
ಭುವನೇಶ್ವರ(ಜ.29): ಹಾಲಿ ವಿಶ್ವ, ಒಲಿಂಪಿಕ್ಸ್ ಚಾಂಪಿಯನ್ ಬೆಲ್ಜಿಯಂ ಭಾನುವಾರ ಎಂತಹ ಪರಿಸ್ಥಿತಿಯಿಂದಲೂ ಪುಟಿದೇಳಬಲ್ಲ ಸಾಮರ್ಥ್ಯ ಹೊಂದಿರುವ ಜರ್ಮನಿ ವಿರುದ್ಧ ವಿಶ್ವಕಪ್ ಫೈನಲ್‌ನಲ್ಲಿ ಸೆಣಸಲಿದೆ. ಬೆಲ್ಜಿಯಂ ಗೆದ್ದರೆ ಸತತ 2 ಬಾರಿ ವಿಶ್ವಕಪ್ ಗೆದ್ದ ಕೇವಲ 4ನೇ ರಾಷ್ಟ್ರ ಎನ್ನುವ ಹಿರಿಮೆಗೆ ಪಾತ್ರವಾಗಲಿದೆ.
ಪಾಕಿಸ್ತಾನ, ಆಸ್ಪ್ರೇಲಿಯಾ ಹಾಗೂ ಜರ್ಮನಿ ಮಾತ್ರ ಸತತ 2 ಆವೃತ್ತಿಗಳಲ್ಲಿ ಪ್ರಶಸ್ತಿ ಜಯಿಸಿದ್ದು, ಕೆಲವೇ ವರ್ಷಗಳಲ್ಲಿ ಹಾಕಿ ಜಗತ್ತಿನ ಬಲಿಷ್ಠ ತಂಡವಾಗಿ ರೂಪುಗೊಂಡಿರುವ ಬೆಲ್ಜಿಯಂ ಈ ಸಾಲಿಗೆ ಸೇರ್ಪಡೆಗೊಳ್ಳಲು ಕಾತರಿಸುತ್ತಿದೆ. 2018ರಲ್ಲಿ ಇಲ್ಲಿನ ಕಳಿಂಗಾ ಕ್ರೀಡಾಂಗಣದಲ್ಲೇ ನಡೆದಿದ್ದ ವಿಶ್ವಕಪ್‌ನಲ್ಲಿ ಬೆಲ್ಜಿಯಂ ಚೊಚ್ಚಲ ವಿಶ್ವಕಪ್ ಜಯಿಸಿತ್ತು.
30 ವರ್ಷ ಮೀರಿದ 11, 35 ವರ್ಷ ಮೀರಿದ ಮೂವರು ಆಟಗಾರರನ್ನು ಹೊಂದಿರುವ ಬೆಲ್ಜಿಯಂನ ‘ಸುವರ್ಣ ಯುಗ’ದ ಪಡೆ 2020ರ ಟೋಕಿಯೋ ಒಲಿಂಪಿಕ್ಸ್‌ನಲ್ಲೂ ಚಿನ್ನ ಜಯಿಸಿತ್ತು. ಈ ಟೂರ್ನಿಯಲ್ಲಿ ಉತ್ಕೃಷ್ಟ ಗುಣಮಟ್ಟದ ಆಟ ಪ್ರದರ್ಶಿಸಿರುವ ತಂಡದಲ್ಲಿ ದೌರ್ಬಲ್ಯಗಳನ್ನು ಹುಡುಕುವುದು ಕಷ್ಟವೆನಿಸಿದೆ. ಆಕರ್ಷಕ ಆಕ್ರಮಣಕಾರಿ ಹಾಗೂ ರಕ್ಷಣಾತ್ಮಕ ಕೌಶಲ್ಯಗಳನ್ನು ಪ್ರದರ್ಶಿಸಿರುವ ತಂಡ ವಿಶ್ವ ದರ್ಜೆ ಪೆನಾಲ್ಟಿಕಾರ್ನರ್ ತಜ್ಞರನ್ನೂ ಹೊಂದಿದೆ. ವಿಶ್ವ ಶ್ರೇಷ್ಠ ಗೋಲ್‌ಕೀಪರ್‌ಗಳಲ್ಲಿ ಒಬ್ಬರೆನಿಸಿರುವ ವಿನ್ಸೆಂಟ್ ವನ್ಯಾಶ್ ತಂಡದ ಬಲ.
ಬೆಲ್ಜಿಯಂ 5 ಪಂದ್ಯಗಳಲ್ಲಿ ಒಟ್ಟು 18 ಗೋಲು ಬಾರಿಸಿದ್ದು, ಕೇವಲ 5 ಗೋಲು ಬಿಟ್ಟುಕೊಟ್ಟಿದೆ. ಆದರೆ ವಿಶ್ವ ನಂ.2 ತಂಡಕ್ಕೆ ಜರ್ಮನಿಯಿಂದ ಪ್ರಬಲ ಪೈಪೋಟಿ ಎದುರಾಗುವ ನಿರೀಕ್ಷೆ ಇದೆ. ಜರ್ಮನಿ ಕಳೆದೆರಡು ಪಂದ್ಯಗಳಲ್ಲಿ 0-2 ಹಿನ್ನಡೆಯಿಂದ ಮೇಲೆದ್ದು ಜಯದ ದಾರಿ ಹುಡುಕಿಕೊಂಡಿದೆ.
Australian Open: ಸಬಲೆಂಕಾಗೆ ಚೊಚ್ಚಲ ಗ್ರ್ಯಾನ್‌ಸ್ಲಾಂ!
2002, 2006ರ ಚಾಂಪಿಯನ್ ಜರ್ಮನಿ, ಕ್ವಾರ್ಟರ್ ಫೈನಲಲ್ಲಿ ಇಂಗ್ಲೆಂಡ್ ವಿರುದ್ಧ ಕೊನೆ ಎರಡೂವರೆ ನಿಮಿಷದಲ್ಲಿ 2 ಗೋಲು ಬಾರಿಸಿ ಪಂದ್ಯವನ್ನು ಪೆನಾಲ್ಟಿಶೂಟೌಟ್‌ಗೆ ಕೊಂಡೊಯ್ದು ಜಯಿಸಿತ್ತು. ಸೆಮಿಫೈನಲ್‌ನಲ್ಲಿ ವಿಶ್ವ ನಂ.1 ಆಸ್ಪ್ರೇಲಿಯಾ ವಿರುದ್ಧ ಮೊದಲಾರ್ಧದ ಅಂತ್ಯಕ್ಕೆ 0-2ರಿಂದ ಹಿಂದಿದ್ದ ಜರ್ಮನಿ, 6 ಸೆಕೆಂಡ್ ಬಾಕಿ ಇದ್ದಾಗ ಒಂದು ಗೋಲು ಸೇರಿ ದ್ವಿತೀಯಾರ್ಧದಲ್ಲಿ 4 ಗೋಲು ಬಾರಿಸಿ ಅನಿರೀಕ್ಷಿತ ರೀತಿಯಲ್ಲಿ ಜಯಭೇರಿ ಬಾರಿಸಿತು.
ಈ ಎರಡೂ ತಂಡಗಳು ಆರಂಭಿಕ ಹಂತದಲ್ಲಿ ಒಂದೇ ಗುಂಪಿನಲ್ಲಿದ್ದವು. ‘ಬಿ’ ಗುಂಪಿನ ಪಂದ್ಯ 2-2ರಲ್ಲಿ ಡ್ರಾಗೊಂಡಿತ್ತು. ಟೂರ್ನಿಯಲ್ಲಿ 6 ಪಂದ್ಯಗಳಿಂದ ಜರ್ಮನಿ 23 ಗೋಲು ಬಾರಿಸಿದ್ದು, 10 ಗೋಲು ಬಿಟ್ಟುಕೊಟ್ಟಿದೆ.
2017ರ ಜುಲೈ ಬಳಿಕ ಬೆಲ್ಜಿಯಂ ವಿರುದ್ಧ ಜರ್ಮನಿ ಏಕೈಕ ಗೆಲುವು ಸಾಧಿಸಿದೆ. ಒಟ್ಟಾರೆ ಉಭಯ ತಂಡಗಳು 35 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು ಬೆಲ್ಜಿಯಂ 15, ಜರ್ಮನಿ 13ರಲ್ಲಿ ಗೆದ್ದಿದೆ. 7 ಪಂದ್ಯಗಳು ಡ್ರಾಗೊಂಡಿವೆ.
ಕಂಚಿಗಾಗಿ ಆಸ್ಪ್ರೇಲಿಯಾ, ನೆದರ್‌ಲೆಂಡ್‌್ಸ ಸೆಣಸು
ಭಾನುವಾರ ಫೈನಲ್‌ಗೂ ಮೊದಲು 3ನೇ ಸ್ಥಾನಕ್ಕಾಗಿ ನಡೆಯುವ ಪಂದ್ಯದಲ್ಲಿ ಆಸ್ಪ್ರೇಲಿಯಾ, ನೆದರ್‌ಲೆಂಡ್‌್ಸ ಸೆಣಸಲಿವೆ. ಸೆಮೀಸ್‌ನಲ್ಲಿ ಜರ್ಮನಿ ವಿರುದ್ಧ ಆಸ್ಪ್ರೇಲಿಯಾ ಸೋಲುಂಡರೆ, ನೆದರ್‌ಲೆಂಡ್‌್ಸ ತಂಡ ಬೆಲ್ಜಿಯಂಗೆ ಶರಣಾಗಿತ್ತು. 2018ರಲ್ಲಿ ಸೇರಿ ಆಸ್ಪ್ರೇಲಿಯಾ ಒಟ್ಟು 5 ಬಾರಿ ಕಂಚು ಜಯಿಸಿದೆ. ಕಳೆದೆರಡು ಆವೃತ್ತಿಗಳಲ್ಲಿ ಬೆಳ್ಳಿಗೆ ತೃಪ್ತಿಪಟ್ಟಿದ್ದ ಡಚ್, 2 ಬಾರಿ 3ನೇ ಸ್ಥಾನ ಪಡೆದಿದೆ.
ಇಂದಿನ ಪಂದ್ಯಗಳು
ಆಸ್ಪ್ರೇಲಿಯಾ-ನೆದರ್‌ಲೆಂಡ್‌್ಸ, ಸಂಜೆ 4.30ಕ್ಕೆ
ಜರ್ಮನಿ-ಬೆಲ್ಜಿಯಂ, ಸಂಜೆ 7ಕ್ಕೆ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.