ಮೂಳೆಗಳನ್ನು ಆರೋಗ್ಯಕರವಾಗಿಟ್ಟುಕೊಳ್ಳಲು, ಕ್ಯಾಲ್ಶಿಯಂ, ವಿಟಮಿನ್ ಡಿ, ವಿಟಮಿನ್ ಕೆ, ವಿಟಮಿನ್ ಸಿ, ವಿಟಮಿನ್ ಎ ಇರುವ ಆಹಾರಗಳ ಸೇವನೆ ಅತ್ಯವಶ್ಯಕ.
ಜೀವನಶೈಲಿ ಹಾಗೂ ಆಹಾರಕ್ರಮಕ್ಕೆ ಸಂಬಂಧಿಸಿ ಬೆನ್ನು ನೋವು, ಸೊಂಟ ನೋವು, ಮೊಣಕೈ ನೋವು, ಮೊಣಕಾಲು ನೋವು ಹೀಗೆ ಮೂಳೆಗೆ ಸಂಬಂಧಿಸಿದ ಕಾಯಿಲೆಗಳು ಹೆಚ್ಚಾಗಿ ಕಂಡುಬರುತ್ತವೆ. ಹದಿಹರೆಯ ಹಾಗೂ ಯವ್ವನದಲ್ಲಿಯೇ ಮೂಳೆಗಳ ಆರೋಗ್ಯದ ಬಗ್ಗೆ ಸ್ವಲ್ಪ ಎಚ್ಚರಿಕೆ ವಹಿಸಿದರೆ ವಯಸ್ಸಾದಾಗ ಮೂಳೆ ಸಂಬಂಧಿ ಕಾಯಿಲೆಗಳು ಕಂಡು ಬರುವುದು ಕಡಿಮೆಯಾಗುತ್ತದೆ. ಮೂಳೆಗಳು ಗಟ್ಟಿಮುಟ್ಟಾಗಿ ಇದ್ದರೆ ಮಾತ್ರ ದೇಹ ಗಟ್ಟಿಮುಟ್ಟಾಗಿರಲು ಸಾಧ್ಯ. ದೇಹದಲ್ಲಿ ಕ್ಯಾಲ್ಷಿಯಂ ಖನಿಜಗಳ ಅಂಶ ಕಡಿಮೆಯಾಗುವುದೂ ಕೂಡ ಮೂಳೆಗಳ ಸಮಸ್ಯೆಗೆ ಕಾರಣವಾಗುತ್ತದೆ. ನಿಯಮಿತ ವ್ಯಾಯಾಮ ಹಾಗೂ ಕ್ಯಾಲ್ಷಿಯಂ ಮತ್ತು ವಿಟಮಿನ್ ಡಿ ಹೊಂದಿರುವ ಪೌಷ್ಟಿಕ ಆಹಾರ ಸೇವನೆಯಿಂದ ಈ ಸಮಸ್ಯೆಯನ್ನು ತಡೆಗಟ್ಟಬಹುದಾಗಿದೆ. ಮೂಳೆಗಳನ್ನು ಆರೋಗ್ಯಕರವಾಗಿಟ್ಟುಕೊಳ್ಳಲು, ಕ್ಯಾಲ್ಶಿಯಂ, ವಿಟಮಿನ್ ಡಿ, ವಿಟಮಿನ್ ಕೆ, ವಿಟಮಿನ್ ಸಿ, ವಿಟಮಿನ್ ಎ ಇರುವ ಆಹಾರಗಳ ಸೇವನೆ ಅತ್ಯವಶ್ಯಕ.
ಯಾವ ಆಹಾರವನ್ನು ನಿಯಂತ್ರಿಸಬೇಕು?
ಮದ್ಯಪಾನ ನಿಯಂತ್ರಿಸಿ. ದಿನಕ್ಕೆ 2-3 ಕ್ಕಿಂತಲೂ ಹೆಚ್ಚು ಬಾರಿ ಮದ್ಯಪಾನ ಮಾಡುವುದರಿಂದ ಮೂಳೆ ಸಮಸ್ಯೆಗಳು ಎದುರಾಗುತ್ತವೆ. ದೈನಂದಿನ ಆಹಾರ ಪದಾರ್ಥಗಳಲ್ಲಿ ಕಾಫಿ, ಟೀ, ಸೋಡಾದ ಪ್ರಮಾಣವನ್ನು ಸಾಧ್ಯವಾದಷ್ಟು ಮಿತಿಗೊಳಿಸಿ. ಈ ಪದಾರ್ಥಗಳ ಸೇವನೆಯು ದೇಹದಲ್ಲಿರುವ ಕ್ಯಾಲ್ಸಿಯಂ ಹೀರಿಕೊಂಡು ಕ್ಯಾಲ್ಶಿಯಂ ಸಮಸ್ಯೆಗಳನ್ನು ತಂದೊಡ್ಡುತ್ತವೆ. ಸೋಡಿಯಂ ಅಂಶ ಕಡಿಮೆ ಇರುವ ಆಹಾರ ಪದಾರ್ಥಗಳನ್ನು ಸೇವನೆ ಮಾಡಿ. ಧೂಮಪಾನವನ್ನು ಮಾಡದಿರಿ. ಇದು ಮೂಳೆಗಳು ಮುರಿತಕ್ಕೆ ಕಾರಣವಾಗುತ್ತವೆ.
ಯಾವ ಆಹಾರವನ್ನು ಸೇವಿಸಬೇಕು?
ಕ್ಯಾಲ್ಸಿಯಂ ನಮ್ಮ ಮೂಳೆಗಳ ಆರೋಗ್ಯಕ್ಕೆ ಮತ್ತು ಆಸ್ಟಿಯೋಪೋರಸ್ ನಿವಾರಣೆಗೆ ಬಹಳ ಉತ್ತಮ ಅಂಶ. ಕ್ಯಾಲ್ಸಿಯಂ ಅನ್ನುವುದು ಮೂಳೆಗಳ ರಚನೆಗೆ ಬಹಳ ಆವಶ್ಯವಿರುವ ಪೋಷಕಾಂಶ. ನಮ್ಮ ಜೀವನಪರ್ಯಂತ ಮೂಳೆಗಳ ಆರೋಗ್ಯ ಮತ್ತು ದೃಢತೆಯನ್ನು ಕಾಪಾಡಿಕೊಳ್ಳಲು ಕ್ಯಾಲ್ಸಿಯಂ ಸಹಾಯ ಮಾಡುತ್ತದೆ. ಆದರೆ ನಿಮ್ಮ ಶರೀರಕ್ಕೆ ಸಾಕಷ್ಟು ಪ್ರಮಾಣದಲ್ಲಿ ವಿಟಾಮಿನ್ “ಡಿ’ ಪೂರೈಕೆ ಆದರೆ ಮಾತ್ರವೇ ಕ್ಯಾಲ್ಸಿಯಂ ಸದುಪಯೋಗವಾಗಿ ಮೂಳೆಗಳು ಸಂಪೂರ್ಣ ಸಂರಚನೆಯನ್ನು ತಲುಪಲು ಸಾಧ್ಯ.
undefined
ಮೂಳೆಗಳ ಸಂರಕ್ಷಣೆಗಾಗಿ ಕ್ಯಾಲ್ಸಿಯಂ ಮತ್ತು ವಿಟಾಮಿನ್ “ಡಿ’ಗಳು ಜೊತೆಯಾಗಿ ಕೆಲಸ ಮಾಡುತ್ತವೆ. ಕ್ಯಾಲ್ಸಿಯಂ ನಮ್ಮ ಶರೀರದಲ್ಲಿ ಮೂಳೆಗಳ ರಚನೆ ಮತ್ತು ನಿರ್ವಹಣೆಗೆ ಸಹಾಯ ಮಾಡಿದರೆ, ವಿಟಾಮಿನ್ “ಡಿ’ ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಹಾಗಾಗಿ ನಾವು ಆಹಾರದ ಮೂಲಕ ಸಾಕಷ್ಟು ಪ್ರಮಾಣದಲ್ಲಿ ಕ್ಯಾಲ್ಸಿಯಂ ಅನ್ನು ಸೇವಿಸಿದರೂ ಸಹ, ನಮಗೆ ವಿಟಾಮಿನ್ “ಡಿ’ ಕೊರತೆ ಆದರೆ ಕ್ಯಾಲ್ಸಿಯಂನಿಂದ ನಮಗೆ ಹೆಚ್ಚು ಪ್ರಯೋಜನವಾಗುವುದಿಲ್ಲ.
ನಮ್ಮ ಶರೀರದಲ್ಲಿರುವ ಒಟ್ಟು ಕ್ಯಾಲ್ಸಿಯಂನ ಶೇ.99.5 ಪ್ರಮಾಣ ನಮ್ಮ ಮೂಳೆಗಳಲ್ಲಿ ಇರುತ್ತದೆ. ಅನೇಕ ಜನರು ತಾವು ಸೇವಿಸುವ ಆಹಾರದ ಮೂಲಕ ಸಾಕಷ್ಟು ಕ್ಯಾಲ್ಸಿಯಂ ಅನ್ನು ಪಡೆಯುತ್ತಾರೆ. ಬೆಣ್ಣೆ, ಮೊಸರು, ಹಾಲು, ಮೀನುಗಳು, ಬಸಳೆ, ಟರ್ನಿಪ್ ಗಡ್ಡೆಯಂತಹ ದಟ್ಟ ಹಸಿರು ಬಣ್ಣದ ಸೊಪ್ಪು ತರಕಾರಿಗಳು, ಪುಷ್ಟೀಕರಿಸಿದ ಕಾರ್ನ್ ಫ್ಲೇಕ್ಸ್ ಪುಷ್ಟೀಕರಿಸಿದ ಕಿತ್ತಲೆ ರಸ. ಸೋಯಾಬೀನ್ಸ್, ಪುಷ್ಟೀಕರಿಸಿದ ಬ್ರೆಡ್ ಮತ್ತು ಕಾಳುಗಳಲ್ಲಿ ಹೇರಳವಾದ ಕ್ಯಾಲ್ಶಿಯಂ ಅಂಶಗಳಿರುತ್ತವೆ. ಸ್ನಾಯು ಹಾಗೂ ಮೂಳೆಗಳು ದೃಢವಾಗಿ ಬೆಳೆಯಲು ವಿಟಮಿನ್ ಡಿ ಆವಶ್ಯಕವಾಗಿದೆ. ವಿಟಮಿನ್ “ಡಿ’ ಇಲ್ಲದೆ ಅವರ ಶರೀರವು ಕ್ಯಾಲ್ಸಿಯಂ ಅನ್ನು ಪರಿಣಾಮಕಾರಿಯಾಗಿ ಹೀರಿಕೊಳ್ಳದು.
ಕಂಪ್ಯೂಟರ್ ನೋಡಿ ಕಣ್ಣು ಬಳಲುತ್ತಿದೆಯೇ? ಪರಿಹಾರ ಇಲ್ಲಿದೆ
ವಿಟಾಮಿನ್ “ಡಿ’ ನಮ್ಮ ಶರೀರಕ್ಕೆ ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಅನೇಕ ಜನರಿಗೆ ಸೂರ್ಯನ ಬೆಳಕೇ ವಿಟಾಮಿನ್ “ಡಿ’ ಯ ಮೂಲ. ಆದರೆ ವಿಟಾಮಿನ್ “ಡಿ’ಯನ್ನು ಪಡೆಯಬೇಕು ಎನ್ನುವ ಉದ್ದೇಶದಿಂದ, ಚರ್ಮಕ್ಕೆ ಸರಿಯಾದ ಹೊದಿಕೆ ಅಥವಾ ರಕ್ಷಣೆಯನ್ನು ನೀಡದೆ ಸೂರ್ಯನ ಪ್ರಖರ ಬೆಳಕಿಗೆ ತ್ವಚೆಯನ್ನು ಒಡ್ಡಿಕೊಂಡರೆ ಚರ್ಮದ ಕ್ಯಾನ್ಸರ್ ಬರುವ ಸಾಧ್ಯತೆಗಳು ಇವೆ.
ವಿಟಮಿನ್ ಕೆ ಹೆಚ್ಚಿರುವ ಬ್ರೋಕೋಲಿ (ಹೂ ಕೋಸು) ಮತ್ತು ಕೇಲ್, ಪಾಲಕ್ ಮೊದಲಾದ ಹಸಿರೆಲೆಗಳನ್ನು ಸೇವಿಸಬೇಕು. ಪೊಟಾಶಿಯಂ ಮೂಳೆಗಳ ದೃಢತೆಯಲ್ಲಿ ಹೆಚ್ಚಿಗೆ ಪಾತ್ರವಹಿಸದಿದ್ದರೂ ಕ್ಯಾಲ್ಸಿಯಂ ಮೂಳೆಗಳಲ್ಲಿ ಸಂಚಯನಗೊಳ್ಳಲು ನೆರವಾಗುತ್ತದೆ. ಸಿಹಿಗೆಣಸು ಮತ್ತು ಬಾಳೆಹಣ್ಣುಗಳಲ್ಲಿ ಪೊಟ್ಯಾಶಿಯಂ ಹೇರಳವಾಗಿರುತ್ತದೆ.
ಮೂಳೆಗಳ ಆರೋಗ್ಯಕ್ಕೆ ವಿಟಮಿನ್ ಸಿ ಕೂಡ ಅತ್ಯಂತ ಮುಖ್ಯ. ಸಾಮಾನ್ಯವಾಗಿ ವಿಟಮಿನ್ ಸಿ ಅಂಶವು, ನಿಂಬೆ, ಕಿತ್ತಳೆ ಮತ್ತು ಹಸಿರು ಮೆಣಸಿನಕಾಯಿಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಂಡು ಬರುತ್ತದೆ. ಸಿಟ್ರಸ್ ಹಣ್ಣುಗಳನ್ನು ಹೆಚ್ಚಾಗಿ ಸೇವನೆ ಮಾಡಬಹುದು. ಕಿತ್ತಳೆ, ಮುಸಂಬಿ ಮತ್ತು ನಿಂಬೆ ಪ್ರಧಾನ ಸಿಟ್ರಸ್ ಹಣ್ಣುಗಳು. ಇದಲ್ಲದೆ ದ್ರಾಕ್ಷಿ, ಪಪ್ಪಾಯಿ, ಕಲ್ಲಂಗಡಿ ಮತ್ತು ಸ್ಟ್ರಾಬೆರಿಗಳಲ್ಲಿ ವಿಟಮಿನ್ ಸಿ ಹೇರಳವಾಗಿ ಕಂಡುಬರುತ್ತದೆ.