
ಲಂಡನ್: 2022-23ರ ಆವೃತ್ತಿಯ ಪುರುಷರ ಪ್ರೊ ಲೀಗ್ ಹಾಕಿ ಟೂರ್ನಿಯಲ್ಲಿ ಶುಕ್ರವಾರ ಭಾರತ ಹಾಗೂ ಬೆಲ್ಜಿಯಂ ತಂಡಗಳು ಮುಖಾಮುಖಿಯಾಗಲಿವೆ. ಕಳೆದ ವರ್ಷ 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದ ಭಾರತ ಈ ಬಾರಿ ಉತ್ತಮ ಆರಂಭ ಪಡೆದಿದ್ದು, 8 ಪಂದ್ಯಗಳಲ್ಲಿ 5 ಗೆಲುವಿನೊಂದಿಗೆ 19 ಅಂಕ ಸಂಪಾದಿಸಿ ಅಗ್ರಸ್ಥಾನದಲ್ಲಿದೆ. ಆದರೆ ಕಳೆದ ಬಾರಿ ರನ್ನರ್-ಅಪ್ ಸ್ಥಾನಿಯಾಗಿದ್ದ ಬೆಲ್ಜಿಯಂ ಟೂರ್ನಿಯಲ್ಲಿ ಈವರೆಗೆ 4 ಪಂದ್ಯಗಳನ್ನಾಡಿದ್ದು, ಕೇವಲ 6 ಅಂಕದೊಂದಿಗೆ 7ನೇ ಸ್ಥಾನದಲ್ಲಿದೆ. ಕಳೆದ ವರ್ಷ ಉಭಯ ತಂಡಗಳು 2 ಬಾರಿ ಮುಖಾಮುಖಿಯಾಗಿದ್ದು, ಭಾರತ 1ರಲ್ಲಿ ಸೋತು, ಮತ್ತೊಂದು ಪಂದ್ಯದಲ್ಲಿ ಡ್ರಾಗೆ ತೃಪ್ತಿಪಟ್ಟುಕೊಂಡಿತ್ತು.
ಬೆಲ್ಜಿಯಂಗೆ ತಾರಾ ಆಟಗಾರರ ಅನುಪಸ್ಥಿತಿ: ಟೋಕಿಯೋ ಒಲಿಂಪಿಕ್ಸ್ ಚಾಂಪಿಯನ್ ಬೆಲ್ಜಿಯಂ ತಂಡವು ಈ ಬಾರಿ ತಾರ ಆಟಗಾರರ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯುತ್ತಿದೆ. ವಿನ್ಸೆಂಟ್ ವೆನಾಶ್, ಆರ್ಥರ್ ವ್ಯಾನ್ ಡುರೇನ್, ಅಲೆಕ್ಸಾಂಡರ್ ಹೆಂಡ್ರಿಕ್ಸ್, ಫ್ಲೋರೆಂಟ್ ವ್ಯಾನ್ ಆಬುಲ್, ಸೆಬಾಸ್ಟಿನ್ ಡೋಕಿಯರ್ ಇನ್ನೂ ಕ್ಲಬ್ ಪಂದ್ಯಗಳನ್ನು ಆಡುತ್ತಿರುವುದರಿಂದಾಗಿ ಈ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.
ಏಷ್ಯಾಕಪ್ ಹಾಕಿ: ಭಾರತಕ್ಕೆ 3-1 ಜಯ
ಸಲಾಲ್ಹ(ಒಮಾನ್): ಹಾಲಿ ಚಾಂಪಿಯನ್ ಭಾರತ ತಂಡ ಕಿರಿಯರ ಏಷ್ಯಾಕಪ್ ಹಾಕಿ ಟೂರ್ನಿಯಲ್ಲಿ ಸತತ 2ನೇ ಗೆಲುವು ಸಾಧಿಸಿದೆ. ಮೊದಲ ಪಂದ್ಯದಲ್ಲಿ ಚೈನೀಸ್ ತೈಪೆಯನ್ನು ಬರೋಬ್ಬರಿ 18-0 ಗೋಲುಗಳಿಂದ ಮಣಿಸಿದ್ದ ಭಾರತ ಗುರುವಾರ ‘ಬಿ’ ಗುಂಪಿನ 2ನೇ ಪಂದ್ಯದಲ್ಲಿ ಜಪಾನ್ ವಿರುದ್ಧ 3-1ರಿಂದ ಜಯಗಳಿಸಿತು. ಅರೈಜೀತ್ ಸಿಂಗ್, ಶಾರ್ದಾನಂದ್ ಹಾಗೂ ಉತ್ತಮ್ ಸಿಂಗ್ ಭಾರತದ ಪರ ತಲಾ 1 ಗೋಲು ಹೊಡೆದರು. ಭಾರತ ಗುಂಪು ಹಂತದ ತನ್ನ 3ನೇ ಪಂದ್ಯವನ್ನು ಶನಿವಾರ ಬದ್ಧವೈರಿ ಪಾಕಿಸ್ತಾನ ವಿರುದ್ಧ ಆಡಲಿದೆ.
ಹಾಕಿ: ಭಾರತ ಮಹಿಳಾ ತಂಡಕ್ಕೆ ಮತ್ತೆ ಸೋಲು
ಅಡಿಲೇಡ್: ಏಷ್ಯನ್ ಗೇಮ್ಸ್ ಸಿದ್ಧತೆಗಾಗಿ ಆಸ್ಪ್ರೇಲಿಯಾ ಪ್ರವಾಸ ಕೈಗೊಂಡಿರುವ ಭಾರತ ಮಹಿಳಾ ಹಾಕಿ ಸತತ ಸೋಲುಗಳಿಂದ ಕಂಗೆಟ್ಟಿದೆ. ಆಸ್ಪ್ರೇಲಿಯಾ ತಂಡದ ವಿರುದ್ಧ 3 ಪಂದ್ಯಗಳ ಸರಣಿಯನ್ನು 0-2 ಅಂತರದಲ್ಲಿ ಕಳೆದುಕೊಂಡಿದ್ದ ಭಾರತ, ಗುರುವಾರ ಆಸೀಸ್ ‘ಎ’ ತಂಡದ ವಿರುದ್ಧ 2-3 ಅಂತರದಲ್ಲಿ ಪರಾಭವಗೊಂಡಿತು.
ಖೇಲೋ ಇಂಡಿಯಾ ವಿವಿ ಗೇಮ್ಸ್‌ಗೆ ಮೋದಿ ಚಾಲನೆ; 10 ದಿನಗಳ ಕಾಲ ನಡೆಯಲಿರುವ ಕ್ರೀಡಾಕೂಟ
ನಾಲ್ಕನೇ ಕ್ವಾರ್ಟರ್ಗೂ ಮುನ್ನ ಭಾರತ 0-3 ಅಂತರದಲ್ಲಿ ಹಿನ್ನಡೆ ಅನುಭವಿಸಿತ್ತು. ಆದರೆ ಸಲೀಮಾ ಟೇಟೆ(40ನೇ ನಿಮಿಷ) ಹಾಗೂ ಸಂಗೀತಾ ಕುಮಾರಿ(54ನೇ ನಿಮಿಷ) ಗೋಲು ಬಾರಿಸಿ ಪ್ರತಿರೋಧ ತೋರಿದರೂ ಸೋಲು ತಪ್ಪಿಸಲು ಸಾಧ್ಯವಾಗಲಿಲ್ಲ. ‘ಎ’ ತಂಡದ ವಿರುದ್ಧ ಕೊನೆ ಪಂದ್ಯವನ್ನು ಭಾರತ ಶನಿವಾರ ಆಡಲಿದೆ.
25 ವರ್ಷದಲ್ಲೇ ಮೊದಲ ಬಾರಿ ರಾಫಾ, ಫೆಡರರ್ ಇಲ್ಲದೆ ಫ್ರೆಂಚ್ ಓಪನ್!
ಪ್ಯಾರಿಸ್: 1998ರ ಬಳಿಕ ಅಂದರೆ 25 ವರ್ಷಗಳಲ್ಲೇ ಮೊದಲ ಬಾರಿ ಟೆನಿಸ್ ದಿಗ್ಗಜರಾದ ಸ್ವಿಜರ್ಲೆಂಡ್ನ ರೋಜರ್ ಫೆಡರರ್ ಹಾಗೂ ಫ್ರಾನ್ಸ್‌ನ ರಾಫೆಲ್ ನಡಾಲ್ ಇಲ್ಲದೆ ಈ ಬಾರಿ ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಂ ಟೂರ್ನಿ ನಡೆಯಲಿದೆ.
ರೋಜರ್ ಫೆಡರರ್ 1998ರಲ್ಲಿ ಫ್ರೆಂಚ್ ಓಪನ್ ಪಾದಾರ್ಪಣೆ ಮಾಡಿದ್ದು, ಕಳೆದ ವರ್ಷ ವೃತ್ತಿಪರ ಟೆನಿಸ್ಗೆ ನಿವೃತ್ತಿ ಘೋಷಿಸಿದ್ದಾರೆ. ಇನ್ನು 2005ರಿಂದ ಫ್ರೆಂಚ್ ಓಪನ್ ಆಡುತ್ತಿರುವ ರಾಫೆಲ್ ನಡಾಲ್ ಗಾಯದಿಂದಾಗಿ ಈ ಬಾರಿ ಕಣಕ್ಕಿಳಿಯುತ್ತಿಲ್ಲ. 20 ಗ್ರ್ಯಾನ್ಸ್ಲಾಂಗಳ ಒಡೆಯ ಫೆಡರರ್ 2009ರಲ್ಲಿ ಏಕೈಕ ಬಾರಿ ಫ್ರೆಂಚ್ ಓಪನ್ ಗೆದ್ದಿದ್ದು, 22 ಗ್ರ್ಯಾನ್‌ಸ್ಲಾಂ ಜಯಿಸಿರುವ ನಡಾಲ್ ಫ್ರೆಂಚ್ ಓಪನ್ನಲ್ಲಿ ದಾಖಲೆಯ 14 ಬಾರಿ ಚಾಂಪಿಯನ್ ಆಗಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.