ಭಾರತ ಹಾಕಿ ತಂಡದ ಮಾಜಿ ಕೋಚ್ ಹರೇಂದ್ರ ಸಿಂಗ್ ಇದೀಗ ಕೊರೋನಾ ವಿರುದ್ಧ ಹೋರಾಡುತ್ತಿದ್ದಾರೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ.
ನವದೆಹಲಿ(ಮಾ.21): ಕೊರೋನಾ ಸೋಂಕು ಭಾರತದಲ್ಲಿ ವ್ಯಾಪಕವಾಗಿ ಹರಡದಿರಲಿ ಎಂದು ವೈದ್ಯರು, ವಿಮಾನ ನಿಲ್ದಾಣ ಸಿಬ್ಬಂದಿ ಸೇರಿದಂತೆ ಇನ್ನೂ ಅನೇಕರು ಹಗಲಿರುಳು ಹೋರಾಟ ನಡೆಸುತ್ತಿದ್ದಾರೆ. ಈ ಪೈಕಿ ಭಾರತ ಹಾಕಿ ತಂಡದ ಮಾಜಿ ಕೋಚ್ ಹರೇಂದ್ರ ಸಿಂಗ್ ಸಹ ಒಬ್ಬರು.
ಏರ್ ಇಂಡಿಯಾದ ಪ್ರಧಾನ ವ್ಯವಸ್ಥಾಪಕರಾಗಿರುವ ಹರೇಂದ್ರ, ದೆಹಲಿ ವಿಮಾನ ನಿಲ್ದಾಣದಲ್ಲಿ ಸತತ 72 ಗಂಟೆಗಳ ಕಾಲ ಕೆಲಸ ಮಾಡಿದ್ದಾಗಿ ಮಾಧ್ಯಮವೊಂದರಲ್ಲಿ ವರದಿ ಪ್ರಕಟಗೊಂಡಿದೆ. ವಿಮಾನ ನಿಲ್ದಾಣದಲ್ಲಿ ವಿದೇಶದಿಂದ ಭಾರತಕ್ಕೆ ಆಗಮಿಸುವ ಪ್ರತಿಯೊಬ್ಬರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಆ ತಂಡದಲ್ಲಿ ಹರೇಂದ್ರ ಸಹ ಇರುವುದು ಗಮನಾರ್ಹ.
ಐಪಿಎಲ್ ಮಾತ್ರವಲ್ಲ ಇನ್ನಷ್ಟು ಟೂರ್ನಿಗಳು ಮುಂದೂಡಿಕೆ ಸಾಧ್ಯತೆ
ಏರ್‌ಪೋರ್ಟ್‌ನಲ್ಲಿ ಮದ್ದಿಲ್ಲದ ಮಹಾಮಾರಿ ಎನಿಸಿರುವ ಕೊರೋನಾ ವಿರುದ್ಧ ಕಾರ್ಯಾಚರಣೆ ನಡೆಸುವುದು ಮತ್ತು ಮೈದಾನದಲ್ಲಿ ಹಾಕಿ ಗೇಮ್ ಪ್ಲಾನ್ ಮಾಡುವುದು ಇವೆರಡು ಬೇರೆಯದ್ದೇ ಅನುಭವ ಎಂದು ಹರೇಂದ್ರ ಸಿಂಗ್ ಹೇಳಿದ್ದಾರೆ.
ಭಾರತದಲ್ಲಿ ಇದುವರೆಗೂ 271 ಕೊರೋನಾ ಫಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು 5 ಮಂದಿ ಮೃತಪಟ್ಟಿದ್ದಾರೆ. ಕೊರೋನಾ ತಡೆಗಟ್ಟಲು ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 22ರಂದು ಜನತಾ ಕರ್ಫ್ಯೂಗೆ ಕರೆ ನೀಡಿದ್ದಾರೆ.