Paris Olympics 2024 ಸತತ ಎರಡನೇ ಕಂಚು ಗೆಲ್ಲಲು ಭಾರತ ತಂಡ ರೆಡಿ: ಶ್ರೀಜೇಶ್‌ಗೆ ಗೆಲುವಿನ ವಿದಾಯ?

By Kannadaprabha News  |  First Published Aug 8, 2024, 3:33 PM IST

ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿಂದು ಭಾರತ ಹಾಕಿ ತಂಡವು ಕಂಚಿನ ಪದಕಕ್ಕಾಗಿ ಸ್ಪೇನ್ ಎದುರು ಕಾದಾಡಲಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ


ಪ್ಯಾರಿಸ್: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಕಂಚಿನ ಪದಕ ತನ್ನದಾಗಿಸಿಕೊಂಡಿದ್ದ ಭಾರತ ಪುರುಷರ ಹಾಕಿ ತಂಡ, ಪ್ಯಾರಿಸ್‌ನಲ್ಲಿ ಮತ್ತೊಂದು ಕಂಚಿನ ಪದಕ ಗೆಲ್ಲುವ ಕಾತರದಲ್ಲಿದೆ. ಗುರುವಾರ ಸ್ಪೇನ್ ವಿರುದ್ಧ ಭಾರತ ತಂಡ ಕಂಚಿನ ಪದಕ ಪಂದ್ಯದಲ್ಲಿ ಸೆಣಸಾಡಲಿದೆ.

ತಂಡ ಟೂರ್ನಿಯುದ್ದಕ್ಕೂ ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಗೋಲಾಗಿ ಪರಿವರ್ತಿಸುವಲ್ಲಿ ವಿಫಲವಾಗುತ್ತಿದೆ. ಈ ವರೆಗಿನ ಒಟ್ಟು 7 ಪಂದ್ಯಗಳಲ್ಲಿ ಭಾರತಕ್ಕೆ ಒಟ್ಟು 52 ಪೆನಾಲ್ಟಿ ಕಾರ್ನ‌್ರಗಳು ಸಿಕ್ಕಿದ್ದು, ಕೇವಲ 8 ಗೋಲು ದಾಖಲಾಗಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಂಡರೆ ಮಾತ್ರ ಭಾರತಕ್ಕೆ ಗೆಲುವು ಸುಲಭವಾಗಲಿದೆ. ಇನ್ನು, ಟೂರ್ನಿಯಲ್ಲಿ ಈ ವರೆಗೂ ಭಾರತ ಒಟ್ಟು 13 ಗೋಲುಗಳನ್ನು ಬಾರಿಸಿದ್ದು, ಇದರಲ್ಲಿ 8 ಹರ್ಮನ್‌ ಪ್ರೀತ್‌ರಿಂದಲೇ ದಾಖಲಾಗಿದೆ. ಹೀಗಾಗಿ, ಉಳಿದ ಆಟಗಾರರೂ  ಹೆಚ್ಚು ಜವಾಬ್ದಾರಿ ವಹಿಸಬೇಕಿದೆ. ಸ್ಪೇನ್ ವಿರುದ್ಧ ಭಾರತ ತಂಡ ಕಳೆದ 5 ಪಂದ್ಯಗಳ ಪೈಕಿ 4ರಲ್ಲಿ ಗೆದ್ದಿದೆ.

Tap to resize

Latest Videos

ವಿನೇಶ್ ಫೋಗಟ್‌ ಅನರ್ಹ: ಕೊನೆಗೂ ತುಟಿ ಬಿಚ್ಚಿದ ಐಓಸಿ ಮೆಂಬರ್ ನೀತಾ ಅಂಬಾನಿ

ಭಾರತದ ಮಹಾಗೋಡೆ ಶ್ರೀಜೇಶ್‌ಗೆ ಕೊನೆ ಪಂದ್ಯ

ಭಾನುವಾರದ ಕಂಚಿನ ಪದಕ ಪಂದ್ಯ, ಭಾರತದ ದಿಗ್ಗಜ ಗೋಲ್‌ಕೀಪರ್ ಶ್ರೀಜೇಶ್ ಪಾಲಿಗೆ ಕೊನೆ ಅಂತಾರಾಷ್ಟ್ರೀಯ ಪಂದ್ಯ. ಅವರು ಈಗಾಗಲೇ ತಮ್ಮ ನಿವೃತ್ತಿ ಘೋಷಿಸಿದ್ದು, ಕಂಚಿನ ಪದಕದ ಗೆಲುವಿನೊಂದಿಗೆ ತಮ್ಮ ಹಾಕಿ ವೃತ್ತಿ ಬದುಕಿಗೆ ತೆರೆ ಎಳೆ ಯುವ ಕಾತರದಲ್ಲಿದ್ದಾರೆ. 2006ರಲ್ಲಿ ಪಾದಾರ್ಪಣೆ ಮಾಡಿದ್ದ ಶ್ರೀಜೇಶ್ ಈ ವರೆಗೂ ಭಾರತದ ಪರ 330ಕ್ಕೂ ಹೆಚ್ಚು ಪಂದ್ಯಗಳನ್ನಾಡಿದ್ದಾರೆ.

ಮೀರಾಬಾಯಿ ಚಾನುಗೆ 4ನೇ ಸ್ಥಾನ!

ಪ್ಯಾರಿಸ್: 2024ರ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ಪದಕ ಕೈತಪ್ಪಿದೆ. ಮಹಿಳೆಯರ ವೇಟ್‌ಲಿಫ್ಟಿಂಗ್ 49 ಕೆ.ಜಿ. ವಿಭಾಗದಲ್ಲಿ ಮೀರಾಬಾಯಿ ಚಾನು 4ನೇ ಸ್ಥಾನ ಪಡೆದು ನಿರಾಸೆ ಅನುಭವಿಸಿದ್ದಾರೆ. ಆ ಮೂಲಕ ಸತತ 2ನೇ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಚಾನು ಕನಸು ನುಚ್ಚು ನೂರಾಯಿತು. ಬುಧವಾರ ಮಧ್ಯರಾತ್ರಿ ನಡೆದ ಸ್ಪರ್ಧೆ ಯಲ್ಲಿ ಮೀರಾಬಾಯಿ, ಸ್ಟ್ಯಾಚ್‌ನಲ್ಲಿ 88 ಕೆ.ಜಿ. ಹಾಗೂ ಕ್ಲೀನ್ ಅಂಡ್ ಜರ್ಕ್‌ನಲ್ಲಿ 111 ಕೆ.ಜಿ. ಸೇರಿ ಒಟ್ಟು 199 ಕೆ.ಜಿ. ಭಾರ ಎತ್ತಿದರು. ಇದರೊಂದಿಗೆ 4ನೇ ಸ್ಥಾನ ಪಡೆದರು.

ಸ್ಟ್ಯಾಚ್‌ನ ಮೊದಲ ಯತ್ನದಲ್ಲಿ 85 ಕೆ.ಜಿ. ಭಾರವನ್ನು ಸಲೀಸಾಗಿ ಎತ್ತಿದ ಚಾನು, 2ನೇ ಯತ್ನದಲ್ಲಿ 88 ಕೆ.ಜಿ.ಯನ್ನು ಎತ್ತಲು ವಿಫಲರಾದರು. ಆದರೆ 3ನೇ ಯತ್ನದಲ್ಲಿ 88 ಕೆ.ಜಿ.ಯನ್ನು ಸುಲಭವಾಗಿ ಎತ್ತಿ, ಅಗ್ರ-3ರಲ್ಲಿ ಉಳಿದುಕೊಂಡರು. ಸ್ಟ್ಯಾಚ್‌ನಲ್ಲಿ ರೊಮೇನಿಯಾದ ವ್ಯಾಲೆಂಟೀನಾ 93 ಕೆ.ಜಿ. ಭಾರ ಎತ್ತಿದರೆ, ಚೀನಾದ ಝೀಹುಯಿ ಹೊ 89 ಕೆ.ಜಿ. ಎತ್ತಿ 2ನೇ ಸ್ಥಾನದಲ್ಲಿದ್ದರು.

ಒಲಿಂಪಿಕ್ ಪದಕ ಗೆದ್ದು ಬಂದ ಮನು ಭಾಕರ್ ಮೊದಲು ಭೇಟಿಯಾಗಿದ್ದು ಸೋನಿಯಾ ಗಾಂಧಿಯನ್ನ..!

ಕ್ಲೀನ್ ಅಂಡ್ ಜರ್ಕ್‌ ಮೊದಲ ಯತ್ನ ದಲ್ಲಿ 111 ಕೆ.ಜಿ. ಭಾರ ಎತ್ತುವುದಾಗಿ ನೋಂದಾಯಿಸಿದ್ದ ಚಾನು, ವಿಫಲರಾದರು. ಆದರೆ, 2ನೇ ಯತ್ನದಲ್ಲಿ 111 ಕೆ.ಜಿ.ಯನ್ನು ಯಶಸ್ವಿಯಾಗಿ ಎತ್ತಿ ಮೊದಲ ಸ್ಥಾನ ತಲುಪಿದರು. ತಮ್ಮ ಪ್ರತಿಸ್ಪರ್ಧಿಗಳು ಹೆಚ್ಚು ಭಾರ ಎತ್ತಿದ ಕಾರಣ, ಚಾನು 3ನೇ ಯತ್ನದಲ್ಲಿ 114 ಕೆ.ಜಿ. ಭಾರ ಎತ್ತಬೇಕಾದ ಅನಿವಾರ್ಯತೆಗೆ ಸಿಲುಕಿದರು. ಆದರೆ ಅವರಿಂದ ಸಾಧ್ಯವಾಗಲಿಲ್ಲ.

ಕ್ಲೀನ್ ಅಂಡ್ ಜರ್ಕ್‌ನಲ್ಲಿ ಒಲಿಂಪಿಕ್‌ ದಾಖಲೆಯ 117 ಕೆ.ಜಿ. ಸೇರಿ ಒಟ್ಟು 206 ಕೆ.ಜಿ. ಭಾರ ಎತ್ತಿದ ಚೀನಾದ ಝೀಹುಯಿ ಚಿನ್ನದ ಪದಕ ಗೆದ್ದರೆ, ರೊಮೇನಿಯಾದ ವ್ಯಾಲಂಟೀನಾ ಕ್ಲೀನ್ ಅಂಡ್ ಜರ್ಕ್‌ನಲ್ಲಿ 112 ಕೆ.ಜಿ. ಭಾರ ಎತ್ತುವ ಮೂಲಕ ಒಟ್ಟು 205 ಕೆ.ಜಿ.ಯೊಂದಿಗೆ ಬೆಳ್ಳಿ ಪಡೆದರು. ಥಾಯ್ಲೆಂಡ್‌ನ ಸುರೋದ್ದನಾ ಖಾಂಬಾವೊ (88 ಕೆ.ಜಿ.+ 112 ಕೆ.ಜಿ) ಒಟ್ಟು 200 ಕೆ.ಜಿ. ಭಾರ ಎತ್ತಿ ಕಂಚು ಗಳಿಸಿದರು.
 

click me!