Junior Women's Hockey World Cup ಸೆಮಿಫೈನಲ್‌ನಲ್ಲಿಂದು ಭಾರತ-ನೆದರ್‌ಲೆಂಡ್ಸ್‌ ಕಾದಾಟ

By Kannadaprabha News  |  First Published Apr 10, 2022, 9:08 AM IST

* ಕಿರಿಯರ ಮಹಿಳಾ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಭಾರತಕ್ಕೆ ನೆದರ್‌ಲೆಂಡ್ಸ್ ಸವಾಲು

* ಚೊಚ್ಚಲ ಬಾರಿ ಫೈನಲ್‌ ಪ್ರವೇಶಿಸುವ ಕಾತರದಲ್ಲಿರುವ ಭಾರತ

* 2013ರಲ್ಲಿ ಕಂಚಿನ ಪದಕ ಜಯಿಸಿದ್ದ ಭಾರತ


ಪಾಚೆಫ್‌ಸ್ಟ್ರೋಮ್‌(ಏ.10): ಕಿರಿಯ ಮಹಿಳೆಯರ ಹಾಕಿ ವಿಶ್ವಕಪ್‌ನಲ್ಲಿ (Junior Women's Hockey World Cup) ಚೊಚ್ಚಲ ಬಾರಿ ಫೈನಲ್‌ ಪ್ರವೇಶಿಸುವ ಕಾತರದಲ್ಲಿರುವ ಭಾರತ ಕಿರಿಯರ ಮಹಿಳಾ ಹಾಕಿ ತಂಡ (Junior Indians Women's Hockey), ಭಾನುವಾರ ಸೆಮಿಫೈನಲ್‌ನಲ್ಲಿ 3 ಬಾರಿ ಚಾಂಪಿಯನ್‌ ನೆದರ್‌ಲೆಂಡ್ಸ್‌ ವಿರುದ್ಧ ಸೆಣಸಾಡಲಿದೆ. 2013ರಲ್ಲಿ ಕಂಚಿನ ಪದಕ ಜಯಿಸಿದ್ದ ಭಾರತ 2ನೇ ಬಾರಿ ಸೆಮೀಸ್‌ನಲ್ಲಿ ಆಡುತ್ತಿದ್ದರೆ, ನೆದರ್‌ಲೆಂಡ್ಸ್‌ಗೆ ಇದು 8 ಸೆಮಿಫೈನಲ್‌. 

ಉಭಯ ತಂಡಗಳು ಗುಂಪು ಹಂತದಲ್ಲಿ ಆಡಿದ ಎಲ್ಲಾ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿತ್ತು. ಬಳಿಕ ಭಾರತ ಕ್ವಾರ್ಟರ್‌ ಫೈನಲ್‌ನಲ್ಲಿ ದಕ್ಷಿಣ ಕೊರಿಯಾ ವಿರುದ್ಧ 3-0 ಗೋಲುಗಳ ಅಂತರದಲ್ಲಿ ಗೆದ್ದರೆ, ನೆದರ್‌ಲೆಂಡ್ಸ್‌ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 5-0 ಗೋಲುಗಳಿಂದ ಜಯಿಸಿತ್ತು. ಕಳೆದ ಆವೃತ್ತಿಯಲ್ಲಿ ರನ್ನರ್‌-ಅಪ್‌ ಆಗಿದ್ದ ನೆದರ್‌ಲೆಂಡ್ಸ್‌ ಸತತ 4ನೇ ಫೈನಲ್‌ ನಿರೀಕ್ಷೆಯಲ್ಲಿದ್ದು, ಭಾರತಕ್ಕೆ ಕಠಿಣ ಸವಾಲು ಎದುರಾಗುವ ಸಾಧ್ಯತೆ ಇದೆ. ಮತ್ತೊಂದು ಸೆಮೀಸ್‌ನಲ್ಲಿ ಇಂಗ್ಲೆಂಡ್‌-ಜರ್ಮನಿ ಮುಖಾಮುಖಿಯಾಗಲಿವೆ.

The Junior Women's squad is ready to take on the Netherlands in the FIH Hockey Women's Junior World Cup semi-finals in South Africa!

📍North West University, Potchefstroom
🕔 5:00 pm (IST) pic.twitter.com/552XBy3ROp

— Hockey India (@TheHockeyIndia)

Tap to resize

Latest Videos

undefined

ಭಾರತದ ಪಂದ್ಯ ಆರಂಭ: ಸಂಜೆ 5ಕ್ಕೆ

ಪ್ರೊ ಲೀಗ್‌: ನೆದರ್‌ಲೆಂಡ್ಸ್‌ ವಿರುದ್ಧ ಭಾರತಕ್ಕೆ ಸೋಲು

ಭುವನೇಶ್ವರ್‌: ಪ್ರೊ ಲೀಗ್‌ ಹಾಕಿ (FIH Pro League Hockey Tournament) ಟೂರ್ನಿಯಲ್ಲಿ ನೆದರ್‌ಲೆಂಡ್ಸ್‌ ವಿರುದ್ಧದ 2ನೇ ಪಂದ್ಯದಲ್ಲಿ ಭಾರತ ಮಹಿಳಾ ತಂಡ ಸೋಲನುಭವಿಸಿದೆ. ಶನಿವಾರ ನಡೆದ ಪಂದ್ಯದಲ್ಲಿ ನೆದರ್‌ಲೆಂಡ್ಸ್‌ ಶೂಟೌಟ್‌ನಲ್ಲಿ 3-1 ಗೋಲುಗಳಿಂದ ಜಯಗಳಿಸಿತು. 

ನಿಗದಿತ ಸಮಯದ ಮುಕ್ತಾಯದ ವೇಳೆಗೆ ಉಭಯ ತಂಡಗಳು 1-1 ಗೋಲುಗಳಿಂದ ಸಮಬಲ ಸಾಧಿಸಿದ್ದವು. ಭಾರತದ ರಾಜ್ವಿಂದರ್‌ ಕೌರ್‌ ಮೊದಲ ನಿಮಿಷದಲ್ಲೇ ಗೋಲು ಬಾರಿಸಿದರೂ, ಬಳಿಕ ತಂಡದ ಪರ ಯಾವುದೇ ಗೋಲು ದಾಖಲಾಗಲಿಲ್ಲ. 53ನೇ ನಿಮಿಷದಲ್ಲಿ ಯಿಬ್ಬಿ ಯಾನ್ಸನ್‌ ಗೋಲು ಗಳಿಸಿ ನೆದರ್‌ಲೆಂಡ್ಸ್‌ ಪುಟಿದೇಳಲು ಕಾರಣರಾದರು. ಈ ಸೋಲಿನೊಂದಿಗೆ ಭಾರತ 15 ಅಂಕದೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲೇ ಉಳಿದರೆ, 19 ಅಂಕದೊಂದಿಗೆ ನೆದರ್‌ಲೆಂಡ್ಸ್‌ ಅಗ್ರಸ್ಥಾನದಲ್ಲಿದೆ.

ಪುರುಷರ ರಾಷ್ಟ್ರೀಯ ಹಾಕಿ: ಕರ್ನಾಟಕ ಶುಭಾರಂಭ

ಭೋಪಾಲ್‌: 12ನೇ ಆವೃತ್ತಿಯ ಪುರುಷರ ರಾಷ್ಟ್ರೀಯ ಹಾಕಿ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ಶುಭಾರಂಭ ಮಾಡಿದೆ. ಶನಿವಾರ ‘ಸಿ’ ಗುಂಪಿನ ಮೊದಲ ಪಂದ್ಯದಲ್ಲಿ ರಾಜ್ಯ ತಂಡ ಉತ್ತರಾಖಂಡ ವಿರುದ್ಧ 9-1 ಗೋಲುಗಳ ಅಂತರದಲ್ಲಿ ಭರ್ಜರಿ ಜಯ ಸಾಧಿಸಿತು. ಹರೀಶ್‌ 3ನೇ ನಿಮಿಷದಲ್ಲಿ ರಾಜ್ಯದ ಪರ ಗೋಲಿನ ಖಾತೆ ತೆರೆದರೆ, ಚಿರಂತ್‌ ಸೋಮಣ್ಣ ಹಾಗೂ ಪ್ರಣಾಮ್‌ ಗೌಡ ತಲಾ 2 ಗೋಲು ಬಾರಿಸಿದರು. ಮೇದಪ್ಪ, ಲಿಖಿತ್‌, ದೀಕ್ಷಿತ್‌, ನಾಚಪ್ಪ ತಲಾ 1 ಗೋಲು ಹೊಡೆದರು. ಶಾನವಾಜ್‌ ಹಸನ್‌ ಉತ್ತರಾಖಂಡ ಪರ ಏಕೈಕ ಗೋಲು ಬಾರಿಸಿದರು. ರಾಜ್ಯ ತಂಡ ಭಾನುವಾರ 2ನೇ ಪಂದ್ಯದಲ್ಲಿ ಆಂಧ್ರ ಪ್ರದೇಶ ವಿರುದ್ಧ ಸೆಣಸಾಡಲಿದೆ.

click me!