೇವ್‌ ವಿವಿಯನ್ನು 3-0 ಗೋಲುಗಳ ಅಂತರದಲ್ಲಿ ಮಣಿಸಿ ಬೆಂಗಳೂರು ಸಿಟಿ ವಿವಿ ಎರಡನೇ ಬಾರಿಗೆ ಖೇಲೋ ಇಂಡಿಯಾ ವಿವಿ ಗೇಮ್ಸ್‌ನ ಚಿನ್ನ ಗೆದ್ದುಕೊಂಡಿದೆ. 28ನೇ ನಿಮಿಷದಲ್ಲಿ ಹರೀಶ್‌ ತಂಡದ ಪರ ಮೊದಲ ಗೋಲು ಗಳಿಸಿದರೆ, 51ನೇ ನಿಮಿಷದಲ್ಲಿ ವಸಂತ್‌ ಕುಮಾರ್‌ ಗೋಕಾವಿ ತಂಡಕ್ಕೆ 2-0 ಮುನ್ನಡೆ ನೀಡಿದರು. 60ನೇ ನಿಮಿಷದಲ್ಲಿ ಮುತಗಾರ್‌ ತಂಡದ ಮೂರನೇ ಗೋಲು ಗಳಿಸುವುದರೊಂದಿಗೆ ಬೆಂಗಳೂರು ಸಿಟಿ ಪ್ರಶಸ್ತಿ ಗೆದ್ದುಕೊಂಡಿತು.

Khelo India University Games ಅಥ್ಲೆಟಿಕ್ಸ್‌ನಲ್ಲಿ 3 ಬಂಗಾರದ ಪದಕ ಗೆದ್ದ ಮಂಗಳೂರು ವಿವಿ

ಗೇಮ್ಸ್‌ಗೆ ಮಳೆ ಅಡ್ಡಿ

ಭಾನುವಾರ ಸಂಜೆ ವೇಳೆ ಸುರಿದ ಧಾರಾಕಾರ ಮಳೆ ಕ್ರೀಡಾಕೂಟದ ವಿವಿಧ ಸ್ಪರ್ಧೆಗಳಿಗೆ ಅಡಚಣೆ ಉಂಟು ಮಾಡಿತು. ಹಲವು ಸ್ಪರ್ಧೆಗಳು ನಿರಂತರವಾಗಿ ಮುಂದೂಡಿಕೆಯಾಗಿದ್ದರಿಂದ ರಾತ್ರಿ 8.30ರ ವೇಳೆಗೆ ಮುಕ್ತಾಯಗೊಳ್ಳಬೇಕಿದ್ದ ಸ್ಪರ್ಧೆಗಳು ಒಂದೂವರೆ ಗಂಟೆ ತಡವಾಗಿ ಕೊನೆಗೊಂಡಿತು. ಕೆಲವು ಸ್ಪರ್ಧೆಗಳನ್ನು ಸೋಮವಾರಕ್ಕೆ ಮುಂಡೂಡಲಾಯಿತು.


 

click me!