Asian Champions Trophy Hockey: ಭಾರತ ತಂಡಕ್ಕಿಂದು ದಕ್ಷಿಣ ಕೊರಿಯಾ ಎದುರಾಳಿ

By Suvarna NewsFirst Published Dec 14, 2021, 10:04 AM IST
Highlights

* 2024ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ಸಿದ್ದತೆ ಆರಂಭಿಸಿದ ಭಾರತ ಹಾಕಿ ತಂಡ

* ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದ ಮನ್‌ಪ್ರೀತ್ ಸಿಂಗ್ ಪಡೆ

* ಏಷ್ಯನ್ ಚಾಂಪಿಯನ್ಸ್‌ ಟ್ರೋಫಿ ಹಾಕಿ ಟೂರ್ನಿಯಲ್ಲಿಂದು ಭಾರತಕ್ಕೆ ದಕ್ಷಿಣ ಕೊರಿಯಾ ಸವಾಲು

ಢಾಕಾ(ಡಿ.14): 2024ರ ಪ್ಯಾರಿಸ್‌ ಒಲಿಂಪಿಕ್ಸ್‌ಗೆ (Paris Olympics 2024) ಭಾರತ ಪುರುಷರ ಹಾಕಿ ತಂಡ ಮಂಗಳವಾರದಿಂದ ಅಧಿಕೃತವಾಗಿ ಸಿದ್ಧತೆ ಆರಂಭಿಸಲಿದೆ. ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಗೆ (Asian Champions Trophy Hockey Tournament) ಚಾಲನೆ ಸಿಗಲಿದ್ದು, ಮೊದಲ ಪಂದ್ಯದಲ್ಲಿ ಭಾರತಕ್ಕೆ ದಕ್ಷಿಣ ಕೊರಿಯಾ ಎದುರಾಗಲಿದೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ (Tokyo Olympics) ಕಂಚಿನ ಪದಕ ಗೆದ್ದ ಬಳಿಕ ಇದೇ ಮೊದಲ ಬಾರಿಗೆ ಭಾರತ ತಂಡ ಅಂತಾರಾಷ್ಟ್ರೀಯ ಟೂರ್ನಿಯಲ್ಲಿ ಕಣಕ್ಕಿಳಿಯಲಿದೆ. 2011ರಲ್ಲಿ ಆರಂಭಗೊಂಡ ಟೂರ್ನಿಯಲ್ಲಿ ಭಾರತ ಈವರೆಗೂ 3 ಬಾರಿ ಚಾಂಪಿಯನ್‌ ಆಗಿದೆ. 

ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ಕಳೆದ 2 ಆವೃತ್ತಿಗಳಲ್ಲಿ ಭಾರತವೇ ಪ್ರಶಸ್ತಿ ಜಯಿಸಿತ್ತು. ಈ ಬಾರಿಯೂ ಟ್ರೋಫಿ ಗೆದ್ದು ಹ್ಯಾಟ್ರಿಕ್‌ ಬಾರಿಸಲು ಮನ್‌ಪ್ರೀತ್‌ ಸಿಂಗ್‌ (Manpreet Singh) ಪಡೆ ಕಾತರಿಸುತ್ತಿದೆ. ಭಾರತ ತಂಡ, ಡಿಸೆಂಬರ್ 15ರಂದು 2ನೇ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಎದುರಿಸಲಿದ್ದು, ಡಿಸೆಂಬರ್ 17ರಂದು ಬದ್ಧವೈರಿ ಪಾಕಿಸ್ತಾನ, ಡಿಸೆಂಬರ್ 19ರಂದು ಜಪಾನ್‌ ವಿರುದ್ಧ ಸೆಣಸಲಿದೆ. ಡಿಸೆಂಬರ್ 21ಕ್ಕೆ ಸೆಮಿಫೈನಲ್ಸ್‌, ಡಿಸೆಂಬರ್ 22ಕ್ಕೆ ಫೈನಲ್‌ ನಡೆಯಲಿದೆ.

ಪಂದ್ಯ ಆರಂಭ: ಮಧ್ಯಾಹ್ನ 3.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌ 1

ರಾಷ್ಟ್ರೀಯ ಹಾಕಿ: ಸತತ 2ನೇ ಜಯ ಕಂಡ ಕರ್ನಾಟಕ

ಪುಣೆ: 11ನೇ ರಾಷ್ಟ್ರೀಯ ಪುರುಷರ ಹಾಕಿ ಟೂರ್ನಿಯಲ್ಲಿ ಕರ್ನಾಟಕ ತಂಡ (Men's Karnataka Hockey Team) ಕ್ವಾರ್ಟರ್‌ ಫೈನಲ್‌ ಪ್ರವೇಶಿಸುವುದು ಬಹುತೇಕ ಖಚಿತವೆನಿಸಿದೆ. ಸೋಮವಾರ ನಡೆದ ‘ಸಿ’ ಗುಂಪಿನ 2ನೇ ಪಂದ್ಯದಲ್ಲಿ ರಾಜ್ಯ ತಂಡ, ಪುದುಚೇರಿ ವಿರುದ್ಧ 4-0 ಗೋಲುಗಳ ಗೆಲುವು ಸಾಧಿಸಿತು.

ಹರೀಶ್‌(5ನೇ ನಿಮಿಷ,) ದೀಕ್ಷಿತ್‌ (25ನೇ ನಿಮಿಷ,), ಶಮಂತ್‌ (40ನೇ ನಿಮಿಷ,) ಹಾಗೂ ಪವನ್‌ (49ನೇ ನಿಮಿಷ,) ಗೋಲು ಬಾರಿಸಿದರು. ಬುಧವಾರ ಗುಂಪು ಹಂತದ ಅಂತಿಮ ಪಂದ್ಯದಲ್ಲಿ ಕರ್ನಾಟಕ, ಅರುಣಾಚಲ ಪ್ರದೇಶವನ್ನು ಎದುರಿಸಲಿದೆ.

2024ರ ಒಲಿಂಪಿಕ್ಸ್‌: ಟಾಫ್ಸ್‌ ಪಟ್ಟಿಗೆ 148 ಕ್ರೀಡಾಪಟುಗಳು

ನವದೆಹಲಿ: 2024ರ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಕ್ರೀಡಾ ಸಚಿವಾಲಯದ ಮಿಷನ್‌ ಒಲಿಂಪಿಕ್ಸ್‌ ಸೆಲ್‌(ಎಂಒಸಿ) 148 ಕ್ರೀಡಾಪಟುಗಳನ್ನು ಗುರುತಿಸಿದ್ದು, ಈ ಕ್ರೀಡಾಪಟುಗಳಿಗೆ ಟಾರ್ಗೆಟ್‌ ಒಲಿಂಪಿಕ್‌ ಪೋಡಿಯಂ (Target Olympic Podium) ಯೋಜನೆ (ಟಾಫ್ಸ್‌) ಅಡಿಯಲ್ಲಿ ಆರ್ಥಿಕ ನೆರವು ನೀಡಲು ನಿರ್ಧರಿಸಲಾಗಿದೆ. 

ಈ ಮೊದಲು ಪಟ್ಟಿಯಲ್ಲಿದ್ದವರ ಹಲವರನ್ನು ಉಳಿಸಿಕೊಳ್ಳಲಾಗಿದ್ದು, 20 ಹೊಸ ಕ್ರೀಡಾಪಟುಗಳನ್ನು ಸೇರ್ಪಡೆಗೊಳಿಸಲಾಗಿದೆ. ಸೈಕ್ಲಿಂಗ್‌, ಶೂಟಿಂಗ್‌, ಈಜು, ಟೇಬಲ್‌ ಟೆನಿಸ್‌, ವೇಟ್‌ಲಿಫ್ಟಿಂಗ್‌, ಕುಸ್ತಿ, ಆರ್ಚರಿ, ಅಥ್ಲೆಟಿಕ್ಸ್‌, ಬ್ಯಾಡ್ಮಿಂಟನ್‌ ಸೇರಿ ಹಲವು ಕ್ರೀಡೆಗಳ ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಗಿದೆ. ಕರ್ನಾಟಕದ ಈಜುಪಟು ಶ್ರೀಹರಿ ನಟರಾಜ್‌, ಟಿಟಿ ಆಟಗಾರ್ತಿ ಅರ್ಚನಾ ಕಾಮತ್‌, ಕುಸ್ತಿಪಟು ಅರ್ಜುನ್‌ ಸಹ ಪಟ್ಟಿಯಲ್ಲಿದ್ದಾರೆ.

Badminton World Championships: ಪ್ರಣಯ್‌ಗೆ ಜಯ, ಸೋತ ಪ್ರಣೀತ್..!

ಸ್ಪೇನ್‌: ಬ್ಯಾಡ್ಮಿಂಟನ್‌ ವಿಶ್ವ ಚಾಂಪಿಯನ್‌ಶಿಪ್‌ನ ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಎಚ್‌.ಎಸ್‌. ಪ್ರಣಯ್ (HS Prannoy) ಎರಡನೇ ಸುತ್ತು ಪ್ರವೇಶಿಸಿದ್ದಾರೆ. ಮೊದಲ ಸುತ್ತಲ್ಲಿ ಹಾಂಕಾಂಗ್‌ನ ಲಾಂಗ್ ಆಂಗುಸ್ ವಿರುದ್ದ 13-21, 21-18, 21-19ರಲ್ಲಿ ಪ್ರಣಯ್ ರೋಚಕ ಗೆಲುವು ಸಾಧಿಸಿದರು. 

Badminton World Championships: ಎರಡನೇ ಸುತ್ತಿಗೆ ಲಗ್ಗೆಯಿಟ್ಟ ಕಿದಂಬಿ ಶ್ರೀಕಾಂತ್

ಇನ್ನು ಇದೇ ವೇಳೆ ಬಿ. ಸಾಯಿ ಪ್ರಣೀತ್ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದರು. ಪುರುಷರ ಡಬಲ್ಸ್‌ನಲ್ಲಿ ಭಾರತದ ಧೃವ್‌ ಕಪಿಲಾ-ಅರ್ಜುನ್ ಜೋಡಿ ಎರಡನೆ ಸುತ್ತಿಗೆ ಲಗ್ಗೆಯಿಟ್ಟಿದೆ

click me!