4 ವರ್ಷಗಳ ಬಳಿಕ ಕೊಡವ ಕಪ್ ಹಾಕಿ ಟೂರ್ನಿ ಆಯೋಜನೆಗೆ ಭರ್ಜರಿ ಸಿದ್ದತೆ
ಈ ಬಾರಿ ಕೂಟದಲ್ಲಿ ಬರೋಬ್ಬರಿ 336 ಹಾಕಿ ತಂಡಗಳು ಭಾಗಿ
2018ರಲ್ಲಿ 329 ಹಾಕಿ ತಂಡಗಳು ಪಾಲ್ಗೊಂಡಿದ್ದವು
ಮಡಿಕೇರಿ(ಮಾ.10) ಪ್ರತಿಷ್ಠಿತ ಕೊಡವ ಕಪ್ ಹಾಕಿ ಟೂರ್ನಿ 4 ವರ್ಷಗಳ ಬಳಿಕ ಮತ್ತೆ ಆರಂಭಗೊಳ್ಳುತ್ತಿದ್ದು, ಅಪ್ಪಚೆಟ್ಟೋಳಂಡ ಕುಟುಂಬ ಆಯೋಜಿಸಲಿರುವ ಟೂರ್ನಿಯಲ್ಲಿ ಈ ಬಾರಿ ದಾಖಲೆಯ 336 ತಂಡಗಳು ಪಾಲ್ಗೊಳ್ಳಲಿವೆ. 2018ರಲ್ಲಿ 329 ತಂಡಗಳು ಆಡಿದ್ದವು ಎಂದು ಟೂರ್ನಿಯ ಸಂಚಾಲಕ ಮನು ಮುತ್ತಪ್ಪ ತಿಳಿಸಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 23ನೇ ಆವೃತ್ತಿಯ ‘ಹಾಕಿ ನಮ್ಮೆ’ ಮಾರ್ಚ್ 18ರಿಂದ ಏಪ್ರಿಲ್ 9ರ ವರೆಗೂ ನಾಪೋಕ್ಲುವಿನ 3 ಕ್ರೀಡಾಂಗಣಗಳಲ್ಲಿ ನಡೆಯಲಿದೆ. 5,376 ಆಟಗಾರರು ಪಾಲ್ಗೊಳ್ಳಲಿದ್ದಾರೆ. ಭಾರತ ಕಿರಿಯರು ಹಾಗೂ ಕರ್ನಾಟಕ ತಂಡದ ನಡುವಿನ ಪಂದ್ಯದ ಮೂಲಕ ಟೂರ್ನಿಗೆ ಚಾಲನೆ ಸಿಗಲಿದೆ ಎಂದರು.
undefined
ಕೊಡಗಿನಲ್ಲಿ ಹಾಕಿ ಅಭಿವೃದ್ಧಿಗೆ 30 ಶಾಲೆಗಳಲ್ಲಿ ಹುಲ್ಲಿನ ಮೈದಾನ ಸಿದ್ಧಪಡಿಸುವ ಗುರಿ ಇದೆ. ಟೂರ್ನಿಯ ಮೂಲಕ ಸಂಗ್ರಹವಾದ ನಿಧಿಯಲ್ಲಿ ವೃದ್ಧರ ಆರೈಕೆ ಕೇಂದ್ರ, ಅನಾಥಾಶ್ರಮಗಳಿಗೆ ನೆರವು ನೀಡಲಾಗುತ್ತದೆ. ಟೂರ್ನಿಯಲ್ಲಿ 24 ಉದಯೋನ್ಮುಖ ಆಟಗಾರರನ್ನು ಗುರುತಿಸಿ ಅವರಿಗೆ ವಿಶೇಷ ತರಬೇತಿ ಕೂಡಾ ನೀಡಲಿದ್ದೇವೆ ಎಂದು ತಿಳಿಸಿದರು.
ಹಾಕಿ: ಭಾರತಕ್ಕೆ ಇಂದು ಜರ್ಮನಿ ಎದುರಾಳಿ
ರೂರ್ಕೆಲಾ: 2022-23ರ ಎಫ್‌ಐಎಚ್ ಪ್ರೊ ಲೀಗ್ ಹಾಕಿ ಟೂರ್ನಿಯಲ್ಲಿ ಆತಿಥೇಯ ಭಾರತ ಶುಕ್ರವಾರ ವಿಶ್ವ ಚಾಂಪಿಯನ್ ಜರ್ಮನಿ ವಿರುದ್ಧ ಸೆಣಸಾಡಲಿದೆ. ಭಾರತ ಲೀಗ್ನಲ್ಲಿ ಆಡಿರುವ 4 ಪಂದ್ಯಗಳಲ್ಲಿ 2 ಜಯ 1 ಡ್ರಾ, 1 ಸೋಲಿನೊಂದಿಗೆ 8 ಅಂಕ ಪಡೆದು 4ನೇ ಸ್ಥಾನದಲ್ಲಿದ್ದು, ಅಷ್ಟೇ ಅಂಕ ಹೊಂದಿರುವ ಜರ್ಮನಿ 5ನೇ ಸ್ಥಾನದಲ್ಲಿದೆ.
ಕಳೆದ ಆವೃತ್ತಿಯಲ್ಲಿ 3ನೇ ಸ್ಥಾನ ಪಡೆದಿದ್ದ ಭಾರತ ಈ ಬಾರಿ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿದ್ದು, ಮಾ.13ರಂದು ಜರ್ಮನಿ ವಿರುದ್ಧವೇ ಮತ್ತೊಂದು ಪಂದ್ಯವನ್ನಾಡಲಿದೆ. ಬಳಿಕ ಆಸ್ಪ್ರೇಲಿಯಾ ವಿರುದ್ಧ (ಮಾ.12 ಮತ್ತು 15) ಸೆಣಸಾಡಲಿದೆ. ಈ ಎಲ್ಲಾ ಪಂದ್ಯಗಳು ರೂರ್ಕೆಲಾದಲ್ಲಿ ನಡೆಯಲಿದೆ.
ಮಹಿಳಾ ಟೆನಿಸ್: ಕ್ವಾರ್ಟರ್ ತಲುಪಿದ ರೈನಾ, ಋುತುಜಾ
ಬೆಂಗಳೂರು: ಐಟಿಎಫ್ ಬೆಂಗಳೂರು ಮಹಿಳಾ ಟೆನಿಸ್ ಟೂರ್ನಿಯಲ್ಲಿ ಭಾರತದ ತಾರಾ ಟೆನಿಸಿಗರಾದ ಅಂಕಿತಾ ರೈನಾ, ಋುತುಜಾ ಭೋಸಲೆ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ನಗರದ ಕೆಎಸ್ಎಲ್ಟಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೂರ್ನಿಯ ಮಹಿಳಾ ಸಿಂಗಲ್ಸ್ನಲ್ಲಿ ಗುರುವಾರ 4ನೇ ಶ್ರೇಯಾಂಕಿತ ಅಂಕಿತಾ, ಥಾಯ್ಲೆಂಡ್‌ನ ಲಾನ್ಲನಾ ವಿರುದ್ಧ 6-2, 6-1 ನೇರ ಸೆಟ್ಗಳಲ್ಲಿ ಸೋಲಿಸಿ ಅಂತಿಮ 8ರ ಘಟ್ಟಪ್ರವೇಶಿಸಿದರು.
WPL 2023: ಒಂದು ಅವಕಾಶಕ್ಕಾಗಿ ತುದಿಗಾಲಲ್ಲಿ ನಿಂತ ಕನ್ನಡತಿ ದಿವ್ಯಾ ಜ್ಞಾನಾನಂದ..!
ಶ್ರೇಯಾಂಕ ರಹಿತ ಋುತುಜಾ ಲಾತ್ವಿಯಾದ ಡಿಯಾನ ಮಾರ್ಕಿನ್ಕೆವಿಕಾ ವಿರುದ್ಧ 4-6, 6-3, 6-2 ಸೆಟ್ಗಳಲ್ಲಿ ಗೆಲುವು ಸಾಧಿಸಿದರು. ಆದರೆ ಝೀಲ್ ದೇಸಾಯಿ ಇಂಡೋನೇಷ್ಯಾದ ನುಗ್ರೊಹೊ ವಿರುದ್ಧ 7-5, 3-6, 5-7 ಅಂತರದಲ್ಲಿ ಸೋತು ಹೊರಬಿದ್ದರು. ಇದೇ ವೇಳೆ ಡಬಲ್ಸ್ನಲ್ಲಿ ಋುತುಜಾ-ಸ್ವೀಡನ್ನ ಜ್ಯಾಕ್ವೆಲಿನ್ ಅವಾಡ್ ಜೋಡಿ ಕ್ವಾರ್ಟರ್ ಫೈನಲ್ಗೇರಿತು.
ಏಪ್ರಿಲ್ 29ಕ್ಕೆ ಜಿಬಿಪಿಎಲ್ ಆಟಗಾರರ ಹರಾಜು
ಬೆಂಗಳೂರು: 2ನೇ ಆವೃತ್ತಿಯ ಗ್ರ್ಯಾನ್ ಪ್ರೀ ಬ್ಯಾಡ್ಮಿಂಟನ್ ಲೀಗ್(ಜಿಬಿಪಿಎಲ್)ನ ಆಟಗಾರರರ ಹರಾಜು ಪ್ರಕ್ರಿಯೆ ಏ.29ರಂದು ನಡೆಯಲಿದೆ. ಪಂದ್ಯಾವಳಿಯು ಆಗಸ್ಟ್‌ನಲ್ಲಿ ನಿಗದಿಯಾಗಿದೆ. ಕಳೆದ ಬಾರಿ ಸ್ಪರ್ಧಿಸಿದ್ದ 8 ತಂಡಗಳ ಜೊತೆ ಈ ಬಾರಿ ಇನ್ನೂ 2 ತಂಡಗಳು ಸೇರ್ಪಡೆಗೊಳ್ಳಲಿದ್ದು, ತಂಡಗಳ ಆಯ್ಕೆಗೆ ಹರಾಜು ಪ್ರಕ್ರಿಯೆ ಆನ್‌ಲೈನ್‌ನಲ್ಲಿ ನಡೆಯಲಿದೆ. 50 ಅಂತಾರಾಷ್ಟ್ರೀಯ ಆಟಗಾರರು ಸೇರಿ 250ಕ್ಕೂ ಹೆಚ್ಚು ಆಟಗಾರರು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಕರ್ನಾಟಕದ ಅಗ್ರ ಶಟ್ಲರ್‌ಗಳು ಅದೃಷ್ಟಪರೀಕ್ಷೆಗಿಳಿಯಲಿದ್ದಾರೆ.