ಹುಣಸೆ ಹಣ್ಣು ಆಮ್ಲೀಯ ಗುಣ ಹೊಂದಿದೆ. ಇದು ಹೆಚ್ಚು ರುಚಿ ಹೊಂದಿದೆ. ಆಹಾರದ ರುಚಿ ಹೆಚ್ಚಿಸುವ ಕೆಲಸ ಕೂಡ ಮಾಡುತ್ತದೆ. ಆದ್ರೆ ಎಲ್ಲರೂ ಇದ್ರ ಸೇವನೆ ಮಾಡುವಂತಿಲ್ಲ. ಕೆಲವರಿಗೆ ಇದು ವಿಷದ ರೀತಿ ಕೆಲಸ ಮಾಡುತ್ತದೆ.
ಭಾರತದ ಖರ್ಜೂರ ಎಂದೇ ಖ್ಯಾತಿಯಾದ ಹುಣಸೆ ಹಣ್ಣು ನೋಡಿದಾಕ್ಷಣ ಯಾರ ಬಾಯಲ್ಲಿ ನೀರು ಬರುವುದಿಲ್ಲ ಹೇಳಿ? ಅದರ ಹುಳಿ, ಸಿಹಿಯ ಅಂಶ ಎಲ್ಲರನ್ನೂ ಮರುಳು ಮಾಡುತ್ತದೆ. ಅಡುಗೆ ಮನೆಯಲ್ಲಂತೂ ಇದು ಬೇಕೇ ಬೇಕು. ತಿನ್ನಲು ರುಚಿಯೆನಿಸುವ ಹುಣಸೆ ಹಣ್ಣು ಆರೋಗ್ಯಕ್ಕೂ ಬಹಳ ಒಳ್ಳೆಯದು. ಚಿಕ್ಕ ಮಕ್ಕಳಂತೂ ಇದನ್ನು ಚಪ್ಪರಿಸಿಕೊಂಡು ತಿನ್ನುತ್ತಾರೆ. ಹುಣಸೆ ಹಣ್ಣಿನಿಂದ ಚಟ್ನಿ, ಜಾಮ್, ಮಿಠಾಯಿ ಗಳನ್ನು ಮಾಡುತ್ತಾರೆ. ಸಾಮಾನ್ಯವಾಗಿ ಎಲ್ಲರೂ ಇಷ್ಟಪಡುವ ರಸಂ, ಪಾನಿ ಪುರಿ, ಪುಳಿಯೋಗರೆ ಮುಂತಾದವುಗಳಲ್ಲಿ ಹುಣಸೆ ಹಣ್ಣೇ ಪ್ರಮುಖ ಪಾತ್ರ ವಹಿಸುತ್ತದೆ.
ಹುಣಸೆ (Tamarind) ಹಣ್ಣಿನಲ್ಲಿ ವಿಟಮಿನ್ ಸಿ, ಬಿ, ಇ, ಕ್ಯಾಲ್ಸಿಯಂ, ಕಬ್ಬಿಣ, ಫಾಸ್ಫರಸ್, ಪೊಟಾಶಿಯಂ, ಮ್ಯಾಂಗನೀಸ್ ಮತ್ತು ನಾರಿನಂಶವಿದೆ. ಇದರಲ್ಲಿರುವ ಟಾರ್ಟಾರಿಕ್ ಆಮ್ಲ, ಮಾಲಿಕ್ ಆಮ್ಲಗಳು ಅತಿಸಾರ ಮತ್ತು ಮಲಬದ್ಧತೆಗೆ ದಿವ್ಯೌಷಧವಾಗಿದೆ. ಈಗಿನ ಕೆಲವು ಆಹಾರ (Food) ಗಳಲ್ಲಿ ಕೊಬ್ಬಿನಾಂಶ ಹೆಚ್ಚಿಗೆ ಇರುವುದರಿಂದ ತೂಕ ಹೆಚ್ಚುತ್ತದೆ. ಹುಣಸೆ ಹಣ್ಣು ತೂಕ ಇಳಿಸಲು ಸಹಾಯಕಾರಿ. ಹುಣಸೆ ಹಣ್ಣಿನ ಸೇವನೆಯಿಂದ ಜೀರ್ಣಶಕ್ತಿ ವೃದ್ಧಿಯಾಗುತ್ತದೆ. ರಕ್ತ ಸಂಚಾರ ಸುಗಮವಾಗುತ್ತದೆ. ಹುಣಸೆ ಹಣ್ಣು ಉತ್ಕರ್ಷಣ ನಿರೋಧಕ, ಎಂಟಿ ಫಂಗಲ್, ಎಂಟಿ ಡಯಾಬಿಟಿಕ್, ಎಂಟಿ ಅಸ್ತಮಾ ಗುಣ ಮತ್ತು ಬ್ಯಾಕ್ಟೀರಿಯಾ ವಿರೋಧಿ ಲಕ್ಷಣಗಳನ್ನು ಹೊಂದಿದೆ. ಹುಣಸೆ ಹಣ್ಣಿನಲ್ಲಿ ಕ್ಯಾನ್ಸರ್ (Cancer) ಕಣಗಳನ್ನು ನಿಯಂತ್ರಿಸುವ ಶಕ್ತಿಯಿದೆ ಎಂದು ಆಯುರ್ವೇದ ಹೇಳುತ್ತದೆ. ಆದರೆ ಅತಿಯಾದರೆ ಅಮೃತವೂ ವಿಷ ಅನ್ನೋ ಹಾಗೆ ಕೆಲವರ ಆರೋಗ್ಯ ಸ್ಥಿತಿಗೆ ಇದು ಒಗ್ಗದೆ ಇರಬಹುದು. ಹುಣಸೆ ಹಣ್ಣು ಹೆಚ್ಚು ಆಮ್ಲೀಯವಾದ್ದರಿಂದ ಇದು ಎಲ್ಲರಿಗೂ ಒಳ್ಳೆಯದಲ್ಲ. ಕೆಲವರು ಇದನ್ನು ತಿನ್ನದೆ ಇರುವುದು ಒಳಿತು.
ತೂಕ ಹೆಚ್ಚಿಸಿಕೊಳ್ಳೋ ಯೋಚನೆ ಇದ್ದರೆ ಇಲ್ಲಿದೆ ಬೆಸ್ಟ್ ಫುಡ್
ಹಲ್ಲಿನ (Teeth) ಸಮಸ್ಯೆ ಇರುವವರು ಇದರಿಂದ ದೂರವಿರಿ : ಹಲ್ಲಿನ ಸಮಸ್ಯೆ ಇರುವವರು ಹುಣಸೆ ಹಣ್ಣನ್ನು ತಿನ್ನಬಾರದು. ಹುಣಸೆ ಹಣ್ಣು ಹಲ್ಲಿ (Tooth) ನ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದರ ಸೇವನೆಯಿಂದ ಹಲ್ಲು ಹುಳುಕಾಗಬಹುದು ಮತ್ತು ಹಲ್ಲಿನ ಮೇಲ್ಮೈ ಸವಕಳಿಯಾಗಬಹುದು.
ಅಲರ್ಜಿ (Allergy) ಸಮಸ್ಯೆ ಕಾಡುತ್ತೆ : ಹುಣಸೆ ಹಣ್ಣನ್ನು ಹೆಚ್ಚು ಹೆಚ್ಚು ತಿನ್ನುವುದರಿಂದ ಅಲರ್ಜಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಅಲರ್ಜಿಯ ಕಾರಣದಿಂದ ದದ್ದು, ತುರಿಕೆ, ನೋವು, ತಲೆ ತಿರುಗುವುದು ಮುಂತಾದ ತೊಂದರೆಗಳು ಉಂಟಾಗಬಹುದು.
ಜೀರ್ಣಕ್ರಿಯೆಗೆ (Digestion) ತೊಂದರೆ : ಹುಣಸೆ ಹಣ್ಣನ್ನು ಹೆಚ್ಚು ತಿನ್ನುವುದರಿಂದ ಹೊಟ್ಟೆ ಉಬ್ಬರಿಸಿದಂತಾಗುತ್ತದೆ. ಹಾಗಾಗಿ ಮೊದಲೇ ಹೊಟ್ಟೆಗೆ ಸಂಬಂಧಪಟ್ಟ ತೊಂದರೆ ಇರುವವರು ಹುಣಸೆ ಹಣ್ಣು ತಿನ್ನಬಾರದು. ಜೀರ್ಣಕ್ರಿಯೆಯ ತೊಂದರೆ ಇರುವವರು ಕೂಡ ಹುಣಸೆ ಹಣ್ಣಿನಿಂದ ದೂರವಿರಬೇಕು
ಈ ತೊಂದರೆ ಇರುವವರು ಕೂಡ ಹುಣಸೆ ಹಣ್ಣು ತಿನ್ನಬೇಡಿ : ಹುಣಸೆ ಹಣ್ಣಿನಲ್ಲಿ ರಕ್ತ ತೆಳುವಾಗಿಸುವ ಗುಣವಿದೆ. ಆದ್ದರಿಂದ ಈಗಾಗಲೇ ರಕ್ತ ತೆಳುವಾಗಿಸುವ ಮಾತ್ರೆ ಸೇವಿಸುವವರು ಹುಣಸೆ ಹಣ್ಣನ್ನು ಸೇವಿಸಬಾರದು. ಇದರಿಂದ ಅನಿಮಿಯಾ ಉಂಟಾಗಬಹುದು. ಹಾಗೆ ಗಂಟಲು ನೋವಿನ ಸಮಸ್ಯೆ ಇರುವವರು ಕೂಡ ಹುಣಸೆ ಹಣ್ಣಿನಂತ ಆಮ್ಲೀಯ ಹಣ್ಣುಗಳನ್ನು ತಿನ್ನಬೇಡಿ.
ಸೋಯಾ ಸಾಸ್ ತಿನ್ನೋದ್ರಿಂದ ಆರೋಗ್ಯಕ್ಕೆ ಅಪಾಯ!
ಡಯಾಬಿಟಿಕ್ (Diebetic) ಪೇಷೆಂಟ್ ಗಳು ಹುಣಸೆ ಹಣ್ಣನ್ನು ತಿನ್ನುವಾಗ ಎಚ್ಚರದಿಂದಿರಬೇಕು. ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರು ಕೂಡ ಹುಣಸೆ ಹಣ್ಣನ್ನು ತಿನ್ನಬಾರದು. ಹಾಲುಣಿಸುವ ತಾಯಂದಿರು ಇದರ ಸೇವನೆ ಮಾಡಿದರೆ ಮಗು ವಾಂತಿ ಮಾಡಿಕೊಳ್ಳಬಹುದು. ಆರೋಗ್ಯವಾಗಿರುವವರು ಕೂಡ ಇದನ್ನು ಹೆಚ್ಚಾಗಿ ಸೇವಿಸಿದರೆ ಬೇಧಿ ಉಂಟಾಗಬಹುದು. ಹೆಣ್ಣು ಮಕ್ಕಳು ಹಾಗೂ ಮಹಿಳೆಯರು ಮುಟ್ಟಿನ ಸಮಯದಲ್ಲಿ ಹುಣಸೆ ಹಣ್ಣನ್ನು ತಿನ್ನಬಾರದು. ಆ ಸಮಯದಲ್ಲಿ ಹುಣಸೆ ಹಣ್ಣು ತಿನ್ನುವುದರಿಂದ ರಕ್ತಸ್ರಾವ ಹೆಚ್ಚುತ್ತದೆ.