ಹಾಕಿ ಟೆಸ್ಟ್‌: ಆಸೀಸ್‌ ವಿರುದ್ಧ ಭಾರತಕ್ಕೆ 4-5ರ ಸೋಲು

By Kannadaprabha NewsFirst Published Nov 27, 2022, 7:56 AM IST
Highlights

ಹಾಕಿ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು ಮುಗ್ಗರಿಸಿದ ಭಾರತ
5 ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾಗೆ 1-0 ಮುನ್ನಡೆ
ಭಾರತ ಹಾಕಿ ತಂಡ 4-5 ಗೋಲುಗಳ ಸೋಲು 

ಅಡಿಲೇಡ್‌(ನ.27): ಆಕಾಶ್‌ದೀಪ್‌ ಸಿಂಗ್‌ರ ಹ್ಯಾಟ್ರಿಕ್‌ ಗೋಲಿನ ಹೊರತಾಗಿಯೂ ಆಸ್ಪ್ರೇಲಿಯಾ ವಿರುದ್ಧದ 5 ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಹಾಕಿ ತಂಡ 4-5 ಗೋಲುಗಳ ಸೋಲು ಅನುಭವಿಸಿತು. ಆಕಾಶ್‌ದೀಪ್‌ 10, 27 ಹಾಗೂ 59ನೇ ನಿಮಿಷಗಳಲ್ಲಿ ಗೋಲು ಬಾರಿಸಿದರು. ಮತ್ತೊಂದು ಗೋಲನ್ನು 31ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್‌ ಮೂಲಕ ನಾಯಕ ಹರ್ಮನ್‌ಪ್ರೀತ್‌ ಸಿಂಗ್‌ ಗಳಿಸಿದರು. ಸರಣಿಯ 2ನೇ ಪಂದ್ಯ ಭಾನುವಾರ ನಡೆಯಲಿದೆ.

ವಿಶ್ವ ಕಿರಿಯರ ಬಾಕ್ಸಿಂಗ್‌: ಭಾರತದ ಮೂವರಿಗೆ ಚಿನ್ನ

ನವದೆಹಲಿ: ಭಾರತದ ಬಾಕ್ಸರ್‌ಗಳಾದ ವಿಶ್ವನಾಥ್‌ ಸುರೇಶ್‌, ವನ್ಶರಾಜ್‌ ಹಾಗೂ ದೇವಿಕಾ ಘೋರ್ಪಡೆ ಇಲ್ಲಿ ಶುಕ್ರವಾರ ಮುಕ್ತಾಯಗೊಂಡ ವಿಶ್ವ ಕಿರಿಯರ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಜಯಿಸಿದರು. ಫೈನಲ್‌ಗೇರಿದ್ದ ಇನ್ನು ನಾಲ್ವರು ಬೆಳ್ಳಿಗೆ ತೃಪ್ತಿಪಟ್ಟರು. ಭಾರತ ಒಟ್ಟು 11 ಪದಕಗಳೊಂದಿಗೆ ಕೂಟದಲ್ಲಿ ಅತಿಹೆಚ್ಚು ಪದಕ ಗಳಿಸಿದ ರಾಷ್ಟ್ರ ಎನಿಸಿತು. ಉಜ್ಬೇಕಿಸ್ತಾನ 10 ಪದಕಗಳೊಂದಿಗೆ 2ನೇ ಸ್ಥಾನ ಪಡೆಯಿತು.

FIFA World Cup ಡೆನಾರ್ಕ್‌ ಮಣಿಸಿ ನಾಕೌಟ್‌ಗೆ ಲಗ್ಗೆಯಿಟ್ಟ ಫ್ರಾನ್ಸ್..!

ವಿಶ್ವ ಚೆಸ್‌: ಭಾರತದ ಕೈತಪ್ಪಿದ ಕಂಚಿನ ಪದಕ

ಜೆರುಸೆಲೆಮ್‌: ವಿಶ್ವ ತಂಡಗಳ ಚೆಸ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಪದಕ ಗೆಲ್ಲುವಲ್ಲಿ ವಿಫಲವಾಗಿದೆ. ಶುಕ್ರವಾರ ಕಂಚಿನ ಪದಕಕ್ಕಾಗಿ ಸ್ಪೇನ್‌ ವಿರುದ್ಧ ನಡೆದ ಎರಡು ಸುತ್ತುಗಳ ಪಂದ್ಯದಲ್ಲಿ ಭಾರತ 1-3ರ ಅಂತರದಲ್ಲಿ ಸೋಲುಂಡಿತು. ಎರಡು ಸುತ್ತುಗಳ ಬಳಿಕ ಉಭಯ ತಂಡಗಳು 2-2ರಲ್ಲಿ ಡ್ರಾ ಸಾಧಿಸಿದವು. ಫಲಿತಾಂಶಕ್ಕಾಗಿ ಟೈ ಬ್ರೇಕರ್‌ ಮೊರೆ ಹೋಗಲಾಯಿತು. ಟೈ ಬ್ರೇಕರ್‌ನಲ್ಲಿ ವಿದಿತ್‌, ನಿಹಾಲ್‌ ಸೋತರೆ, ನಾರಾಯಣನ್‌ ಹಾಗೂ ಅಭಿಜಿತ್‌ ಡ್ರಾಗೆ ತೃಪ್ತಿಪಟ್ಟರು. ಇದೇ ವೇಳೆ ಫೈನಲಲ್ಲಿ ಉಜ್ಬೇಕಿಸ್ತಾನ ವಿರುದ್ಧ ಚೀನಾ 4-0ಯಲ್ಲಿ ಗೆದ್ದು ಚಿನ್ನದ ಪದಕ ಜಯಿಸಿತು.

ಐಎಸ್‌ಎಲ್‌: ಗೋವಾ ವಿರುದ್ಧ ಗೆದ್ದ ಬಿಎಫ್‌ಸಿ

ಗೋವಾ: 9ನೇ ಆವೃತ್ತಿಯ ಐಎಸ್‌ಎಲ್‌ ಟೂರ್ನಿಯಲ್ಲಿ ಸತತ 4 ಸೋಲು ಕಂಡು ಕಂಗೆಟ್ಟಿದ್ದ ಬೆಂಗಳೂರು ಎಫ್‌ಸಿ, ಕೊನೆಗೂ ಜಯದ ಹಳಿಗೆ ಮರಳಿದೆ. ಶನಿವಾರ ನಡೆದ ಎಫ್‌ಸಿ ಗೋವಾ ವಿರುದ್ಧದ ಪಂದ್ಯದಲ್ಲಿ 2-0 ಗೋಲುಗಳ ಜಯ ಸಾಧಿಸಿತು. ಬಿಎಫ್‌ಸಿ ಪರ ಜಾವಿ (27ನೇ ನಿ., 57ನೇ ನಿ.,) ಗೋಲು ಬಾರಿಸಿದರು. ಬಿಎಫ್‌ಸಿ ಅಂಕಪಟ್ಟಿಯಲ್ಲಿ 8ನೇ ಸ್ಥಾನಕ್ಕೇರಿದೆ.

ಪ್ರೊ ಕಬಡ್ಡಿ: ಪುಣೇರಿ ಪಲ್ಟಾನ್‌ಗೆ ಸತತ 5ನೇ ಜಯ

ಹೈದರಾಬಾದ್‌: 9ನೇ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಪುಣೇರಿ ಪಲ್ಟಾನ್ ಭರ್ಜರಿ ಜಯ ಮುಂದುವರೆಸಿದ್ದು, ಸತತ 5ನೇ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಶನಿವಾರ ನಡೆದ ತೆಲುಗು ಟೈಟಾನ್ಸ್ ವಿರುದ್ದದ ಪಂದ್ಯದಲ್ಲಿ 38-25ರ ಅಂತರದಲ್ಲಿ ಪುಣೇರಿ ಪಲ್ಟಾನ್ ಸುಲಭ ಗೆಲುವು ಸಾಧಿಸಿತು. ಇದಕ್ಕೂ ಮೊದಲು ನಡೆದ ದಿನದ ಮೊದಲ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ವಿರುದ್ದ ಯು ಮುಂಬಾ ತಂಡವು 49-41ರಲ್ಲಿ ಜಯಿಸಿತು.

click me!