ಮಾರ್ಚ್ 18ಕ್ಕೆ ಆರಂಭಗೊಳ್ಳಲಿದೆ 23ನೇ ಆವೃತ್ತಿಯ ‘ಹಾಕಿ ನಮ್ಮೆ’ ಟೂರ್ನಿ
300ಕ್ಕೂ ಅಧಿಕ ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ
ಹಾಕಿ ನಮ್ಮೆ ಟೂರ್ನಿಗೆ ಮಡಿಕೇರಿಯ ನಾಪೋಕ್ಲು ಆತಿಥ್ಯ
- ಸ್ಪಂದನ್ ಕಣಿಯಾರ್, ಕನ್ನಡಪ್ರಭ
ಬೆಂಗಳೂರು(ಮಾ.06): ವಿಶ್ವದ ಅತಿದೊಡ್ಡ ಕ್ರೀಡಾಕೂಟಗಳಲ್ಲಿ ಒಂದೆನಿಸಿರುವ ‘ಕೊಡವ ಕಪ್ ಹಾಕಿ’ ಪಂದ್ಯಾವಳಿ ನಾಲ್ಕು ವರ್ಷಗಳ ಬಳಿಕ ಮತ್ತೆ ಆರಂಭಗೊಳ್ಳಲು ವೇದಿಕೆ ಸಜ್ಜಾಗಿದೆ. ಕೊಡಿಗಿನಲ್ಲಿ ಭೂ ಕುಸಿತ, ಆ ಬಳಿಕ ಕೋವಿಡ್‌ನಿಂದಾಗಿ 2018ರ ಬಳಿಕ ಪಂದ್ಯಾವಳಿ ನಡೆದಿರಲಿಲ್ಲ. 23ನೇ ಆವೃತ್ತಿಯ ‘ಹಾಕಿ ನಮ್ಮೆ’ ಟೂರ್ನಿಯು ಮಾರ್ಚ್ 18ಕ್ಕೆ ಆರಂಭಗೊಳ್ಳಲಿದ್ದು, ಏಪ್ರಿಲ್ 9ರ ವರೆಗೂ ನಡೆಯಲಿದೆ ಎಂದು ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಬೋಪಣ್ಣ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.
undefined
ಮಡಿಕೇರಿಯ ನಾಪೋಕ್ಲುನಲ್ಲಿರುವ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿರುವ ಮೂರು ಮೈದಾನಗಳಲ್ಲಿ ಪಂದ್ಯಾವಳಿ ನಡೆಯಲಿದ್ದು, ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. 2018ರ ಟೂರ್ನಿಯಲ್ಲಿ 333 ಕೊಡವ ಕುಟುಂಬಗಳು ಪಾಲ್ಗೊಂಡಿದ್ದವು. ಈ ಬಾರಿಯೂ 300ಕ್ಕೂ ಹೆಚ್ಚು ತಂಡಗಳು ಸ್ಪರ್ಧಿಸುವ ನಿರೀಕ್ಷೆ ಇದೆ. ‘ಈಗಾಗಲೇ 250ಕ್ಕೂ ಹೆಚ್ಚು ಕುಟುಂಬಗಳು ನೋಂದಣಿ ಮಾಡಿಕೊಂಡಿವೆ. ಮತ್ತಷ್ಟುಕುಟುಂಬಗಳು ಸೇರ್ಪಡೆಗೊಳ್ಳುವ ನಿರೀಕ್ಷೆ ಇದ್ದು, ಕಳೆದ ಆವೃತ್ತಿಯ ಸಂಖ್ಯೆ ದಾಟಲಿದೆ ಎನ್ನುವ ವಿಶ್ವಾಸವಿದೆ’ ಎಂದು ಬೋಪಣ್ಣ ಹೇಳಿದರು. ಟೂರ್ನಿಯು 4 ವರ್ಷಗಳ ಬಳಿಕ ನಡೆಯಲಿರುವ ಕಾರಣ, ಇದರ ಪೂರ್ವ ಸಿದ್ಧತೆಗಾಗಿ ತಲಾ 5 ಆಟಗಾರರ ಟೂರ್ನಿಯೊಂದನ್ನು ಇತ್ತೀಚೆಗೆ ನಡೆಸಲಾಗಿತ್ತು. ಆ ಟೂರ್ನಿಯಲ್ಲಿ 114 ತಂಡಗಳು ಪಾಲ್ಗೊಂಡಿದ್ದವು.
ಹೈದ್ರಾಬಾದಲ್ಲಿ ವಿದಾಯದ ಪಂದ್ಯವಾಡಿದ ಸಾನಿಯಾ ಮಿರ್ಜಾ..! ತವರಿನಲ್ಲಿ ವೃತ್ತಿಬದುಕಿಗೆ ಅಧಿಕೃತ ತೆರೆ
ಈ ಬಾರಿ ಚಾಂಪಿಯನ್ ಆಗುವ ತಂಡಕ್ಕೆ 3 ಲಕ್ಷ ರು., ರನ್ನರ್-ಅಪ್ ತಂಡಕ್ಕೆ 2 ಲಕ್ಷ ರು. ಬಹುಮಾನ ನಿಗದಿಪಡಿಸಲಾಗಿದೆ. ಇದರ ಜೊತೆಗೆ ಟೂರ್ನಿಯ ಶ್ರೇಷ್ಠ ಆಟಗಾರ ಸೇರಿ ವಿವಿಧ ವಿಭಾಗಗಳಲ್ಲಿ ವೈಯಕ್ತಿಕ ಬಹುಮಾನಗಳೂ ಇರಲಿವೆ ಎಂದು ಬೋಪಣ್ಣ ಮಾಹಿತಿ ನೀಡಿದರು.
35 ಲಕ್ಷ ರುಪಾಯಿ ವೆಚ್ಚದಲ್ಲಿ ಗ್ಯಾಲರಿ ನಿರ್ಮಾಣ
ಈ ಬಾರಿ ಪಂದ್ಯಾವಳಿಯನ್ನು ಅಪ್ಪಚೆಟ್ಟೋಳಂಡ ಕುಟುಂಬ ಆಯೋಜಿಸುತ್ತಿದೆ. ಕ್ರೀಡಾಂಗಣದಲ್ಲಿ ಸುಮಾರು 25000 ಆಸನ ಸಾಮರ್ಥ್ಯವುಳ್ಳ ಗ್ಯಾಲರಿಯನ್ನು 35 ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ ಎಂದು ತಿಳಿದುಬಂದಿದೆ. ಪಂದ್ಯಾವಳಿಗೆ ಅಂದಾಜು 1.5-2 ಕೋಟಿ ರು. ಖರ್ಚಾಗಲಿದ್ದು, ರಾಜ್ಯ ಸರ್ಕಾರ 1 ಕೋಟಿ ರು. ಅನುದಾನ ನೀಡುವುದಾಗಿ ಭರವಸೆ ನೀಡಿದೆ. ಇನ್ನುಳಿದ ಹಣವನ್ನು ಆಯೋಜನೆ ವಹಿಸಿಕೊಂಡಿರುವ ಕುಟುಂಬ ಸದಸ್ಯರು ಹಾಗೂ ಕೆಲ ಪ್ರಾಯೋಜಕರ ಮೂಲಕ ಹೊಂದಿಸಲಾಗುತ್ತಿದೆ. ಒಟ್ಟು 4500ಕ್ಕೂ ಅಧಿಕ ಆಟಗಾರರು ಪಾಲ್ಗೊಳ್ಳುವ ನಿರೀಕ್ಷೆ ಇದೆ.
2 ಪ್ರದರ್ಶನ ಪಂದ್ಯ
ಈ ಬಾರಿಯೂ ಎರಡು ಪ್ರದರ್ಶನ ಪಂದ್ಯ ನಡೆಸಲಾಗುತ್ತಿದೆ. ಮೊದಲ ಪಂದ್ಯದಲ್ಲಿ ರಾಷ್ಟ್ರೀಯ ಕಿರಿಯರ ತಂಡ-ಕರ್ನಾಟಕ ಇಲೆವೆನ್ ತಂಡಗಳು ಸೆಣಸಲಿದ್ದು, ಮತ್ತೊಂದು ಪಂದ್ಯದಲ್ಲಿ ಕೊಡಗು ರಿಜಿಮೆಂಟ್-ಕೊಡಗು ಇಲೆವೆನ್ ತಂಡಗಳು ಆಡಲಿವೆ.
ಟೂರ್ನಿಯ ಇತಿಹಾಸ
ಕೊಡಗಿನ ಕುಟುಂಬಗಳನ್ನು ಒಟ್ಟುಗೂಡಿಸುವ ಸಲುವಾಗಿ ಹಾಲಿ ಅಧ್ಯಕ್ಷ ಬೋಪಣ್ಣ ಅವರ ತಂದೆ ಪಾಂಡಂಡ ಕುಟ್ಟಪ್ಪ ಅವರು 1997ರಲ್ಲಿ ‘ಕೊಡವಾ ಹಾಕಿ ಕಪ್’ ಎನ್ನುವ ಪಂದ್ಯಾವಳಿ ಆಯೋಜಿಸಿದರು. ಈ ಟೂರ್ನಿಗೆ ವರ್ಷದಿಂದ ವರ್ಷಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಪಾಲ್ಗೊಳ್ಳುವ ತಂಡಗಳ ಸಂಖ್ಯೆಯೂ ಹೆಚ್ಚುತ್ತಲೇ ಬಂದಿದೆ.
ಕೊಡವಾ ಕಪ್ ಹಾಕಿ ಒಂದು ಪ್ರತಿಷ್ಠಿತ ಟೂರ್ನಿಯಾಗಿದ್ದು, ನಾಲ್ಕು ವರ್ಷಗಳ ಬಳಿಕ ಮತ್ತೆ ಶುರುವಾಗುತ್ತಿರುವುದು ಜಿಲ್ಲೆಯ ಎಲ್ಲರಲ್ಲೂ ಉತ್ಸಾಹ ಹೆಚ್ಚಿಸಿದೆ. ಪ್ರತಿ ವರ್ಷ ಈ ಟೂರ್ನಿಗಾಗಿ ಎಲ್ಲಾ ಕುಟುಂಬಗಳು ಕಾಯುತ್ತವೆ. ಸೇನೆಯಲ್ಲಿರುವ ಅನೇಕರು ಟೂರ್ನಿಯ ಸಮಯಕ್ಕೆ ಸರಿಯಾಗಿ ರಜೆ ಪಡೆದು ಬಂದು ಆಡುತ್ತಾರೆ. ಭಾರತೀಯ ಹಾಕಿಗೆ ಕೊಡಗಿನ ಕೊಡುಗೆ ಅಪಾರವಾದದ್ದು. ಮತ್ತಷ್ಟುಮೂಲಸೌಕರ್ಯ, ಪ್ರಾಯೋಜಕತ್ವ, ಬೆಂಬಲ ದೊರೆತರೆ ಇನ್ನಷ್ಟುಆಟಗಾರರು ರಾಷ್ಟ್ರೀಯ ತಂಡಗಳಲ್ಲಿ ಆಡುವ ಅವಕಾಶ ಪಡೆಯಲಿದ್ದಾರೆ. ಕೊಡಿಗಿನಲ್ಲಿ ಟಫ್‌ರ್ ಮೈದಾನ, ಹಾಕಿ ಹಾಸ್ಟೆಲ್‌ಗಳು ಆರಂಭಗೊಳ್ಳಬೇಕಿದ್ದು, ಹಾಕಿಯನ್ನು ವೃತ್ತಿಯಾಗಿ ಸ್ವೀಕರಿಸುವ ಅವಕಾಶಗಳೂ ಸೃಷ್ಟಿಯಾದರೆ ಕ್ರೀಡೆಯ ಅಭಿವೃದ್ಧಿಯಾಗಲಿದೆ -ಪಾಂಡಂಡ ಬೋಪಣ್ಣ, ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ