ಭಾರತೀಯ ಹಾಕಿ ತಂಡಕ್ಕೆ ಕರುನಾಡ ಆಭರಣ..!

* ಭಾರತ ಪುರುಷರ ಹಾಕಿ ತಂಡದಲ್ಲಿ ಕರ್ನಾಟಕದ ಮೂವರು ಆಟಗಾರರು ಸ್ಥಾನ

* ಎಸ್‌.ವಿ.ಸುನಿಲ್‌, ಶೇಷೇಗೌಡ ಜೊತೆ ತಂಡದಲ್ಲಿರುವ ಮತ್ತೊಬ್ಬ ಕನ್ನಡಿಗ ಆಭರಣ್‌ ಸುದೇವ್

* ಕೊಡಗಿನ ಸೋಮವಾರಪೇಟೆಯವರಾದ ಆಭರಣ್

Abharan sudev new Indian Hockey Team Senstaion kvn

- ಸ್ಪಂದನ್ ಕಣಿಯಾರ್, ಕನ್ನಡಪ್ರಭ

ಬೆಂಗಳೂರು(ಮೇ.12): ಬಹಳ ದಿನಗಳ ಬಳಿಕ ಭಾರತ ಪುರುಷರ ಹಾಕಿ ತಂಡದಲ್ಲಿ (Indian Men's Hockey Team) ಕರ್ನಾಟಕದ ಮೂವರು ಆಟಗಾರರು ಸ್ಥಾನ ಪಡೆದಿದ್ದಾರೆ. ಎಸ್‌.ವಿ.ಸುನಿಲ್‌ (SV Sunil), ಶೇಷೇಗೌಡ ಜೊತೆ ತಂಡದಲ್ಲಿರುವ ಮತ್ತೊಬ್ಬ ಕನ್ನಡಿಗ ಆಭರಣ್‌ ಸುದೇವ್‌. ಮೂಲತಃ ಕೊಡಗಿನ ಸೋಮವಾರಪೇಟೆಯವರಾದ ಆಭರಣ್‌, ಕಳೆದ 15-16 ವರ್ಷದಿಂದ ಬೆಂಗಳೂರಲ್ಲಿ ನೆಲೆಸಿದ್ದಾರೆ. ಆಭರಣ್‌ ಅವರ ಪೋಷಕರು ಸೋಮವಾರಪೇಟೆ ಬಿಟ್ಟು ಬೆಂಗಳೂರಿಗೆ ಬಂದಿದ್ದೇ ಮಗ ಹಾಕಿ ಆಟಗಾರನಾಗಬೇಕು ಎನ್ನುವ ಕಾರಣಕ್ಕೆ.

ಆಭರಣ್‌ ಅವರ ತಂದೆ ಸುದೇವ್‌ ಸಹ ಹಾಕಿ ಆಟಗಾರರಾಗಿದ್ದರು. 24 ವರ್ಷದ ಆಭರಣ್‌ಗೆ ತಂದೆಯೇ ಮೊದಲ ಗುರು, ಸ್ಫೂರ್ತಿ ಎಲ್ಲವೂ. ತಂದೆಯ ಹೆಸರು ಉಳಿಸಬೇಕು ಎನ್ನುವ ಕಾರಣಕ್ಕೇ ನಾನು ಹಾಕಿ ಸ್ಟಿಕ್‌ ಹಿಡಿದಿದ್ದು ಎಂದು ಭಾವನಾತ್ಮಕವಾಗಿ ‘ಕನ್ನಡಪ್ರಭ’ದೊಂದಿಗೆ ತಮ್ಮ ಅನುಭವ ಹಂಚಿಕೊಂಡರು.

‘ಊರಲ್ಲಿ ತಂದೆಯ ಆಟದ ಬಗ್ಗೆ ಊರಿನಲ್ಲಿ ಎಲ್ಲರೂ ಮೆಚ್ಚುಗೆಯ ಮಾತುಗಳನ್ನು ಆಡುವಾಗ ಖುಷಿಯಾಗುತ್ತಿತ್ತು. ಅಣ್ಣ ಸಹ ಹಾಕಿ ಆಡುತ್ತಿದ್ದರು. ಆದರೆ ಅವರಿಬ್ಬರಿಗೂ ದೊಡ್ಡ ಮಟ್ಟಕ್ಕೆ ಏರಲು ಸಾಧ್ಯವಾಗಲಿಲ್ಲ. ಆ ಬೇಸರವನ್ನು ನೀಗಿಸಬೇಕು. ತಂದೆಯ ಹೆಸರು ಉಳಿಸಬೇಕು ಎನ್ನುವ ಕಾರಣಕ್ಕೇ ನಾನು ಹಾಕಿ ಆಟಗಾರನಾಗಲು ನಿರ್ಧರಿಸಿದೆ. ನನಗೆ 6-7 ವಯಸ್ಸಿದ್ದಾಗ ನಾವು ಬೆಂಗಳೂರಿಗೆ ಸ್ಥಳಾಂತರಗೊಂಡೆವು. ನನ್ನ ಹಾಕಿಗಾಗಿಯೇ ತಂದೆ, ತಾಯಿ ಊರು ಬಿಟ್ಟು ಬಂದರು. ಒಂದು ಹಾಕಿ ಸ್ಟಿಕ್‌ಗೆ 6,000-7,000 ರು. ಆಗುತ್ತಿತ್ತು. ಈಗ ನನಗೆ ಉದ್ಯೋಗವಿದೆ. ಪ್ರಾಯೋಜಕರಿದ್ದಾರೆ. ಆದರೆ ಆಗ ಎಷ್ಟೇ ಕಷ್ಟವಾದರೂ ತಂದೆಯೇ ಎಲ್ಲವನ್ನೂ ನೋಡಿಕೊಂಡರು’ ಎಂದು ಆಭರಣ್‌ ಹೇಳುವಾಗ ಅವರ ಧ್ವನಿಯಲ್ಲಿ ಧನ್ಯತೆ ಇತ್ತು. ಪೋಷಕರು ತಮಗಾಗಿ ಮಾಡಿದ ತ್ಯಾಗ, ಬೆನ್ನು ತಟ್ಟಿದ ಕ್ಷಣಗಳನ್ನು ನೆನೆದರು.

ಕುಟುಂಬದ ಕನಸು

ಆಭರಣ್‌ ಹಾಕಿ ಆಟಗಾರನಾಗಿ ಭಾರತಕ್ಕೆ ಆಡಬೇಕು ಎನ್ನುವುದು ಅವರೊಬ್ಬರ ಕನಸಾಗಿರಲಿಲ್ಲ. ಅದು ಇಡೀ ಕುಟುಂಬದ ಕನಸು. ಇದಕ್ಕಾಗಿ ಹಲವು ತ್ಯಾಗಗಳನ್ನು ಅವರ ಕುಟುಂಬ ಮಾಡಿದೆ. 1ನೇ ತರಗತಿಯಿಂದಲೇ ಆಭರಣ್‌ ಹಾಸ್ಟೆಲ್‌ನಲ್ಲಿ ಉಳಿದುಕೊಂಡು ಹಾಕಿ ತರಬೇತಿ ಪಡೆದಿದ್ದಾರೆ. ‘ಚಿಕ್ಕ ವಯಸ್ಸಿಗೇ ತಂದೆ, ತಾಯಿಯನ್ನು ಬಿಟ್ಟು ಹಾಸ್ಟೆಲ್‌ ಸೇರಿದೆ. ಕಳೆದ ವರ್ಷದ ವರೆಗೂ ನಾನೂ ಹಾಸ್ಟೆಲ್‌ನಲ್ಲೇ ಇದ್ದೆ. ವರ್ಷಕ್ಕೆ ಎರಡು, ಮೂರು ಬಾರಿ ಮಾತ್ರ ಮನೆಗೆ ಹೋಗುವುದಕ್ಕೆ ಅವಕಾಶ ಸಿಗುತ್ತಿತ್ತು. ನಾನು ಹಾಕಿಯಲ್ಲೇ ಸಾಧನೆ ಮಾಡಬೇಕು ಎನ್ನುವುದು ನಮ್ಮ ಇಡೀ ಕುಟುಂಬದ ಕನಸು. ಆ ಕನಸೀಗ ಈಡೇರಿದೆ’ ಎಂದು ಆಡಿಟರ್‌ ಜನರಲ್‌ ಕಚೇರಿಯಲ್ಲಿ ಆಫೀಸರ್‌ ಆಗಿರುವ ಆಭರಣ್‌ ಹೇಳಿದರು.

ಗ್ಯಾರೇಜ್ ಸೇರಬೇಕಿದ್ದ ಶೇಷೇಗೌಡ ಈಗ ರಾಷ್ಟ್ರೀಯ ಹಾಕಿಪಟು..!

‘ನಾನು ಎಲ್ಲೇ ಪಂದ್ಯವಾಡಲಿ ನಮ್ಮ ತಂದೆ ಮೈದಾನಕ್ಕೆ ಬಂದು ನೋಡುತ್ತಾರೆ. ಅವರು ಹಾಕಿ ಆಡುತ್ತಿದ್ದ ಸಮಯಕ್ಕೂ ಈಗಿನ ಹಾಕಿಗೂ ತುಂಬಾ ವ್ಯತ್ಯಾಸವಿದೆ. ಆದರೂ ಅವರಿಗೆ ಅನಿಸಿದ್ದನ್ನು ನನ್ನೊಂದಿಗೆ ಹಂಚಿಕೊಳ್ಳುತ್ತಾರೆ’ ಎಂದು ಆಭರಣ್‌ ಖುಷಿಯಿಂದ ಹೇಳಿಕೊಂಡರು.

ಸೋಮವಾರಪೇಟೆಯ ಕುವರ:

ನಿವೃತ್ತಿ ತ್ಯಜಿಸಿ ಹಾಕಿ ಅಂಗಳಕ್ಕೆ ಮರಳಿರುವ ಎಸ್‌.ವಿ.ಸುನಿಲ್‌ ಸಹ ಸೋಮವಾರಪೇಟೆಯವರು. ಸುನಿಲ್‌ರನ್ನು ನೋಡಿಕೊಂಡೇ ಆಡಿ ಬೆಳೆದ ಹುಡುಗ ಆಭರಣ್‌. ‘ಸುನಿಲ್‌ ನಂತರ ಸೋಮವಾರಪೇಟೆಯ ಹೆಸರನ್ನು ಉಳಿಸುವ ಹೊಣೆ ನಿನ್ನ ಮೇಲಿದೆ ಎಂದು ನಮ್ಮ ಊರಿನವರು ನೆನಪಿಸುತ್ತಿರುತ್ತಾರೆ. ಸುನಿಲ್‌ ಅವರೊಂದಿಗೇ ಭಾರತ ತಂಡದಲ್ಲಿ ಆಡುವ ಅವಕಾಶ ಸಿಕ್ಕಿರುವುದು ತುಂಬಾ ಖುಷಿ ಕೊಟ್ಟಿದೆ. ನಾನೂ ಅವರಂತೆಯೇ ಫಾರ್ವರ್ಡ್‌ ಆಟಗಾರ. ಸಿಕ್ಕಿರುವ ಅವಕಾಶ ಬಳಸಿಕೊಂಡು 2023ರ ವಿಶ್ವಕಪ್‌, 2024ರ ಒಲಿಂಪಿಕ್ಸ್‌ ತಂಡದಲ್ಲಿ ಸ್ಥಾನ ಪಡೆಯುವ ಗುರಿ ಇಟ್ಟುಕೊಂಡಿದ್ದೇನೆ’ ಎಂದು ಆಭರಣ್‌ ವಿಶ್ವಾಸದ ಮಾತುಗಳನ್ನಾಡಿದರು.

14 ತಿಂಗಳು ಸ್ಟಿಕ್‌ ಮುಟ್ಟಿರಲಿಲ್ಲ:

‘ಶಾಲೆ, ಕಾಲೇಜಿನಲ್ಲಿದ್ದಾಗ ಅನೇಕರು ಹಾಕಿ ಏಕೆ ಆಡುತ್ತೀಯ?, ಒಮ್ಮೆ ಗಾಯಗೊಂಡರೆ ಮುಗಿಯಿತು ಎನ್ನುತ್ತಿದ್ದರು. ನನ್ನ ವಿಷಯದಲ್ಲಿ ಅದು ನಿಜವೂ ಆಯಿತು. 2020ರಲ್ಲಿ ಜಿಮ್‌ನಲ್ಲಿ ಭಾರ ಎತ್ತುವಾಗ ಗಾಯಗೊಂಡೆ. ಆ ಬಳಿಕ 14 ತಿಂಗಳ ಕಾಲ ಹಾಕಿ ಸ್ಟಿಕ್‌ ಮುಟ್ಟಲು ಆಗಲಿಲ್ಲ. ಆದರೆ ಲಾಕ್‌ಡೌನ್‌ ನನ್ನ ಪಾಲಿಗೆ ವರವಾಯಿತು. ಆಗ ಯಾವುದೇ ಟೂರ್ನಿಗಳು ನಡೆಯದ ಕಾರಣ, ನಾನು ಆಯ್ಕೆಯಲ್ಲಿ ಹಿಂದೆ ಬೀಳಲಿಲ್ಲ. ವಿಡಿಯೋ ಕಾಲ್‌ಗಳ ಮೂಲಕ ಗೊತ್ತಿದ್ದವರಿಂದ ಮಾಹಿತಿ ಪಡೆದು ಚೇತರಿಸಿಕೊಂಡೆ’ ಎಂದು ಆಭರಣ್‌ ನಿಟ್ಟುಸಿರು ಬಿಟ್ಟರು.

ರಾಷ್ಟ್ರೀಯ ತಂಡಕ್ಕೆ ಆಯ್ಕೆ ಅಮೂಲ್ಯ

2018ರಲ್ಲಿ ಭಾರತ ಕಿರಿಯರ ತಂಡದ ಪರ ಕೆಲ ಟೂರ್ನಿಗಳಲ್ಲಿ ಆಡಿದ ಬಳಿಕ ಹಿರಿಯರ ಶಿಬಿರಕ್ಕೆ ಆಯ್ಕೆಯಾದೆ. ಆದರೆ ಹಿರಿಯರ ತಂಡದಲ್ಲಿ ಸ್ಥಾನ ಸಿಗಲು 5 ವರ್ಷ ಬೇಕಾಯಿತು. ಹಲವು ಬಾರಿ ಅವಕಾಶ ವಂಚಿತನಾದರೂ ಪ್ರಯತ್ನ ಬಿಡಲಿಲ್ಲ. ಅನೇಕ ಏಳು, ಬೀಳುಗಳನ್ನು ನೋಡಿದ್ದೇನೆ. ಹೀಗಾಗಿ ಮೊದಲ ಬಾರಿಗೆ ಭಾರತ ತಂಡದಲ್ಲಿ ಆಡಲಿದ್ದೇನೆ ಎನ್ನುವ ಭಯ ಇಲ್ಲ. ಭಾರತ ತಂಡಕ್ಕೆ ಆಯ್ಕೆಯಾಗಿದ್ದೇನೆ ಎಂದು ತಿಳಿದ ಕೂಡಲೇ ತಂದೆ ಕರೆ ಮಾಡಿ ನೀನು ಹಾಕಿ ಸ್ಟಿಕ್‌ ಹಿಡಿದಿದ್ದಕ್ಕೂ ಸಾರ್ಥಕವಾಯ್ತು ಎಂದರು. ಅದು ನನ್ನ ಪಾಲಿಗೆ ಅತ್ಯಮೂಲ್ಯ ಕ್ಷಣ.

- ಆಭರಣ್‌ ಸುದೇವ್‌, ಹಾಕಿ ಆಟಗಾರ


 

Latest Videos
Follow Us:
Download App:
  • android
  • ios