FIH Junior World Cup 2023 ಸ್ಪೇನ್‌ಗೆ ಶರಣಾದ ಭಾರತ

By Kannadaprabha NewsFirst Published Dec 8, 2023, 9:20 AM IST
Highlights

ಆರಂಭಿಕ ಪಂದ್ಯದಲ್ಲಿ ದ.ಕೊರಿಯಾವನ್ನು ಮಣಸಿದ್ದ ಭಾರತ, ಗುರುವಾರ ನೀರಸ ಪ್ರದರ್ಶನ ತೋರಿತು. ಮೊದಲ 18 ನಿಮಿಷಗಳಲ್ಲೇ 3 ಗೋಲು ಬಾರಿಸಿದ್ದ ಸ್ಪೇನ್‌ ಭಾರತದ ಹಲವು ಗೋಲು ಗಳಿಕೆ ಪ್ರಯತ್ನವನ್ನು ವಿಫಲಗೊಳಿಸಿತು.

ಕೌಲಾಲಂಪುರ(ಡಿ.08): 2023ರ ಕಿರಿಯರ ಹಾಕಿ ವಿಶ್ವಕಪ್‌ನಲ್ಲಿ ಭಾರತ ಗುರುವಾರ ಸ್ಪೇನ್‌ ವಿರುದ್ಧ 1-4 ಗೋಲುಗಳಿಂದ ಹೀನಾಯ ಸೋಲನುಭವಿಸಿದೆ. ಇದರೊಂದಿಗೆ 2 ಬಾರಿ ಚಾಂಪಿಯನ್‌ ಭಾರತ ‘ಸಿ’ ಗುಂಪಿನಲ್ಲಿ 3 ಅಂಕಗಳೊಂದಿಗೆ 3ನೇ ಸ್ಥಾನಕ್ಕೆ ಕುಸಿದಿದ್ದು, ಕ್ವಾರ್ಟರ್‌ ಫೈನಲ್‌ ಹಾದಿ ಕಠಿಣಗೊಳಿಸಿದೆ. 

ಆರಂಭಿಕ ಪಂದ್ಯದಲ್ಲಿ ದ.ಕೊರಿಯಾವನ್ನು ಮಣಸಿದ್ದ ಭಾರತ, ಗುರುವಾರ ನೀರಸ ಪ್ರದರ್ಶನ ತೋರಿತು. ಮೊದಲ 18 ನಿಮಿಷಗಳಲ್ಲೇ 3 ಗೋಲು ಬಾರಿಸಿದ್ದ ಸ್ಪೇನ್‌ ಭಾರತದ ಹಲವು ಗೋಲು ಗಳಿಕೆ ಪ್ರಯತ್ನವನ್ನು ವಿಫಲಗೊಳಿಸಿತು. ಭಾರತದ ಪರ ಏಕೈಕ ಗೋಲನ್ನು ರೋಹಿತ್‌ 33ನೇ ನಿಮಿಷದಲ್ಲಿ ದಾಖಲಿಸಿದರು. ಕಳೆದ ಬಾರಿ 4ನೇ ಸ್ಥಾನಿಯಾಗಿದ್ದ ಭಾರತ ಕೊನೆ ಪಂದ್ಯದಲ್ಲಿ ಶನಿವಾರ ಕೆನಡಾ ವಿರುದ್ಧ ಆಡಲಿದ್ದು, ಕ್ವಾರ್ಟರ್‌ಗೇರಬೇಕಿದ್ದರೆ ದೊಡ್ಡ ಅಂತರದಲ್ಲಿ ಗೆಲುವು ಅಗತ್ಯ.

Latest Videos

ವಾಲಿಬಾಲ್‌: ಸೆಮಿಫೈನಲ್‌ ತಲುಪಿದ ಸನ್‌ಬರ್ಡ್ಸ್‌ ತಂಡ

ಬೆಂಗಳೂರು: 4 ಬಾರಿ ಚಾಂಪಿಯನ್ ಬ್ರೆಜಿಲ್‌ನ ಸಡಾ ಕ್ರುಜೈರೊ ವೊಲೆ ತಂಡದ ವಿರುದ್ಧ ಸೋತ ಹೊರತಾಗಿಯೂ ಜಪಾನ್‌ನ ಸುಂಟೋರಿ ಸನ್‌ಬರ್ಡ್ಸ್‌ ತಂಡ ವಾಲಿಬಾಲ್ ಕ್ಲಬ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಿದೆ.

ಕೋರಮಂಗಲದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಸನ್‌ಬರ್ಡ್ಸ್‌ಗೆ 2-3 ಸೆಟ್‌ಗಳ ಸೋಲು ಎದುರಾಯಿತು. ಟೂರ್ನಿಯ ನಿಯಮದ ಪ್ರಕಾರ 3-0 ಅಥವಾ 3-1ರಲ್ಲಿ ಗೆದ್ದ ತಂಡಕ್ಕೆ 3 ಅಂಕ ಲಭಿಸಲಿದೆ. ಆದರೆ 3-2ರಲ್ಲಿ ಗೆಲ್ಲುವ ತಂಡಕ್ಕೆ 2 ಅಂಕ ದೊರೆಯಲಿದ್ದು, ಸೋತ ತಂಡಕ್ಕೂ 1 ಅಂಕ ಲಭಿಸಿದೆ. ಹೀಗಾಗಿ ಗುರುವಾರದ ಪಂದ್ಯದಲ್ಲಿ 1 ಅಂಕ ಗಳಿಸಿದ ಸನ್‌ಬರ್ಡ್ಸ್‌ ತಂಡ ಒಟ್ಟು 4 ಅಂಕಗಳೊಂದಿಗೆ ‘ಬಿ’ ಗುಂಪಿನಲ್ಲಿ ಅಗ್ರಸ್ಥಾನಿಯಾಗಿ ಸೆಮೀಸ್‌ ಸ್ಥಾನ ಖಚಿತಪಡಿಸಿಕೊಂಡಿತು.

Pro Kabaddi League: ಬೆಂಗಳೂರಲ್ಲಿಂದು ಬುಲ್ಸ್‌ vs ಡೆಲ್ಲಿ ಫೈಟ್, ಪಂದ್ಯ ನೋಡಲು ಬರುತ್ತಿದ್ದಾರೆ ಕಿಚ್ಚ ಸುದೀಪ್

ಶುಕ್ರವಾರ ಸಡಾ ಹಾಗೂ ಟರ್ಕಿಯ ಹಾಲ್ಕ್‌ಬ್ಯಾಂಕ್ ಸ್ಪೋರ್ ಕುಲುಬೆ ಮುಖಾಮುಖಿಯಾಗಲಿದ್ದು, ಗುಂಪಿನಿಂದ ಮತ್ತೊಂದು ಸೆಮೀಸ್‌ ಸ್ಥಾನಕ್ಕಾಗಿ ಇತ್ತಂಡಗಳ ನಡುವೆ ಪೈಪೋಟಿ ನಡೆಯಲಿದೆ.

ಪ್ಯಾರಾ ಖೇಲೋ ಇಂಡಿಯಾ: ರಾಜ್ಯದ ಅಥ್ಲೀಟ್ಸ್‌ಗೆ ಬೀಳ್ಕೊಡುಗೆ

ಬೆಂಗಳೂರು: ಡಿ.10ರಿಂದ 17ರ ವರೆಗೆ ನವದೆಹಲಿಯಲ್ಲಿ ನಡೆಯಲಿರುವ ಚೊಚ್ಚಲ ಆವೃತ್ತಿಯ ಪ್ಯಾರಾ ಖೇಲೋ ಇಂಡಿಯಾ ಗೇಮ್ಸ್‌ನಲ್ಲಿ ಪಾಲ್ಗೊಳ್ಳಲಿರುವ ಕರ್ನಾಟಕದ 84 ಕ್ರೀಡಾಪಟುಗಳನ್ನು ಗುರುವಾರ ಕರ್ನಾಟಕ ರಾಜ್ಯ ಅಂಗವಿಕಲರ ಕ್ರೀಡಾ ಸಂಸ್ಥೆ ವತಿಯಿಂದ ಬೀಳ್ಕೊಡಲಾಯಿತು.

ನಗರದ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಕೆಲ ಅಥ್ಲೀಟ್‌ಗಳು ಪಾಲ್ಗೊಂಡರು. ಈಗಾಗಲೇ ಹಲವರು ಕ್ರೀಡಾಕೂಟಕ್ಕೆ ತೆರಳಿದ್ದು, ಇತರರು ಶೀಘ್ರವೇ ನವದೆಹಲಿಗೆ ಪ್ರಯಾಣಿಸಲಿದ್ದಾರೆ. ಈ ಬಾರಿ ಕ್ರೀಡಾಕೂಟದಲ್ಲಿ 1350ರಷ್ಟು ಅಥ್ಲೀಟ್‌ಗಳು ಪಾಲ್ಗೊಳ್ಳಲಿದ್ದು, ಅಥ್ಲೆಟಿಕ್ಸ್‌, ಶೂಟಿಂಗ್‌, ಆರ್ಚರಿ ಸೇರಿದಂತೆ 7 ಕ್ರೀಡೆಗಳು ನಡೆಯಲಿವೆ. ಇದೇ ವೇಳೆ ಸಮಾರಂಭದಲ್ಲಿ ಏಷ್ಯನ್‌ ಪ್ಯಾರಾ ಗೇಮ್ಸ್‌ನ ಸಾಧಕರಾದ ನಿಶಾದ್‌ ಕುಮಾರ್‌, ನವ್‌ದೀಪ್‌ ಹಾಗೂ ಅಜಿತ್‌ ಸಿಂಗ್‌ರನ್ನು ಸನ್ಮಾನಿಸಲಾಯಿತು.

ಈ ಹಿಂದೆ ಹರಾಜಿನಲ್ಲಿ ಮಾಡಿದ ಈ 6 ತಪ್ಪು RCB ಮಾಡದಿರಲಿ..! ನಿಮಗೆ ನೆನಪಿವೆಯಾ ಆರ್‌ಸಿಬಿ ಫ್ರಾಂಚೈಸಿ ಎಡವಟ್ಟುಗಳು?

ಸಮಾರಂಭದಲ್ಲಿ ಸಾಯ್‌ ಉಪ ನಿರ್ದೇಶಕಿ ರೀತು, ಖೇಲೋ ಇಂಡಿಯಾ ಹೆಚ್ಚುವರಿ ನಿರ್ದೇಶಕಿ ಹಿಮಾ ಬಿಂದು, ರಾಜ್ಯ ಕ್ರೀಡಾ ಇಲಾಖೆ ಹೆಚ್ಚುವರಿ ನಿರ್ದೇಶಕಿ ಶಶಿಕಲಾ ಸೇರಿದಂತೆ ಪ್ರಮುಖರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಫುಟ್ಬಾಲ್‌ ಲೀಗ್‌: ಪರಿಕ್ರಮ ಶಾಲಾ ತಂಡಕ್ಕೆ ಗೆಲುವು

ಬೆಂಗಳೂರು: ಪರಿಕ್ರಮ ಹ್ಯೂಮಾನಿಟಿ ಫೌಂಡೇಶನ್‌ ಆಯೋಜಿಸುತ್ತಿರುವ 10ನೇ ಆವೃತ್ತಿ ಫುಟ್ಬಾಲ್ ಲೀಗ್‌ನ ಮೊದಲ ದಿನ ನಗರದ ಪರಿಕ್ರಮ ಸೆಂಟರ್‌ ಫಾರ್ ಲರ್ನಿಂಗ್‌ ತಂಡ ಗೆಲುವು ಸಾಧಿಸಿದೆ. ವಿದ್ಯಾನಿಕೇತನ ಶಾಲಾ ತಂಡದ ವಿರುದ್ಧ ಪರಿಕ್ರಮಕ್ಕೆ 6-5 ಗೋಲುಗಳ ಜಯ ಲಭಿಸಿತು. ಮಂಗಳೂರಿನ ಯೆನೆಪೋಯ, ಬೆಂಗಳೂರಿನ ಲೆಗಸಿ ಸ್ಕೂಲ್‌, ಬನ್ನೇರುಘಟ್ಟದ ಗ್ರೀನ್‌ವುಡ್‌ ಪ್ರೌಢ ಶಾಲೆ, ಸ್ಟೆಪ್‌ ಬೈ ಸ್ಟೆಪ್‌ ಶಾಲೆ, ಫ್ರಾಂಕ್‌ ಅಂಥೋನಿ ಪಬ್ಲಿಕ್‌ ಸ್ಕೂಲ್‌, ಪೋಟರಿ ಟೌನ್‌ ಸರ್ಕಾರಿ ಶಾಲಾ ತಂಡಗಳೂ ಶುಭಾರಂಭ ಮಾಡಿದವು.
 

click me!