* ಕಿರಿಯ ಮಹಿಳೆಯರ ಹಾಕಿ ವಿಶ್ವಕಪ್‌ನಲ್ಲಿ ಫೈನಲ್ ಪ್ರವೇಶಿಸುವ ಭಾರತದ ಕನಸು ಭಗ್ನ
* ನೆದರ್‌ಲೆಂಡ್ಸ್ ವಿರುದ್ದ 3-0 ಅಂತರದಲ್ಲಿ ಸೋಲುಂಡ ಭಾರತ
* ಸತತ 4ನೇ ಬಾರಿ ಫೈನಲ್ ಪ್ರವೇಶಿಸಿದ ನೆದರ್‌ಲೆಂಡ್ಸ್
ಪಾಚೆಫ್‌ಸ್ಟ್ರೋಮ್(ಏ.11): ಕಿರಿಯ ಮಹಿಳೆಯರ ಹಾಕಿ ವಿಶ್ವಕಪ್‌ನಲ್ಲಿ (Junior Women's Hockey World Cup) ಚೊಚ್ಚಲ ಬಾರಿ ಫೈನಲ್ ಪ್ರವೇಶಿಸುವ ಭಾರತದ ಕನಸು ಭಗ್ನಗೊಂಡಿದೆ. ಭಾನುವಾರ ನಡೆದ 3 ಬಾರಿ ಚಾಂಪಿಯನ್ ನೆದರ್‌ಲೆಂಡ್ಸ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಭಾರತ 0-3 ಗೋಲುಗಳ ಅಂತರದಲ್ಲಿ ಸೋತು ನಿರಾಸೆ ಅನುಭವಿಸಿತು. ಟೂರ್ನಿಯುದ್ದಕ್ಕೂ ಅಜೇಯವಾಗಿ ಉಳಿದಿದ್ದ ಭಾರತ ಈ ಪಂದ್ಯದಲ್ಲಿ ನೆದರ್‌ಲೆಂಡ್ಸ್ ಸವಾಲನ್ನು ಮೆಟ್ಟಿನಿಲ್ಲಲು ವಿಫಲವಾಯಿತು.
ಟೆಸ್ಸಾ ಬೀಸ್ಮಾ 12ನೇ ನಿಮಿಷದಲ್ಲಿ ನೆದರ್‌ಲೆಂಡ್ಸ್ ಪರ ಗೋಲಿನ ಖಾತೆ ತೆರೆದರೆ, ಲುನಾ ಫೋಕ್(53ನೇ ನಿಮಿಷ), ಜಿಪ್ ಡಿಕ್(54ನೇ ನಿಮಿಷ) ಮತ್ತೆರಡು ಗೋಲು ಬಾರಿಸಿ ತಂಡವನ್ನು ಗೆಲ್ಲಿಸಿದರು. 8ನೇ ಬಾರಿ ಸೆಮಿಫೈನಲ್‌ನಲ್ಲಿ ಆಡಿದ ನೆದರ್‌ಲೆಂಡ್ಸ್ ಸತತ 4ನೇ ಬಾರಿ ಫೈನಲ್ ಪ್ರವೇಶಿಸಿತು. 2013ರಲ್ಲಿ ಕಂಚು ಜಯಿಸಿದ್ದ ಭಾರತಕ್ಕೆ ಈ ಬಾರಿ ಎರಡನೇ ಕಂಚಿನ ಪದಕದ ನಿರೀಕ್ಷೆ ಇದ್ದು, ಮಂಗಳವಾರ 3ನೇ ಸ್ಥಾನಕ್ಕಾಗಿ ನಡೆಯುವ ಪಂದ್ಯದಲ್ಲಿ ಇಂಗ್ಲೆಂಡ್/ಜರ್ಮನಿ ವಿರುದ್ಧ ಸೆಣಸಾಡಲಿದೆ.
undefined
ಪ್ರೊ ಲೀಗ್: ಇಂಗ್ಲೆಂಡ್ ವಿರುದ್ಧದ ಪಂದ್ಯ ರದ್ದು: ಭಾರತಕ್ಕೆ ನಂ.1 ಸ್ಥಾನ
ಭುವನೇಶ್ವರ್: ಪ್ರೊ ಲೀಗ್ ಮಹಿಳಾ ಹಾಕಿ ಟೂರ್ನಿಯ (FIH Pro League Women's Hockey League) ಭಾರತ ಹಾಗೂ ಇಂಗ್ಲೆಂಡ್ (India vs England) ನಡುವಿನ ಪಂದ್ಯಗಳನ್ನು ರದ್ದುಗೊಳಿಸಲಾಗಿದೆ ಎಂದು ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್(ಎಫ್‌ಐಎಚ್) ಭಾನುವಾರ ಮಾಹಿತಿ ನೀಡಿದೆ. ಏಪ್ರಿಲ್ 2 ಮತ್ತು 3ರಂದು ಪಂದ್ಯಗಳು ನಿಗದಿಯಾಗಿದ್ದವು. ಇಂಗ್ಲೆಂಡ್ ಆಟಗಾರ್ತಿಯರಲ್ಲಿ ಕೊರೋನಾ ಸೋಂಕು (Coronavirus) ಕಾಣಿಸಿಕೊಂಡ ಕಾರಣ ಪಂದ್ಯವನ್ನು ಮುಂದೂಡಲಾಗಿತ್ತು.
Junior Women's Hockey World Cup ಸೆಮಿಫೈನಲ್‌ನಲ್ಲಿಂದು ಭಾರತ-ನೆದರ್‌ಲೆಂಡ್ಸ್ ಕಾದಾಟ
ಆದರೆ ಸಮಯದ ಅಭಾವದಿಂದ ಬೇರೊಂದು ಸಮಯದಲ್ಲಿ ಪಂದ್ಯ ಆಯೋಜಿಸಲು ಸಾಧ್ಯವಿಲ್ಲದ ಕಾರಣ ಉಭಯ ದೇಶಗಳ ಹಾಕಿ ಸಂಸ್ಥೆಗಳ ಜೊತೆ ಚರ್ಚಿಸಿ ಎಫ್‌ಐಎಚ್, ಪಂದ್ಯ ರದ್ದುಗೊಳಿಸಿದೆ. ಈ ಕಾರಣ ಒಂದು ಪಂದ್ಯಕ್ಕೆ 3 ಅಂಕದಂತೆ ಭಾರತಕ್ಕೆ 6 ಅಂಕಗಳು ದೊರೆತಿವೆ. ಇದರೊಂದಿಗೆ ಒಟ್ಟು 22 ಅಂಕಗಳೊಂದಿಗೆ ಭಾರತ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ನೆದರ್‌ಲೆಂಡ್‌್ಸ 19 ಅಂಕದೊಂದಿಗೆ 2ನೇ ಸ್ಥಾನದಲ್ಲಿದೆ. 2 ಪಂದ್ಯಗಳನ್ನಾಡಿರುವ ಇಂಗ್ಲೆಂಡ್ ಇನ್ನಷ್ಟೇ ಅಂಕಪಟ್ಟಿಯಲ್ಲಿ ಖಾತೆ ತೆರೆಯಬೇಕಿದೆ.
ರಾಷ್ಟ್ರೀಯ ಪುರುಷರ ಹಾಕಿ: ಕ್ವಾರ್ಟರ್‌ಗೆ ಕರ್ನಾಟಕ
ಭೋಪಾಲ್: 12ನೇ ಆವೃತ್ತಿಯ ಪುರುಷರ ರಾಷ್ಟ್ರೀಯ ಹಾಕಿ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ಸತತ 2ನೇ ಗೆಲುವು ಸಾಧಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಭಾನುವಾರ ‘ಸಿ’ ಗುಂಪಿನ 2ನೇ ಪಂದ್ಯದಲ್ಲಿ ರಾಜ್ಯ ತಂಡ ಆಂಧ್ರ ಪ್ರದೇಶ ವಿರುದ್ಧ 14-0 ಗೋಲುಗಳ ಅಂತರದಲ್ಲಿ ಭರ್ಜರಿ ಜಯಗಳಿಸಿತು. ಆರಂಭದಿಂದಲೇ ಆಂಧ್ರದ ಮೇಲೆ ಸವಾರಿ ಮಾಡಿದ ರಾಜ್ಯ ತಂಡ ಸತತ ಗೋಲು ಗಳಿಸುತ್ತಲೇ ಸಾಗಿತು. ಯತೀಶ್ ಕುಮಾರ್ 2ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರೆ, ಸೋಮಣ್ಣ 4, ಮೇದಪ್ಪ 3 ಗೋಲು ಬಾರಿಸಿದರು. ಹರೀಶ್ 2, ನಾಚಪ್ಪ, ಸೂರ್ಯ, ಶಮಂತ್ ಹಾಗೂ ಪ್ರಣಾಮ್ ತಲಾ 1 ಗೋಲು ದಾಖಲಿಸಿದರು.
ರಾಷ್ಟ್ರೀಯ ಬಾಸ್ಕೆಟ್‌ಬಾಲ್: ಕಂಚು ಗೆದ್ದ ಕರ್ನಾಟಕ
ಚೆನ್ನೈ: 71ನೇ ರಾಷ್ಟ್ರೀಯ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ಪುರುಷರ ತಂಡ ಕಂಚಿನ ಪದಕ ಗೆದ್ದುಕೊಂಡಿದೆ. ಭಾನುವಾರ 3ನೇ ಸ್ಥಾನಕ್ಕಾಗಿ ನಡೆದ ರೈಲ್ವೇಸ್ ವಿರುದ್ಧದ ಪಂದ್ಯದಲ್ಲಿ ರಾಜ್ಯ ತಂಡ 96-79 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿತು. ಅಭಿಷೇಕ್ ಗೌಡ(29), ಶಶಾಂಕ್(28) ಅನಿಲ್ ಕುಮಾರ್(25) ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಮಹಿಳಾ ವಿಭಾಗದಲ್ಲಿ ರಾಜ್ಯ ತಂಡ ಪಂಜಾಬನ್ನು 74-71ರ ಅಂತರದಲ್ಲಿ ಸೋಲಿಸಿ 5ನೇ ಸ್ಥಾನ ಪಡೆದುಕೊಂಡಿತು. ವರ್ಷ 22 ಅಂಕ ಗಳಿಸಿದರು.