
ನವದೆಹಲಿ(ಜ.31): 15ನೇ ಆವೃತ್ತಿ ಹಾಕಿ ವಿಶ್ವಕಪ್‌ನಲ್ಲಿ ಆತಿಥೇಯ ಭಾರತ ಕ್ವಾರ್ಟರ್ ಫೈನಲ್ ಹಂತಕ್ಕೂ ಪ್ರವೇಶಿಸಲು ವಿಫಲವಾದ ಬೆನ್ನಲ್ಲೇ ತಂಡದ ಪ್ರಮುಖ ಕೋಚ್ ಗ್ರಹಾಂ ರೀಡ್ ನೈತಿಕ ಹೊಣೆಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ. ಅವರ ಜೊತೆ ವೈಜ್ಞಾನಿಕ ಸಲಹೆಗಾರ ಮಿಚೆಲ್ ಡೇವಿಡ್ ಪೆಂಬೆರ್ಟನ್, ಸಹಾಯಕ ಕೋಚ್ ಗ್ರೆಗ್ ಕ್ಲಾರ್ಕ್ ಕೂಡಾ ಹುದ್ದೆ ತ್ಯಜಿಸಿದ್ದು, ಸೋಮವಾರ ರಾಜೀನಾಮೆ ಪತ್ರವನ್ನು ಹಾಕಿ ಇಂಡಿಯಾ ಆಧ್ಯಕ್ಷ ದಿಲೀಪ್ ಟಿರ್ಕಿ ಅವರಿಗೆ ಸಲ್ಲಿಸಿದ್ದಾರೆ.
2019ರ ಏಪ್ರಿಲ್‌ನಲ್ಲಿ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದ ಆಸ್ಪ್ರೇಲಿಯಾದ ರೀಡ್, ತಂಡಕ್ಕೆ 2021ರ ಟೋಕಿಯೋ ಒಲಿಂಪಿಕ್ಸ್‌ನ ಐತಿಹಾಸಿಕ ಕಂಚಿನ ಪದಕ ತಂದುಕೊಡಲು ನೆರವಾಗಿದ್ದರು. ಅವರ ಅವಧಿಯಲ್ಲೇ ಭಾರತ ಕಳೆದ ವರ್ಷ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ, 2021-22ರ ಪ್ರೊ ಲೀಗ್ ಹಾಕಿಯಲ್ಲಿ ತೃತೀಯ ಸ್ಥಾನ ಪಡೆದಿತ್ತು. ಅವರ ಒಪ್ಪಂದ ಅವಧಿ 2024ರ ಪ್ಯಾರಿಸ್ ಒಲಿಂಪಿಕ್ಸ್‌ವರೆಗೆ ಇದ್ದರೂ ಒಂದು ವರ್ಷದ ಮೊದಲೇ ಹುದ್ದೆ ತ್ಯಜಿಸಿದ್ದಾರೆ. ವಿಶ್ವಕಪ್‌ನಲ್ಲಿ ಕ್ರಾಸ್ ಓವರ್ಸ್ನಲ್ಲಿ ಸೋತಿದ್ದ ಭಾರತ, 9ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.
ಇಂದಿನಿಂದ ಥಾಯ್ಲೆಂಡ್ ಮಾಸ್ಟರ್ಸ್ ಬ್ಯಾಡ್ಮಿಂಟನ್
ಬ್ಯಾಂಕಾಕ್: ಈ ವರ್ಷದ 4ನೇ ಬ್ಯಾಡ್ಮಿಂಟನ್ ಟೂರ್ನಿಯಾದ ಥಾಯ್ಲೆಂಡ್ ಓಪನ್ ಮಂಗಳವಾರದಿಂದ ಆರಂಭವಾಗಲಿದ್ದು, ಭಾರತದ ತಾರಾ ಶಟ್ಲರ್ ಸೈನಾ ನೆಹ್ವಾಲ್ ಪದಕ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ಇಂಡಿಯಾ ಓಪನ್ ಸೇರಿದಂತೆ ಈ ವರ್ಷದ ಮೂರೂ ಟೂರ್ನಿಗಳಲ್ಲಿ ಭಾರತದ ಶಟ್ಲರ್‌ಗಳು ಒಂದೂ ಪದಕ ಗೆಲ್ಲಲು ವಿಫಲವಾಗಿದ್ದು, ಪದಕ ಬರ ನೀಗಿಸುವ ಕಾತರದಲ್ಲಿದ್ದಾರೆ.
Khelo India Youth Games: ಯೂತ್ ಗೇಮ್ಸ್‌ಗೆ ಅದ್ದೂರಿ ಚಾಲನೆ
ಲಕ್ಷ್ಯ ಸೇನ್, ಪಿ.ವಿ.ಸಿಂಧು, ಕಿದಂಬಿ ಶ್ರೀಕಾಂತ್ ಸೇರಿದಂತೆ ಪ್ರಮುಖರು ಟೂರ್ನಿಗೆ ಗೈರಾಗಲಿದ್ದಾರೆ. ಪುರುಷರ ಡಬಲ್ಸ್ ಜೋಡಿ ಸಾತ್ವಿಕ್-ಚಿರಾಗ್ ಶೆಟ್ಟಿಕೂಡಾ ಕಣಕ್ಕಿಳಿಯುತ್ತಿಲ್ಲ. ಕಳೆದ ವರ್ಷ ಮೊದಲ ಸುತ್ತಲ್ಲೇ ಸೋತು ಹೊರಬಿದ್ದಿದ್ದ ಸೈನಾ ಈ ಬಾರಿ ಡೆನ್ಮಾರ್ಕ್ನ ಮಿಯಾ ಬ್ಲಿಕ್‌ಫೆಲ್ಡ್‌ಟ್ ವಿರುದ್ಧ ಅಭಿಯಾನ ಆರಂಭಿಸಲಿದ್ದಾರೆ. ಮಹಿಳಾ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ-ತನಿಶಾ, ತ್ರೀಸಾ-ಗಾಯತ್ರಿ, ಮಿಶ್ರ ಡಬಲ್ಸ್‌ನಲ್ಲಿ ಅಶ್ವಿನಿ-ಸುಮೀತ್ ಕೂಡಾ ಸ್ಪರ್ಧಿಸಲಿದ್ದಾರೆ.
ಜೋಕೋವಿಚ್ ಮತ್ತೆ ನಂ.1
ಕಳೆದ ವರ್ಷ ಆಸ್ಪ್ರೇಲಿಯನ್ ಓಪನ್‌ಗೆ ಗೈರಾಗಿದ್ದ ಜೋಕೋವಿಚ್ ವಿಶ್ವ ನಂ.1 ಸ್ಥಾನವನ್ನೂ ಕಳೆದುಕೊಂಡಿದ್ದರು. ವಿಂಬಲ್ಡನ್‌ನಲ್ಲಿ ಚಾಂಪಿಯನ್ ಆದರೂ ಟೂರ್ನಿಯಲ್ಲಿ ಯಾವುದೇ ರೇಟಿಂಗ್ ಅಂಕ ನೀಡಿರಲಿಲ್ಲ. ಇದೀಗ ಆಸ್ಪ್ರೇಲಿಯನ್ ಓಪನ್ ಪ್ರಶಸ್ತಿ ಜಯಿಸಿರುವ ಜೋಕೋವಿಚ್ ವಿಶ್ವ ರ‍್ಯಾಂಕಿಂಗ್‌ನಲ್ಲಿ ಮತ್ತೊಮ್ಮೆ ನಂ.1 ಸ್ಥಾನಕ್ಕೇರಲಿದ್ದಾರೆ.
ಜೋಕೋವಿಚ್ 2008ರಲ್ಲಿ ಮೊದಲ ಬಾರಿಗೆ ಆಸ್ಪ್ರೇಲಿಯನ್ ಓಪನ್ ಜಯಿಸಿದ್ದರು. 2011, 2012, 2013, 2015, 2016, 2019, 2020, 2021ರಲ್ಲೂ ಚಾಂಪಿಯನ್ ಆಗಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.