ಮಹತ್ಚದ ಘಟ್ಟದತ್ತ 23ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ಟೂರ್ನಿ
ಈಗಾಗಲೇ 16 ತಂಡಗಳು ಅಂತಿಮ ಘಟ್ಟದತ್ತ ಲಗ್ಗೆ
ಇಂದಿನಿಂದ ಪ್ರಿಕ್ವಾರ್ಟರ್ ಫೈನಲ್ ಆರಂಭ
- ವಿಘ್ನೇಶ್ ಎಂ. ಭೂತನಕಾಡು, ಕನ್ನಡಪ್ರಭ
ಮಡಿಕೇರಿ(ಏ.04): ನಾಲ್ಕು ವರ್ಷಗಳ ಬಳಿಕ ನಡೆಯುತ್ತಿರುವ ವಿಶ್ವದ ಗಮನ ಸೆಳೆದಿರುವ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ ಅಂತಿಮ ಘಟ್ಟದತ್ತ ಸಾಗಿದ್ದು, ಏ.4ರಂದು ಪ್ರಿಕ್ವಾರ್ಟರ್ ಪಂದ್ಯಗಳು ನಡೆಯಲಿದೆ. ಈಗಾಗಲೇ 16 ತಂಡಗಳು ಅಂತಿಮ ಘಟ್ಟದತ್ತ ಬಂದಿದ್ದು, ಏ.9ರಂದು ಫೈನಲ್ ಪಂದ್ಯಗಳು ನಡೆಯಲಿದೆ.
undefined
ಮಡಿಕೇರಿ ತಾಲೂಕಿನ ನಾಪೋಕ್ಲುವಿನ ಚೆರಿಯಪರಂಬು ಕೆ.ಎಸ್. ತಿಮ್ಮಯ್ಯ ಮೈದಾನದಲ್ಲಿ 23ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ ನಡೆಯುತ್ತಿದ್ದು, ಈ ಬಾರಿ ಸುಮಾರು 336 ತಂಡಗಳು ನೋಂದಾಯಿಸಿಕೊಂಡಿದ್ದು, 16 ತಂಡಗಳ ನಡುವೆ ಎರಡು ದಿನಗಳ ಕಾಲ ಪ್ರಿಕ್ವಾರ್ಟರ್ ಪಂದ್ಯಾವಳಿ ನಡೆಯಲಿದೆ. ಈವರೆಗೆ ಮೂರು ಮೈದಾನದಲ್ಲಿ ಪಂದ್ಯಾವಳಿ ನಡೆಯುತ್ತಿತ್ತು. ಇದೀಗ ಪ್ರಿಕ್ವಾರ್ಟರ್ ಪಂದ್ಯಗಳು ಮೈದಾನ ಒಂದರಲ್ಲೇ ನಡೆಯಲಿದೆ.
ಮಾ.18ರಂದು ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ ಚಾಲನೆಗೊಂಡಿತ್ತು. ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರು ಹಾಕಿ ಉತ್ಸವಕ್ಕೆ ಚಾಲನೆ ನೀಡಿದ್ದರು. ಏಪ್ರಿಲ್ 7ರಂದು ಸೆಮಿಫೈನಲ್ ಪಂದ್ಯ ನಡೆಯಲಿದ್ದು, 9ರಂದು ಫೈನಲ್ ಪಂದ್ಯಾವಳಿ ನಡೆಯಲಿದೆ. ಹಾಕಿ ಉತ್ಸವದಲ್ಲಿ ಪ್ರಶಸ್ತಿ ಪಡೆವ ತಂಡಕ್ಕೆ 3 ಲಕ್ಷ ರು. ಹಾಗೂ ರನ್ನರ್ ಅಪ್ ತಂಡಕ್ಕೆ 2 ಲಕ್ಷ ರು. ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲು ಅಪ್ಪಚೆಟ್ಟೋಳಂಡ ಹಾಕಿ ಸಮಿತಿ ನಿರ್ಧರಿಸಿದೆ.
ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ಈ ಹಿಂದಿನ ಚಾಂಪಿಯನ್ ತಂಡಗಳಾಗಿರುವ ನೆಲ್ಲಮಕ್ಕಡ, ಪಳಂಗಂಡ, ಕುಲ್ಲೇಟಿರ, ಕಲಿಯಂಡ ತಂಡಗಳು ಕೂಡ ಈ ಬಾರಿ ಪ್ರಿ ಕ್ವಾರ್ಟರ್ ಫೈನಲ್‌ಗೆ ಬಂದಿದೆ. ಈ ಬಾರಿ ಮುಕ್ಕಾಟಿರ(ಪುಲಿಕೋಟು) ತಂಡ ಕೂಡ ಬಲಿಷ್ಠವಾಗಿದೆ. ಪುದಿಯೊಕ್ಕಡ ತಂಡದಲ್ಲಿ ಅಂತಾರಾಷ್ಟ್ರೀಯ ಹಾಕಿ ಆಟಗಾರ ಪ್ರಧಾನ ಸೋಮಣ್ಣ, ಕುಪ್ಪಂಡ ಕೈಕೇರಿ ತಂಡದಲ್ಲಿ ಜೂನಿಯರ್ ಇಂಡಿಯಾ ಆಟಗಾರ ಕೆ.ಪಿ. ಸೋಮಯ್ಯ ಕೂಡ ಪಾಲ್ಗೊಂಡಿದ್ದು, ಪ್ರಿಕ್ವಾರ್ಟರ್ ಪಂದ್ಯ ಆಡಲಿದ್ದಾರೆ.
ಮುಂಬೈ 5, ಚೆನ್ನೈ 4 ಟ್ರೋಫಿ ಗೆದ್ದಿರಬಹುದು, ಆದ್ರೆ..? ಟೀಕಾಕಾರರಿಗೆ ವಾರ್ನಿಂಗ್ ಕೊಟ್ಟ ವಿರಾಟ್ ಕೊಹ್ಲಿ..!
ಫೈನಲ್ ಪಂದ್ಯದಲ್ಲಿ ಸುಮಾರು 25 ಸಾವಿರ ಮಂದಿ ಪಾಲ್ಗೊಳ್ಳಲಿದ್ದಾರೆ. ಒಲಿಂಪಿಕ್ಸ್ ಹಾಕಿಯಲ್ಲಿ ಪಾಲ್ಗೊಂಡಿರುವ ಕೊಡಗಿನ ಆಟಗಾರರು ಫೈನಲ್ಸ್‌ನಲ್ಲಿ ಭಾಗವಹಿಸಲಿದ್ದಾರೆ. ಹಾಕಿ ಫೈನಲ್ಸ್ ದಿನದಂದು ಬೆಂಗಳೂರಿನಿಂದ 100 ಮಂದಿ ಹಾಕಿ ಮೈದಾನಕ್ಕೆ ಸೈಕಲ್‌ನಲ್ಲಿ ಬರುತ್ತಿದ್ದಾರೆ. ಉತ್ತಮ ಪ್ರದರ್ಶನ ನೀಡಿದ 25 ಮಂದಿ ಯುವಕರನ್ನು ಆಯ್ಕೆ ಮಾಡಿ ಅವರನ್ನು ಮುಂದಿನ ದಿನಗಳಲ್ಲಿ ಉತ್ತೇಜಿಸಲು ಹಾಕಿ ಸಮಿತಿ ಚಿಂತಿಸಿದೆ.
ದಾಖಲೆ ಸೃಷ್ಟಿಸಿದ ಹಾಕಿ ಉತ್ಸವ
1997ರಲ್ಲಿ ಮೊದಲ ಬಾರಿಗೆ ಕೊಡವ ಕೌಟುಂಬಿಕ ಹಾಕಿ ಉತ್ಸವ ಆರಂಭವಾಗಿದ್ದು, 60 ಕುಟುಂಬಗಳ ತಂಡಗಳು ಮಾತ್ರ ಪಾಲ್ಗೊಂಡಿತ್ತು. ಇದೀಗ ನಡೆಯುತ್ತಿರುವ ಅಪ್ಪಚೆಟ್ಟೋಳಂಡ ಹಾಕಿ ಪಂದ್ಯದಲ್ಲಿ ಸುಮಾರು 336 ಕುಟುಂಬಗಳು ಪಾಲ್ಗೊಳ್ಳುವ ಮೂಲಕ ಹಾಕಿ ಉತ್ಸವದಲ್ಲಿ ಇತಿಹಾಸ ಸೃಷ್ಟಿಸಿದೆ. 2018ರಲ್ಲಿ ನಡೆದ ಕುಲ್ಲೇಟಿರ ಕಪ್ ನಲ್ಲಿ 329 ತಂಡಗಳು ಪಾಲ್ಗೊಂಡಿತ್ತು.
ಹಾಕಿ ಉತ್ಸವ ಮುಕ್ತಾಯದ ಹಂತದತ್ತ ಬರುತ್ತಿದೆ. ಈ ಬಾರಿಯ ಫೈನಲ್ಸ್ ಪಂದ್ಯದಲ್ಲಿ ಒಲಿಂಪಿಕ್ಸ್ ಹಾಕಿಯಲ್ಲಿ ಪಾಲ್ಗೊಂಡ ಕೊಡಗಿನ ಆಟಗಾರರನ್ನು ಆಹ್ವಾನಿಸಲಾಗಿದೆ. ಕೊಡವ ಕೌಟುಂಬಿಕ ಹಾಕಿ ಉತ್ಸವದಲ್ಲಿ 336 ಕುಟುಂಬಗಳು ಇದೇ ಮೊದಲ ಬಾರಿಗೆ ಪಾಲ್ಗೊಂಡಿರುವುದು ವಿಶೇಷ. ಈ ಬಾರಿ ಲಿಮ್ಕಾ ಬುಕ್ ಆಫ್ ರೆಕಾರ್ಡ್‌ಗೆ ದಾಖಲೆ ನೀಡಲಾಗಿದೆ. ಫೈನಲ್ಸ್‌ಗೆ 25 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆಯಿದೆ - ಮನು ಮುತ್ತಪ್ಪ, ಅಪ್ಪಚೆಟ್ಟೋಳಂಡ ಹಾಕಿ ಉತ್ಸವ