Hockey World Cup 2023: ಭಾರತದ ವೈಫಲ್ಯಕ್ಕೆ ಪಂಚ ಕಾರಣ!

By Kannadaprabha News  |  First Published Jan 24, 2023, 12:38 PM IST

ಹಾಕಿ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡದ ಹೋರಾಟ ಅಂತ್ಯ
ಪೆನಾಲ್ಟಿ ಕಾರ್ನರ್‌ಗಳು ವ್ಯರ್ಥ ಮಾಡಿಕೊಂಡಿದ್ದು ಭಾರತಕ್ಕೆ ದೊಡ್ಡ ಹಿನ್ನಡೆ
ಅನನುಭವಿ ಆಟಗಾರರ ಆಯ್ಕೆ ತಂಡದ ಫಲಿತಾಂಶದ ಮೇಲೆ ಪರಿಣಾಮ


ಬೆಂಗಳೂರು(ಜ.24): ಒಂದೂವರೆ ವರ್ಷದ ಹಿಂದೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಕಂಚು ಗೆದ್ದಿದ್ದ ಭಾರತ ತಂಡದಿಂದ ವಿಶ್ವಕಪ್‌ನಲ್ಲಿ ಕಳಪೆ ಪ್ರದರ್ಶನ ತೋರಿ ಆಘಾತಕಾರಿ ನಿರ್ಗಮನ ಕಂಡಿದೆ. ತಂಡದ ದಯನೀಯ ವೈಫಲ್ಯಹಾಕಿ ತಜ್ಞರಿಗೆ ಮಾತ್ರವಲ್ಲ ಅಭಿಮಾನಿಗಳಿಗೂ ಅರಗಿಸಿಕೊಳ್ಳಲಾಗುತ್ತಿಲ್ಲ. ಭಾರತದ ಸೋಲಿಗೆ ಪ್ರಮುಖ ಐದು ಕಾರಣಗಳೇನು ಏನು ಎನ್ನುವ ವಿವರ ಇಲ್ಲಿದೆ.

- ಕನ್ನಡಪ್ರಭ ವಿಶ್ಲೇಷಣೆ

Tap to resize

Latest Videos

undefined

1. ಅತಿಯಾದ ಅವಲಂಬನೆ

ಭಾರತ ತನ್ನ ನಾಯಕ ಹರ್ಮನ್‌ಪ್ರೀತ್‌ ಸಿಂಗ್‌ ಮೇಲೆ ಅತಿಯಾಗಿ ಅವಲಂಬಿತಗೊಂಡಿತ್ತು. ಒಲಿಂಪಿಕ್ಸ್‌ನಲ್ಲಿ ಹರ್ಮನ್‌ಪ್ರೀತ್‌ ತೋರಿದ ಪ್ರದರ್ಶನವನ್ನು ಪರಿಗಣಿಸಿ ಮನ್‌ಪ್ರೀತ್‌ ಸಿಂಗ್‌ ಬದಲು ಅವರ ಹೆಗಲಿಗೆ ನಾಯಕತ್ವದ ಹೊರೆಯನ್ನೂ ಹೊರಿಸಲಾಯಿತು. ಆದರೆ ಹರ್ಮನ್‌ಪ್ರೀತ್‌ ಪೆನಾಲ್ಟಿಕಾರ್ನರ್‌ಗಳನ್ನು ಗೋಲಾಗಿಸುವುದರಲ್ಲಿ ಮಾತ್ರವಲ್ಲ, ತಂಡವನ್ನು ಸಮರ್ಥವಾಗಿ ಮುನ್ನಡೆಸುವುದರಲ್ಲೂ ಹಿಂದೆ ಬಿದ್ದರು. ಇದರ ಜೊತೆಗೆ ಪ್ರಮುಖ ಮಿಡ್‌ಫೀಲ್ಡರ್‌ ಹಾರ್ದಿಕ್‌ ಸಿಂಗ್‌ ಇಂಗ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡು ಟೂರ್ನಿಯಿಂದಲೇ ಹೊರಬಿದ್ದಿದ್ದು ಭಾರತಕ್ಕೆ ದೊಡ್ಡ ಹಿನ್ನಡೆ ಉಂಟು ಮಾಡಿತು.

2. ಪೆನಾಲ್ಟಿ ಕಾರ್ನರ್‌ಗಳು ವ್ಯರ್ಥ

ಹಾಕಿಯಲ್ಲಿ ಗೋಲು ಗಳಿಸಲು ಪೆನಾಲ್ಟಿಕಾರ್ನರ್‌ಗಳು ಉತ್ತಮ ಅವಕಾಶ ಕಲ್ಪಿಸಲಿವೆ. 4 ಪಂದ್ಯಗಳಲ್ಲಿ ಭಾರತಕ್ಕೆ ಬರೋಬ್ಬರಿ 26 ಪೆನಾಲ್ಟಿಕಾರ್ನರ್‌ಗಳು ಸಿಕ್ಕರೂ ಗೋಲು ದಾಖಲಾಗಿದ್ದು 5ರಲ್ಲಿ ಮಾತ್ರ. ಅದರಲ್ಲೂ ಡ್ರ್ಯಾಗ್‌ ಫ್ಲಿಕ್ಕರ್‌ ನೇರವಾಗಿ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸಿದ್ದು 2ರಲ್ಲಿ ಮಾತ್ರ. ಒಂದು ಹರ್ಮನ್‌ಪ್ರೀತ್‌ ಮತ್ತೊಂದು ವರುಣ್‌ ಕುಮಾರ್‌ರ ಸ್ಟಿಕ್‌ನಿಂದ ಗೋಲು ದಾಖಲಾಯಿತು. ಇನ್ನು 3 ಗೋಲು ಎದುರಾಳಿ ಗೋಲ್‌ಕೀಪರ್‌ಗೆ ಚೆಂಡು ಬಡಿದು ವಾಪಸ್‌ ಬಂದ ಮೇಲೆ ದಾಖಲಾದವು. ಮತ್ತೊಂದೆಡೆ ಫಾರ್ವರ್ಡ್‌ ಆಟಗಾರರು ಗೋಲು ಬಾರಿಸುವ ಅವಕಾಶಗಳ ಸದ್ಬಳಕೆ ಮಾಡಿಕೊಳ್ಳಲಿಲ್ಲ. ಹರ್ಮನ್‌ಪ್ರೀತ್‌ರಷ್ಟೇ ಹೊಣೆ ಹೊತ್ತಿದ್ದ ಆಕಾಶ್‌ದೀಪ್‌, ಮನ್‌ದೀಪ್‌, ಮನ್‌ಪ್ರೀತ್‌ ಕೂಡ ಭಾರೀ ವೈಫಲ್ಯ ಕಂಡರು.

3. ಅನನುಭವಿ ಆಟಗಾರರ ಆಯ್ಕೆ

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಆಡಿದ 12 ಆಟಗಾರರು ವಿಶ್ವಕಪ್‌ ತಂಡದಲ್ಲಿದ್ದರು. ಆದರೆ ಕೆಲ ಪ್ರಮುಖ ಆಟಗಾರರಾದ ರೂಪಿಂದರ್‌ ಪಾಲ್‌, ಬೀರೇಂದ್ರ ಲಾಕ್ರಾ, ಎಸ್‌.ವಿ.ಸುನಿಲ್‌ ಸೇರಿ ಇನ್ನೂ ಕೆಲವರನ್ನು ಹಾಕಿ ಇಂಡಿಯಾ ವಿಶ್ವಕಪ್‌ಗೂ ಮೊದಲು ಒತ್ತಾಯಪೂರ್ವಕವಾಗಿ ನಿವೃತ್ತಿ ಘೋಷಿಸುವಂತೆ ಮಾಡಿ ನೀಲಂ ಸಂಜೀಪ್‌, ಅಭಿಷೇಕ್‌, ಜರ್ಮನ್‌ಪ್ರೀತ್‌ರಂತಹ ಅನನುಭವಿಗಳನ್ನು ಆಯ್ಕೆ ಮಾಡಿತು. ಅನುಭವದ ಕೊರತೆ ವಿಶ್ವಕಪ್‌ನುದ್ದಕ್ಕೂ ಪ್ರದರ್ಶನಗೊಂಡಿದೆ.

Hockey World Cup: ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟ ಜರ್ಮನಿ, ಕೊರಿಯಾ..!

4. ಒತ್ತಡ ನಿಭಾಯಿಸಲು ವಿಫಲ

ತವರಿನಲ್ಲಿ ಆಡುತ್ತಿರುವ ಒತ್ತಡ ನಿಭಾಯಿಸುವಲ್ಲಿ ಭಾರತ ಸಂಪೂರ್ಣ ವೈಫಲ್ಯ ಅನುಭವಿಸಿತು. ಈ ಮಾತನ್ನು ಸ್ವತಃ ತಂಡದ ಪ್ರಧಾನ ಕೋಚ್‌ ಗ್ರಹಾಮ್‌ ರೀಡ್‌ ಒಪ್ಪಿಕೊಂಡಿದ್ದಾರೆ. ಆಟಗಾರರಿಗೆ ಮಾನಸಿಕ ಸದೃಢತೆ ಹೆಚ್ಚಿಸಲು ಕೋಚ್‌ನ ಅಗತ್ಯವಿದೆ ಎಂದಿದ್ದಾರೆ. ಹಾಕಿ ಇಂಡಿಯಾ ಅಧ್ಯಕ್ಷ ದಿಲೀಪ್‌ ಟಿರ್ಕೆ ಆಟಗಾರರ ಅನುಕೂಲಕ್ಕಾಗಿ ಕೋಚ್‌ ಒದಗಿಸುವುದಾಗಿ ತಿಳಿಸಿದ್ದಾರೆ.

5. ದಿಢೀರ್‌ ಕಳಪೆಯಾದ ರಕ್ಷಣಾ ಪಡೆ

ಭಾರತದ ರಕ್ಷಣಾ ಪಡೆ ಸ್ಪೇನ್‌ ಹಾಗೂ ಇಂಗ್ಲೆಂಡ್‌ ವಿರುದ್ಧ ಉತ್ತಮ ಪ್ರದರ್ಶನ ತೋರಿತ್ತು. ಎರಡೂ ಪಂದ್ಯಗಳಲ್ಲಿ ಎದುರಾಳಿಗೆ ಗೋಲು ಬಾರಿಸಲು ಬಿಟ್ಟಿರಲಿಲ್ಲ. ಆದರೆ 3ನೇ ಪಂದ್ಯದಲ್ಲಿ ರಕ್ಷಣಾ ಕೌಶಲ್ಯ ಕುಸಿಯಿತು. ವಿಶ್ವ ರಾರ‍ಯಂಕಿಂಗ್‌ನಲ್ಲಿ 14ನೇ ಸ್ಥಾನದಲ್ಲಿರುವ ವೇಲ್ಸ್‌ ವಿರುದ್ಧ 2 ಗೋಲು ಬಿಟ್ಟುಕೊಟ್ಟಿದ್ದು ತಂಡದ ಆತ್ಮವಿಶ್ವಾಸ ಕುಗ್ಗಿಸಿತು. ನ್ಯೂಜಿಲೆಂಡ್‌ ವಿರುದ್ಧವಂತೂ ಡಿಫೆಂಡರ್‌ಗಳು ವಿಚಲಿತಗೊಂಡರು. ಇದರಿಂದಾಗಿ ಡಿಫೆಂಡರ್‌ಗಳ ಮೇಲೆ ಅತಿಯಾದ ಒತ್ತಡ ಬಿತ್ತು. ಶೂಟೌಟ್‌ನಲ್ಲೂ ಸ್ಟೆ್ರೖಕರ್‌ಗಳ ವೈಫಲ್ಯ ಗೋಲ್‌ಕೀಪರ್‌ಗಳ ಪ್ರದರ್ಶನದ ಮೇಲೆ ಭಾರೀ ಪರಿಣಾಮ ಬೀರಿತು.

ನಾಯಕತ್ವದಿಂದ ಹರ್ಮನ್‌ಗೆ ಕೊಕ್‌?

ವಿಶ್ವಕಪ್‌ ಮುಕ್ತಾಯಗೊಂಡ ಬಳಿಕ ಭಾರತ ತಂಡದಲ್ಲಿ ಮಹತ್ವದ ಬದಲಾವಣೆ ಆಗುವ ನಿರೀಕ್ಷೆ ಇದೆ. ಹರ್ಮನ್‌ಪ್ರೀತ್‌ ಸಿಂಗ್‌ ನಾಯಕತ್ವ ಕಳೆದುಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವರ್ಷ ಏಷ್ಯನ್‌ ಗೇಮ್ಸ್‌ ನಡೆಯಲಿದ್ದು, ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತಾ ಟೂರ್ನಿ ಎನಿಸಿದೆ. ಇದನ್ನು ಗಮನದಲ್ಲಿಟ್ಟುಕೊಂಡ ಕೆಲ ಬದಲಾವಣೆ ತರಲು ಹಾಕಿ ಇಂಡಿಯಾ ಮುಂದಾಗಲಿದೆ ಎನ್ನಲಾಗಿದೆ. ಆಯ್ಕೆ ಸಮಿತಿ, ಕೋಚಿಂಗ್‌ ಸಿಬ್ಬಂದಿಯೂ ಬದಲಾಗುವ ಸಾಧ್ಯತೆ ಇದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

click me!