ಕೊಡವ ಹಾಕಿ ನಮ್ಮೆ: ಇಂದು ಸೆಮಿಫೈನಲ್‌ ಫೈಟ್

By Kannadaprabha News  |  First Published Apr 7, 2023, 10:36 AM IST

23ನೇ ಕೊಡವ ಕೌಟುಂಬಿಕ ಹಾಕಿ ನಮ್ಮೆಯ ಸೆಮಿಫೈನಲ್ ಇಂದಿನಿಂದ ಆರಂಭ
ಫೈನಲ್‌ ಪ್ರವೇಶಿಸಲು ನೆಲಮಕ್ಕಡ- ಕುಲ್ಲೇಟಿರ ನಡುವೆ ಸೆಮೀಸ್ ಫೈಟ್
ಏಪ್ರಿಲ್ 09ರಂದು ನಡೆಯಲಿದೆ ಫೈನಲ್ ಕದನ


- ದುಗ್ಗಳ ಸದಾನಂದ, ಕನ್ನಡಪ್ರಭ

ನಾಪೋಕ್ಲು(ಏ.07): ಇಲ್ಲಿಗೆ ಸಮೀಪದ ಚೆರಿಯಪರಂಬುವಿನ ಜನರಲ್‌ ಕೆ.ಎಸ್‌. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅಪ್ಪಚೆಟ್ಟೋಳಂಡ ಕಪ್‌ 23ನೇ ಕೊಡವ ಕೌಟುಂಬಿಕ ಹಾಕಿ ನಮ್ಮೆಯ ಗುರುವಾರದ ಫ್ರೀ ಕ್ವಾರ್ಟರ್‌ ಫೈನಲ್‌ ಪಂದ್ಯಾಟದಲ್ಲಿ ಕುಪ್ಪಂಡ (ಕೈಕೇರಿ) ಮತ್ತು ಮುರುವಂಡ ತಂಡಗಳು ಸ್ಪರ್ಧಿಸಿದವು.

Tap to resize

Latest Videos

undefined

ಕುಪ್ಪಂಡ (ಕೈಕೇರಿ) ತಂಡದ ಪರವಾಗಿ ಕುಪ್ಪಂಡ ಸೋಮಯ್ಯ ನಾಲ್ಕು ಗೋಲು ಗಳಿಸಿದರೆ ನಾಚಪ್ಪ ಹಾಗೂ ಮಂದಣ್ಣ ತಲಾ ಒಂದು ಗೋಲು ಗಳಿಸಿದರು. ಮುರುವಂಡ ತಂಡದ ಅಣ್ಣಯ್ಯ ಎರಡು ಗೋಲು ಗಳಿಸಿದರು. ಕುಪ್ಪಂಡ (ಕೈಕೇರಿ) ತಂಡ 6- 2ರಲ್ಲಿ ಗೆಲುವು ಸಾಧಿಸಿತು.

ನಂತರ ನಡೆದ ಕ್ವಾರ್ಟರ್‌ ಫೈನಲ್‌ ಪಂದ್ಯಗಳಲ್ಲಿ ಪಳಂಗಂಡ, ನೆಲ್ಲಮಕ್ಕಡ, ಕುಲ್ಲೇಟಿರ ಮತ್ತು ಕುಪ್ಪಂಡ (ಕೈಕೇರಿ) ತಂಡಗಳು ಗೆಲುವು ಸಾಧಿಸಿ ಸೆಮಿಫೈನಲ್‌ ಪ್ರವೇಶಿಸಿದವು. ಅಮ್ಮಣಿಚಂಡ ಮತ್ತು ಪಳಂಗಡ ತಂಡಗಳ ನಡುವಿನ ಪಂದ್ಯದಲ್ಲಿ ಪಳಂಗಂಡ 2- 1 ಜಯ ಸಾಧಿಸಿತು. ಅಮ್ಮಣಿಚಂಡ ತಂಡದ ಪರವಾಗಿ ವಿಘ್ನೇಶ್‌ ಬೋಪಣ್ಣ ಒಂದು ಗೋಲು ಗಳಿಸಿದರು. ಪಳಂಗಂಡ ತಂಡದ ಪರವಾಗಿ ಅಜಯ್‌ ಮತ್ತು ಪೊನ್ನಪ್ಪ ತಲಾ ಒಂದು ಗೋಲು ಗಳಿಸಿ ತಂಡದ ಗೆಲುವಿಗೆ ಕಾರಣರಾದರು.

ನೆಲ್ಲಮಕ್ಕಡ ತಂಡದ ಪರವಾಗಿ ಸೋಮಯ್ಯ 3 ಗೋಲು ಹಾಗೂ ದೇವಯ್ಯ ಮತ್ತು ಮೊಣ್ಣಪ್ಪ ತಲಾ ಒಂದು ಗೋಲು ಗಳಿಸಿದರು. ಕಂಬಿರಂಡ ತಂಡ ಕೇವಲ ಒಂದು ಗೋಲು ಗಳಿಸಿತು. ಕಂಬೀರಂಡ ತಂಡದ ಮಯೂರ್‌ ಬೋಪಯ್ಯ ಒಂದು ಗೋಲು ಗಳಿಸಿದರು. ನೆಲ್ಲಮಕ್ಕಡ ತಂಡವು ಕಂಬೀರಂಡ ವಿರುದ್ಧ 5- 1 ರ ಭರ್ಜರಿ ಜಯ ಸಾಧಿಸಿತು. ಕುಲ್ಲೆಟಿರ 3- 1ರಲ್ಲಿ ಪುದಿಯೊಕ್ಕಡ ವಿರುದ್ಧ ಜಯ ಸಾಧಿಸಿತು. ಕುಲ್ಲೇಟಿರ ತಂಡದ ಅವನೀಶ ಮಂದಪ್ಪ ಮೂರು ಗೋಲು ಗಳಿಸಿದರೆ ಪುದಿಯೊಕ್ಕಡ ತಂಡದ ಪರವಾಗಿ ಪ್ರಧಾನ್‌ ಸೋಮಣ್ಣ ಒಂದು ಗೋಲು ಗಳಿಸಿದರು. ಚೆಕ್ಕೆರ ಮತ್ತು ಕುಪ್ಪಂಡ (ಕೈಕೇರಿ) ನಡುವೆ ನಡೆದ ಪಂದ್ಯದಲ್ಲಿ ಕುಪ್ಪಂಡ (ಕೈಕೇರಿ) ತಂಡವು 3- 2 ಅಂತರದಿಂದ ಚೆಕ್ಕೇರ ವಿರುದ್ಧ ಗೆಲುವು ಸಾಧಿಸಿತು. ಚೆಕ್ಕೇರ ಸೋಮಯ್ಯಎರಡು ಗೋಲು ಬಾರಿಸಿದರೆ ಕುಪ್ಪಂಡ ಸೋಮಯ್ಯ ಮೂರು ಗೋಲು ಬಾರಿಸಿ ಕುಪ್ಪಂಡ ತಂಡದ ಗೆಲುವಿಗೆ ಕಾರಣರಾದರು.

ಇಂದಿನ ಸೆಮಿಫೈನಲ್‌ ಪಂದ್ಯಗಳು

ನೆಲಮಕ್ಕಡ- ಕುಲ್ಲೇಟಿರ

ಕುಪ್ಪಂಡ (ಕೈಕೇರಿ)- ಪಳಂಗಂಡ

9ರಂದು ಕೊಡವ ಕೌಟುಂಬಿಕ ಹಾಕಿ ಅಂತಿಮ ಪಂದ್ಯ

ಮಡಿಕೇರಿ: ನಾಪೋಕ್ಲುವಿನಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ’ಅಪ್ಪಚೆಟ್ಟೋಳಂಡ ಹಾಕಿ ಉತ್ಸವ’ ಕೊನೆಯ ಘಟ್ಟವನ್ನು ತಲುಪಿದ್ದು, ಪಂದ್ಯಾವಳಿಯ ಸೆಮಿ ಫೈನಲ್ಸ್‌ ಏ.7ರಂದು ಶುಕ್ರವಾರ ಮತ್ತು ಅಂತಿಮ ಪಂದ್ಯ ಏ.9ರಂದು ಭಾನುವಾರ ನಡೆಯಲಿದೆ ಎಂದು ಪಂದ್ಯಾವಳಿ ಆಯೋಜನಾ ಸಮಿತಿಯ ಸಂಚಾಲಕ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಇಪ್ಪತ್ತು ದಿನಗಳಿಂದ ನಡೆಯುತ್ತಿರುವ ಪಂದ್ಯಾವಳಿಯಲ್ಲಿ ನೋಂದಾಯಿಸಿಕೊಂಡ 336 ತಂಡಗಳ ಪೈಕಿ 329 ತಂಡಗಳು ಪಾಲ್ಗೊಂಡಿದ್ದವು ಎಂದರು.

ಇಂದು ಸೆಮಿಫೈನಲ್‌: ಏ.7ರಂದು ಶುಕ್ರವಾರ ಹಾಕಿ ನಮ್ಮೆಯ ಸೆಮಿಫೈನಲ್‌ ನಡೆಯಲಿದ್ದು, ಮೊದಲ ಸೆಮಿಫೈನಲ್‌ ಪಂದ್ಯವನ್ನು ಭಾರತ ಹಾಕಿ ತಂಡದ ಮಾಜಿ ನಾಯಕ, ಒಲಂಪಿಯನ್‌ ಮನೆಯಪಂಡ ಸೋಮಯ್ಯ ಉದ್ಘಾಟಿಸಲಿಸಲಿದ್ದಾರೆ. ದ್ವಿತೀಯ ಸೆಮಿಫೈನಲ್‌ ಪಂದ್ಯವನ್ನು ಅಂತಾರಾಷ್ಟ್ರೀಯ ಹಾಕಿ ತೀರ್ಪುಗಾರರಾದ ಅಚ್ಚಕಾಳಿರ ಪಳಂಗಪ್ಪ ಮತ್ತು ಅಯ್ಯುಡ ವೇಣು ಉತ್ತಪ್ಪ ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭ ಪಾಲೆಕಂಡ ಬೋಪಯ್ಯ, ಪಾಕಂಡ ಬೆಳ್ಯಪ್ಪ, ಮಾರಮಾಡ ಮಾಚಮ್ಮ ಅವರನ್ನು ಅವರ ಕ್ರೀಡಾ ಸಾಧನೆಗಾಗಿ ಸನ್ಮಾನಿಸಿ ಗೌರವಿಸಲಾಗುವುದು ಎಂದು ಮನು ಮುತ್ತಪ್ಪ ತಿಳಿಸಿದರು.

Appachettolanda Hockey Festival: ಅಮ್ಮಣಿಚಂಡ, ಪಳಂಗಂಡ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ

9ರಂದು ಅಂತಿಮ ಪಂದ್ಯ: ಹಾಕಿ ನಮ್ಮೆಯ ಅಂತಿಮ ಪಂದ್ಯ ಏ.9 ರಂದು ನಡೆಯಲಿದ್ದು, ಪಂದ್ಯವನ್ನು ಹಾಕಿ ಉತ್ಸವದ ಸ್ಥಾಪಕ ಪಾಂಡಂಡ ಕುಟ್ಟಪ್ಪ ಅವರ ಪತ್ನಿ ಪಾಂಡಂಡ ಲೀಲಾ ಕುಟ್ಟಪ್ಪ ಉದ್ಘಾಟಿಸಲಿದ್ದಾರೆ. ಸಮಾರಂಭದಲ್ಲಿ ಏರ್‌ ಮಾರ್ಷಲ್‌ ಬಲ್ಕಿಕಾಳಂಡ ಯು. ಚೆಂಗಪ್ಪ, ಗಾರ್ಡನ್‌ ಸಿಟಿ ಯೂನಿವರ್ಸಿಟಿಯ ಕುಲಪತಿ ಡಾ. ಜೋಸೆಫ್‌ ವಿ.ಜಿ., ಕೈಗ್‌ ಸಂಸ್ಥೆಯ ಕುಟ್ಟಂಡ ಸುದಿನ್‌ ಮಂದಣ್ಣ, ಭಾರತ ಹಾಕಿ ತಂಡದ ಮಾಜಿ ನಾಯಕರಾದ ಜಫರ್‌ ಇನ್ಸಾಲ್‌, ಧನರಾಜ್‌ ಪಿಳ್ಳೆ, ಒಲಂಪಿಯನ್‌ ಅಂಜಪರವಂಡ ಸುಬ್ಬಯ್ಯ, ಒಲಂಪಿಯನ್‌ ಚೆಪ್ಪುಡಿರ ಎಸ್‌. ಪೂಣಚ್ಚ, ಒಲಂಪಿಯನ್‌ ಎಸ್‌.ವಿ. ಸುನಿಲ್‌ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಪಂದ್ಯಾವಳಿ ವಿಜೇತ ತಂಡಕ್ಕೆ 3 ಲಕ್ಷ ರು. ನಗದು ಮತ್ತು ಟ್ರೋಫಿ, ದ್ವಿತೀಯ 2 ಲಕ್ಷ ರು. ಮತ್ತು ಟ್ರೋಫಿ, ತೃತೀಯ 1.50 ಲಕ್ಷ ನಗದು ಮತ್ತು ಟ್ರೋಫಿ, ನಾಲ್ಕನೇ 50 ಸಾವಿರ ರು. ಮತ್ತು ಟ್ರೋಫಿ ನೀಡಲಾಗುವುದು ಎಂದರು. ಪಂದ್ಯಾವಳಿ ಪುರುಷೋತ್ತಮರಿಗೆ 1 ಲಕ್ಷ, ಅಂತಿಮ ಪಂದ್ಯ ಪುರುಷೋತ್ತಮರಿಗೆ 50 ಸಾವಿರ ನಗದು ಬಹುಮಾನ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಪಂದ್ಯಾವಳಿ ಆಯೋಜನಾ ಸಮಿತಿಯ ಗೌರವ ಕಾರ್ಯದರ್ಶಿ ಮಿಥುನ್‌ ಮಾಚಯ್ಯ, ಸದಸ್ಯರಾದ ಮನು ಮಾದಪ್ಪ, ಸೋಮಣ್ಣ, ರಾಧಿಕಾ ಮಾದಪ್ಪ, ಶಶಿ ಜನತ್‌ ಕುಮಾರ್‌ ಇದ್ದರು.

click me!