Asian Champions Trophy 2021: ಜಪಾನ್ ಮಣಿಸಿ ಅಜೇಯವಾಗಿ ಸೆಮೀಸ್‌ಗೆ ಲಗ್ಗೆಯಿಟ್ಟ ಭಾರತ ಹಾಕಿ ತಂಡ

Suvarna News   | Asianet News
Published : Dec 20, 2021, 09:42 AM IST
Asian Champions Trophy 2021: ಜಪಾನ್ ಮಣಿಸಿ ಅಜೇಯವಾಗಿ ಸೆಮೀಸ್‌ಗೆ ಲಗ್ಗೆಯಿಟ್ಟ ಭಾರತ ಹಾಕಿ ತಂಡ

ಸಾರಾಂಶ

* ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಹಾಕಿ ಟೂರ್ನಿಯಲ್ಲಿ ಭಾರತ ಮಿಂಚಿನ ಪ್ರದರ್ಶನ * ಗ್ರೂಪ್ ಹಂತದಲ್ಲಿ ಒಂದೂ ಸೋಲು ಕಾಣದೇ ಸೆಮೀಸ್‌ಗೆ ಲಗ್ಗೆ * ಜಪಾನ್ ವಿರುದ್ದ ಭರ್ಜರಿ ಗೆಲುವು ಸಾಧಿಸಿದ ಹಾಕಿ ಇಂಡಿಯಾ

ಢಾಕಾ(ಡಿ.20): ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಹಾಕಿ (Asian Champions Trophy Hockey) ಟೂರ್ನಿಯಲ್ಲಿ ತನ್ನ ಪಾರಮ್ಯ ಮುಂದುವರೆಸಿರುವ ಹಾಲಿ ಚಾಂಪಿಯನ್‌ ಭಾರತ (Indian Hockey Team), ಭಾನುವಾರ ನಡೆದ ರೌಂಡ್‌ ರಾಬಿನ್‌ ಹಂತದ ಕೊನೆಯ ಪಂದ್ಯದಲ್ಲಿ 6-0 ಗೋಲುಗಳಿಂದ ಜಪಾನ್‌ (Japan) ತಂಡವನ್ನು ಮಣಿಸಿತು. ಇದರೊಂದಿಗೆ ಹ್ಯಾಟ್ರಿಕ್‌ ಜಯ ಸಾಧಿಸಿದ ಭಾರತ ಅಜೇಯವಾಗಿಯೇ ಸೆಮಿಫೈನಲ್‌ ಪ್ರವೇಶಿಸಿತು. ದಕ್ಷಿಣ ಕೊರಿಯಾ ವಿರುದ್ಧದ ಮೊದಲ ಪಂದ್ಯ ಡ್ರಾ ಆಗಿದ್ದರೂ, ಬಳಿಕ ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ವಿರುದ್ಧ ಭರ್ಜರಿ ಗೆಲುವು ಸಾಧಿಸಿತ್ತು.

ಪಂದ್ಯದುದ್ದಕ್ಕೂ ಪ್ರಾಬಲ್ಯ ಸಾಧಿಸಿದ ಭಾರತದ ಪರ ಹರ್ಮನ್‌ಪ್ರೀತ್‌ ಕೌರ್‌ 10ನೇ ನಿಮಿಷದಲ್ಲಿ ಗೋಲು ಬಾರಿಸಿ ಮುನ್ನಡೆ ಒದಗಿಸಿದರು. ಬಳಿಕ ದಿಲ್‌ಪ್ರೀತ್‌ ಸಿಂಗ್‌ (23ನೇ ನಿ.), ಜರಮನ್‌ಪ್ರೀತ್‌ ಸಿಂಗ್‌(43ನೇ ನಿ.), ಸುಮಿತ್‌(46ನೇ ನಿ.) ಗೋಲು ಹೊಡೆದರೆ, ಹರ್ಮನ್‌ಪ್ರೀತ್‌ 53ನೇ ನಿಮಿಷದಲ್ಲಿ 2ನೇ ಗೋಲು ಬಾರಿಸಿ 5-0 ಮುನ್ನಡೆ ಸಾಧಿಸಲು ನೆರವಾದರು. ಮುಂದಿನ ನಿಮಿಷದಲ್ಲಿ ಶಂಶೇರ್‌ ಸಿಂಗ್‌ ಗೋಲು ಹೊಡೆದು ಗೆಲುವಿನ ಅಂತರವನ್ನು ಮತ್ತಷ್ಟು ಹೆಚ್ಚಿಸಿದರು. ಭಾರತ ಆಡಿದ 4 ಪಂದ್ಯಗಳಲ್ಲಿ 10 ಅಂಕ ಗಳಿಸಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಸೆಮೀಸ್‌ನಲ್ಲಿ ಜಪಾನ್‌ ಸವಾಲು: ಭಾರತ ತಂಡ ಡಿ.21ರಂದು ನಡೆಯಲಿರುವ ಸೆಮಿಫೈನಲ್‌ನಲ್ಲಿ ಜಪಾನ್‌ ವಿರುದ್ಧ ಸೆಣಸಾಡಲಿದೆ. 4 ಪಂದ್ಯಗಳಲ್ಲಿ ಕೇವಲ 1ರಲ್ಲಿ ಗೆದ್ದಿರುವ ಜಪಾನ್‌, 5 ಅಂಕದೊಂದಿಗೆ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಮತ್ತೊಂದು ಸೆಮೀಸ್‌ನಲ್ಲಿ ದ.ಕೊರಿಯಾ ಹಾಗೂ ಪಾಕಿಸ್ತಾನ ಮುಖಾಮುಖಿಯಾಗಲಿವೆ.

ರಾಷ್ಟ್ರೀಯ ಹಾಕಿ: ಸೆಮೀಸ್‌ನಲ್ಲಿ ರಾಜ್ಯಕ್ಕೆ ಇಂದು ಯುಪಿ ಸವಾಲು

ಪುಣೆ: 11ನೇ ರಾಷ್ಟ್ರೀಯ ಪುರುಷರ ಹಾಕಿ ಚಾಂಪಿಯನ್‌ಶಿಪ್‌ ಸೆಮಿಫೈನಲ್‌ಗೆ ವೇದಿಕೆ ಸಜ್ಜುಗೊಂಡಿದ್ದು, ಸೋಮವಾರ ಮೊದಲ ಸೆಮೀಸ್‌ನಲ್ಲಿ ಕರ್ನಾಟಕ ತಂಡ (Karnataka Hockey Team) ಉತ್ತರ ಪ್ರದೇಶ ವಿರುದ್ಧ ಸೆಣಸಾಡಲಿದೆ. ಗುಂಪು ಹಂತದಲ್ಲಿ ಎಲ್ಲಾ 3 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದ ರಾಜ್ಯ ತಂಡ ‘ಸಿ’ ಗುಂಪಿನಲ್ಲಿ ಅಗ್ರಸ್ಥಾನಿಯಾಗಿಯೇ ಅಂತಿಮ 8ರ ಘಟ್ಟಪ್ರವೇಶಿಸಿತ್ತು. ಬಳಿಕ ಕ್ವಾರ್ಟರ್‌ನಲ್ಲಿ ಬೆಂಗಾಲ್‌ ವಿರುದ್ಧ 3-2 ಗೋಲುಗಳಿಂದ ಜಯಗಳಿಸಿತ್ತು. 

Asian Champions Trophy 2021: ಪಾಕ್‌ ಬಗ್ಗುಬಡಿದು ಭಾರತ ಹಾಕಿ ತಂಡ ಸೆಮೀಸ್‌ಗೆ ಲಗ್ಗೆ

ಟೂರ್ನಿಯಲ್ಲಿ ರಾಜ್ಯ ತಂಡ ಒಟ್ಟು 35 ಗೋಲುಗಳನ್ನು ಗಳಿಸಿದ್ದು, 2ನೇ ಅತೀ ಹೆಚ್ಚು ಗೋಲು ಬಾರಿಸಿದ ತಂಡ ಎನಿಸಿಕೊಂಡಿದೆ. ಇನ್ನು, ಉ.ಪ್ರದೇಶ ಕೂಡಾ ಗುಂಪು ಹಂತದಲ್ಲಿ ಎಲ್ಲಾ ಪಂದ್ಯಗಳಲ್ಲಿ ಗೆದ್ದಿದ್ದು, ಕ್ವಾರ್ಟರ್‌ನಲ್ಲಿ ಹರ್ಯಾಣ ವಿರುದ್ಧ ಗೆಲವು ಸಾಧಿಸಿತ್ತು. ಸೋಮವಾರ ಮತ್ತೊಂದು ಸೆಮೀಸ್‌ನಲ್ಲಿ ಪಂಜಾಬ್‌ ಮತ್ತು ಮಹಾರಾಷ್ಟ್ರ ಮುಖಾಮುಖಿಯಾಗಲಿವೆ.

ವಿಶ್ವ ಈಜು: ರಾಜ್ಯದ ಶ್ರೀಹರಿಗೆ 26ನೇ ಸ್ಥಾನ ನಟರಾಜ್‌ ಹೊಸ ದಾಖಲೆ

ಅಬುಧಾಬಿ: ಭಾರತದ ತಾರಾ ಈಜು ಪಟು, ಕರ್ನಾಟಕದ ಶ್ರೀಹರಿ ನಟರಾಜ್‌ (Srihari Nataraj), ಇಲ್ಲಿ ನಡೆಯುತ್ತಿರುವ ವಿಶ್ವ ಈಜು ಚಾಂಪಿಯನ್‌ಶಿಪ್‌ (ಶಾರ್ಟ್‌ ಕೋರ್ಸ್‌)ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಶನಿವಾರ ನಡೆದ ಪುರುಷರ 50 ಮೀ. ಬ್ಯಾಕ್‌ಸ್ಟ್ರೋಕ್  ಸ್ಪರ್ಧೆಯಲ್ಲಿ ಶ್ರೀಹರಿ 24.40 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು. 

ಒಟ್ಟಾರೆ 26ನೇ ಸ್ಥಾನಕ್ಕೆ ತೃಪ್ತಿಪಟ್ಟ ಅವರು ಸೆಮಿಫೈನಲ್‌ ಪ್ರವೇಶಿಸುವಲ್ಲಿ ವಿಫಲರಾದರು. ಆದರೆ ಈ ವಿಭಾಗದಲ್ಲಿ ಭಾರತೀಯ ಈಜುಪಟುವಿನ ಶ್ರೇಷ್ಠ ಪ್ರದರ್ಶನ ದಾಖಲೆಯನ್ನು ಬರೆದರು. ಚಾಂಪಿಯನ್‌ಶಿಪ್‌ನ ಮೊದಲ ದಿನ ಶ್ರೀಹರಿ 100 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ 52.81 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ್ದರು.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಜೋಹರ್‌ ಕಪ್: ಹಾಕಿ ಪಂದ್ಯದಲ್ಲಿ ಭಾರತ-ಪಾಕ್‌ ಹ್ಯಾಂಡ್‌ಶೇಕ್‌!
ಕ್ರಿಕೆಟ್ ಆಯ್ತು, ಈಗ ಭಾರತ-ಪಾಕ್ ಹಾಕಿಯಲ್ಲೂ ನೋ ಹ್ಯಾಂಡ್ ಶೇಕ್ ?