ಕಾಮನ್‌ವೆಲ್ತ್‌ ಗೇಮ್ಸ್‌ನಿಂದ ಹಿಂದೆ ಸರಿದ ಭಾರತ ಹಾಕಿ ತಂಡ..!

By Suvarna News  |  First Published Oct 6, 2021, 8:10 AM IST

* 2022ರ ಕಾಮನ್‌ವೆಲ್ತ್‌ ಗೇಮ್ಸ್‌ನಿಂದ ಅಧಿಕೃತವಾಗಿ ಹಿಂದೆ ಸರಿದ ಭಾರತ ಹಾಕಿ ತಂಡಗಳು

* ಕಾಮನ್‌ವೆಲ್ತ್‌ ಗೇಮ್ಸ್‌ 2022ರ ಜುಲೈ 28 ಆಗಸ್ಟ್‌ 8ರ ವರೆಗೆ ನಡೆಯಲಿದೆ

* ಏಷ್ಯನ್‌ ಗೇಮ್ಸ್‌ನಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ ಮಹತ್ವದ ತೀರ್ಮಾನ


ನವದೆಹಲಿ(ಅ.06): ಮುಂದಿನ ವರ್ಷ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ಕಾಮನ್‌ವೆಲ್ತ್‌ ಗೇಮ್ಸ್‌ಗೆ (Commonwealth Games 2022) ಭಾರತ ಹಾಕಿ ತಂಡಗಳನ್ನು ಕಳುಹಿಸುವುದಿಲ್ಲ ಎಂದು ಹಾಕಿ ಇಂಡಿಯಾ (Hockey India) ಘೋಷಿಸಿದೆ. ಕಾಮನ್‌ವೆಲ್ತ್‌ ಗೇಮ್ಸ್‌ 2022ರ ಜುಲೈ 28 ಆಗಸ್ಟ್‌ 8ರ ವರೆಗೆ ನಡೆಯಲಿದೆ.

ಬ್ರಿಟನ್‌ನಲ್ಲಿ ಕೋವಿಡ್‌ (COVID 19) ಪ್ರಕರಣಗಳು ಹೆಚ್ಚುತ್ತಿದ್ದು ಆಟಗಾರರ ಸುರಕ್ಷತೆಯ ದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದೆ. ಅಲ್ಲದೇ ಭಾರತದಲ್ಲಿ ಪಡೆದಿರುವ ಕೊರೋನಾ ಲಸಿಕೆಗೆ ಮಾನ್ಯತೆ ನೀಡದ ಬ್ರಿಟನ್‌, ಭಾರತೀಯ ಪ್ರಯಾಣಿಕರಿಗೆ 10 ದಿನಗಳ ಕಠಿಣ ಕ್ವಾರಂಟೈನ್‌ ಕಡ್ಡಾಯಗೊಳಿಸಿರುವುದು ಸಹ ಭಾರತ ಹಾಕಿ ತಂಡಗಳು ಕ್ರೀಡಾಕೂಟದಿಂದ ಹಿಂದೆ ಸರಿಯಲು ಕಾರಣವಾಗಿದೆ. 

Latest Videos

ಕಾಮನ್‌ವೆಲ್ತ್ ಗೇಮ್ಸ್‌ 2022: ಭಾರತ ಹಾಕಿ ತಂಡದ ಸ್ಪರ್ಧೆ ಅನುಮಾನ

ಕಾಮನ್‌ವೆಲ್ತ್‌ ಗೇಮ್ಸ್‌ ಮುಕ್ತಾಯಗೊಂಡ ಕೇವಲ 32 ದಿನಗಳಲ್ಲಿ ಚೀನಾದಲ್ಲಿ ಏಷ್ಯನ್‌ ಗೇಮ್ಸ್‌ (Asian Games) ಸೆಪ್ಟೆಂಬರ್ 10ರಿಂದ 25ರ ವರೆಗೆ ನಡೆಯಲಿದೆ. ಏಷ್ಯನ್‌ ಗೇಮ್ಸ್‌ನಲ್ಲಿ ಜಯಿಸಿದರೆ 2024ರ ಪ್ಯಾರಿಸ್‌ ಒಲಿಂಪಿಕ್ಸ್‌ (Paris Olympics)ಗೆ ನೇರ ಅರ್ಹತೆ ದೊರೆಯಲಿದೆ. ಹೀಗಾಗಿ, ಏಷ್ಯನ್‌ ಗೇಮ್ಸ್‌ಗೆ ಸಿದ್ಧತೆ ನಡೆಸುವ ಹಾಗೂ ಆಟಗಾರರು ಆರೋಗ್ಯವಾಗಿರುವಂತೆ ಎಚ್ಚರ ವಹಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. 

Hockey India withdraws from 2022 Commonwealth Games due to be held in England over COVID concern pic.twitter.com/k9bAuEKylo

— ANI (@ANI)

ಭಾರತೀಯ ಪ್ರಯಾಣಿಕರಿಗೆ ಬ್ರಿಟನ್ 10 ದಿನಗಳ ಕಠಿಣ ಕ್ವಾರಂಟೈನ್‌ ಕಡ್ಡಾಯಗೊಳಿಸಿರುವ ಬೆನ್ನಲ್ಲೇ ಭಾರತ ಸಹಾ ಬ್ರಿಟನ್‌ ಯಾತ್ರಿಕರ ಮೇಲೆ ಕಠಿಣ ನಿಯಮಗಳನ್ನು ಹೇರಿದೆ. ಇದರ ಬೆನ್ನಲ್ಲೇ ಸೋಮವಾರವಷ್ಟೇ ಇಂಗ್ಲೆಂಡ್‌ ತಂಡ ಮುಂದಿನ ತಿಂಗಳು ಭುವನೇಶ್ವರದಲ್ಲಿ ನಡೆಯಲಿರುವ ಕಿರಿಯರ ವಿಶ್ವಕಪ್‌ ಟೂರ್ನಿಯಿಂದ ಹಿಂದೆ ಸರಿದಿತ್ತು.

Pertinent to note that Hockey India's decision comes a day after England withdrew from this year's Junior World Cup in Bhubaneswar citing the 10-day quarantine rule imposed by India https://t.co/KveQs93p6O

— Mihir Vasavda (@mihirsv)

ಕೆಲ ತಿಂಗಳ ಹಿಂದಷ್ಟೇ ಮುಕ್ತಾಯವಾದ ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಮನ್‌ಪ್ರೀತ್ ಸಿಂಗ್ ನೇತೃತ್ವದ ಭಾರತ ಹಾಕಿ ತಂಡವು ಕಂಚಿನ ಪದಕ ಗೆದ್ದು 4 ದಶಕಗಳ ಪದಕದ ಬರವನ್ನು ನೀಗಿಸಿಕೊಂಡಿತ್ತು. ಇನ್ನು ರಾಣಿ ರಾಂಪಾಲ್‌ ನೇತೃತ್ವದ ಭಾರತೀಯ ಮಹಿಳಾ ಹಾಕಿ ತಂಡವು ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿಗೆ ಸೆಮಿಫೈನಲ್ ಪ್ರವೇಶಿಸಿ ಇತಿಹಾಸ ನಿರ್ಮಿಸಿತ್ತಾದರೂ ಪದಕ ಗೆಲ್ಲಲು ವಿಫಲವಾಗಿತ್ತು. ಇದೀಗ ಏಷ್ಯನ್‌ ಗೇಮ್ಸ್‌ ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ನೇರ ಅರ್ಹತೆ ಪಡೆಯಲು ಭಾರತ ಹಾಕಿ ತಂಡಗಳು ಎದುರು ನೋಡುತ್ತಿವೆ.
 

click me!