
ಭುವನೇಶ್ವರ(ಫೆ.09): ಭಾರತ ಪುರುಷರ ಹಾಕಿ ತಂಡದ ಗೆಲುವಿನ ಓಟ ಮುಂದುವರಿದಿದೆ. ಶನಿವಾರ ಇಲ್ಲಿ ನಡೆದ ಎಫ್‌ಐಎಚ್ ಪ್ರೊ ಲೀಗ್‌ನ ಬೆಲ್ಜಿಯಂ ವಿರುದ್ಧದ ಮೊದಲ ಚರಣದ ಪಂದ್ಯದಲ್ಲಿ ಭಾರತ 2-1 ಗೋಲುಗಳ ಗೆಲುವು ಸಾಧಿಸಿತು.
ಹಾಲಿ ವಿಶ್ವ ಚಾಂಪಿಯನ್, ವಿಶ್ವ ನಂ.1 ತಂಡವನ್ನು ಮಣಿಸಿದ ಭಾರತ, ಭಾನುವಾರ 2ನೇ ಚರಣದ ಪಂದ್ಯವನ್ನಾಡಲಿದ್ದು, ಗೋಲುಗಳ ಮುನ್ನಡೆ ಕಾಯ್ದುಕೊಂಡು ಜಯಭೇರಿ ಬಾರಿಸುವ ವಿಶ್ವಾಸದಲ್ಲಿದೆ. ಕಳೆದ ತಿಂಗಳು ನಡೆದಿದ್ದ ಮೊದಲ ಮುಖಾಮುಖಿಯಲ್ಲಿ ಭಾರತ, ನೆದರ್‌ಲೆಂಡ್ಸ್‌ದ ವಿರುದ್ಧ ಗೆಲುವು ಸಾಧಿಸಿತ್ತು. ವಿಶ್ವ ಚಾಂಪಿಯನ್ ತಂಡವನ್ನು ಸೋಲಿಸಿದ ಭಾರತ, ವಿಶ್ವ ಶ್ರೇಯಾಂಕದಲ್ಲಿ 1 ಸ್ಥಾನ ಏರಿಕೆ ಕಂಡು 4ನೇ ಸ್ಥಾನ ಪಡೆದಿದೆ. ಅಲ್ಲದೇ ಬೆಲ್ಜಿಯಂ ವಿರುದ್ಧ ಭಾರತಕ್ಕಿದು ಒಟ್ಟಾರೆ 50ನೇ ಗೆಲುವಾಗಿದೆ.
FIH ಪ್ರೋ ಲೀಗ್ ಹಾಕಿ: ಭಾರತಕ್ಕೆ ಬೆಲ್ಜಿಯಂ ಸವಾಲು
ಭಾರತ 2ನೇ ನಿಮಿಷದಲ್ಲೇ ಮೊದಲ ಗೋಲು ಗಳಿಸಿತು. ಮನ್‌ದೀಪ್ ಸಿಂಗ್ ಆಕರ್ಷಕ ಗೋಲು ಬಾರಿಸಿ ತಂಡಕ್ಕೆ ಮುನ್ನಡೆ ಒದಗಿಸಿದರು. ಮೊದಲಾರ್ಧದ ಮುಕ್ತಾಯಕ್ಕೆ 1-0 ಮುನ್ನಡ ಕಾಯ್ದುಕೊಂಡ ಭಾರತ, ದ್ವಿತೀಯಾರ್ಧದ ಆರಂಭದಲ್ಲೇ ಗೋಲು ಬಿಟ್ಟುಕೊಟ್ಟಿತು.
33ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಅವಕಾಶದಲ್ಲಿ ಗೋಲು ಬಾರಿಸಿದ ಗೌಥಿಯರ್ ಬೊಕ್ಕಾರ್ಡ್, ಬೆಲ್ಜಿಯಂ ಸಮಬಲ ಸಾಧಿಸಲು ನೆರವಾದರು. ಆದರೆ 47ನೇ ನಿಮಿಷದಲ್ಲಿ ರಮಣ್‌ದೀಪ್ ಸಿಂಗ್ ಭಾರತ ಪರ 2ನೇ ಗೋಲು ಬಾರಿಸಿದರು. ಪಂದ್ಯದಲ್ಲಿ 12 ಪೆನಾಲ್ಟಿಕಾರ್ನರ್ ಅವಕಾಶಗಳು ಸಿಕ್ಕರೂ, ಭಾರತದ ಗೋಲ್‌ಕೀಪರ್‌ಗಳಾದ ಶ್ರೀಜೇಶ್ ಹಾಗೂ ಕೃಷನ್ ಪಾಠಕ್‌ರನ್ನು ಒಂದಕ್ಕಿಂತ ಹೆಚ್ಚು ಬಾರಿ ವಂಚಿಸಲು ಸಾಧ್ಯವಾಗಲಿಲ್ಲ.
ಇಂದು 2ನೇ ಪಂದ್ಯ
ವಿಶ್ವ ನಂ.1 ತಂಡದ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಶುಭಾರಂಭ ಮಾಡಿರುವ ಭಾರತ, ಭಾನುವಾರ 2ನೇ ಚರಣದ ಪಂದ್ಯವನ್ನು ಆಡಲಿದೆ. ಭಾರತ 1 ಗೋಲಿನಿಂದ ಮುಂದಿದ್ದು, ಭಾನುವಾರದ ಪಂದ್ಯದಲ್ಲಿ ಮುನ್ನಡೆ ಕಾಯ್ದುಕೊಳ್ಳಬೇಕಿದೆ. 3 ಪಂದ್ಯಗಳಿಂದ ಭಾರತ 8 ಅಂಕ ಗಳಿಸಿದ್ದು, ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ. 5 ಪಂದ್ಯಗಳಿಂದ 11 ಅಂಕಗಳೊಂದಿಗೆ ಬೆಲ್ಜಿಯಂ ಮೊದಲ ಸ್ಥಾನದಲ್ಲಿದ್ದು, ಭಾರತ ಭಾನುವಾರ ದೊಡ್ಡ ಅಂತರದಲ್ಲಿ ಗೆದ್ದರೆ, ಅಗ್ರಸ್ಥಾನಕ್ಕೇರುವ ಸಾಧ್ಯತೆ ಇದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.