Asian Games 2023: ಪಾಕ್ ಬಗ್ಗುಬಡಿದು ಸೆಮೀಸ್‌ಗೆ ಲಗ್ಗೆಯಿಟ್ಟ ಭಾರತ ಹಾಕಿ ತಂಡ

By Kannadaprabha News  |  First Published Oct 1, 2023, 11:36 AM IST

ಪಂದ್ಯದ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕಿಳಿದ ಭಾರತ ಯಾವ ಹಂತದಲ್ಲೂ ಪಾಕಿಸ್ತಾನಕ್ಕೆ ಪುಟಿದೇಳಲು ಅವಕಾಶ ನೀಡಲಿಲ್ಲ. ನಾಯಕ  ಹರ್ಮನ್‌ಪ್ರೀತ್ 4 ಗೋಲು ಸಿಡಿಸಿ ಗೆಲುವಿನಲ್ಲಿ  ಪ್ರಮುಖ ಪಾತ್ರ ವಹಿಸಿದರು. ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಭಾರತ ತಂಡ ಬಾಂಗ್ಲಾದೇಶ ವಿರುದ್ಧ ಆಡಲಿದೆ.


ಹಾಂಗ್ಝೂ(ಅ.01): ಭಾರತ ಪುರುಷರ ಹಾಕಿ ತಂಡ ಪಾಕಿಸ್ತಾನ ವಿರುದ್ಧ ಶನಿವಾರ ನಡೆದ ‘ಎ’ ಗುಂಪಿನ ಪಂದ್ಯದಲ್ಲಿ 10-2 ಗೋಲುಗಳ ಭರ್ಜರಿ ಗೆಲುವು ಸಾಧಿಸಿತು. ಇದರೊಂದಿಗೆ ಗುಂಪಿನಲ್ಲಿ ಅಗ್ರಸ್ಥಾನ ಕಾಯ್ದುಕೊಂಡು, ಸೆಮಿಫೈನಲ್ ಪ್ರವೇಶಿಸಿದೆ. ಇದು ಪಾಕಿಸ್ತಾನ ವಿರುದ್ಧ ಭಾರತದ ಅತಿದೊಡ್ಡ ಗೆಲುವಿನ ದಾಖಲೆ. ಈ ಮೊದಲು 2017ರಲ್ಲಿ 7-1 ಗೋಲುಗಳ ಗೆಲುವು ಸಾಧಿಸಿದ್ದು, ಅತಿದೊಡ್ಡ ಗೆಲುವು ಎನಿಸಿತ್ತು. 

1982ರ ಏಷ್ಯಾಡ್ ಫೈನಲ್‌ನಲ್ಲಿ ಪಾಕಿಸ್ತಾನ 7-1ರಲ್ಲಿ ಭಾರತವನ್ನು ಬಗ್ಗುಬಡಿದಿತ್ತು.  ಆ ಸೋಲಿಗೆ 41 ವರ್ಷ ಬಳಿಕ ಭಾರತ ಸೇಡು ತೀರಿಸಿಕೊಂಡಿದೆ. ಪಂದ್ಯದ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕಿಳಿದ ಭಾರತ ಯಾವ ಹಂತದಲ್ಲೂ ಪಾಕಿಸ್ತಾನಕ್ಕೆ ಪುಟಿದೇಳಲು ಅವಕಾಶ ನೀಡಲಿಲ್ಲ. ನಾಯಕ  ಹರ್ಮನ್‌ಪ್ರೀತ್ 4 ಗೋಲು ಸಿಡಿಸಿ ಗೆಲುವಿನಲ್ಲಿ  ಪ್ರಮುಖ ಪಾತ್ರ ವಹಿಸಿದರು. ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಭಾರತ ತಂಡ ಬಾಂಗ್ಲಾದೇಶ ವಿರುದ್ಧ ಆಡಲಿದೆ.

Latest Videos

undefined

ವನಿತಾ ಟೇಬಲ್ ಟೆನಿಸ್: ಸೆಮೀಸ್‌ಗೆ ಲಗ್ಗೆಯಿಟ್ಟ ಭಾರತ

ಹಾಂಗ್ಝೂ: ಟೇಬಲ್ ಟೆನಿಸ್‌ನ ಮಹಿಳಾ ಡಬಲ್ಸ್ ನಲ್ಲಿ ಭಾರತದ ಸುತೀರ್ಥ ಮುಖರ್ಜಿ-ಐಹಿಕಾ ಮುಖರ್ಜಿ ಜೋಡಿ ಸೆಮಿಫೈನಲ್ ಪ್ರವೇಶಿಸಿ ಇತಿಹಾಸ ಸೃಷ್ಟಿಸಿದೆ. ಶನಿವಾರ ಕ್ವಾರ್ಟರ್ ಫೈನಲ್‌ನಲ್ಲಿ ಹಾಲಿ ವಿಶ್ವ ಚಾಂಪಿಯನ್, ವಿಶ್ವ ನಂ.2 ಜೋಡಿ, ಚೀನಾದ ಚೆನ್ ಮೆಂಗ್-ಯಿಡಿ ವ್ಯಾಂಗ್ ವಿರುದ್ಧ 3-1 ಅಂತರದಲ್ಲಿ ಜಯಭೇರಿ ಬಾರಿಸಿತು. 1974 ರಿಂದ ಎಲ್ಲಾ ಆವೃತ್ತಿಗಳಲ್ಲೂ ಚೀನಾದ ಸ್ಪರ್ಧಿಗಳೇ ಪ್ರಾಬಲ್ಯ ಸಾಧಿಸುತ್ತಿದ್ದು, ಕಳೆದ ಆವೃತ್ತಿಯ ಎಲ್ಲಾ ವಿಭಾಗಗಳಲ್ಲೂ ಚಿನ್ನ ಬಾಚಿಕೊಂಡಿತ್ತು. ಆದರೆ ಈ ಬಾರಿ ಭಾರತೀಯ ಜೋಡಿಯ ಪ್ರಬಲ ಆಟದ ಮುಂದೆ ಚೀನಾ ಮಂಡಿಯೂರಿತು. ಇದರೊಂದಿಗೆ ಏಷ್ಯಾಡ್ ಮಹಿಳಾ ಡಬಲ್ಸ್‌ನಲ್ಲಿ ಭಾರತಕ್ಕೆ ಚೊಚ್ಚಲ ಪದಕ ಖಚಿತಪಡಿಸಿಕೊಂಡಿತು. 

ಕ್ರಿಕೆಟ್ ಪ್ರೇಮಿಗಳಿಗಿನ್ನು ವಿಶ್ವಕಪ್ ಫೀವರ್..! ವಿಶ್ವಕಪ್ ಹುಟ್ಟಿನ ಗುಟ್ಟೇನು?

ಆದರೆ ಮನುಷ್ ಶಾ-ಮಾನವ್ ಥಾಕ್ಕರ್ ಇದ್ದ ಪುರುಷರ ತಂಡ ಕ್ವಾರ್ಟರ್‌ನಲ್ಲಿ ದ.ಕೊರಿಯಾ ವಿರುದ್ಧ ಸೋತು ಹೊರಬಿತ್ತು. ಮಹಿಳಾ ಸಿಂಗಲ್ಸ್‌ನಲ್ಲಿ ಮನಿಕಾ ಬಾತ್ರಾ ಕೂಡಾ ಕ್ವಾರ್ಟರ್‌ನಲ್ಲಿ ಅಭಿಯಾನ ಕೊನೆಗೊಳಿಸಿದರು.

ಬ್ಯಾಡ್ಮಿಂಟನ್: ಫೈನಲ್ ಪ್ರವೇಶಿಸಿದ ಭಾರತ ತಂಡ

ಏಷ್ಯಾಡ್‌ನ ಪುರುಷರ ಬ್ಯಾಡ್ಮಿಂಟನ್ ತಂಡ ವಿಭಾಗದಲ್ಲಿ ಚೊಚ್ಚಲ ಬಾರಿಗೆ ಭಾರತ ಫೈನಲ್ ಪ್ರವೇಶಿಸಿದೆ. ಐತಿಹಾಸಿಕ ಚಿನ್ನ ಗೆಲ್ಲಲು ಚೀನಾ ವಿರುದ್ಧ ಭಾರತ ಸೆಣಸಲಿದೆ. ಶನಿವಾರ ಬಲಿಷ್ಠ ದ.ಕೊರಿಯಾ ವಿರುದ್ಧ ಸೆಮಿಫೈನಲ್ ಹಣಾಹಣಿಯನ್ನು ಭಾರತ ತಂಡ 3-2 ಅಂತರದಲ್ಲಿ ರೋಚಕವಾಗಿ ಗೆದ್ದು ಫೈನಲ್ ಗೇರಿತು. ಸಿಂಗಲ್ಸ್ ಪಂದ್ಯಗಳಲ್ಲಿ ಎಚ್.ಎಸ್.ಪ್ರಣಯ್, ಲಕ್ಷ್ಯ ಸೇನ್ ಹಾಗೂ ಕಿದಂಬಿ ಶ್ರೀಕಾಂತ್ ಜಯ ಗಳಿಸಿದರು. ಡಬಲ್ಸ್‌ನ ಎರಡೂ ಪಂದ್ಯಗಳಲ್ಲಿ ಭಾರತಕ್ಕೆ ಸೋಲಾಯಿತು. ಪುರುಷರ ತಂಡ ಈವರೆಗೆ ಏಷ್ಯಾಡ್‌ನಲ್ಲಿ 3 ಬಾರಿ ಪದಕ ಗೆದ್ದಿದೆ. 1974, 1982 ಹಾಗೂ 1986ರಲ್ಲಿ ಕಂಚಿನ ಪದಕ ಒಲಿದಿತ್ತು.

ಅಕ್ಷರ್ ಪಟೇಲ್ ಸ್ಥಾನಕ್ಕೆ ಅಶ್ವಿನ್ ಬದಲಿಗೆ ಈ ಆಟಗಾರನಿಗೆ ಸ್ಥಾನ ನೀಡಬೇಕಿತ್ತು ಎಂದ ವಿಶ್ವಕಪ್ ಹೀರೋ ಯುವಿ..!

ಗಾಲ್ಫ್‌: ಚಿನ್ನದ ಪದಕ ನಿರೀಕ್ಷೆಯಲ್ಲಿ ಅದಿತಿ

ಮಹಿಳೆಯರ ವೈಯಕ್ತಿಕ ವಿಭಾಗದ ಗಾಲ್ಫ್‌ನಲ್ಲಿ ಕರ್ನಾಟಕದ ಅದಿತಿ ಅಶೋಕ್ ಐತಿಹಾಸಿಕ ಚಿನ್ನದ ಪದಕದ ನಿರೀಕ್ಷೆಯಲ್ಲಿದ್ದಾರೆ. ಈವರೆಗಿನ 3 ಸುತ್ತುಗಳ ಆಟದ ಬಳಿಕ ಒಲಿಂಪಿಯನ್ ಅದಿತಿ ಅಗ್ರಸ್ಥಾನದಲ್ಲಿದ್ದು, 2ನೇ ಸ್ಥಾನಿಯ ಸ್ಪರ್ಧಿಗಿಂತ 7 ಶಾಟ್‌ಗಳ ಅಂತರ ಕಾಯ್ದುಕೊಂಡಿದ್ದಾರೆ. ಭಾನುವಾರ ಕೊನೆ ಸುತ್ತು ನಡೆಯಲಿದ್ದು, ಏಷ್ಯಾಡ್ ಇತಿಹಾಸದಲ್ಲೇ ಮೊದಲ ಪದಕ ಗೆದ್ದ ಭಾರತದ ಮಹಿಳಾ ಗಾಲ್ಫರ್ ಎನಿಸಿಕೊಳ್ಳುವ  ತವಕದಲ್ಲಿದ್ದಾರೆ. ಇದೇ ವೇಳೆ ಪ್ರಣವಿ 11, ಅವನಿ ಪ್ರಶಾಂತ್ 19ನೇ ಸ್ಥಾನದಲ್ಲಿದ್ದಾರೆ. ಮಹಿಳಾ ತಂಡ ವಿಭಾಗದಲ್ಲೂ ಭಾರತ ಅಗ್ರಸ್ಥಾನದಲ್ಲಿದ್ದು, ಪದಕ ನಿರೀಕ್ಷೆಯಲ್ಲಿದೆ.

click me!