Asian Champions Trophy Hockey 2021 : ಸೆಮಿಫೈನಲ್ ನಲ್ಲಿ ಭಾರತ ತಂಡಕ್ಕೆ ಸೋಲು

By Suvarna News  |  First Published Dec 21, 2021, 8:33 PM IST

ಜಪಾನ್ ವಿರುದ್ಧ ಸೋಲು ಕಂಡ ಭಾರತ
ಮೂರನೇ ಸ್ಥಾನಕ್ಕಾಗಿ ಪಾಕಿಸ್ತಾನ ವಿರುದ್ಧ ಹೋರಾಟ
ದಕ್ಷಿಣ ಕೊರಿಯಾ-ಜಪಾನ್ ನಡುವೆ ಫೈನಲ್ ಮುಖಾಮುಖಿ


ಢಾಕಾ (ಡಿ. 21): ಹಾಲಿ ಚಾಂಪಿಯನ್ (Defending Champion)ಹಾಗೂ ಒಲಿಂಪಿಕ್ ಕಂಚಿನ ಪದಕ ವಿಜೇತ (Olympic bronze medallist) ಭಾರತ (India ) ತಂಡ ಪುರುಷರ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯ (Asian Champions Trophy men's hockey tournament) ಸೆಮಿಫೈನಲ್ ಕದನದಲ್ಲಿ ಜಪಾನ್ (Japan)ವಿರುದ್ಧ ಆಘಾತಕಾರಿ ಸೋಲು ಕಂಡಿದೆ. ಮಂಗಳವಾರ ನಡೆದ ಟೂರ್ನಿಯ 2ನೇ ಸೆಮಿಫೈನಲ್ ಪಂದ್ಯದಲ್ಲಿ ಟ್ರೋಫಿಯ ಫೇವರಿಟ್ ಎನಿಸಿದ್ದ ಭಾರತ ತಂಡ 3-5 ಗೋಲುಗಳಿಂದ ಜಪಾನ್ ತಂಡಕ್ಕೆ ಶರಣಾಯಿತು. ಜಪಾನ್ ವಿರುದ್ಧದ ಮುಖಾಮುಖಿಗಳಲ್ಲಿ ಹಾಗೂ ಇದೇ ಟೂರ್ನಿಯ ಕೊನೆಯ ರೌಂಡ್ ರಾಬಿನ್ ಪಂದ್ಯದಲ್ಲಿ ಜಪಾನ್ ತಂಡವನ್ನು 6-0 ಅಂತರದಲ್ಲಿ ಮಣಿಸಿದ್ದ ಭಾರತ ತಂಡ ಪಂದ್ಯ ಗೆಲ್ಲುವ ಫೇವರಿಟ್ ಆಗಿತ್ತಾದರೂ ಸೋಲು ಕಂಡು ನಿರಾಸೆ ಎದುರಿಸಿತು. 

ಮೌಲಾನಾ ಭಶಾನಿ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಜಪಾನ್ ತಂಡ ಸಂಪೂರ್ಣವಾಗಿ ವಿಭಿನ್ನವಾಗಿ ಕಂಡಿತು. ಕೊನೆಯ ಲೀಗ್ ಪಂದ್ಯದಲ್ಲಿ ಭಾರತ ವಿರುದ್ಧ ಹೀನಾಯ ಸೋಲು ಕಂಡಿದ್ದ ದ್ವೀಪರಾಷ್ಟ್ರ ಈ ಬಾರಿ ಆರಂಭದಿಂದಲೇ ಮನ್ ಪ್ರೀತ್ ಸಿಂಗ್ (Manpreet Singh) ನೇತೃತ್ವದ ಭಾರತ ತಂಡದ ಮೇಲೆ ಮೇಲುಗೈ ಸಾಧಿಸಿತು. ಚೆಂಡಿನ ಮೇಲೆ ಸ್ವಾಧೀನ ಸಾಧಿಸುವ ಯತ್ನದಲ್ಲಿ ಪ್ರತಿಬಾರಿಯೂ ಯಶ ಕಾಣುತ್ತಿದ್ದ ಜಪಾನ್, ಮೊದಲ ಅವಧಿಯ 15 ನಿಮಿಷದ ಆಟದಲ್ಲಿಯೇ ಮೂರು ಗೋಲು ಬಾರಿಸಿ ಅಬ್ಬರಿಸಿತ್ತು. ಆ ನಂತರ 3 ಹಾಗೂ 4ನೇ ಅವಧಿಯ ಆಟದಲ್ಲಿ ತಲಾ ಒಂದೊಂದು ಗೋಲು ಸಿಡಿಸಿ ಪಂದ್ಯದ ಮೇಲೆ ಪಾರಮ್ಯ ಸಾಧಿಸಿತು.

ಜಪಾನ್ ಪರವಾಗಿ ಶೊಟಾ ಯಮಡಾ (1ನೇ ನಿಮಿಷ, ಪೆನಾಲ್ಟಿ), ರೈಕಿ ಫುಜಿಶಿಮಾ (2ನೇ ನಿಮಿಷ), ಯೊಶಿಕಿ ಕ್ರಿಶಿತಾ (14ನೇ ನಿಮಿಷ), ಕೊಸಾಯಿ ಕ್ವಾಬೆ (35ನೇ ನಿಮಿಷ) ಹಾಗೂ ರಯೋಮಾ ಓಕಾ (41ನೇ ನಿಮಿಷ) ಗೋಲು ಸಿಡಿಸಿದರೆ, ಭಾರತ ತಂಡದ ಪರವಾಗಿ ದಿಲ್ ಪ್ರೀತ್ ಸಿಂಗ್ (17ನೇ ನಿಮಿಷ) (Dilpreet Singh), ಉಪನಾಯಕ ಹರ್ಮಾನ್ ಪ್ರೀತ್ ಸಿಂಗ್ (43ನೇ ನಿಮಿಷ) (Harmanpreet Singh) ಹಾಗೂ ಹಾರ್ದಿಕ್ ಸಿಂಗ್ (58ನೇ ನಿಮಿಷ)  (Hardik Singh) ಗೋಲು ಸಿಡಿಸಿದರು.

Asian Champions Trophy 2021: ಸೆಮೀಸ್‌ನಲ್ಲಿಂದು ಭಾರತ-ಜಪಾನ್ ಫೈಟ್
ಭಾರತ ಹಾಗೂ ಜಪಾನ್ ತಂಡಗಳು ಈ ಪಂದ್ಯಕ್ಕೂ ಮುನ್ನ 18 ಬಾರಿ ಮುಖಾಮುಖಿಯಾಗಿದ್ದವು. ಇದರಲ್ಲಿ ಭಾರತ 16 ಪಂದ್ಯಗಳಲ್ಲಿ ಜಯ ಸಾಧಿಸಿದ್ದರೆ, ಜಪಾನ್ ಕೇವಲ 1 ಪಂದ್ಯದಲ್ಲಿ ಗೆದ್ದಿತ್ತು. ಇನ್ನೊಂದು ಪಂದ್ಯ ಡ್ರಾದಲ್ಲಿ ಕೊನೆಗೊಂಡಿತ್ತು.

Asian Champions Trophy 2021: ಜಪಾನ್ ಮಣಿಸಿ ಅಜೇಯವಾಗಿ ಸೆಮೀಸ್‌ಗೆ ಲಗ್ಗೆಯಿಟ್ಟ ಭಾರತ ಹಾಕಿ ತಂಡ
2011 ರಿಂದ ನಡೆಯುತ್ತಿರುವ ಪುರುಷರ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿಯಲ್ಲಿ ಈವರೆಗೂ ಐದು ಆವೃತ್ತಿಗಳು ನಡೆದಿದ್ದು ಭಾರತ ಹಾಗೂ ಪಾಕಿಸ್ತಾನ ತಂಡಗಳು ತಲಾ 3 ಬಾರಿ ಚಾಂಪಿಯನ್ ಆಗಿವೆ. 2011ರಲ್ಲಿ ಭಾರತ  ಚಾಂಪಿಯನ್ ಆಗಿದ್ದರೆ, 2012 ಹಾಗೂ 2013ರಲ್ಲಿ ಪಾಕಿಸ್ತಾನ ಚಾಂಪಿಯನ್ ಆಗಿತ್ತು. 2016ರಲ್ಲಿ ಭಾರತ ಟ್ರೋಫಿ ಜಯಿಸಿದ್ದರೆ, 2018ರಲ್ಲಿ ಭಾರತ-ಪಾಕ್ ಜಂಟಿ ಚಾಂಪಿಯನ್ ಆಗಿದ್ದವು.

ಕಂಚಿನ ಪದಕಕ್ಕೆ ಭಾರತ-ಪಾಕ್ ಹೋರಾಟ!
ಜಪಾನ್ ವಿರುದ್ಧದ ಸೋಲಿನ ನಿರಾಸೆಯ ನಡುವೆಯೂ ಭಾರತ ತಂಡ ಕನಿಷ್ಠ ಕಂಚಿನ ಪದಕ ಜಯಿಸುವ ನಿಟ್ಟಿನಲ್ಲಿ ಪಾಕಿಸ್ತಾನ (Pakistan ) ತಂಡವನ್ನು ಎದುರಿಸಲಿದೆ. ದಿನದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಸೋಲು ಕಂಡ ಪಾಕಿಸ್ತಾನ ಹಾಗೂ ಭಾರತ ಕಂಚಿನ ಪದಕಕ್ಕಾಗಿ ಬುಧವಾರ ಮುಖಾಮುಖಿಯಾಗಲಿವೆ. ಆಡಿದ ಎಲ್ಲಾ ಪಂದ್ಯಗಳನ್ನು ಗೆದ್ದು ಗುಂಪಿನ ಅಗ್ರಸ್ಥಾನಿಯಾಗಿ ಸೆಮಿಫೈನಲ್ ಹಂತಕ್ಕೇರಿದ್ದ ಭಾರತ, ಸೆಮಿಫೈನಲ್ ನಲ್ಲಿ ಮಾಡಿದ ತಪ್ಪಿನಿಂದ ಕಂಚಿನ ಪದಕದ ಹೋರಾಟಕ್ಕೆ ಬಂದು ನಿಂತಿದೆ. ದಿನದ ಮೊದಲ ಸೆಮಿಫೈನಲ್ ನಲ್ಲಿ ದಕ್ಷಿಣ ಕೊರಿಯಾ (South Korea) ತಂಡ 6-5 ಗೋಲುಗಳಿಂದ ಪಾಕಿಸ್ತಾನ ತಂಡವನ್ನು ಸೋಲಿಸಿತು.

click me!