ಕಾಶ್ಮೀರದಲ್ಲಿ ಆತಂಕದ ವಾತಾವರಣ ದೂರವಾಗುತ್ತಿದೆ. ಅಭಿವೃದ್ಧಿ ಕಾಣುತ್ತಿದೆ. ಇದರ ಜೊತೆಗೆ ಯುವ ಸಮೂಹ ಕ್ರೀಡೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಿದೆ. ಕಾಶ್ಮೀರದಲ್ಲಿ ಇದೀಗ ಹಾಕಿ ಕ್ರೀಡೆ ಕಲರವ ಜೋರಾಗಿದೆ. ಕಾಶ್ಮೀರ ರಾಜ್ಯ ತಂಡದ ಮೂಲಕ ಹಾಕಿ ಇಂಡಿಯಾಗೆ ಆಡಲು ಹಲವು ಪ್ರತಿಭೆಗಳು ತುದಿಗಾಲಲ್ಲಿ ನಿಂತಿದೆ. ಕಾಶ್ಮೀರದಲ್ಲಿ ಬದಲಾದ ಚಿತ್ರಣ ಕುರಿತು ಹಾಕಿ ಪಟು ಇನಾಯತ್ ಹಲವು ಮಾಹಿತಿ ಬಿಚ್ಚಿಟ್ಟಿದ್ದಾರೆ.
ಶ್ರೀನಗರ(ಏ.07): ಆರ್ಟಿಕಲ್ 370 ರದ್ದು ಮಾಡಿದ ಬಳಿಕ ಜಮ್ಮು ಮತ್ತು ಕಾಶ್ಮೀರದ ಸ್ವರೂಪ ಬದಲಾಗಿದೆ. ಯುವ ಸಮೂಹ ಕ್ರೀಡೆಯತ್ತ ಒಲವು ತೋರಿಸುತ್ತಿದ್ದಾರೆ.ಕ್ರೀಡೆಯಲ್ಲಿ ಬೆರಳೆಣಿಕೆಯಷ್ಟಿದ್ದ ಸಂಖ್ಯೆ ಇದೀಗ ಕ್ರೀಡೆಯನ್ನು ವೃತ್ತಿಪರವಾಗಿ ಸ್ವೀಕರಿಸುವ ಸಂಖ್ಯೆ ಹೆಚ್ಚಾಗಿದೆ. ಯುವ ಸಮೂಹ ಕಲ್ಲು, ಬಡಿಗೆ ಹಿಡಿದು ಬೀದಿಗಿಳಿಯುತ್ತಿದ್ದ ಕಾಲ ಬದಲಾಗಿದೆ. ಇದೀಗ ರಾಷ್ಟ್ರೀಯ ತಂಡಕ್ಕೆ ಆಡಲು ಪೈಪೋಟಿ ಹೆಚ್ಚಾಗಿದೆ. ಕಣಿವೆ ರಾಜ್ಯದ ಹಲವು ಭಾಗದಲ್ಲಿ ಒಂದೊಂದು ಕ್ರೀಡೆ ಜನಪ್ರಿಯತೆಗಳಿಸುತ್ತಿದೆ. ಇದರಲ್ಲಿ ಭಾರತದ ರಾಷ್ಟ್ರೀಯ ಕ್ರೀಡೆ ಹಾಕಿ ಕೂಡ ಒಂದು. ಜಮ್ಮು ಮತ್ತು ಕಾಶ್ಮೀರ ಯುವ ಸಮೂಹ ಇದೀಗ ಹಾಕಿಯಲ್ಲಿ ತೊಡಗಿಸಿಕೊಳ್ಳುತ್ತಿದೆ. ಹುಡುಕಿದರೂ ಕ್ರೀಡೆಯತ್ತ ಆಸಕ್ತಿ ತೋರದ ಯುವ ಸಮೂಹ ಇಂದು ಕ್ರೀಡೆಯನ್ನು ವೃತ್ತಿಪರವಾಗಿ ಸ್ವೀಕರಿಸುತ್ತಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಹಾಕಿ ಉತ್ಸವ ಕಾಣಿಸುತ್ತಿದೆ. ಎಲ್ಲೆಡೆ ಹಾಕಿ ಕ್ರೀಡಾಂಗಣ, ಅದರಲ್ಲಿ ಅಭ್ಯಾಸಗಳು ಸಕ್ರಿಯವಾಗಿದೆ. ಈ ಹಿಂದೆ ಕೆಲವೇ ಕೆಲವು ಹಾಕಿ ಪಟುಗಳು ಜಮ್ಮು ಮತ್ತು ಕಾಶ್ಮೀರದಲ್ಲಿದ್ದರು. ಇದೀಗ ಕ್ರೀಡಾಂಗಣದಲ್ಲಿ ಅಭ್ಯಾಸಕ್ಕೆ ಜಾಗವೇ ಸಿಗದಂತಾಗಿದೆ ಎಂದು ಕಣಿವೆ ರಾಜ್ಯದಲ್ಲಿನ ಮಹತ್ತರ ಬದಲಾಣೆಯನ್ನು ಯುವ ಹಾಕಿ ಪಟು ಇನಾಯತ್ ಹೇಳಿದ್ದಾರೆ.
25 ವರ್ಷದ ಇನಾಯತ್ ಶೀಘ್ರದಲ್ಲೇ ಭಾರತ ಹಾಕಿ ತಂಡಕ್ಕೆ ಆಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದು ಜಮ್ಮು ಮತ್ತು ಕಾಶ್ಮೀರದ ಯುವ ಸಮೂಹದ ವಿಶ್ವಾಸವಾಗಿದೆ. ಶ್ರೀನಗರದಲ್ಲಿರುವ ಪೋಲೋ ಟರ್ಫ್ ಮೈದಾನ ಇದೀಗ ಹಾಕಿ ಪಟುಗಳಿಂದ ತುಂಬಿ ತುಳುಕುತ್ತಿದೆ.ಕುಟುಂಬ ಸದಸ್ಯರು ಬೆಳಗ್ಗೆ ಏಳುವ ಮೊದಲೇ ಇನಾಯತ್ ಸಜ್ಜಾಗಿ ಮೈದಾನದಲ್ಲಿ ಹಾಜರಾಗುತ್ತಾರೆ. ಇನಾಯತ್ ತಮ್ಮ ಜೊತೆಯಲ್ಲೇ ಹಾಕಿ ಸ್ಟಿಕ್ ಇಟ್ಟುಕೊಳ್ಳುತ್ತಾರೆ. ಹಾಕಿ ಮೇಲಿನ ಪ್ರೀತಿ ಇನಾಯತ್ ಬಾಳಿನಲ್ಲಿ ಹೊಸ ಅಧ್ಯಾಯ ಬರೆದಿದೆ.
undefined
ಹಾಕಿ ವಿಶ್ವಕಪ್ ಚಾಂಪಿಯನ್ ಜರ್ಮನಿ ನಂ.1 ಸ್ಥಾನಕ್ಕೆ ಲಗ್ಗೆ..!
ಈ ಹಿಂದೆ ಜಮ್ಮು ಮತ್ತು ಕಾಶ್ಮೀರದಲ್ಲಿ ಹಾಕಿಗಾಗಿ ಹುಡುಕಿದರು ಯಾರೂ ಸಿಗುತ್ತಿಲ್ಲ. ಇಷ್ಟೇ ಅಲ್ಲ ಜಮ್ಮು ಮತ್ತು ಕಾಶ್ಮೀರ ತಂಡದಲ್ಲಿದ್ದ ಹಾಕಿ ಆಟಗಾರರು ಕಣಿವೆ ರಾಜ್ಯಕ್ಕಿಂತ ಹೊರಗಿನವರೇ ಹೆಚ್ಚಾಗಿದ್ದರು. ಆದರೆ ಈಗ ಕಾಲ ಬದಲಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಕ್ರೀಡಾ ಮೂಲಸೌಕರ್ಯ ಸಿಗುತ್ತಿದೆ. ಮಕ್ಕಳು, ಯುವ ಸಮೂಹಕ್ಕೆ ಉತ್ತಮ ತರಬೇತಿ ಸಿಗುತ್ತಿದೆ. ಇದರಿಂದ ಹಾಕಿ ಕ್ರೀಡೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಆಗಮಿಸುತ್ತಿದ್ದಾರೆ ಎಂದು ಇನಾಯತ್ ಹೇಳಿದ್ದಾರೆ
ಇನಾಯತ್ ಜಮ್ಮು ಮತ್ತು ಕಾಶ್ಮೀರ ರಾಜ್ಯ ತಂಡವನ್ನು 2016, 2018ರಲ್ಲಿ ಪ್ರತಿನಿಧಿಸಿದ್ದಾರೆ. ಇದೀಗ ಭಾರತ ಹಾಕಿ ತಂಡಕ್ಕೆ ಆಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಶ್ರೀನಗರಲ್ಲಿ ಒಂದು, ಎರಡು ಹಾಕಿ ಕ್ಲಬ್ ಇದ್ದ ಜಮ್ಮು ಮತ್ತು ಕಾಶ್ಮೀರದಲ್ಲೀಗ ಒಟ್ಟು 40 ಹಾಕಿ ಕ್ಲಬ್‌ಗಳಿವೆ. ಪ್ರತಿ ಕ್ಲಬ್ ಜಿಲ್ಲಾ ಮಟ್ಟದ ಸ್ಪರ್ಧೆ ಆಯೋಜಿಸುತ್ತಿದೆ. ಇದೀಗ ರಾಜ್ಯ ತಂಡದ ಆಯ್ಕೆಗೆ ಪೈಪೋಟಿ ಹೆಚ್ಚಾಗಿದೆ. ಇದರಿಂದ ಕಾಶ್ಮೀರದಿಂದ ಹಲವು ಪ್ರತಿಭೆಗಳು ರಾಷ್ಟ್ರ ತಂಡಕ್ಕೆ ಆಯ್ಕೆಯಾಗುವ ಎಲ್ಲಾ ಲಕ್ಷಣ ಗೋಚರಿಸುತ್ತಿದೆ.
ಜಮ್ಮು ಕಾಶ್ಮೀರ ತಂಡವನ್ನು ರಾಷ್ಟ್ರಮಟ್ಟದಲ್ಲಿ 16 ಬಾರಿ ಪ್ರತಿನಿಧಿಸಿದ ನುಜಾಹತ್ ಅರಾ, ಇದೀಗ ರಾಷ್ಟ್ರೀಯ ಕೋಚ್ ಆಗಿ ಆಯ್ಕೆಯಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಹಾಕಿ ಅತ್ಯಂತ ಜನಪ್ರಿಯವಾಗಿದೆ. ಯುವಕ ಯುವತಿಯರು ಹಾಕಿ ಆಯ್ಕೆ ಮಾಡುತ್ತಿದ್ದಾರೆ. ಹಾಕಿ ಜೊತೆಗೆ ಕಾಶ್ಮೀರದಲ್ಲಿ ಕ್ರೀಡೆಯೂ ಅಭಿವೃದ್ಧಿಯಾಗಿದೆ ಎಂದು ನುಜಾಹತ್ ಅರಾ ಹೇಳಿದ್ದಾರೆ. ಕಣಿವೆ ರಾಜ್ಯದ ಯುವ ಸಮೂಹದಲ್ಲಿನ ಫಿಟ್ನೆಸ್ ಅತ್ಯುತ್ತವಾಗಿದೆ. ಇದರ ಜೊತೆ ಸ್ಕಿಲ್ ಕಲಿತುಕೊಂಡರೆ ಸಾಕು, ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಬಲ್ಲ ಕೌಶಲ್ಯ ಪಡೆಯುತ್ತಾರೆ ಎಂದು ನಜಾಹತ್ ಅರಾ ಹೇಳಿದ್ದಾರೆ.
ಭಾರತ ಹಾಕಿ ತಂಡದ ಕೋಚ್ ಗ್ರಹಾಂ ರೀಡ್ ಪದತ್ಯಾಗ
ಶ್ರೀನಗರದ ನೂತನ ಟರ್ಫ್ ಪೊಲೊ ಮೈದಾನ ಇದೀಗ ಹಾಕಿ ಕೇಂದ್ರಬಿಂದುವಾಗಿದೆ. ಇದೀಗ ಅಮರ್ ಸಿಂಗ್ ಕಾಲೇಜು ಮೈದಾನದಲ್ಲಿರುವ ಹಾಕಿ ಕ್ರೀಡಾಂಗಣಕ್ಕೂ ಟರ್ಫ್ ಹಾಕುವ ಯೋಜನೆ ಇದೆ. ಸದ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಹಾಕಿಯ ಮೇಲಿನ ಪ್ರೀತಿ ಹೆಚ್ಚಾಗುತ್ತಿದೆ. ಇದರಿಂದ ಭಾರತ ಹಾಕಿ ತಂಡಕ್ಕೆ ಜಮ್ಮು ಮತ್ತು ಕಾಶ್ಮೀರದಿಂದ ಅಮೂಲ್ಯ ಕೊಡುಗೆ ಸಿಗಲಿದೆ ಎಂದು ಜಮ್ಮು ಮತ್ತು ಕಾಶ್ಮೀರ ಹಾಕಿ ಅಧ್ಯಕ್ಷ ರಾಜೀವ್ ಕುಮಾರ್ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಸ್ಪೋರ್ಟ್ಸ್ ಕೌನ್ಸಿಲ್ ಇದೀಗ ಕಣಿವೆ ರಾಜ್ಯದಲ್ಲಿ ಕ್ರೀಡೆ ಅಭಿವೃದ್ಧಿಗೆ ಹೊಸ ಹೊಸ ಯೋಜನೆ ತಂದಿದೆ. ಕ್ರಿಕೆಟ್, ಹಾಕಿ, ಫುಟ್ಬಾಲ್ ಸೇರಿದಂತೆ ಬಹುತೇಕ ಎಲ್ಲಾ ಕ್ರೀಡೆಗಳು ಕಾಶ್ಮೀರದಲ್ಲಿ ಇದೀಗ ಜನಪ್ರಿಯತೆ ಪಡೆದುಕೊಳ್ಳುತ್ತಿದೆ ಎಂದು ಕೌನ್ಸಿಲ್ ಪದಾಧಿಕಾರಿಗಳು ಹೇಳಿದ್ದಾರೆ.