
ಸಂಗಾತಿಗೆ ನಮ್ಮ ಪ್ರೀತಿ ವ್ಯಕ್ತಪಡಿಸುವ ಅತ್ಯಂತ ಸುಂದರವಾದ ವಿಧಾನಗಳಲ್ಲಿ ಮುತ್ತು ಕೂಡ ಒಂದು. ಸಂಗಾತಿಗೆ ಕಿಸ್ ಮಾಡುವುದು, ಮಕ್ಕಳ ಹಣೆಗೆ ಮುತ್ತಿಡುವುದು ಅಥವಾ ಆಪ್ತರಿಗೆ ಪ್ರೀತಿ ತೋರಿಸುವುದು... ಇವೆಲ್ಲವೂ ನಮ್ಮ ಭಾವನೆಗಳ ಭಾಗವಾಗಿವೆ. ಆದರೆ ನಿಮಗೆ ಗೊತ್ತಾ? ಒಂದು ಮುತ್ತಿನ ಮೂಲಕವೂ ಕೆಲವು ಸೋಂಕುಗಳು ಹರಡಬಹುದು! ವಿಶೇಷವಾಗಿ ಒಬ್ಬ ವ್ಯಕ್ತಿಗೆ ಈಗಾಗಲೇ ವೈರಲ್ ಅಥವಾ ಬ್ಯಾಕ್ಟೀರಿಯಾದ ಸೋಂಕು ಇದ್ದರೆ, ಮುತ್ತು ನೀಡುವುದರಿಂದ ಮತ್ತೊಬ್ಬರಿಗೂ ಕಾಯಿಲೆ ಹರಡುವ ಅಪಾಯವಿರುತ್ತದೆ. ಮುತ್ತಿನಿಂದ ಹರಡಬಹುದಾದ ಕಾಯಿಲೆಗಳು ಯಾವುವು ತಿಳಿಯಿರಿ.
1. ಓರಲ್ ಹರ್ಪಿಸ್ (Oral Herpes)
ಮುತ್ತು ನೀಡುವುದರಿಂದ ಹರಡುವ ಸಾಮಾನ್ಯ ಸೋಂಕುಗಳಲ್ಲಿ ಓರಲ್ ಹರ್ಪಿಸ್ ಕೂಡ ಒಂದು. ಇದು ಹರ್ಪಿಸ್ ಸಿಂಪ್ಲೆಕ್ಸ್ ವೈರಸ್ (HSV-1) ನಿಂದ ಉಂಟಾಗುತ್ತದೆ. ಈ ಸೋಂಕಿನಿಂದ ತುಟಿಗಳ ಸುತ್ತಲೂ ಸಣ್ಣ ಸಣ್ಣ ಗುಳ್ಳೆಗಳು ಅಥವಾ ಹುಣ್ಣುಗಳು ಕಾಣಿಸಿಕೊಳ್ಳಬಹುದು. ಒಬ್ಬ ವ್ಯಕ್ತಿಯ ತುಟಿಗಳ ಮೇಲೆ ಕೋಲ್ಡ್ ಸೋರ್ ಅಥವಾ ಹುಣ್ಣುಗಳಿದ್ದರೆ, ಅವರಿಗೆ ಮುತ್ತು ನೀಡುವುದರಿಂದ ಮತ್ತೊಬ್ಬರಿಗೂ ಈ ಸೋಂಕು ಹರಡುವ ಸಾಧ್ಯತೆಯಿದೆ.
2. ಮೊನೊನ್ಯೂಕ್ಲಿಯೊಸಿಸ್ (Mononucleosis)
ಮೊನೊನ್ಯೂಕ್ಲಿಯೊಸಿಸ್ ಅನ್ನು ಸಾಮಾನ್ಯವಾಗಿ 'ಕಿಸ್ಸಿಂಗ್ ಡಿಸೀಸ್' ಎಂದೂ ಕರೆಯುತ್ತಾರೆ. ಈ ಸೋಂಕು ಸೋಂಕಿತ ವ್ಯಕ್ತಿಯಿಂದ ಮತ್ತೊಬ್ಬರಿಗೆ ಹರಡುತ್ತದೆ. ಮುತ್ತು ನೀಡುವುದಷ್ಟೇ ಅಲ್ಲದೆ, ಒಂದೇ ಲೋಟದಲ್ಲಿ ನೀರು ಕುಡಿಯುವುದು, ಒಂದೇ ಚಮಚ ಅಥವಾ ಬಾಟಲಿಯನ್ನು ಬಳಸುವುದರಿಂದಲೂ ಈ ಸೋಂಕು ಹರಡಬಹುದು. ದೀರ್ಘಕಾಲದಿಂದ ಆಯಾಸ, ಜ್ವರ ಅಥವಾ ಗಂಟಲು ನೋವು ಕಾಣಿಸಿಕೊಳ್ಳುತ್ತಿದ್ದರೆ ವೈದ್ಯರನ್ನು ಸಂಪರ್ಕಿಸಿ ಪರೀಕ್ಷೆ ಮಾಡಿಸಿಕೊಳ್ಳುವುದು ಅಗತ್ಯ.
3. ಸೈಟೊಮೆಗಾಲೊವೈರಸ್ ಸೋಂಕು (Cytomegalovirus Infection)
ಸೈಟೊಮೆಗಾಲೊವೈರಸ್ ಕೂಡ ಜೊಲ್ಲು ಮತ್ತು ದೇಹದ ಇತರ ದ್ರವಗಳ ಮೂಲಕ ಹರಡಬಹುದಾದ ವೈರಸ್ ಆಗಿದೆ. ಹೆಚ್ಚಿನ ಜನರಲ್ಲಿ ಈ ಸೋಂಕು ಯಾವುದೇ ನಿರ್ದಿಷ್ಟ ಲಕ್ಷಣಗಳಿಲ್ಲದೆ ಇರುತ್ತದೆ. ಆದರೆ ಕೆಲವರಲ್ಲಿ ಜ್ವರದಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ಈ ಸಂದರ್ಭದಲ್ಲಿ ಜ್ವರ, ಸ್ನಾಯು ನೋವು, ಆಯಾಸ, ಗಂಟಲು ಕೆರೆತ ಮತ್ತು ಊತದಂತಹ ಲಕ್ಷಣಗಳು ಕಾಣಿಸಿಕೊಳ್ಳಬಹುದು.
4. ಸಿಫಿಲಿಸ್ (Syphilis)
ಸಿಫಿಲಿಸ್ ಒಂದು ಬ್ಯಾಕ್ಟೀರಿಯಾದ ಸೋಂಕಾಗಿದ್ದು, ಲೈಂಗಿಕ ಸಂಪರ್ಕದ ಸಮಯದಲ್ಲಿ ಸೋಂಕಿತ ವ್ಯಕ್ತಿಯಿಂದ ಮತ್ತೊಬ್ಬರಿಗೆ ಹರಡುತ್ತದೆ. ಒಬ್ಬ ವ್ಯಕ್ತಿಯ ತುಟಿಗಳ ಮೇಲೆ ಅಥವಾ ಬಾಯಿಯ ಒಳಭಾಗದಲ್ಲಿ ಸಿಫಿಲಿಸ್ನಿಂದ ಉಂಟಾದ ಹುಣ್ಣು ಇದ್ದರೆ, ಆ ಹುಣ್ಣಿನೊಂದಿಗೆ ನೇರ ಸಂಪರ್ಕಕ್ಕೆ ಬರುವುದರಿಂದ ಮುತ್ತು ನೀಡುವ ಸಂದರ್ಭದಲ್ಲಿ ಸೋಂಕು ಹರಡುವ ಅಪಾಯ ಹೆಚ್ಚಾಗಬಹುದು. ಈ ಕಾಯಿಲೆಯ ಆರಂಭಿಕ ಹಂತದಲ್ಲಿ ಸಾಮಾನ್ಯವಾಗಿ ನೋವು ಕಾಣಿಸಿಕೊಳ್ಳಬಹುದು.
5. ಶೀತ, ನೆಗಡಿ, ಫ್ಲೂ ಅಥವಾ ಇತರ ಸೋಂಕುಗಳು
ಮುತ್ತು ನೀಡುವಾಗ ಸಂಗಾತಿಯ ತುಂಬಾ ಹತ್ತಿರ ಬರುವುದರಿಂದ ಉಸಿರಾಟದ ಮೂಲಕ ಹರಡುವ ಸೋಂಕುಗಳ ಅಪಾಯವೂ ಹೆಚ್ಚಾಗಬಹುದು. ಎದುರಿನ ವ್ಯಕ್ತಿಗೆ ಶೀತ, ನೆಗಡಿ, ಫ್ಲೂ ಅಥವಾ ಕೋವಿಡ್-19 ಸೋಂಕು ಇದ್ದರೆ ಮುತ್ತು ನೀಡುವುದನ್ನು ತಪ್ಪಿಸಿ. ಏಕೆಂದರೆ ಈ ರೀತಿಯ ನಿಕಟ ಸಂಪರ್ಕದಿಂದ ವಿವಿಧ ರೀತಿಯ ಸೋಂಕುಗಳು ಹರಡುವ ಸಾಧ್ಯತೆಯಿರುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.