
ಆರೋಗ್ಯದ ಕುರಿತು ಜನ ಹಿಂದೆಂದಿಗಿಂತಲೂ ಹೆಚ್ಚು ಕಾಳಜಿ ವಹಿಸುತ್ತಾರೆ. ಈ ಹಿಂದೆ ಆರೋಗ್ಯದ ಕುರಿತ ತಿಳುವಳಿಕೆ ಹಾಗೂ ಜಾಗೃತಿ ಇರುತ್ತಿರಲಿಲ್ಲ. ಆದರೆ ಈಗ ಹಾಗಲ್ಲ, ಫಿಟ್‌ನೆಸ್, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಆಹಾರದಲ್ಲಿನ ಬದಲಾವಣೆ ಸೇರಿದಂತೆ ಜನರು ಈಗ ತಾವು ಹಾಗೂ ಕುಟುಂಬ ಆರೋಗ್ಯವಾಗಿರಲು ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಆದರೆ ನಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಲ್ಲ ಒಂದು ಬೆದರಿಕೆ ನಮ್ಮ ಮನೆಯೊಳಗೆ ಇದೆ. ಈ ಆರೋಗ್ಯ ಬೆದರಿಕೆ ನಿರ್ಲಕ್ಷ್ಯಿಸಿದರೆ ಮಾರಣಾಂತಿಕ ಕಾಯಿಲೆಗೆ ತುತ್ತಾಗುವ ಸಾಧ್ಯತೆ ಹೆಚ್ಚು. ಜೀವಕ್ಕೆ ಅಪಾಯ ತಂದೊಡ್ಡುವ ಈ ಬೆದರಿಕೆ ಇರುವುದು ಸೊಳ್ಳೆಯಿಂದ.
ಕೊರೋನಾ ವೈರಸ್ ಭಾರತದಲ್ಲಿ ಮತ್ತೆ ಹೆಚ್ಚಾಗುತ್ತಿದೆ. ನಗರ, ಪಟ್ಟಣ ಇದೀಗ ಹಳ್ಳಿ ಹಳ್ಳಿಗೂ ವಿಸ್ತರಿಸುತ್ತಿದೆ. ಇದರ ನಡುವೆ ಸೊಳ್ಳಯಿಂದ ಬರುವ ಡೆಂಗ್ಯೂ ಸೇರಿದಂತೆ ಇನ್ನಿತರ ಕಾಯಿಲೆಗಳು ಹಾಗೂ ಕೊರೋನಾ ರೋಗಲಕ್ಷಣಗಳ ವ್ಯತ್ಯಾಸವನ್ನು ತಿಳಿಯುವುದು ಅತೀ ಅಗತ್ಯವಾಗಿದೆ. ಇದರ ಜೊತೆಗೆ ಡೆಂಗ್ಯೂ ಹಾಗೂ ಕೊರೋನಾ ಸೋಂಕು ಒಟ್ಟೊಟ್ಟಿಗೆ ತಗಲುವು ಸಾಧ್ಯತೆ ಕೂಡ ಇದೆ ಅನ್ನೋದನ್ನು ಜನ ತಿಳಿಯಬೇಕಿದೆ.
"
ಕೊರೋನಾ ವೈರಸ್ ರೋಗಲಕ್ಷಣ ಹಾಗೂ ಡೆಂಗ್ಯೂ ರೋಗಲಕ್ಷಣದ ಕುರಿತು ಹಲವು ತಪ್ಪು ಮಾಹಿತಿಗಳಿವೆ. ಆದರೆ ಈ ಎರಡು ರೋಗಲಕ್ಷಣಗಳನ್ನು ಸರಿಯಾಗಿ ಅರ್ಥಮಾಡಿಕೊಂಡರೆ ಉತ್ತಮ. ಕೊರೋನಾ ವೈರಸ್ ಹಾಗೂ ಡೆಂಗ್ಯೂ ಕಾಯಿಲೆಯಲ್ಲಿ ಜ್ವರ, ಗಂಟಲು ನೋವು, ಅಸ್ವಸ್ಥತೆ ಸಾಮಾನ್ಯ ರೋಗಲಕ್ಷಣವಾಗಿದೆ. ಆದರಲ್ಲೂ ಡೆಂಗ್ಯೂ ಹಾಗೂ ಕೊರೋನಾ ರೋಗ ಲಕ್ಷಣದ ಆರಂಭದಲ್ಲೇ ಜ್ವರ ಕಾಣಿಸಿಕೊಳ್ಳುವುದರಿಂದ ಹೆಚ್ಚಿನವರು ತಪ್ಪಾಗಿ ರೋಗ ನಿರ್ಣಯ ಮಾಡುವ ಸಾಧ್ಯತೆ ಇದೆ.
ಗೊಂದಲಗಳಿಂದ ಮುಕ್ತಿ ಪಡೆಯಲು ಪರೀಕ್ಷೆ ಪರೀಕ್ಷೆ ಅತ್ಯುತ್ತಮ ಮಾರ್ಗ. ಕೊರೋನಾ ಹಾಗೂ ಡೆಂಗ್ಯೂ ಎರಡೂ ರೋಗದ ಪರೀಕ್ಷೆ ವಿಧಾನ ಬೇರೆ ಬೇರೆಯಾಗಿದೆ. ಕಾಯಿಲೆ ಕುರಿತು ಸ್ಪಷ್ಟವಾಗಿ ಅರಿವಿಲ್ಲದವರು, ರೋಗಲಕ್ಷಣಗಳನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳುವುದು ಒಳಿತು. ವಾಂತಿ, ದೇಹ ಸಂದುಗಳಲ್ಲಿ ನೋವು, ಕಣ್ಣುಗಳ ಹಿಂಬಾಗದಲ್ಲಿನ ನೋವು, ಸ್ನಾಯು ಅಥವಾ ಕೀಲು ನೋವುಗಳು ಡೆಂಗ್ಯೂ ರೋಗದ ಲಕ್ಷಣಗಳಲ್ಲಿ ಪ್ರಮುಖವಾಗಿದೆ. ರಕ್ತ ಪರೀಕ್ಷೆ ಮೂಲಕ ವ್ಯಕ್ತಿಯ ಪ್ಲೇಟ್‌ಲೇಟ್ ಕೌಂಟ್ ಮೂಲಕ ಡೆಂಗ್ಯೂ ತಗುಲಿರುವುದನ್ನು ಖಚಿತಪಡಿಸಬಹುದು. ಇನ್ನು ಕೊರೋನಾ ಸೋಂಕು ತಗುಲಿದ ವ್ಯಕ್ತಿಗೆ ರುಚಿ ಹಾಗೂ ವಾಸನೆ ತಿಳಿಯದಾಗುತ್ತದೆ.
ಇಲ್ಲಿ ಎಚ್ಚರಿಕೆವಹಿಸಬೇಕಾದ ಮತ್ತೊಂದು ಪ್ರಮುಖ ಅಂಶ ಎಂದರೆ ಕೊರೋನಾ ವೈರಸ್ ಹಾಗೂ ಡೆಂಗ್ಯೂ ಒಟ್ಟಿಗೆ ಕಾಣಿಸಿಕೊಂಡರೆ ಅತ್ಯಂತ ಅಪಾಯಕಾರಿ. ಇಷ್ಟೇ ಅಲ್ಲ ಚಿಕಿತ್ಸೆ ಕೂಡ ಅತ್ಯಂತ ಸವಾಲು. ಕಾರಣ ಎರಡು ರೋಗ ದೇಹದಲ್ಲಿನ ಉಂಟು ಮಾಡುವ ಪರಿಣಾಮ ಅಪಾಯಕಾರಿ. ಒರ್ವ ವ್ಯಕ್ತಿಗೆ ಡೆಂಗ್ಯೂ ಹಾಗೂ ಕೋವಿಡ್ ಸೋಂಕು ತಗುಲಿದರೆ, ಆತನ ದೇಹದಲ್ಲಿ ಡೆಂಗ್ಯೂವಿನಿಂದ ರಕ್ತದಲ್ಲಿನ ಪ್ಲೇಟ್‌ಲೇಟ್ ಕಡಿಮೆ ಮಾಡಿ, ರಕ್ತ ಸ್ರಾವಕ್ಕೆ ಕಾರಣವಾಗುತ್ತದೆ. ಇತ್ತ ಕೊರೋನಾ ಸೋಂಕಿನಿಂದ ರಕ್ತ ಹೆಪ್ಪುಗಟ್ಟುವಿಕೆಗೆ ಕಾರಣವಾಗುತ್ತದೆ.
ಎರಡೂ ಸೋಂಕುಗಳು ಒಂದೇ ವ್ಯಕ್ತಿಯಲ್ಲಿ ಒಂದೇ ಸಮಯದಲ್ಲಿ ಕಾಣಿಸಿಕೊಂಡರೆ ಅತ್ಯಂತ ಅಪಾಯಕಾರಿ ಹಾಗೂ ಚಿಕಿತ್ಸೆಯು ಹೆಚ್ಚುವರಿ ಸವಾಲುಗಳನ್ನು ಹೊಂದಿರಬಹುದು. ಡೆಂಗ್ಯೂ ಹಾಗೂ ಕೊರೋನಾ ಸೋಂಕಿತ ರೋಗಿಗೆ ಸತತ ಮೇಲ್ವಿಚಾರಣೆಯ ಅಗತ್ಯವಿದೆ. ಹಾಗಂತ ಆತಂಕದಲ್ಲಿ ದಿನದೂಡುವ ಅಗತ್ಯವಿಲ್ಲ. ಎರಡೂ ಸೋಂಕು ತಗುಲಿ ಚೇತರಿಸಿಕೊಂಡ ಊದಾಹರಣೆಗಳಿವೆ. ಆದರೆ ಎಚ್ಚರಿಕೆ ಅತೀ ಅಗತ್ಯ.
ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಆರೋಗ್ಯ ಇಲಾಖೆ ಸೇರಿದಂತೆ ಹಲವು ಸಂಸ್ಥೆಗಳು ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದೆ. ಈ ಸೋಂಕು ಹರದಂತೆ ತಡೆಯಲು ತಮ್ಮ ಪರಿಸರ, ಮನೆ ಹಾಗೂ ಸುತ್ತಮುತ್ತ ಜೊತೆ ಸ್ವತಃ ತಾವೆ ಶುಚಿಯಾಗಿರುವುದು, ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದರಿಂದ ಕೊರೋನಾದಿಂದ ದೂರವಿರಲು ಸಾಧ್ಯವಿದೆ. ಇನ್ನು ಡೆಂಗ್ಯೂ ನಿಯಂತ್ರಿಸಲು ಸೊಳ್ಳೆಗಳ ಸಂತಾನೋತ್ಪತ್ತಿ ಸ್ಥಳಗಳಾದ ನೀರು ತುಂಬಿದ ಪಾತ್ರೆಗಳನ್ನು ಮುಚ್ಚುವುದು, ನೀರು ನಿಲ್ಲಲು ಆಸ್ಪದ ನೀಡದಿರುವುದು, ಕಸ ತುಂಬಿದ ಪ್ರದೇಶಗಳನ್ನು ಸ್ವಚ್ಚಗೊಳಿಸುವುದರಿಂದ ಡೆಂಗ್ಯೂವಿನಿಂದ ದೂರವಿರಬಹುದು. ಜೊತೆ ನೀವು ಹಾಗೂ ನಿಮ್ಮ ಕುಟುಂಬವನ್ನು ಸುರಕ್ಷಿತವಾಗಿಡಲು ಮನೆಯಲ್ಲಿ ಸೊಳ್ಳೆ ನಿವಾರಗಳನ್ನು ಬಳಸಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.